‘ದ್ರಾವಿಡ ಚಳುವಳಿಯ ಮಹಾನಾಯಕ : ಸಾಮಾಜಿಕ ನ್ಯಾಯದ ಸ್ಕ್ರಿಪ್ಟ್ ರೈಟರ್….

ಕರುಣಾನಿಧಿ ಅವರ ಸಾವು ದೇಶದ ಹೆಚ್ಚಿನ ಭಾಗಗಳಲ್ಲಿ ಒಂದು ದೊಡ್ಡ ಸುದ್ದಿ ಅಲ್ಲ ಅನ್ನೋದು ನಿಜ. ಅವರ ಸಾವಿನ ಮತ್ತು ಅಂತ್ಯಕ್ರಿಯೆಯ ಸುದ್ದಿ ಖಂಡಿತವಾಗಿಯೂ ದೇಶದ ಎಲ್ಲ ಪತ್ರಿಕೆಗಳ ಮುಖಪಟಗಳಲ್ಲೂ ವರದಿಯಾಗಿದೆ. ಅವರು ಐದು ಸಲ ಮುಖ್ಯಮಂತ್ರಿಯಾಗಿದ್ದನ್ನು ಮತ್ತು ಹದಿಮೂರು ಸಲ ಶಾಸಕರಾಗಿದ್ದನ್ನು ಎಲ್ಲರೂ ಹೇಳಿದ್ದಾರೆ. ಆದರೆ ತಮಿಳನಾಡಿನ ಹೊರಗೆ ಎಷ್ಟು ಜನ ಈ ಸುದ್ದಿಯನ್ನು ಓದುತ್ತಾರೆ, ಎಷ್ಟು ಜನ ಇದರ ಮಹತ್ವವನ್ನು ಅರಿಯುತ್ತಾರೆ ಎಂಬುದೇ ಪ್ರಶ್ನೆ. ಅವರಿಗೆ ಜಯಲಲಿತ ಹೇಗೋ ಹಾಗೇ ಕರುಣಾನಿಧಿ, ದೂರದೇಶದ ಒಬ್ಬ ಅಜ್ಞಾತ ನಾಯಕ, ನಾಯಕಿ.
ಓದುಬರಹವನ್ನು ಬಲ್ಲ ಒಬ್ಬ ಸಾಮಾನ್ಯ ಹಿಂದಿಭಾಷಿಕನಿಗೆ ‘ದ್ರಾವಿಡ ಮುನ್ನೇತ್ರ ಕಳಗಂ’ ಈ ಹೆಸರನ್ನೇ ಉಚ್ಛರಿಸಲು ಬರದೇ ಇರುವುದು ನಮ್ಮ ರಾಷ್ಟ್ರವಾದದ ವಿಡಂಬನೆಯೆಂದೇ ಹೇಳಬಹುದು. ಅವನಿಗೆ ದ್ರಾವಿಡ ಚಳುವಳಿಯ ಬಗ್ಗೆ ಕೇಳಿದರೆ, ಅದೊಂದು ಹಿಂದೀವಿರೋಧಿ ಚಳವಳಿ ಎಂದಷ್ಟೇ ಹೇಳಬಹುದು. ಇಂದಿಗೂ ಹೆಚ್ಚಿನ ತಮಿಳೇತರರು ತಮಿಳುನಾಡಿನ ರಾಜಕೀಯವನ್ನು ಒಂದು ಆಶ್ಚರ್ಯವೆಂದೇ ತಿಳಿದುಕೊಂಡಿದ್ದಾರೆ. ಸಿನಿಮಾ ಜನ ಅಲ್ಲಿನ ರಾಜಕಾರಣದಲ್ಲಿ ಹೇಗೆ ಬರುತ್ತಾರೆ? ನಾಯಕರ ಪ್ರೀತಿಯಲ್ಲಿ ಜನ ಅಷ್ಟೇಕೆ ಹುಚ್ಚರಾಗುತ್ತಾರೆ?
ಕರುಣಾನಿಧಿಯ ನಿಧನದಿಂದ ರಾಷ್ಟ್ರದ ಈ ಅಜ್ಞಾನ ಮತ್ತು ಪೂರ್ವಗ್ರಹದಿಂದ ಹೊರಬರುವ ಅವಕಾಶ ಒದಗಿಬಂದಿದೆ. ಅವರ ಜೀವನದಿಂದ ಇಪ್ಪತ್ತನೇ ಶತಮಾನದ ತಮಿಳು ರಾಷ್ಟ್ರೀಯತೆ, ದ್ರಾವಿಡ ಚಳವಳಿ ಮತ್ತು ಪ್ರಾದೇಶಿಕ ರಾಜಕಾರಣಗಳ ಬಗ್ಗೆ ಬೆಳಕು ಚೆಲ್ಲುವ ಒಂದು ಕಿರಣವಾಗಬಲ್ಲದು. ಅಂದರೆ, ಭಾರತದ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯನ್ನು ತಿಳಿದುಕೊಳ್ಳುವ ಒಂದು ಅವಕಾಶವಾಗಬಲ್ಲದು.
ಕರುಣಾನಿಧಿ ಹಾಗೇ ಸಿನೆಮಾಗಳಿಗೆ ಸ್ಕ್ರಿಪ್ಟ್ ಬರೆಯತ್ತ ಸಲೀಸಾಗಿ ರಾಜಕಾರಣಕ್ಕೆ ಬಂದವರಲ್ಲ. ಅವರು ಮತ್ತು ಅವರ ಸಂಗಡಿಗರು ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದ ರಾಮಸ್ವಾಮಿ ‘ಪೆರಿಯಾರ್’ ಅವರ ಶಿಷ್ಯರಾಗಿದ್ದರು. ನಿಸ್ಸಂಶಯವಾಗಿ, ದ್ರಾವಿಡ ಚಳವಳಿಯು ಉತ್ತರಭಾರತದ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿತ್ತು, ಹಿಂದಿ ಹೇರಿಕೆಯನ್ನು ವಿರೋಧಿಸಿತ್ತು, ‘ಹಿಂದಿ, ಹಿಂದು, ಹಿಂದುಸ್ಥಾನ’ ಎನ್ನುವ ಘೋಷಣೆಯನ್ನು ವಿರೋಧಿಸಿತ್ತು. ಆದರೆ ಇವುಗಳ ಆಧಾರದ ಮೇಲೆ ಅವರನ್ನು ಭಾರತೀಯ ರಾಷ್ಟ್ರೀಯತೆಯ ವಿರೋಧಿ ಎಂದು ಪರಿಗಣಿಸಿದರೆ ಅದೊಂದು ದೊಡ್ಡ ತಪ್ಪಾಗುತ್ತದೆ. ವಾಸ್ತವದಲ್ಲಿ ದ್ರಾವಿಡ ಚಳವಳಿಗಳು ಮತ್ತು ಇತರ ಪ್ರಾದೇಶಿಕ ಚಳವಳಿಗಳು ಭಾರತೀಯ ರಾಷ್ಟ್ರವಾದದ ಅಡಿಪಾಯವನ್ನು ಗಟ್ಟಿಗೊಳಿಸಿವೆ. ಭಾರತದ ರಾಷ್ಟ್ರವಾದ ಎಂಬುದು ಪ್ರಾದೇಶಿಕತೆಯ ಹೂವನ್ನು ಹೊಸಕಿಹಾಕಿ ರಚಿಸಿದ ಹೂಮಾಲೆಯಲ್ಲ, ಬದಲಿಗೆ ಪ್ರಾದೇಶಿಕತೆಯ ಜೊತೆಗೂಡಿ ಕಟ್ಟಿದ್ದಾಗಿದೆ.
ಕರುಣಾನಿಧಿ ಮತ್ತು ಅವರ ರಾಜಕೀಯ ಗುರು ಅಣ್ಣಾದೊರೈ ಅವರು ಒಂದು ಪ್ರತ್ಯೇಕ ‘ದ್ರಾವಿಡಸ್ಥಾನ’ ಅಥವಾ ಸ್ವತಂತ್ರ ದ್ರಾವಿಡ ರಾಷ್ಟ್ರದ ವಿಚಾರವನ್ನು ತಿರಸ್ಕರಿಸಿ ಭಾರತೀಯ ಪ್ರಜಾಪ್ರಭುತ್ವದ ಒಳಗಿದ್ದುಕೊಂಡೇ ಡೆಮಾಕ್ರಾಟಿಕ್ ರೀತಿಯಲ್ಲಿ ತಮಿಳು ಆಕಾಂಕ್ಷೆಗಳನ್ನು ಪೋಷಿಸುವ ರಾಜಕಾರಣವನ್ನು ಪ್ರಾರಂಭಿಸಿದರು. ಇದರಿಂದ ತಮಿಳುನಾಡಿನ ಪ್ರಾದೇಶಿಕ ರಾಜಕೀಯ ಹಾಗೂ ಭಾರತದ ರಾಷ್ಟ್ರೀಯತೆ ಎರಡೂ ಗಟ್ಟಿಗೊಂಡವು. 1967ರಿಂದ ಇಂದಿನವರೆಗೆ ತಮಿಳುನಾಡಿನ ಆಳ್ವಿಕೆಯ ಮೇಲೆ ದ್ರಾವಿಡ ಚಳುವಳಿಯಿಂದಲೇ ಹುಟ್ಟಿಕೊಂಡ ಯಾವುದಾದರೂ ಒಂದು ಪಕ್ಷದ ನಿಯಂತ್ರಣವಿದೆ. ಹಾಗೂ ಇನ್ನೊಂದೆಡೆ, ತಮಿಳು ಪ್ರತ್ಯೇಕತೆಯ ಅಪಾಯ ಮುಕ್ತಾಯವಾಗಿದೆಯಲ್ಲದೆ, ಭಾರತೀಯ ಗಣರಾಜ್ಯವೂ ಗಟ್ಟಿಗೊಂಡಿದೆ. ಒಂದು ವೇಳೆ ಶ್ರೀಲಂಕಾದ ತಮಿಳು ಪ್ರತ್ಯೇಕತೆಯ ರಾಜಕಾರಣದ ಹಿನ್ನೆಲೆಯಲ್ಲಿ ಭಾರತದ ದ್ರಾವಿಡ ಚಳವಳಿಯನ್ನು ನೋಡಿದರೆ ತಮಿಳು ಆಕಾಂಕ್ಷೆಗಳನ್ನು ಗೌರವಿಸುವುದರಿಂದ ಭಾರತ ಗಣರಾಜ್ಯ ಹೇಗೆ ಗಟ್ಟಿಗೊಂಡಿದೆ ಎಂದು ಮನದಟ್ಟಾಗುತ್ತದೆ.
ಅಧಿಕಾರಕ್ಕೆ ಬಂದ ಎರಡೇ ವರ್ಷಗಳಲ್ಲಿ ಅಣ್ಣಾದೊರೈ ಕಾಲವಶರಾದರು ಹಾಗೂ ಈ ಚಳುವಳಿಯ ವೈಚಾರಿಕ ಮತ್ತು ರಾಜಕೀಯ ನೇತೃತ್ವವನ್ನು ವಹಿಸಿಕೊಳ್ಳುವ ಜವಾಬ್ದಾರಿ ಕರುಣಾನಿಧಿಯವರ ಹೆಗಲ ಮೇಲೆ ಬಿತ್ತು. ಕಳೆದ 50 ವರ್ಷಗಳಿಂದ ಕರುಣಾನಿಧಿ ರಾಷ್ಟ್ರೀಯ ಪಕ್ಷಗಳೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದರು. ಆದರೆ ಯಾವತ್ತೂ ಅವರು ದೆಹಲಿಯ ಆಳ್ವಿಕೆಯ ಮುಂದೆ ಮಂಡಿಯೂರಿ ನಿಲ್ಲಲಿಲ್ಲ. ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ಕರುಣಾನಿಧಿ ಧ್ವನಿ ಎತ್ತುವ ಸಾಹಸ ಮಾಡಿದರು; ಅದೇ ಕಾರಣಕ್ಕೆ ಅವರ ಸರಕಾರವನ್ನು ವಜಾಗೊಳಿಸಲಾಯಿತು. ರಾಜಮನ್ನಾರ್ ಸಮಿತಿಯನ್ನು ರಚಿಸಿದ ಕರುಣಾನಿದಿ,ü ರಾಜ್ಯಗಳ ಅಧಿಕಾರವನ್ನು ಗಟ್ಟಿಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದರು. ಭಾರತೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಅಡಿಪಾಯಕ್ಕೆ ಇದು ಕರುಣಾನಿಧಿಯವರ ಐತಿಹಾಸಿಕ ಕೊಡುಗೆ.
ಆದರೆ ಕರುಣಾನಿಧಿ ಬರೀ ಒಂದು ಪ್ರಾದೇಶಿಕ ಚಳವಳಿಯ ನಾಯಕ ಮಾತ್ರವಲ್ಲ. ದ್ರಾವಿಡ ಚಳವಳಿ ನಾಸ್ತಿಕವಾದಿ ವೈಚಾರಿಕತೆಯ ಹಾಗೂ ಸಾಮಾಜಿಕ ನ್ಯಾಯದ ಚಳವಳಿಯಾಗಿತ್ತು. ಈ ಚಳವಳಿ ಸಮಾಜದೆಲ್ಲೆಡೆ ವ್ಯಾಪಕವಾಗಿದ್ದ ಅನೇಕ ಧಾರ್ಮಿಕ ಅನಾಚಾರಗಳನ್ನು ಖಂಡಿಸಿತು ಹಾಗೂ ಧಾರ್ಮಿಕ ಆಳ್ವಿಕೆಯನ್ನು ವಿರೋಧಿಸಿದರೂ ರಾಜಕೀಯ ಆಳ್ವಿಕೆಯನ್ನು ಗಳಿಸುವಲ್ಲಿ ಸಫಲರಾದರು. ಇದೇ ಪರಂಪರೆಯ ಮುಂದುವರಿಕೆಯಾಗಿ ಕರುಣಾನಿಧಿ ಅವರು ಭಾರತ ಮತ್ತು ಶ್ರೀಲಂಕಾ ನಡುವೆ ನಿರ್ಮಿಸಲು ಉದ್ದೇಶಿಸಿದ್ದ ಸೇತುವೆಗೆ ‘ರಾಮಸೇತು’ ಹೆಸರಿನಲ್ಲಿ ಧಾರ್ಮಿಕ ಬಣ್ಣ ಬಳಿಯುವ ರಾಜಕೀಯವನ್ನು ತಿರಸ್ಕರಿಸಿದರು.
ಎಲ್ಲಕ್ಕಿಂತ ಮುಖ್ಯವಾಗಿ, ಕರುಣಾನಿಧಿ ಮತ್ತು ದ್ರಾವಿಡ ಚಳವಳಿಯನ್ನು ಸಾಮಾಜಿಕ ನ್ಯಾಯದ ಪ್ರತಿಪಾದಕರೆನ್ನುವುದು ಹೆಚ್ಚು ಸೂಕ್ತ. ಸ್ವತಃ ಕರುಣಾನಿಧಿ ಅವರು ಅತ್ಯಂತ ಹಿಂದುಳಿದ ಜಾತಿಗೆ ಸೇರಿದವರಾಗಿದ್ದರು. ದೇವಸ್ಥಾನಗಳ ಎದುರುಗಡೆ ವಾದ್ಯಗಳನ್ನು ಬಾರಿಸುವುದು ಆ ಜಾತಿಯ ಮೂಲ ಕಸುಬು. ಆ ದಿನಗಳಲ್ಲಿ ತಮಿಳುನಾಡಿನ ಬ್ರಾಹ್ಮಣ ವರ್ಚಸ್ಸಿಗೆ ಗಂಭೀರ ಸವಾಲಾಗಿದ್ದು ದ್ರಾವಿಡ ಚಳವಳಿ. ತಮಿಳುನಾಡಿನಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸುವಲ್ಲಿ ಕರುಣಾನಿಧಿ ಸರಕಾರದ ಪ್ರಭಾವ ಬಹಳ ದೊಡ್ಡದು. ಕೇವಲ ಸರಕಾರೀ ನೌಕರಿಗಳಲ್ಲಷ್ಟೇ ಅಲ್ಲದೇ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲೂ ದಮನಿತ ಜಾತಿಗಳಿಗೆ ನ್ಯಾಯಸಮ್ಮತ ಸ್ಥಾನವನ್ನು ದಕ್ಕಿಸಿದರು. ಈ ನಿಟ್ಟಿನಲ್ಲಿ ಉತ್ತರಭಾರತದ ಹಿಂದುಳಿದ ಜಾತಿಗಳ ರಾಜಕೀಯ ಆರಂಭವಾಗುವುದಕ್ಕಿಂತ ಮುಂಚೆಯೇ ದ್ರಾವಿಡ ಚಳವಳಿ ತಾರಕಕ್ಕೇರಿತ್ತು ಮತ್ತು ಹೆಚ್ಚಿನ ದೂರದೃಷ್ಟಿ ಹೊಂದಿತ್ತೆಂಬುದನ್ನು ಸಾಬೀತುಪಡಿಸಿದೆ.
ಕರುಣಾನಿಧಿಯ ನೇತೃತ್ವದಲ್ಲಿ ಸಾಮಾಜಿಕ ನ್ಯಾಯದ ರಾಜಕಾರಣ ಕೇವಲ ಮೀಸಲಾತಿಗಷ್ಟೇ ಸೀಮಿತಗೊಳ್ಳಲಿಲ್ಲ. ಅವರ ನೇತೃತ್ವದಲ್ಲಿ ಡಿಎಂಕೆ ಸರಕಾರ ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಅಡಿಪಾಯ ಹಾಕಿತು. ಸ್ವತಃ ಬಡತನವನ್ನು ಕಂಡಿದ್ದ ಕರುಣಾನಿಧಿ ತಮಿಳುನಾಡಿನಲ್ಲಿ ಚಾಲ್ತಿಯಲ್ಲಿದ್ದ ರಿಕ್ಷಾಗಳನ್ನು ಕೈಯಿಂದ ಎಳೆಯುವ ಅಮಾನವೀಯ ಪದ್ಧತಿಯನ್ನು ಕೊನೆಗೊಳಿಸಿದ್ದಷ್ಟೇ ಅಲ್ಲದೇ ರಿಕ್ಷಾ ಎಳೆಯುವವರಿಗೆ ಪರ್ಯಾಯ ಉದ್ಯೋಗವನ್ನು ಕಲ್ಪಿಸಿದರು. ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ಕಲ್ಪಿಸಿದ್ದು, ಕುಟುಂಬದ ಮೊದಲ ಪದವಿಧರರಿಗೆ ಉಚಿತ ಕಾಲೇಜು ಶಿಕ್ಷಣ ಕೊಡಿಸಿದ್ದು, ಬಡವರ ಆರೋಗ್ಯಸೇವೆಗೆ ವಿಮೆ ಹಾಗೂ ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಆಸ್ತಿ ಹಕ್ಕನ್ನು ನೀಡಿದ್ದು – ಇಂತಹ ಅನೇಕ ಯೋಜನೆಗಳ ಕಾರಣದಿಂದ ತಮಿಳುನಾಡಿನ ಜನತೆ ಅವರನ್ನು ಎಂದೆಂದಿಗೂ ಮರೆಯಲಾರರು. ನಂತರ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಪ್ರಾರಂಭಿಸಿದ ಸಮಾಜಕಲ್ಯಾಣ ಯೋಜನೆಗಳನ್ನು ಹೆಚ್ಚಿಸುತ್ತಲೇ ಬರಲಾಯಿತು. ಬಹುಶಃ ಇದೇ ಕಾರಣದಿಂದಾಗಿ ದೇಶದಲ್ಲಿ ಪಡಿತರ ವ್ಯವಸ್ಥೆ ಮತ್ತು ಸಮಾಜಕಲ್ಯಾಣದ ಎಲ್ಲಾ ಯೋಜನೆಗಳು ತಮಿಳುನಾಡಿನಲ್ಲಿ ಎಲ್ಲಕ್ಕಿಂತ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ.
ಕರುಣಾನಿಧಿಯವರು ಜೀವನದ ಕೊನೆಯ ಘಟ್ಟ ತಲುಪುತ್ತಿರುವಂತೆ ದ್ರಾವಿಡ ಚಳವಳಿಯೂ ಸೂರ್ಯಾಸ್ತದೆಡೆಗೆ ಹೆಜ್ಜೆ ಹಾಕುತ್ತಿತ್ತು. ದ್ರಾವಿಡ ಪಕ್ಷಗಳ ಮೇಲೆ ಅವರ ಕುಟುಂಬದ ಹಿಡಿತ ಪ್ರಬಲಗೊಂಡಿತು. ಸ್ವತಃ ಕರುಣಾನಿಧಿಯವರ ಮೇಲೆಯೇ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದವು. ಬರಬರುತ್ತಾ ದ್ರಾವಿಡ ಚಳವಳಿ ತನ್ನ ಮೂಲತತ್ವ, ವಿಚಾರಗಳನ್ನು ಸಂಪೂರ್ಣವಾಗಿ ಮರೆತುಬಿಟ್ಟಂತೆ ಕಾಣುತ್ತಿದೆ. ದ್ರಾವಿಡ ಚಳವಳಿ ಇಳಿಮುಖಗೊಂಡಿರುವ ಈ ಕಾಲದಲ್ಲಿ ತಮಿಳುನಾಡಿನ ರಾಜಕೀಯ ಒಂದು ಹೊಸ ಮಜಲಿಗೆ ಬಂದು ನಿಂತಿದೆ.
 ಇಂತಹ ಘಟ್ಟದಲ್ಲಿ ಕರುಣಾನಿಧಿಯವರ ಸ್ಮರಣೆ, ಮುಳುಗುತ್ತಿರುವ ಸೂರ್ಯನಿಗೆ ಸಲ್ಲಿಸುವ ವಂದನೆಯಂತಲ್ಲದೆ ಪ್ರಜಾಸತ್ತಾತ್ಮಕ, ಒಕ್ಕೂಟ ವ್ಯವಸ್ಥೆಯ ಮತ್ತು ನ್ಯಾಯಸಮ್ಮತ ಭಾರತದ ಕನಸಿಗೆ ಕಸುವು ತುಂಬುವಂತಾಗಾಬೇಕು. ಈ ಕನಸು ಕೇವಲ ತಮಿಳುನಾಡಿನ ಕನಸು ಮಾತ್ರವಲ್ಲದೆ ಇಡೀ ಭಾರತದ ಕನಸಾಗಬೇಕು.
• ಯೋಗೇಂದ್ರ ಯಾದವ್
ಕನ್ನಡಕ್ಕೆ : ರಾಜಶೇಖರ್ ಅಕ್ಕಿ 

Leave a Reply

Your email address will not be published.

Social Media Auto Publish Powered By : XYZScripts.com