ಮಾಧ್ಯಮಗಳಿಗೆ ಮೋದಿ Masterstroke : ಎಬಿಪಿ ನ್ಯೂಸ್‍ಗೆ ಮೊದಲ ಪಾಠ ಕಲಿಸಿದ ಶಾ ಬಳಗ..

ಕೆಲದಿನಗಳ ಹಿಂದೆ ಆರಂಭವಾಗಿ ಈಗಲೂ ಬಿಸಿಬಿಸಿ ಚರ್ಚೆಗೆ ಮತ್ತು ಅನೇಕ ರೀತಿಯ ಸಂಚಲನಗಳಿಗೆ ಕಾರಣವಾಗಿರುವ ಸುದ್ದಿ ಮಾಧ್ಯಮ ಸಂಬಂಧಿ ಈ ಒಂದು ವಿದ್ಯಮಾನ ತುಂಬ ಕುತೂಹಲಕರವಾಗಿದೆ.
ಕಳೆದ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿಯವರು, ತಾವು ರೈತರಿಗಾಗಿ ಆರಂಭಿಸಿದ ಕೆಲ ಯೋಜನೆಗಳ ಸಂಬಂಧ, ಫಲಾನುಭವಿ ರೈತರೊಂದಿಗೆ ಒಂದು ವೀಡಿಯೋ ಕಾನ್ಫರೆನ್ಸ್ ನಡೆಸುತ್ತಾರೆ. ಅದರಲ್ಲಿ ಭಾಗವಹಿಸಿದ್ದ ಛತ್ತೀಸ್‍ಗಢದ ಚಂದ್ರಮಣಿ ಕೌಶಿಕ್ ಎಂಬ ಮಹಿಳೆಗೆ ಪ್ರಧಾನಿಗಳು, “ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ನಿಮ್ಮ ಆದಾಯ ಎಷ್ಟು ಹೆಚ್ಚಿದೆ?” ಎಂದು ಒಂದು ನೇರ ಪ್ರಶ್ನೆ ಕೇಳುತ್ತಾರೆ. ತಕ್ಷಣ ಆ ಮಹಿಳೆ “ನಮ್ಮ ಆದಾಯ ಈಗ ದ್ವಿಗುಣಗೊಂಡಿದೆ” ಎನ್ನುತ್ತಾಳೆ. 2022 ರಲ್ಲಿ ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಘೋಷಿಸಿರುವ ಪ್ರಧಾನಿಗಳಿಗೆ ಈ ಮಾತಿನಿಂದ ಸಹಜವಾಗಿಯೇ ಸಂತಸವಾಗುತ್ತದೆ. ಅವರ ಮುಖದಲ್ಲಿ ಸಂತಸದ ಮಂದಹಾಸ ಮಿನುಗುತ್ತದೆ.
ಒಬ್ಬ ರೈತ ಮಹಿಳೆ ಸ್ವತಃ ನೇರಪ್ರಸಾರದಲ್ಲಿ ಹೀಗೆ ಹೇಳುವುದನ್ನು ವೀಕ್ಷಿಸಿದ ಜನಸಾಮಾನ್ಯರು ಪ್ರಧಾನಿಗಳು ಆರಂಭಿಸಿದ ಯೋಜನೆಯಿಂದ ರೈತರಿಗೆ ತುಂಬ ಪ್ರಯೋಜನವಾಗಿದೆ ಎಂದು ನಂಬಿ ಖುಷಿಪಟ್ಟರೂ ಪಡಬಹುದು. ಆದರೆ ಇದನ್ನು ಒಂದಿಷ್ಟು ಎಚ್ಚರದ ಮನಸ್ಸಿನಿಂದ ನೋಡುವವರಿಗೆ ಇಲ್ಲಿ ಬೇರೆಯೇ ಏನೋ ಒಂದು ಸಂಗತಿ ಇದೆ ಎಂದು ಮೇಲ್ನೋಟಕ್ಕೇ ಅನಿಸಿದರೆ ಅಚ್ಚರಿಯಿಲ್ಲ. ಎಬಿಪಿ ನ್ಯೂಸ್ ವಾಹಿನಿಯ ‘ಮಾಸ್ಟರ್ ಸ್ಟ್ರೋಕ್’ ಕಾರ್ಯಕ್ರಮ ನಡೆಸುವ ಪುಣ್ಯ ಪ್ರಸೂನ್ ಬಾಜಪೇಯಿಯವರ ತಂಡಕ್ಕೂ ಇಂತಹದೇ ಅನುಮಾನ ಕಾಡಿದ್ದು ಸಹಜವಾಗಿತ್ತು. ಯಾಕೆಂದರೆ ಛತ್ತೀಸ್‍ಗಢ ದೇಶದಲ್ಲಿಯೇ ತುಂಬ ಹಿಂದುಳಿದ ಪ್ರದೇಶ. ಇನ್ನು ಚಂದ್ರಮಣಿ ವಾಸಿಸುವ ಕಂಕಾರ್ ಜಿಲ್ಲೆಯ ಬಗ್ಗೆ ಹೇಳುವುದೇ ಬೇಡ. ಜಿಲ್ಲೆಯ ಅಧಿಕೃತ ವೆಬ್‍ಸೈಟೊಂದರ ಪ್ರಕಾರ ಅದು ಜಗತ್ತಿನಲ್ಲಿಯೇ ಹಿಂದುಳಿದ ಪ್ರದೇಶಗಳಲ್ಲೊಂದು. ಹಾಗಾಗಿ ಅವರು ತಮ್ಮ ವರದಿಗಾರರನ್ನು ಛತ್ತೀಸ್‍ಗಢದ ಚಂದ್ರಮಣಿಯವರ ಮನೆಗೆ ಕಳುಹಿಸುತ್ತಾರೆ. ಅಲ್ಲಿ ವಿಚಾರಿಸಿದಾಗ “ಆದಾಯ ದ್ವಿಗುಣವಾಗಿದೆ ಎಂದು ಹೇಳಲು ಅಧಿಕಾರಿಗಳು ಸೂಚಿಸಿದ್ದರಿಂದ ತಾನು ಹಾಗೆ ಹೇಳಿದೆ” ಎಂಬ ಸತ್ಯವನ್ನು ಆಕೆ ಬಿಚ್ಚಿಡುತ್ತಾಳೆ.
ಈ ಬಗ್ಗೆ ಎಬಿಪಿ ನ್ಯೂಸ್ ಜುಲೈ 6ರಂದು ವಿವರವಾದ ಒಂದು ಕಾರ್ಯಕ್ರಮ ಪ್ರಸಾರ ಮಾಡುತ್ತದೆ. ಇದು ಭಾರೀ ಜನಮೆಚ್ಚುಗೆ ಗಳಿಸುವ ಜೊತೆಗೇ ಸಾಮಾಜಿಕ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸುತ್ತದೆ. ಮೋದಿಯವರ ಸುಳ್ಳುಗಳ ಬೆನ್ನಟ್ಟುವವರಿಗೆ ಇನ್ನೊಂದು ಹಸಿಸುಳ್ಳಿನ ಉದಾಹರಣೆ ಸಿಕ್ಕಿದರೆ, ಕೇಂದ್ರ ಸರಕಾರವಂತೂ ಕೆಂಡಮಂಡಲವಾಗುತ್ತದೆ. ರಾಜ್ಯವರ್ಧನ್ ರಾಠೋಡ್, ನಿರ್ಮಲಾ ಸೀತಾರಾಮನ್ ಸಹಿತ ಅನೇಕ ಕೇಂದ್ರ ಮಂತ್ರಿಗಳು ಈ ಕಾರ್ಯಕ್ರಮದ ವಿರುದ್ಧ ಟ್ವೀಟ್ ಮಾಡಿ, ಇದು ಸುಳ್ಳು ಮಾಹಿತಿ ಆಧರಿಸಿದ ಕಾರ್ಯಕ್ರಮ ಎಂದು ತಮ್ಮ ಅಸಮಾಧಾನ ಹೊರಹಾಕುತ್ತಾರೆ. ಕೇಂದ್ರ ಸರಕಾರ ಮೇಲ್ನೋಟಕ್ಕೆ ಒಂದು ಕ್ಷಣ ಶಾಂತವಾದಂತೆ ಕಾಣಿಸುತ್ತದೆ; ಚಂಡಮಾರುತದ ಮುನ್ನ ಕ್ಷಣದ ಶಾಂತಸ್ಥಿತಿಯಂತೆ. ಆದರೆ ಅದು ಹಿನ್ನೆಲೆಯಲ್ಲಿ ಇನ್ನೂ ಏನೋ ಕಾರ್ಯಾಚರಣೆಗೆ ಇಳಿದಿದೆ ಎಂಬುದಕ್ಕೆ ಇಂಬು ನೀಡುವಂತಹ ಇನ್ನೊಂದು ಹಂತದ ಕುತೂಹಲಕರ ಬೆಳವಣಿಗೆಗಳು ಆರಂಭವಾಗುತ್ತವೆ. ಸರಿಯಾಗಿ ಪುಣ್ಯ ಪ್ರಸೂನ್ ಅವರ ‘ಮಾಸ್ಟರ್ ಸ್ಟ್ರೋಕ್’ ಕಾರ್ಯಕ್ರಮ ಪ್ರಸಾರ ಶುರುವಾಗುವ ರಾತ್ರಿಯ 9ರ  ಹೊತ್ತಿಗೆ ಪ್ರಸಾರ ಸಿಗ್ನಲ್‍ಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಎಷ್ಟರಮಟ್ಟಿಗೆ ಎಂದರೆ, ಆ ಹೊತ್ತಿನಲ್ಲಿ ಎಬಿಪಿ ನ್ಯೂಸ್ ಯಾರೂ ನೋಡದಂತಾಗುತ್ತದೆ. 10 ಗಂಟೆಯಾಗುತ್ತಲೇ ಅಂದರೆ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮ ಪ್ರಸಾರ ಮುಗಿಯುತ್ತಲೇ ಎಲ್ಲವೂ ಸರಿಹೋಗುತ್ತದೆ. ಈ ಬಗ್ಗೆ ಅನೇಕ ವೀಕ್ಷಕರು ಟ್ವೀಟ್ ಮಾಡುತ್ತಾರೆ. “ಬೇರೆ ಎಲ್ಲ ಹೊತ್ತು ಎಬಿಪಿ ನ್ಯೂಸ್ ನೋಡಲು ಸರಿಯಾಗಿರುತ್ತದೆ, ಆ ಹೊತ್ತು ಮಾತ್ರ ಯಾಕೆ ಹಾಗೆ?” ಎಂದು ಅವರು ಪ್ರಶ್ನಿಸುತ್ತಾರೆ. ಟಾಟಾ ಸ್ಕೈ, ಡಿಶ್ ಟಿವಿ, ಏರ್‍ಟೆಲ್ ಮೊದಲಾದ ಸಂಸ್ಥೆಗಳವರು ಇದು ನಮ್ಮ ಕಡೆಯ ತೊಂದರೆಯಲ,್ಲ ಸದರಿ ವಾಹಿನಿಯವರ ಕಡೆಯ ಸಮಸ್ಯೆ ಎನ್ನುತ್ತಾರೆ (ವಾಹಿನಿಯಿಂದ ಉಪಗ್ರಹಕ್ಕೆ ಹೋಗುವ ಸಿಗ್ನಲ್ ಕೇಂದ್ರ ಸರಕಾರದ ಸುಪರ್ದಿಗೆ ಒಳಪಟ್ಟಿದ್ದು, ಅದನ್ನು ಹೇಗೆ ಹಾಳುಗೆಡವಬಹುದು ಎಂಬ ತಾಂತ್ರಿಕ ವಿವರಗಳು ಇನ್ನೂ ರೋಚಕವಾಗಿವೆ). ಈ ಕರಾಮತ್ತು ಸುಮಾರು 12 ದಿನ ಮುಂದುವರಿಯುತ್ತದೆ. ಸಾಲದೆಂಬಂತೆ ವಾಹಿನಿಗೆ ಬರುವ ಜಾಹೀರಾತುಗಳೂ ಏಕಾಏಕಿ ಕಡಿಮೆಯಾಗುತ್ತವೆ (ಕಡಿಮೆಯಾಗಿಸಲಾಗುತ್ತದೆ).
ವಾಹಿನಿಯ ಒಳಗೆ ಏನೇನು ನಡೆಯಿತೋ, ಸದರಿ ಕಾರ್ಯಕ್ರಮದಿಂದ ವಿಚಲಿತರಾದವರ ಕಡೆಯಿಂದ ಏನೇನು ಧಮಕಿಗಳು ಬಂದವೋ ಹೊರಜಗತ್ತಿಗೆ ತಿಳಿಯಲಿಲ್ಲ; ತಿಳಿಯುವುದು ಸಾಧ್ಯವೂ ಇಲ್ಲ. ಆದರೆ ಆಗಸ್ಟ್ ಒಂದರಂದು ಇದ್ದಕ್ಕಿದ್ದಂತೆ ಒಂದು ಸುದ್ದಿ ಹೊರಬೀಳುತ್ತದೆ. ಆ ವಾಹಿನಿಯ ನಿರ್ವಾಹಕ ಸಂಪಾದಕರಾದ ಮಿಲಿಂದ್ ಖಾಂಡೇಕರ್ ಮತ್ತು ಹಿರಿಯ ಪತ್ರಕರ್ತ ಪುಣ್ಯ ಪ್ರಸೂನ್ ಬಾಜಪೇಯಿ ಚಾನೆಲ್‍ಗೆ ರಾಜೀನಾಮೆ ನೀಡುತ್ತಾರೆ. ಅಲ್ಲದೆ ಇನ್ನೊಬ್ಬ ದಿಟ್ಟ ಪತ್ರಕರ್ತ ಅಭಿಸಾರ್ ಶರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ತೆರಳಲು ಸೂಚಿಸಲಾಗುತ್ತದೆ. ಈ ರಾಜೀನಾಮೆಗಳು ಸಂಭವಿಸಿದ ಬೆನ್ನಲ್ಲೇ ಸದರಿ ವಾಹಿನಿಯ ಪ್ರಸಾರ ಸಿಗ್ನಲ್ ಸಮಸ್ಯೆಗಳೂ ನಿವಾರಣೆಯಾಗುತ್ತವೆ! ಜಾಹೀರಾತುಗಳೂ ಮರಳುತ್ತವೆ!
ಪ್ರಜಾತಂತ್ರ ವಿರೋಧಿ ಶಕ್ತಿಗಳ ಮುಂದೆ ಇನ್ನೂ ಮಂಡಿಯೂರದ ಮಾಧ್ಯಮ ವಲಯದಲ್ಲಿ ಇದು ಸಂಚಲನಕ್ಕೆ ಕಾರಣವಾಗುತ್ತವೆ. ಅನೇಕ ಹಿರಿಯ ಪತ್ರಕರ್ತರು ಈ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಇದನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತಾರೆ. ಖರ್ಗೆಯವರ ಮಾತಿಗೆ ಪ್ರತಿಕ್ರಿಯಿಸುತ್ತಾ ಕೇಂದ್ರ ಮಂತ್ರಿ ರಾಜ್ಯವರ್ಧನ ರಾಠೋಡ್, “ವಾಹಿನಿಯಲ್ಲಿ ನಡೆದಿರುವ ಬೆಳವಣಿಗೆಗಳಿಗೂ ಸರಕಾರಕ್ಕೂ ಸಂಬಂಧವಿಲ್ಲ, ಮನಸು ಮಾಡಿದರೆ ನಾವು ಅವರ ವಿರುದ್ಧ ಕ್ರಮ ಜರುಗಿಸಬಹುದಿತ್ತು” ಎನ್ನುತ್ತಾರೆ. ಮಾತ್ರವಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಸದರಿ ವಾಹಿನಿಯ ಟಿಆರ್‍ಪಿ ಗಣನೀಯವಾಗಿ ಕಡಿಮೆಯಾಗಿತ್ತು, ಅಲ್ಲದೆ ಅದರ ಕಾರ್ಯಕ್ರಮಗಳನ್ನು ಜನ ನೋಡುತ್ತಿರಲಿಲ್ಲ, ಅದಕ್ಕೆ ಅದು ಸರಕಾರವನ್ನು ದೂರುತ್ತಿದೆ ಅಷ್ಟೇ” ಎಂದೂ ಹೇಳಿದರು.
ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಎಬಿಪಿ ನ್ಯೂಸ್‍ನ ಮೇಲೆ ಕೇಂದ್ರ ಸರಕಾರ ಒತ್ತಡ ಹೇರಿದ್ದಕ್ಕೆ ಅಧಿಕೃತ ಪುರಾವೆ ಇದೆಯೇ? ಇಲ್ಲ. (ಆದರೆ ಸಂಸತ್ ಭವನದಲ್ಲಿ ಸಿಕ್ಕ ಪತ್ರಕರ್ತರೊಂದಿಗೆ ಮಾತನಾಡುತ್ತಾ ‘ಎಬಿಪಿ ನ್ಯೂಸ್‍ನವರಿಗೆ ಒಂದು ಪಾಠ ಕಲಿಸುತ್ತೇವೆ’ ಎಂದು ಅಮಿತ್ ಶಾ ಹೇಳಿದ್ದನ್ನು ಪತ್ರಕರ್ತರು ಬಹಿರಂಗಪಡಿಸಿದ್ದಾರೆ). ಆದರೆ ಅವರು ಒತ್ತಡ ಹೇರಿರಲಿಲ್ಲವೇ? ಅನುಮಾನವೇ ಇಲ್ಲ. ಸಮಸ್ಯೆ ಇರುವುದು ಇಲ್ಲೇ ನೋಡಿ. ಘೋಷಿತ ತುರ್ತುಪರಿಸ್ಥಿತಿ ಮತ್ತು ಅಘೋಷಿತ ತುರ್ತುಪರಿಸ್ಥಿತಿಯ ನಡುವಿನ ವ್ಯತ್ಯಾಸ ಇದುವೇ. 1975ರಲ್ಲಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಘೋಷಿಸಿದಾಗ ಏನೇನಾಯಿತು, ಸಂವಿಧಾನ ಅಮಾನತಾದುದು, ರಾಜಕಾರಣಿಗಳು ಜೈಲು ಸೇರಿದ್ದು, ಪತ್ರಿಕಾ ಸೆನ್ಸಾರ್ ಜಾರಿಯಾದುದು… ಎಲ್ಲವೂ ಗೊತ್ತಿದೆ. ಆದರೆ ಅಲ್ಲಿ ಒಂದು ಸ್ಪಷ್ಟತೆಯಿರುತ್ತದೆ. ಅಲ್ಲಿ ತುರ್ತುಪರಿಸ್ಥಿತಿ ಅಧಿಕೃತವಾಗಿ ಘೋಷಣೆಯಾಗಿರುತ್ತದೆ. ಅದಕ್ಕೆ ಕಾರಣ ಯಾರು ಎನ್ನುವುದೂ ಗೊತ್ತಿರುತ್ತದೆ. ಅಲ್ಲಿ ಒಂದು ಶಾಸನ ಇರುತ್ತದೆ. ತುರ್ತುಪರಿಸ್ಥಿತಿ ಎಲ್ಲ ಪ್ರಜೆಗಳನ್ನೂ ಬಾಧಿಸುವುದರಿಂದ ಜನರಲ್ಲಿ ಅದರ ವಿರುದ್ಧ ಆಕ್ರೋಶವಿರುತ್ತದೆ. ಅದರ ವಿರುದ್ಧ ಅಂತಾರಾಷ್ಟ್ರೀಯ ಆಕ್ಷೇಪ, ಒತ್ತಡಗಳೂ ಇರುತ್ತವೆ. ಆದರೆ ಅಘೋಷಿತ ತುರ್ತುಪರಿಸ್ಥಿತಿ ಹಾಗಲ್ಲ. ಫ್ಯಾಸಿಸ್ಟ್ ಮನಸ್ಥಿತಿಯ ಸರಕಾರವೊಂದು ಅಧಿಕಾರದಲ್ಲಿದ್ದರೆ ಅಲ್ಲಿ ಯಾವ ಘೋಷಣೆಯೂ ಇಲ್ಲದೆ ಘೋಷಿತ ತುರ್ತುಪರಿಸ್ಥಿತಿಗಿಂತ ಕರಾಳ ವಿದ್ಯಮಾನಗಳು ನಡೆಯುತ್ತಿರುತ್ತವೆ. ಸರಕಾರವನ್ನು ಪ್ರಶ್ನಿಸುವ, ವಿರೋಧಿಸುವ ಪ್ರತಿಯೊಬ್ಬರನ್ನೂ ‘ರಾಷ್ಟ್ರ ವಿರೋಧಿ’ ಅಥವ ‘ಅರ್ಬನ್ ನಕ್ಸಲ್’ ಎಂದು ಬ್ರಾಂಡ್ ಮಾಡಲಾಗುತ್ತದೆ. ಅವರನ್ನು ಜೈಲಿಗೆ ತಳ್ಳುವ ಎಲ್ಲ ಯತ್ನಗಳನ್ನೂ ಮಾಡಲಾಗುತ್ತದೆ. ತನ್ನ ಏಜನ್ಸಿಗಳಾದ ಐಟಿ, ಇಡಿ, ಸಿಬಿಐಗಳನ್ನು ಬಳಸಿಕೊಂಡು ಹಿಂಸಿಸಲಾಗುತ್ತದೆ. ನ್ಯಾಯಾಂಗದ ಮೇಲೆ ಸವಾರಿ ಮಾಡಲಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಕೇವಲ ಸಂವಿಧಾನದ ಪುಸ್ತಕಗಳಲ್ಲಿಯಷ್ಟೇ ಇರುತ್ತದೆ. ವಿಶೇಷವಾಗಿ ಸುದ್ದಿಮಾಧ್ಯಮಗಳನ್ನು ಅತ್ಯಂತ ದುಷ್ಟ ರೀತಿಯಲ್ಲಿ ನಿಯಂತ್ರಿಸಲಾಗುತ್ತದೆ. ತಾವು ಹೇಳಿದಂತೆ ಕೇಳುವ ಮಾಧ್ಯಮಗಳನ್ನು ವಿಶೇಷವಾಗಿ ಪೋಷಿಸಲಾಗುತ್ತದೆ. ತಮ್ಮ ವಿರುದ್ಧ ವರದಿ ಮಾಡುವ ಮಾಧ್ಯಮಗಳ ಅಸ್ತಿತ್ವಕ್ಕೇ ಧಕ್ಕೆ ಉಂಟುಮಾಡಲಾಗುತ್ತದೆ. ಇಲ್ಲಿ ಎಲ್ಲ ದಾಳಿಗಳೂ, ಎಲ್ಲ ಹಿಂಸೆಗಳೂ, ಎಲ್ಲ ಅನ್ಯಾಯಗಳೂ ‘ಕಾನೂನುಪ್ರಕಾರ’ವೇ ನಡೆಯುತ್ತವೆ.
ನಮ್ಮ ಪ್ರಧಾನಿಗಳ ಮಾಧ್ಯಮವಿರೋಧಿ ನಿಲುವು ಗುಟ್ಟಿನ ಸಂಗತಿಯೇನಲ್ಲ. ಗುಜರಾತ್ ನರಮೇಧವನ್ನು ಕೆಲ ಮಾಧ್ಯಮ ಸಂಸ್ಥೆಗಳು ನೇರವಾಗಿ ವರದಿ ಮಾಡಿ, ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವರ ಕ್ರಿಯೆ ಮತ್ತು ನಿಷ್ಕ್ರಿಯೆಯನ್ನು ಬೊಟ್ಟು ಮಾಡಿದ ಬಗ್ಗೆ ಅವರಲ್ಲಿ ತೀವ್ರ ಅಸಮಾಧಾನವಿದೆ. ಆಗ ಸತ್ಯ ಬಿಚ್ಚಿಟ್ಟ ಬರ್ಕಾ ದತ್, ರಾಜದೀಪ್ ಸರದೇಸಾಯಿ ಸಹಿತ ಯಾವ ಪತ್ರಕರ್ತರÀನ್ನೂ ಅವರು ಮರೆತಿಲ್ಲ; ಕ್ಷಮಿಸಿಯೂ ಇಲ್ಲ. ಕರಣ್ ಥಾಪರ್‍ನ ಕಾರ್ಯಕ್ರಮದಲ್ಲಿ ಅವರು ನಡೆದುಕೊಂಡ ರೀತಿ ಜಗತ್ತಿಗೇ ಗೊತ್ತು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರು ಒಂದಾದರೂ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ತಮ್ಮ ಬಗ್ಗೆ ತುಂಬಾ ನಿಷ್ಠೆ ಹೊಂದಿರುವ ಕೆಲವು ಆಯ್ದ ಪತ್ರಕರ್ತರಿಗೆ ಸಂದರ್ಶನ ಕೊಟ್ಟಿದ್ದರೂ ಅಲ್ಲಿನ ಪ್ರಶ್ನೆಗಳು ಹೇಗಿದ್ದವು, ಆ ಪ್ರಶ್ನೆಗಳನ್ನು ರೂಪಿಸಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ.
ಇದೇ ಹೊತ್ತಿನಲ್ಲಿ ಮಾಧ್ಯಮಗಳ ಶಕ್ತಿಯೂ ಅವರಿಗೆ ಗೊತ್ತಿದೆ. ತಮ್ಮ ಪರವಾಗಿ ಅವನ್ನು ಬಳಸಿಕೊಳ್ಳುವ ತಂತ್ರಗಳೂ ಅವರಿಗೆ ಕರಗತ. ಆದ್ದರಿಂದಲೇ 2014ರ ಚುನಾವಣೆಗೆ ಮುನ್ನ ಅವರು ಮೊದಲು ಮಾಡಿದ್ದೇ ಮಾಧ್ಯಮಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ. ಅನೇಕ ಸುದ್ದಿ ಮಾಧ್ಯಮಗಳು ಉದ್ಯಮಿಗಳ ಕೈಯಲ್ಲಿದ್ದುದರಿಂದ ಈ ಕಾರ್ಯ ಅವರಿಗೆ ಸುಲಭವೇ ಆಯಿತು. ಚುನಾವಣಾ ಪ್ರಚಾರಗಳ ಸಂದರ್ಭದಲ್ಲಿ ಈ ಮಾಧ್ಯಮಗಳು ಅದರಲ್ಲೂ ಸುದ್ದಿ ವಾಹಿನಿಗಳು ಅವರ ಪ್ರತಿಯೊಂದು ಭಾಷಣದ ನೇರಪ್ರಸಾರದ ಮೂಲಕ ವಿಶೇಷ ಪ್ರಚಾರ ನೀಡಿದ್ದರಿಂದ ಅಧಿಕಾರಕ್ಕೇರುವ ಅವರ ಹಾದಿ ಹೂವಿನ ಹಾಸಿಗೆಯಾಯಿತು. ಅಧಿಕಾರಕ್ಕೆ ಏರಿದ ಮೇಲಂತೂ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲದಂತಾಯಿತು.
ಪುಣ್ಯ ಪ್ರಸೂನ್ ಬಾಜಪೇಯಿ ಅವರು ಹೇಳುವ ಪ್ರಕಾರ ಹೀಗೆ ಮಾಧ್ಯಮಗಳ ಮೇಲೆ ಕಣ್ಣಿಡಲು ಸರಕಾರದ ವತಿಯಿಂದ ರಚಿಸಲಾಗಿರುವ 200 ಸದಸ್ಯರನ್ನು ಹೊಂದಿರುವ ನಿಗಾ ತಂಡ ಮೂರು ಹಂತಗಳಲ್ಲಿ ಕೆಲಸ ಮಾಡುತ್ತಿದೆ. 150 ಮಂದಿ ಟಿವಿ ವಾಹಿನಿಗಳನ್ನು ಮಾನಿಟರ್ ಮಾಡುವ ಕೆಲಸ ಮಾಡುತ್ತಾರೆ. 25 ಸದಸ್ಯರು ಅದಕ್ಕೆ ಸರಕಾರದ ಸಮೀಕ್ಷೆಯ ರೂಪ ನೀಡುತ್ತಾರೆ. ಉಳಿದ 25 ಮಂದಿ ಅಂತಿಮ ವಸ್ತುವಿಚಾರವನ್ನು (ಕಂಟೆಂಟ್) ಮರು ಪರಿಶೀಲಿಸುತ್ತಾರೆ. ಇದನ್ನು ಆಧರಿಸಿ ಸಹಾಯಕ ಕಾರ್ಯದರ್ಶಿ ಶ್ರೇಣಿಯ ಮೂರು ಅಧಿಕಾರಿಗಳು ವರದಿಯೊಂದನ್ನು ತಯಾರಿಸಿ ಮಾಹಿತಿ ಮತ್ತು ಪ್ರಸಾರ ಸಚಿವರಿಗೆ ಕಳುಹಿಸುತ್ತಾರೆ. ಅಲ್ಲಿಂದ ಅದು ಪ್ರಧಾನಿ ಕಚೇರಿಗೆ ಹೋಗಿ ಅಲ್ಲಿಂದ ಮಾಧ್ಯಮಗಳ ಸಂಪಾದಕರಿಗೆ ‘ನಿರ್ದೇಶನ’ ರವಾನೆಯ ಪ್ರಕ್ರಿಯೆ ಶುರುವಾಗುತ್ತದೆ.
ಇವತ್ತು ದೇಶದ ಮಾಧ್ಯಮ ಜಗತ್ತು ಎಂತಹ ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆಯೆಂದರೆ ಸರಕಾರಕ್ಕೆ ಇಷ್ಟವಾಗುವಂತೆ ನಡೆದುಕೊಳ್ಳದ ಮಾಧ್ಯಮ ಸಂಸ್ಥೆಗಳನ್ನು ತಲೆ ಎತ್ತದಂತೆ ಮಾಡಲಾಗುತ್ತಿದೆ. ಎನ್‍ಡಿಟಿವಿಯ ವಿರುದ್ಧ ಜರುಗಿಸಿದ ಪ್ರತಿಕಾರ ಕ್ರಮ ಒಂದು ಸಣ್ಣ ಉದಾಹರಣೆ. ಇನ್ನು, ಸರಕಾರಕ್ಕೆ ಇಷ್ಟವಾಗುವಂತೆ ನಡೆದುಕೊಳ್ಳದ ಪತ್ರಕರ್ತರ ಬದುಕನ್ನು ಅಸಹನೀಯಗೊಳಿಸಲಾಗುತ್ತಿದೆ; ಅವರು ಕೆಲಸ ಕಳೆದುಕೊಳ್ಳುವಂತೆ ಮಾಡಲಾಗುತ್ತಿದೆ; ಮಾತ್ರವಲ್ಲ ಅವರು ಬೇರೆಡೆ ಕೆಲಸಕ್ಕೆ ಸೇರಿಕೊಳ್ಳದಂತೆಯೂ ನೋಡಿಕೊಳ್ಳಲಾಗುತ್ತಿದೆ. ಮಿಲಿಂದ್ ಖಾಂಡೇಕರ್, ಪುಣ್ಯ ಪ್ರಸೂನ್ ಬಾಜಪೇಯಿ ಈಗ ಕೆಲಸ ಕಳೆದುಕೊಂಡಿದ್ದಾರೆ. ಹಿಂದೆ ಪತ್ರಕರ್ತರಾದ ಕೃಷ್ಣ ಪ್ರಸಾದ್, ರಾಜದೀಪ್ ಸರದೇಸಾಯಿ, ಸಾಗರಿಕಾ ಘೋಷ್ ಇವರೂ ಕೆಲಸ ಕಳೆದುಕೊಳ್ಳುವಂತೆ ಮಾಡಲಾಗಿತ್ತು.
ಸರಕಾರವನ್ನು ಪ್ರಶ್ನಿಸುವ ಪತ್ರಕರ್ತರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅವಮಾನಕರವಾಗಿ ಟ್ರಾಲ್ ಮಾಡಲಾಗುತ್ತಿದೆ. ಅವರಿಗೆ ಜೀವಬೆದರಿಕೆ ಒಡ್ಡಲಾಗುತ್ತಿದೆ. ಹಿರಿಯ ಪತ್ರಕರ್ತರಾದ ರಾಜದೀಪ್ ಸರ್ದೇಸಾಯಿ, ರವೀಶ್ ಕುಮಾರ್, ಬರ್ಕಾ ದತ್, ಸಾಗರಿಕಾ ಘೋಷ್, ಸ್ವಾತಿ ಚತುರ್ವೇದಿ, ನಿಧಿ ರಾಜ್ಧಾನ್, ರಾಣಾ ಅಯೂಬ್, ರೋಹಿಣಿ ಸಿಂಗ್, ಅಭಿಸಾರ್ ಶರ್ಮಾ ಹೀಗೆ ಈ ಟ್ರಾಲ್ ದಾಳಿಯ ಬಲಿಪಶುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪುರುಷರಿಗೆ ಜೀವ ಬೆದರಿಕೆಯಾದರೆ ಮಹಿಳೆಯರಿಗೆ ಹೆಚ್ಚುವರಿಯಾಗಿ ಅತ್ಯಾಚಾರದ ಬೆದರಿಕೆಯನ್ನೂ ಒಡ್ಡಲಾಗುತ್ತಿದೆ. ಈ ಬಗ್ಗೆ ದೂರು ಸಲ್ಲಿಸಿದರೆ ಕುರಿ ಹೋಗಿ ತೋಳದ ಬಳಿ ದೂರು ಹೇಳಿದಂತಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಹೀಗೆ ಪತ್ರಕರ್ತರನ್ನು ಹಿಂಸಿಸುವ ಕೆಲಸ ಆಳುವ ಪಕ್ಷದ ಐಟಿ ಸೆಲ್‍ಗಳ ಮೂಲಕ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ‘ಐ ಆಮ್ ಎ ಟ್ರಾಲ್’ ಕೃತಿ ಬರೆದ ಸ್ವಾತಿ ಚತುರ್ವೇದಿ ವಿವರಿಸಿದ್ದಾರೆ. ಹಿಂದೆ ಬಿಜೆಪಿಯ ಐಟಿ ಸೆಲ್‍ನಲ್ಲಿದ್ದು ಹೊರಬಂದಿರುವ ಸಾಧ್ವಿ ಖೋಸ್ಲಾ ಆತಂಕ ಹುಟ್ಟಿಸುವ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಆದರೆ ತನ್ನ ವಿರುದ್ಧದ ದನಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ಹೀಗೆ ಮಾಧ್ಯಮಗಳ ಕತ್ತು ಹಿಸುಕಿಹೋಗುವವರು ತಮ್ಮ ಕೆಲಸದಲ್ಲಿ ಯಶ ಕಾಣುವುದು ಸಾಧ್ಯವೇ? ಖ್ಯಾತ ಪತ್ರಕರ್ತ ನಿಖಿಲ್ ವಾಗ್ಲೆ ಹೇಳುವ ಹಾಗೆ “ಇಂದಿರಾಗಾಂಧಿ ಸುದ್ದಿ ಮಾಧ್ಯಮಗಳನ್ನು ಸೋಲಿಸ ಹೊರಟರು, ಆದರೆ ಅಂತಿಮವಾಗಿ ಸುದ್ದಿ ಮಾಧ್ಯಮಗಳು ಇಂದಿರಾಗಾಂಧಿಯನ್ನು ಸೋಲಿಸಿದವು”. ಇಂತಹ ಪ್ರಜಾತಂತ್ರ ವಿರೋಧಿ ಸರ್ವಾಧಿಕಾರಿ ಶಕ್ತಿಗಳು ತಾತ್ಕಾಲಿಕವಾಗಿ ಯಶ ಪಡೆಯಬಹುದು. ಆದರೆ ಅದು ಒಂದಲ್ಲ ಒಂದು ದಿನ ಅವರಿಗೆ ತಿರುಗುಬಾಣವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ. ಸದ್ಯ ಮಾಧ್ಯಮಗಳ ಬಾಯಿ ಮುಚ್ಚಲು ಬಹುಬಗೆಯ ತಂತ್ರಗಳನ್ನು ಅನುಸರಿಸುತ್ತಿರುವವರು ಒಮ್ಮೆ ಅಧಿಕಾರದಿಂದ ಕೆಳಗಿಳಿಯುತ್ತಲೇ, ಅವರು ಹಿಂದೆ ಮಾಡಿದ ಅನಾಚಾರಗಳ ಬಗ್ಗೆ ಹೊರಬರಬಹುದಾದ ವರದಿಗಳ ಆಸ್ಫೋಟ ಹೇಗಿರಬಹುದು?
ರಾಜಕೀಯ ಪಕ್ಷವೊಂದು ಭಾರೀ ಬಹುಮತ ಪಡೆದು ಅಧಿಕಾರಕ್ಕೇರುವುದರೊಂದಿಗೆ ಅದಕ್ಕೆ ಧಾರ್ಮಿಕ ಅಜೆಂಡಾವೂ ಇದ್ದರೆ ಅಭಿಪ್ರಾಯ ಭೇದಗಳನ್ನು ಹತ್ತಿಕ್ಕುವ ಕೆಲಸಕ್ಕೆ ಇನ್ನೊಂದು ಭಯಾನಕ ಆಯಾಮ ದೊರೆಯುತ್ತದೆ. ಅಲ್ಲಿ ಧರ್ಮ ರಕ್ಷಣೆಯ ಹೆಸರಿನಲ್ಲಿ ಕ್ರಿಮಿನಲ್ ಗುಂಪುಗಳು ಬೀದಿಗಿಳಿಯುತ್ತವೆ. ಅರಣ್ಯ ನ್ಯಾಯ ಜಾರಿಯಾಗುತ್ತದೆ. ಗುಂಪು ಹಿಂಸೆ ಆರಂಭವಾಗುತ್ತದೆ. ಅಮಾಯಕರನ್ನು ಬೀದಿಯಲ್ಲಿಯೇ ಬಡಿದು ಸಾಯಿಸಲಾಗುತ್ತದೆ. ಸಾಲದೆಂಬಂತೆ ಈ ಅಪರಾಧಿಗಳನ್ನು ಕೇಂದ್ರ ಮಂತ್ರಿಗಳೇ ಬೆಂಬಲಿಸಿ ಮಾತನಾಡುತ್ತಾರೆ, ಕೆಲವೊಮ್ಮೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಾರ ಹಾಕಿ ಸನ್ಮಾನಿಸುತ್ತಾರೆ.
ಅಲ್ಲಿ ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯಕ್ಕೆ ಜಾಗವೇ ಇರುವುದಿಲ್ಲ. ಪ್ರಜಾತಾಂತ್ರಿಕ ಸ್ವರೂಪದ ಸಂವಾದಕ್ಕೆ ಜಾಗವಿರುವುದಿಲ್ಲ. ಹಿಂಸೆಯ ಮೂಲಕ ಅಲ್ಲಿ ಎಲ್ಲ ವಿವಾದವನ್ನೂ ಇತ್ಯರ್ಥ ಮಾಡಲಾಗುತ್ತದೆ. ಎಲ್ಲೆಲ್ಲೂ ಫ್ಯಾಸಿಸ್ಟ್ ಮನಸುಗಳದ್ದೇ ಮೇಲುಗೈ. ಜೆಎನ್‍ಯುವನ್ನು ಇಡಿಯಾಗಿ ದೇಶದ್ರೋಹಿಗಳ ಪಟ್ಟಿಗೆ ಸೇರಿಸಲಾಗುತ್ತದೆ. ಪ್ರಗತಿಪರ ಚಿಂತಕರ ಕಾರ್ಯಕ್ರಮಗಳನ್ನು ದಾಂಧಲೆಯ ಮೂಲಕ ಹಾಳುಗೆಡವÀಲಾಗುತ್ತದೆ. ಇತ್ತೀಚೆಗೆ ಕುನಾಲ್ ಕಮ್ರಾ ಎಂಬ ಸ್ಟಾಂಡ್ ಅಪ್ ಕಾಮಿಡಿಯನ್ ಕಾರ್ಯಕ್ರಮವೊಂದನ್ನು ನೀಡಲು ವಡೋದರ ವಿವಿಗೆ ಹೋದರೆ ಒತ್ತಡ ಹಾಕಿ ಆತನ ಕಾರ್ಯಕ್ರಮ ರದ್ದುಪಡಿಸಲಾಯಿತು. ಆತನನ್ನು ದೇಶದ್ರೋಹಿ ಎಂದು ಕರೆಯಲಾಯಿತು. ದೆಹಲಿ ವಿವಿಯಲ್ಲಿಯ ‘ಡಯಲಾಗ್ ಆನ್ ಫ್ರೀಡಂ ಆಫ್ ಎಕ್ಸ್‍ಪ್ರೆಶನ್” ಎಂಬ ಕಾರ್ಯಕ್ರಮವನ್ನು ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಒತ್ತಡದ ಮೇರೆ ರದ್ದುಪಡಿಸಲಾಯಿತು. ಶಾಂತಿ, ಸಹಬಾಳ್ವೆಯ ಹರಿಕಾರ ಸ್ವಾಮೀ ಅಗ್ನಿವೇಶ್‍ರನ್ನು ಅಮಾನುಷವಾಗಿ ಥಳಿಸಲಾಯಿತು. ಅಲ್ಲಿ ವಿಚಾರವಾದಿಗಳನ್ನು, ಜನಪರ ಚಿಂತಕರನ್ನು, ಪತ್ರಕರ್ತರನ್ನು ಗುಂಡಿಕ್ಕಿ ಸಾಯಿಸಲಾಗುತ್ತದೆ ಮತ್ತು ಈ ಯಾವ ಅಪರಾಧಿಗಳಿಗೂ ಶಿಕ್ಷೆಯಾದ ಉದಾಹರಣೆಯಿಲ್ಲ.
ಕೆಲದಿನಗಳ ಹಿಂದೆ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿಯ ಮೇಲೆ ಚರ್ಚೆ ನಡೆದಾಗ ರಾಹುಲ್ ಗಾಂಧಿಯವರು ಒಂದು ಮಾತು ಆಡುತ್ತಾರೆ. ಅದು ನಿಜಕ್ಕೂ ತುಂಬ ಗಂಭೀರವಾದ ವಿಷಯವಾದರೂ ಮೋದಿ ಭಜನಾಮಂಡಳಿ ಮಾಧ್ಯಮಗಳು ಉದ್ದೇಶ ಪೂರ್ವಕವಾಗಿಯೇ ಅದಕ್ಕೆ ಹೆಚ್ಚು ಪ್ರಚಾರ ನೀಡಲಿಲ್ಲ. “ನಾವು ಅಧಿಕಾರ ತ್ಯಾಗಕ್ಕೂ ಸಿದ್ಧ, ಆದರೆ ಮೋದಿ ಮತ್ತು ಅಮಿತ್ ಶಾ ಅವರು ಅಧಿಕಾರದಿಂದ ಕೆಳಗಿಳಿಯಲು ಸಿದ್ಧರಿರುವುದಿಲ್ಲ. ಅವರು ಅಧಿಕಾರದ ಕುರ್ಚಿಯಿಂದ ಕೆಳಗಿಳಿಯುತ್ತಿದ್ದಂತೆ ಅವರ ವಿರುದ್ಧ ಕೆಲವು ಪ್ರಕ್ರಿಯೆಗಳು ಆರಂಭವಾಗುತ್ತವೆ” ಎಂದು ಅವರು ಹೇಳಿದ್ದರು. ಮೋದಿ ಮತ್ತು ಶಾ ಅವರ ಹಿನ್ನೆಲೆ ಗೊತ್ತಿರುವವರಿಗೆ ಈ “ಪ್ರಕ್ರಿಯೆ”ಗಳು ಏನು ಎನ್ನುವುದೂ ಗೊತ್ತಿದೆ. ಇದು ಮೋದಿ ಮತ್ತು ಶಾ ಅವರಿಗೂ ಗೊತ್ತಿದೆ. ಹಾಗಾಗಿಯೇ ಅವರು ಸುಲಭದಲ್ಲಿ ಅಧಿಕಾರದಿಂದ ಕೆಳಗಿಳಿಯಲಾರರು ಎಂಬ ಮಾತಿನಲ್ಲಿ ಸತ್ಯಾಂಶವೂ ಇದೆ. ಜಗತ್ತಿನ ಯಾವ ಸರ್ವಾಧಿಕಾರಿಗಳೂ ಸುಲಭದಲ್ಲಿ ಅಧಿಕಾರದಿಂದ ಇಳಿದ ಉದಾಹರಣೆ ಇಲ್ಲ. ಈ ಹಿನ್ನೆಲೆಯಲ್ಲಿಯೇ, ಭಾರತದಲ್ಲಿ ಮುಂದೆ ಚುನಾವಣೆ ಸಕಾಲದಲ್ಲಿ ನಡೆಯದಿದ್ದರೆ ಅಚ್ಚರಿಯಿಲ್ಲ ಎಂದು ಅನೇಕ ಚಿಂತಕರು ಎಚ್ಚರಿಸಿದ್ದರು. ಹಾಗೆ ಸಕಾಲದಲ್ಲಿ ಚುನಾವಣೆÉ ನಡೆಯದಿದ್ದೀತೇ? ಗೊತ್ತಿಲ್ಲ. ಸೋಲುವ ಸೂಚನೆ ಸಿಗಲಾರಂಭಿಸಿದರೆ ಏನೂ ಆಗಬಹುದು. ಆದರೆ ಒಂದಂತೂ ಸ್ಪಷ್ಟ. ಆ ಚುನಾವಣೆಗೆ ಮುನ್ನ ಪ್ರಜಾತಂತ್ರ ವಿರೋಧಿಯಾದ ಇನ್ನೂ ಒಂದಷ್ಟು ಭಯಾನಕ ಘಟನೆಗಳು ನಡೆಯುವುದು ಖಂಡಿತ. ಜನ ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ದೇಶದ ಪ್ರಜಾತಂತ್ರಕ್ಕೆ ಮಾತ್ರವಲ್ಲ, ಭಾರತ ಎಂಬ ಪರಿಕಲ್ಪನೆ ಅಥವಾ ಇಂಗ್ಲಿಷ್‍ನಲ್ಲಿ ‘ಐಡಿಯಾ ಆಫ್ ಇಂಡಿಯಾ’ ಎನ್ನುತ್ತಾರಲ್ಲ ಅದಕ್ಕೆ ಇನ್ನೂ ಒಂದಷ್ಟು ಗಂಭೀರ ಧಕ್ಕೆಯಾಗುವ ಸಂಭವ ದಟ್ಟವಾಗಿದೆ.
• ಶ್ರೀನಿವಾಸ ಕಾರ್ಕಳ

Leave a Reply

Your email address will not be published.

Social Media Auto Publish Powered By : XYZScripts.com