ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳನ ಹರಿದ ನಾಲಗೆಯ ಹಿಂದೆ…

ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳನ ನಾಲಗೆಗೆ ಮತ್ತೆ ಲಕ್ವಾ ಹೊಡೆದಿದೆ. ಇದರಲ್ಲಿ ಅಚ್ಚರಿಯೇನೂ ಇಲ್ಲ. ಅವನ ನಾಲಗೆ ಸ್ವಸ್ಥವಾಗಿ ಇದ್ದುದಕ್ಕಿಂತ ಸ್ವಾಧೀನ ತಪ್ಪಿದ್ದೇ ಹೆಚ್ಚು. ಈ ಸಲ ತನ್ನ ಹೊಲಸು ನಾಲಗೆಯನ್ನು ಬುದ್ದಿಜೀವಿಗಳತ್ತ ತಿರುಗಿಸಿರೋ ಪುಣ್ಯಾತ್ಮ `ತಾನು ಹೋಂ ಮಿನಿಸ್ಟ್ರು ಆಗಿದ್ದಿದ್ದ್ರೆ, ಸೋ ಕಾಲ್ಡ್ ಸೆಕ್ಯುಲರಿಸ್ಟುಗಳನ್ನು ಗುಂಡಿಟ್ಟು ಸಾಯಿಸುವಂತೆ ಆರ್ಡರ್ ಮಾಡುತ್ತಿದ್ದೆ’ ಅಂತ ಥೇಟು ಟೆರರಿಸ್ಟ್ ಶೈಲಿಯಲ್ಲಿ ಒದರಿಕೊಂಡಿದ್ದಾನೆ. ಡ್ಯಾಮೇಜಾಗಿರುವ ಆತನ ಅರ್ಧ ಬ್ರೈನು ಕೋಮಾ ತಲುಪಿ ಅದ್ಯಾವ ಕಾಲವೋ ಆಗಿಹೋಗಿದೆ. ಉಳಿದರ್ಧ ಭಾಗದಲ್ಲಿ ಇರೋದು ಕೋಮುಹಿಂಸೆಯ ಕಲರವ ಅಷ್ಟೇ. ಸಮಯ ಸಿಕ್ಕಾಗಲೆಲ್ಲ ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಗಲಾಟೆ ಹಚ್ಚಿ ರಾಜಕಾರಣ ಮಾಡುತ್ತಾ ಬಂದಿರುವ ಯತ್ನಾಳ್ ಮಧ್ಯ ವಯಸ್ಸಲ್ಲೇ ರಾಜಕೀಯ ವೃದ್ಧಾಪ್ಯಕ್ಕೆ ಈಡಾಗಿ ಡಿಪ್ರೆಶನ್‍ನ ನಿರಂತರ ಟ್ರೀಟ್‍ಮೆಂಟ್‍ನಲ್ಲಿದ್ದಾನೆ ಅನ್ನೋ ಸುದ್ದಿಯೂ ಇದೆ. ಅಸಲಿಗೆ ಸರ್ಕಾರ ಇಂತವನನ್ನು ಹುಚ್ಚಾಸ್ಪತ್ರೆಯಲ್ಲೊ, ಪರಪ್ಪನ ಅತಿಥಿ ಗೃಹದಲ್ಲೋ ಇಡಬೇಕಿತ್ತು. ಆದರೆ ಅಂತಹ ಯಾವ ಜವಾಬ್ಧಾರಿಯುತ ಸರ್ಕಾರವೂ ಇಂಡಿಯಾದಲ್ಲಿ ಅಸ್ತಿತ್ವಕ್ಕೆ ಬರದ ಕಾರಣ, ಬೀದಿಯಲ್ಲಿ ಅಲೆದುಕೊಂಡಿದ್ದಾನಷ್ಟೇ!
ಒಂದು ಕಾಲಕ್ಕೆ ಬಿಜೆಪಿಯಲ್ಲಿ ಯಡ್ಯೂರಪ್ಪಗೆ ಪರ್ಯಾಯ ಲಿಂಗಾಯತ ಲೀಡರ್ ಆಗಿ ಬೆಳೆದು ಬಡ್ತೀನಿ ಅಂತ ಏನೇನೊ ಸರ್ಕಸ್ ಮಾಡಲು ಹೋಗಿ ಯಡ್ಯೂರಪ್ಪರ ಶಾಶ್ವತ ಶತ್ರುಗಳ ಲಿಸ್ಟು ಸೇರಿಕೊಂಡಿರುವ ಬಸನಗೌಡ ಪಾಟೀಲ್ ಹೀಗೆಲ್ಲ ಒದರಾಡಲು ಒಂದು ಕಾರಣವಿದೆ. ಬಿಜೆಪಿಯೊಳಗೆ ಅಧಿಕಾರದ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವುದಿರಲಿ, ಚುನಾವಣೆಯ ಟಿಕೇಟ್ ದಕ್ಕಿಸಿಕೊಳ್ಳುವುದೇ ಆತನಿಗೆ ದುಸ್ಥರವಾಗಿತ್ತು. 2013ರಲ್ಲಿ ಯತ್ನಾಳನಿಗೆ ಟಿಕೇಟ್ ತಪ್ಪಿದ್ದು ಪಕ್ಷದೊಳಗೆ ಆತನಿಗಿರುವ ಕೆಟ್ಟ ಇಮೇಜಿನಿಂದಾಗಿಯೇ. ಆತನ ಪರಮ ವೈರಿ ಯಡ್ಯೂರಪ್ಪ ಪಕ್ಷ ತೊರೆದು ಕೆಜೆಪಿ ಕಟ್ಟಿಕೊಂಡು ಕಣದಲ್ಲಿದ್ದಾಗಲೂ ಈತ ಬಿಜೆಪಿ ಟಿಕೇಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ ಅಂತಂದರೆ ಈತನ ತಾಕತ್ತು ಎಂತದ್ದು ಅನ್ನೋದು ಅರ್ಥವಾಗುತ್ತದೆ. ಈಗ ಯಡ್ಯೂರಪ್ಪ ವಾಪಾಸಾದ ಮೇಲಂತೂ ಪಕ್ಷದೊಳಗೆ ಯತ್ನಾಳನ ಬಿಗಿತ ದಿನದಿಂದ ದಿನಕ್ಕೆ ಕುಗ್ಗುತ್ತಲೇ ಇದೆ. ಅದ್ಹೇಗೊ ಈ ಸಲ ಟಿಕೇಟ್ ಸಿಕ್ಕು, ಗೆದ್ದಿದ್ದಾನಾದರು ತನ್ನ ಹಳೆಯ ವೈರಿಯನ್ನು ಮಟ್ಟಹಾಕಲು ಯಡ್ಯೂರಪ್ಪ ಹಾತೊರೆಯುತ್ತಿರೋದರಿಂದ ಯತ್ನಾಳ್ ಸಾಹೇಬರಿಗೆ ರಾಜಕೀಯ ಅಸ್ತಿತ್ವದ ಪ್ರಶ್ನೆ ಕಾಡಲು ಶುರುವಾಗಿದೆ.
ಹೇಗಾದರು ಮಾಡಿ, ದಿಲ್ಲಿ ನಾಯಕರ ಗಮನ ತನ್ನತ್ತ ಸೆಳೆದು ಯಡ್ಯೂರಪ್ಪನ ಹಂಗೂ ಇಲ್ಲದೆ ವರ್ಚಸ್ಸು ಹೆಚ್ಚಿಸಿಕೊಳ್ಳಬೇಕೆಂಬ ಹಪಾಹಪಿಯೇ ಆತನನ್ನು ಬುದ್ದಿಜೀವಿಗಳ ವಿರುದ್ಧ ಮಾತಾಡುವಂತೆ ಮಾಡಿದೆ. ಇತ್ತೀಚೆಗೆ, ಅದರಲ್ಲೂ 2019ರ ಎಲೆಕ್ಷನ್ ಸನಿಹವಾದಂತೆಲ್ಲ ಬಾಯಿಗೆ ಬಂದಂತೆ ಕೋಮುದ್ವೇಷದ ಮಾತುಗಳನ್ನಾಡುವ ಬಾಯಿಬಡುಕರಿಗೆ ಬಿಜೆಪಿ ಹೈಕಮಾಂಡು ವಿಶೇಷ ಮಣೆ ಹಾಕುತ್ತಿದೆ. ಅನಂತ್ ಕುಮಾರ್ ಹೆಗಡೆಯಂತಹ ಸಡಿಲ ನಾಲಿಗೆಯ ರಾಜಕಾರಣಿಯನ್ನೂ ಕೇಂದ್ರ ಮಂತ್ರಿ ಮಾಡಿರೋದು ಯತ್ನಾಳ್‍ಗೆ ಸ್ಫೂರ್ತಿ ತುಂಬಿದಂತಿದೆ. ಸಾಲದ್ದಕ್ಕೆ ದೇಶಾದ್ಯಂತ ಜಾತ್ಯತೀತರ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ಮಾತನಾಡುವವರು ರಾತ್ರೋರಾತ್ರಿ ಪಕ್ಷದ ವೇದಿಕೆಯಲ್ಲಿ ಹೀರೋಗಳಾಗುತ್ತಿರೋದನ್ನು ಕಂಡ ಯತ್ನಾಳ್ ತಾನು ಯಾಕೆ ಅಂತದ್ದೊಂದು ಪ್ರಯತ್ನ ಮಾಡಿ ನೋಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ಹೇಗೂ ಅವನ ಹುಟ್ಟುಗುಣವೇ ಬಾಯಿಗೆ ಬಂದದ್ದನ್ನು ಒದರಾಡೋದು. ಅದನ್ನು ಇನ್ನಷ್ಟು ಅಧ್ವಾನದಲ್ಲಿ ತಿರುಗಾಡಿಸಿದರೆ ತನಗೂ ಒಳ್ಳೆ ಹುದ್ದೆ ಒದಗಿ ಬರಬಹುದೆನ್ನುವ ಅಂದಾಜು ಆತನದ್ದು.
ಈ ಹಿಂದೆಯೂ ಈತ ಜೆಡಿಎಸ್‍ಗೆ ವಲಸೆ ಹೋಗಿ ವಾಪಾಸ್ ಬಿಜೆಪಿಗೆ ಮರಳಿದಾಗ, ಪಕ್ಷದೊಳಗೆ ವರ್ಚಸ್ಸು ಹೆಚ್ಚಿಸಿಕೊಳ್ಳಲು ತಣ್ಣಗಿದ್ದ ವಿಜಯಪುರಕ್ಕೆ ಲೋಕಸಭಾ ವಿಜಯೋತ್ಸವದ ನೆಪದಲ್ಲಿ ಕೋಮುಬೆಂಕಿ ಹಚ್ಚಿ ಬಿಸಿ ಕಾಯಿಸಿಕೊಂಡಿದ್ದ. ತನ್ನ ಪಟಾಲಮ್ಮಿನ ಹುಡುಗರನ್ನು ಕರೆತಂದು ಮುಸ್ಲೀಮರೆ ಅಧಿಕವಾಗಿರುವ ಗಾಂಧಿಚೌಕದಲ್ಲಿ ದಾಂಧಲೆ ಎಬ್ಬಿಸಿದ್ದ. ಯತ್ನಾಳ್ ಎಂಥಾ ಪುಕ್ಕಲು ಆಸಾಮಿಯೆಂದರೆ, ಪೊಲೀಸರು ಅರೆಸ್ಟ್ ಮಾಡೋದು ಗೊತ್ತಾಗುತ್ತಿದ್ದಂತೆಯೇ ರಾತ್ರೋರಾತ್ರಿ ಊರು ಬಿಟ್ಟು ಪರಾರಿಯಾಗಿ ದೂರದ ಕೊಲ್ಲಾಪುರದ ಓರಿಯಂಟಲ್ ಕ್ರೌನ್ ಹೊಟೇಲ್‍ನಲ್ಲಿ ಬಚ್ಚಿಟ್ಟುಕೊಂಡಿದ್ದ; ಅದೂ ತನ್ನ ಡ್ರೈವರ್ ಹೆಸರಲ್ಲಿ ರೂಮ್ ಬುಕ್ ಮಾಡಿಸಿಕೊಂಡು! ಪೊಲೀಸರು ಬಂಧಿಸಿ ತಂದಮೇಲೂ ಎದೆನೋವಿನ ನೆಪಹೇಳಿ ತನ್ನದೇ ಪಕ್ಷಸ್ಥ ಪ್ರಭಾಕರ್ ಕೋರೆಯ ಕೆಎಲ್‍ಇ ಆಸ್ಪತ್ರೆಯಲ್ಲಿ ನರಳಾಡಿ, ಕೋರ್ಟಿಂದ ಜಾಮೀನು ಪಡೆದು ಬಚಾವಾಗಿದ್ದ. ಅಂಥಾ ಯತ್ನಾಳ್ ಇದೀಗ ಮತ್ತೆ ಅದೇ ಖಯಾಲಿ ಮುಂದುವರೆಸಿ ಮುಗಿದುಹೋಗುತ್ತಿರುವ ತನ್ನ ರಾಜಕೀಯ ಬದುಕನ್ನು ಮತ್ತೆ ಮೊನಚು ಮಾಡಿಕೊಳ್ಳುವ ಯತ್ನದಲ್ಲಿದ್ದಾನೆ.
ಇದಿಷ್ಟು ಯತ್ನಾಳನ ಪುರಾಣವಾದರೆ, ಅತ್ತ ಬಿಜೆಪಿ ಕೂಡಾ ಯತ್ನಾಳನಂತಹ ಬಾಯಿಬಡುಕರನ್ನು ದೇಶಾದ್ಯಂತ ಒದರಾಡಲು ಬಿಟ್ಟು 2019ರ ಎಲೆಕ್ಷನ್‍ಗೆ ಹತಾರಗಳನ್ನು ರೆಡಿ ಮಾಡಿಕೊಳ್ಳುತ್ತಿದೆ. ಸಂವಿಧಾನದ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ, ದಲಿತರ ವಿರುದ್ಧ, ಜಾತ್ಯತೀತರ ವಿರುದ್ಧ ಅಲ್ಲಲ್ಲಿ ಇಂತಹ ಸಡಿಲ ನಾಲಗೆಗಳನ್ನು ಮಾತಾಡಲು ಬಿಟ್ಟು, ಪ್ರತಿಕ್ರಿಯೆಯನ್ನು ನಾಜೂಕಾಗಿ ಗಮನಿಸುತ್ತಿದೆ. ಇಂಥಾ ಲೋ ಪ್ರೊಫೈಲ್ ಲೀಡರ್‍ಗಳು ಆಡುವ ಮಾತುಗಳು ವಿವಾದವಾದರೆ, ಅದು ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷಕ್ಕೂ ತಮಗೂ ಸಂಬಂಧವಿಲ್ಲ ಅಂತ ಕೈತೊಳೆದುಕೊಳ್ಳೋದು ಅದರ ಐಡಿಯಾ. ಬಲಿಯಾದರೆ ಯತ್ನಾಳನಂತಹ ಸ್ಯಾಂಪಲ್ ಪೀಸುಗಳು ಬಲಿಯಾಗುತ್ತವೆ, ಅದಕ್ಕೆ ಪ್ರತಿಯಾಗಿ ಜನರಲ್ಲಿ ಇಂತದ್ದೇ ಮಾತನ್ನು ಪದೇಪದೇ ಕೇಳುವುದರಿಂದ ಅವು ಸಹಜ ಎನ್ನಿಸುವಷ್ಟು ತಾಳಿಕೆ ಬಂದು, ತಮ್ಮ ಕೋಮುತಂತ್ರಗಳಿಗೆ ನೆಲ ಹದವಾಗುತ್ತೆ ಎಂಬ ಹುನ್ನಾರ ಬಿಜೆಪಿ ಮತ್ತು ಸಂಘ ಪರಿವಾರದ್ದಾಗಿರುವಂತಿದೆ. ಹಾಗಾಗಿ ಒಳಗಿಂದೊಳಗೇ ಈ ಬಗೆಯ ಬಾಯಾಸುರರಿಗೆ ಕುಮ್ಮಕ್ಕು ಸಿಕ್ಕುತ್ತಿದೆ. ಇದನ್ನು ಕಂಡೇ ಯತ್ನಾಳನಂತಹ ರಾಜಕೀಯ ಬಿಕ್ಕಟ್ಟಿನಲ್ಲಿರೋರು ಬಾಯಿಗೆ ಬಂದಂತೆ ಮಾತಾಡಿ, ತಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಯತ್ನಾಳ್ ಕೂಡಾ ಅಂತಹದ್ದೇ ಒಂದು ಟ್ರಯಲ್ ಅಂಡ್ ಎರರ್ ಪೀಸು! ದುರಂತವೆಂದರೆ, ಆತ ಅಷ್ಟು ರಾಜಾರೋಷವಾಗಿ ಹಿಂಸೆ-ದ್ವೇಷದ ಮಾತಾಡುತ್ತಿದ್ದರು ಕರ್ನಾಟಕದಲ್ಲಿ ಅಧಿಕಾರದಲ್ಲಿರೋ ಕಲಬೆರಕೆ ಸರಕಾರ ಕಮಕ್-ಕಿಮಕ್ ಎನ್ನದೆ ಕೂತಿದೆ.

Leave a Reply

Your email address will not be published.

Social Media Auto Publish Powered By : XYZScripts.com