Maruti Suzuki problems : ಮಾರುತಿ ಕಾರ್ಮಿಕರ ಮೇಲೆ ಈ ಸೇಡಿನ ಕ್ರಮಗಳೇಕೆ?

ವಿದೇಶಿ ಹೂಡಿಕೆದಾರರ ಆಸಕ್ತಿಗಳನ್ನು ರಕ್ಷಿಸಲು ಸರ್ಕಾರವು ಕಟಿಬದ್ಧವಾಗಿರುವುದರಿಂದ ಮಾರುತಿ ಸುಜುಕಿ ಕಾರ್ಮಿಕರು ಬಹುದೊಡ್ಡ ಸವಾಲನ್ನು ಎದುರಿಸಬೇಕಾಗಿದೆ.

ಹರ್ಯಾಣದ ಗುರ್‌ಗಾಂವಿನ ಮಾರುತಿ-ಸುಜುಕಿ ಕಾರ್ಮಿಕರ ಸಂಘಟನೆಯ ೧೨ ಪದಾಧಿಕಾರಿಗಳನ್ನೂ ಒಳಗೊಂಡಂತೆ ೧೩ ಜನ ಕಾರ್ಮಿಕರಿಗೆ ಸುಳ್ಳು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಇದೇ ಜುಲೈ ೧೮ರಂದು ಗುರ್‌ಗಾಂವ್‌ನಲ್ಲಿರುವ ಮಾರುತಿ-ಸುಜುಕಿ ಕಂಪನಿಯ ಸಾವಿರಾರು ಕಾರ್ಮಿಕರು ದೊಡ್ಡ ಪ್ರತಿಭಟನೆಯನ್ನು ನಡೆಸಿದರು. ಇಲ್ಲಿ ಕೊಲೆ ಮೊಕದ್ದಮೆಯನ್ನು ಸುಳ್ಳು ಪ್ರಕರಣವೆಂದು ಏಕೆ ಹೇಳುತ್ತಿದ್ದೇವೆಯೆಂದರೆ ಸುಲ್ಲೂ ಪ್ರಕರಣವನ್ನು ಸೃಷ್ಟಿ ಮಾಡುವಲ್ಲಿ ಸ್ಥಳೀಯ ಪೊಲೀಸರು ಕಂಪನಿಯೊಂದಾಗಿ ಕುಮ್ಮಕ್ಕಾಗಿರುವುದಕ್ಕೆ ಮತ್ತು ಸುಳ್ಳು ಸಾಕ್ಷ್ಯವನ್ನು ಸೃಷ್ಟಿ ಮಾಡಿರುವುದಕ್ಕೆ ಪುರಾವೆಗಳಿವೆ. ಈ ಪ್ರಕರಣದಲ್ಲಿ ಆರೋಪಿತರಾದ ೧೪೮ ಜನರಲ್ಲಿ ೧೧೭ ಜನರನ್ನು ಖುಲಾಸೆ ಮಾಡುತ್ತಾ ಸಹಾಯಕ ಜಿಲ್ಲಾ ಸತ್ರ ನ್ಯಾಯಾಧೀಶರಾದ ಆರ್.ಪಿ. ಗೋಯಲ್ ಅವರೂ ಸಹ ಇದನ್ನು ಪುಷ್ಟಿಕರಿಸಿದ್ದಾರೆ. ಬಿಡುಗಡೆಯಾದವರಲ್ಲಿ ಯಾರನ್ನೂ ಯಾವ ಸರ್ಕಾರಿ ಸಾಕ್ಷಿಗಳೂ ಸಹ ಗುರುತು ಕೂಡಾ ಹಿಡಿಯಲಿಲ್ಲ. ಮಾರುತಿ ಸುಜುಕಿ ಕಂಪನಿಯು ಪೊಲೀಸರಿಗೆ ಕೊಟ್ಟ  ಶಂಕಿತರ ಪಟ್ಟಿಯಿಂದಲೇ ಈ ೧೪೮ ಜನರನ್ನು ಆಯ್ದು ಆರೋಪಿಗಳನ್ನಾಗಿಸಲಾಗಿತ್ತೇ ವಿನಃ ಪೊಲೀಸರು ಯಾವುದೇ ಸ್ವತಂತ್ರ ತನಿಖೆ ಮಾಡಿ ಅವರ ಮೇಲೆ ಆರೋಪ ಹೊರಿಸಿರಲಿಲ್ಲ.  ಎಲ್ಲಕ್ಕಿಂತ ಆಶ್ಚರ್ಯಕರ ಸಂಗತಿಯೆಂದರೆ ಅಪರಾಧವು ನಡೆಯಿತೆಂದು ಹೇಳಲಾದ ಸ್ಥಳದಲ್ಲಿ  ಹಾಜರಿದ್ದ ಇತರ ಕಾರ್ಮಿಕರ ಹೇಳಿಕೆಗಳನ್ನು  ತೆಗೆದುಕೊಳ್ಳಲು ನ್ಯಾಯಾಧೀಶ ಗೋಯಲ್ ಅವರು ನಿರಾಕರಿಸಿದ್ದು.

ಈ ವರ್ಷ ಜುಲೈ ೧೮ಕ್ಕೆ ಮಾರುತಿ ಸುಜುಕಿ ಕಂಪನಿಯ ಸಿಬ್ಬಂದಿ ಮ್ಯಾನೇಜರ್ ಅವನೀಶ್ ದೇವ್ ಅವರು ಸತ್ತು ಆರು ವರ್ಷಗಳಾಗುತ್ತವೆ. ಅವರು ಕಾರ್ಮಿಕರ ಪಕ್ಷಪಾತಿಯಾಗಿದ್ದರಲ್ಲದೆ ತಮ್ಮ ಸಂಘಟನೆಯನ್ನು ಅಧಿಕೃತವಾಗಿ ನೊಂದಾಯಿಸಿಕೊಳ್ಳಲು ನಡೆಸುತ್ತಿದ್ದ ಹೋರಾಟದ ಪರವಾಗಿದ್ದರು. ಆರು ವರ್ಷದ ಕೆಳಗೆ ಕಂಪನಿಯ ಚಿತಾವಣೆಯಿಂದಲೇ ಹುಟ್ಟಿಕೊಂಡ ಘರ್ಷಣೆಯಲ್ಲಿ ಸಾವೀಡಾದ ಏಕೈಕ ವ್ಯಕ್ತಿ ದೇವ್ ಅವರು. ಅಂದು ಇದ್ದಕ್ಕಿದ್ದಂತೆ ನಿಗೂಢ ರೀತಿಯಲ್ಲಿ ಬೆಂಕಿ ಹತ್ತಿಕೊಂಡಿದ್ದರಿಂದ ದೇವ್ ಅವರು ತಾವಿದ್ದ ಸ್ಥಳದಿಂದ ಹೊರಬರಲಾಗದೆ ಉಸಿರುಗಟ್ಟಿ ನಿಧನರಾದರು. ಆದರೆ ಮಾರುತಿ ಸುಜುಕಿ ಕಂಪನಿ ಮತ್ತು ಹರ್ಯಾಣ ಸರ್ಕಾರವು ಕಾರ್ಮಿಕರ ವಿರುದ್ಧ ತೆಗೆದುಕೊಂಡ ಸೇಡಿನ ಕ್ರಮಗಳು ಮಾತ್ರ ಅತ್ಯಂತ ನಂಜಿನಿಂದ ಕೂಡಿದ್ದವು. ಹೀಗಾಗಿಯೇ ಈಗ ಹರ್ಯಾಣದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರವು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಎಲ್ಲ ೧೩ ಕಾರ್ಮಿಕರಿಗೂ ಗಲ್ಲು ಶಿಕ್ಷೆ ವಿಧಿಸಬೇಕೆಂದು ಈ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರವಾಗಲೀ ಅಥವಾ ಹಾಲಿ ಬಿಜೆಪಿ ಸರ್ಕಾರವಾಗಲೀ ಕಾರ್ಮಿಕರಿಗೆ  ಅಸಾಧಾರಣವಾದ ಶಿಕ್ಷೆ ಕೊಡಿಸಲು ಹಠ ಹಿಡಿದಿರುವುದೇಕೆ?

ಈ ಕಾರ್ಮಿಕರಿಗೆ ಗಲ್ಲು ಶಿಕ್ಷೆ ಏಕೆ ವಿಧಿಸಬೇಕೆಂದು ಆಗ್ರಹಿಸುತ್ತಿದ್ದೀರೆಂದು ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದ ಅನುರಾಗ್ ಹೂಡಾ ಅವರು : ನಮ್ಮ ದೇಶದ ಕೈಗಾರಿಕಾ ಅಭಿವೃದ್ಧಿ ಕುಸಿದಿದೆ; ವಿದೇಶಿ ನೇರ ಬಂಡವಾಳ ಹೂಡಿಕೆಯೂ ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಉತ್ಪಾದಿಸ ಬನ್ನಿ ಎಂದು ಕರೆ ನೀಡುತ್ತಿರುವಾಗ ಇಂಥಾ ಪ್ರಕರಣಗಳು ನಮ್ಮ ಪ್ರತಿಷ್ಟೆಗೆ ಭಂಗ ತರುತ್ತವೆ ಎಂದು ಉತ್ತರಿಸಿದ್ದಾರೆ. ಆದ್ದರಿಂದ ಕಾರ್ಮಿಕರು ಸ್ವತಂತ್ರ ಕಾರ್ಮಿಕ ಸಂಘಟನೆಗಳನ್ನು ಕಟ್ಟಿಕೊಂಡು ತಮ್ಮನ್ನು ಹಂಗಾಮಿಯಾಗಲ್ಲದೆ ಖಾಯಂ ಕಾರ್ಮಿಕರನ್ನಾಗಿ ನೊಂದಾಯಿಸಿಕೊಳ್ಳಬೇಕೆಂದು ಕೇಳುವ ಹಕ್ಕುಗಳನ್ನು ಬಿಟ್ಟುಕೊಡಬೇಕು. ಮತ್ತು ಕಾರ್ಮಿಕರ ಸಂಕಷ್ಟಗಳಿಗೆ ಧ್ವನಿಯಾದ ಮಾತ್ರಕ್ಕೆ ಸೇಡಿನ ಕ್ರಮಗಳಿಗೆ ಬಲಿಯಾಗಿ ಕೆಲಸದಿಂದ ತೆಗೆದು ಹಾಕಲ್ಪಟ್ಟ ತಮ್ಮ ಸಂಘಟನೆಯ ಸಕ್ರಿಯ ಸದಸ್ಯರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂಬ ಆಗ್ರಹವನ್ನು ಕೂಡಾ ಮಾಡಬಾರದು. ಕೈಗಾರಿಕಾ ಅಭಿವೃದ್ಧಿಯನ್ನು ಮತ್ತು ವಿದೇಶಿ ಬಂಡವಾಳದ ಹರಿವನ್ನು ಹೆಚ್ಚಿಸುವ ಸಲುವಾಗಿ ಮಾಲಿಕರು ಯಾವುದೇ ಕಟ್ಟುಪಾಡಿಲ್ಲದೆ ಶ್ರಮದ ಶೋಷಣೆಯನ್ನು ಹೆಚ್ಚಿಸಬಹುದು ಮತ್ತು ಕಾರ್ಮಿಕ ಸಂಘಟನೆಗಳ ಸಕ್ರಿಯ ಸದಸ್ಯರಾಗಿರುವ ಕಾರ್ಮಿಕರನ್ನು ಬೇಕಾಬಿಟ್ಟಿ ವರ್ಗಾಯಿಸಬಹುದು, ಅಮಾನತ್ತುಗೊಳಿಸಬಹುದು ಅಥವಾ ಕೆಲಸದಿಂದಲೇ ಕಿತ್ತೊಗೆಂiಬಹುದು. ಮತ್ತು ಆ ಮೂಲಕ ಕಾರ್ಮಿಕರ ಸ್ವತಂತ್ರ ಯೂನಿಯನ್ನುಗಳು ಕೆಲಸ ಮಾಡದಂತೆ ನಿಷ್ಕ್ರಿಯಗೊಳಿಸಬಹುದು.

ಮಾರುತಿ ಕಂಪನಿಯೇ ಬೆಂಬಲಿಸಿ ಹುಟ್ಟುಹಾಕಿದ್ದ ಚೇಲಾ ಯೂನಿಯನ್ನಿಗೆ ಪರ್ಯಾಯವಾಗಿ ತಮ್ಮದೇ ಆದ ಸ್ವತಂತ್ರ ಕಾರ್ಮಿಕ ಯೂನಿಯನ್ನನ್ನು ಸ್ಥಾಪಿಸಿಕೊಂಡ ಕಾರ್ಮಿಕರು ಅದನ್ನು ಅಧಿಕೃತವಾಗಿ ನೊಂದಾಯಿಸಿಕೊಳ್ಳುವ ಸಲುವಾಗಿ  ಎರಡು ವರ್ಷಗಳ ಕಾಲ ಸುದೀರ್ಘ ಹೋರಾಟವನ್ನೇ ಮಾಡಬೇಕಾಯಿತು. ದೇವ್ ಅವರ ದಾರುಣ ಸಾವಿನ ಘಟನೆ ನಡೆದ ೨೦೧೨ರ ಜುಲೈ ೧೮ಕ್ಕೆ ಕೇವಲ ಐದು ತಿಂಗಳು ಮುನ್ನ ೨೦೧೨ರ ಜನವರಿಯಲ್ಲಿ ಕಾರ್ಮಿಕರು ತಮ್ಮ ಹೋರಾಟದಲ್ಲಿ ಜಯಕಂಡು ತಮ್ಮ ಸ್ವತಂತ್ರ ಯೂನಿಯನ್ನಿಗೆ ಅಧಿಕೃತ ನೊಂದಾವಣೆ ಪಡೆದುಕೊಂಡರು.

ಆದರೆ ಕಂಪನಿಯು ಕಾರ್ಮಿಕರನ್ನು ಖಾಯಂ ಕಾರ್ಮಿಕರಾಗಿಯಲ್ಲದೆ ಅವರಿಗಿಂತ ಅತ್ಯಂತ ಕಡಿಮೆ ಸಂಬ ಪಡೆಯುವ ಅತಂತ್ರ ಗುತ್ತಿಗೆ ಕಾರ್ಮಿಕರನಾಗಿ ನೇಮಿಸಿಕೊಳ್ಳುವ ಮತ್ತು ಅತ್ಯಂತ ಕಠಿಣವಾದ ಕೆಲಸದ ನಿಯಮಗಳನ್ನು ಹೇರುವ ಅಧಿಕಾರವನ್ನು ಉಳಿಸಿಕೊಂಡಿತ್ತು. ಕಾರ್ಮಿಕರನ್ನು ಕಂಗೆಡಿಸುತ್ತಿದ್ದ ವಿಷಯವೂ ಇದೇ ಆಗಿತ್ತು. ಈ ಪರಿಸ್ಥಿತಿಯು ಹೀಗೆ ಮುಂದುವರೆಯಲು ಈ ಹಿಂದಿನ ಕಾಂಗ್ರೆಸ್ ಮತ್ತು ಹಾಲೀ ಬಿಜೆಪಿ ಸರ್ಕಾರಗಳು, ಹಾಗೂ ಸರ್ಕಾರದ ಆಡಳಿತಶಾಹಿ ಕಂಪನಿಯೊಂದಿಗೆ ಶಾಮೀಲಾಗಿದ್ದದ್ದೂ ಒಂದು ಕಾರಣವಾಗಿತ್ತು. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷವೂ ಮತ್ತು ಇದೀಗ ಬಿಜೆಪಿ ಸರ್ಕಾರವೂ ಪೊಲೀಸರನ್ನೂ ಮತ್ತು ಇತರ ಅಧಿಕಾರ ಯಂತ್ರಾಂಗವನ್ನು ದುರ್ಬಳಕೆ ಮಾಡಿಕೊಂಡು ಕಾರ್ಮಿಕರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ ಮೂಲಕ ಕೇವಲ ಮಾರುತಿ ಸುಜುಕಿ ಕಾರ್ಮಿಕರಿಗೆ ಮಾತ್ರವಲ್ಲದೆ ಇಡೀ ದೇಶದ ಕಾರ್ಮಿಕ ವರ್ಗಕ್ಕೆ ಪಾಠ ಕಲಿಸಲು ಸಂಚು ಹೂಡಿದವು. ಮೇಲೆ ವಿವರಿಸಲಾದ ದುಡಿಮೆಯ ಶರತ್ತುಗಳನ್ನು ವಿರೋಧಿಸಿದಲ್ಲಿ ಮಾರುತಿ ಸುಜುಕಿ ಕಾರ್ಮಿಕರಂತೆ ಕಠೋರವಾದ ದಮನವನ್ನು ಎದುರಿಸಬೇಕಾಗುತ್ತದೆಂಬ ಕ್ರೂರ ಎಚ್ಚರಿಕೆಯನ್ನು ಅವರು ದೇಶದ ಕಾರ್ಮಿಕರಿಗೆ ನೀಡಿದ್ದಾರೆ. ಕಾರ್ಮಿಕರ ಪ್ರತಿರೋಧವನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲು ಬಿಜೆಪಿಗೆ ಮತ್ತೊಂದು ಕಾರಣವೂ ಇದೆ. ಅವರು  ಪ್ರಧಾನಿಯ ಮೇಕ್ ಇನ್  ಇಂಡಿಯಾ ಯೋಜನೆಯನ್ನು ಯಶಸ್ವಿಯಾಗಿಸಬೇಕಿದೆ. ವಿದೇಶಿ ಹೂಡಿಕೆದಾರರು ನಿರೀಕ್ಷಿಸುವ ಲಾಭದ ದರವನ್ನು ಖಾತರಿಗೊಳಿಸಲು ಇದಕ್ಕಿಂತ ಉತ್ತಮ ವಿಧಾನ ಬೇರಿನ್ಯಾವುದಿದೆ?

ಈಗಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆ ಬಡಪಾಯಿ ಕಾರ್ಮಿಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಪಂಜಾಬ್ ಹರ್ಯಾಣ ಉಚ್ಚನ್ಯಾಯಲಯದಲ್ಲಿ ಮೇಲ್ಮನವಿ ದಾಖಲಿಸಿರುವ ಕಂಪನಿಯ ಉದ್ದೇಶ ನಿಚ್ಚಳವಾಗಿದೆ. ೨೦೧೨ರ ಜುಲೈ ೧೮ರ ಘಟನೆ ನಡೆದ ತಿಂಗಳೊಪ್ಪತ್ತಿನಲ್ಲಿ ಮಾರುತಿ ಸುಜುಕಿ ಕಂಪನಿಯು ಯಾವುದೇ ವಿಚಾರಣೆ ನಡೆಸದೆ ಮತ್ತು ಕಾರ್ಮಿಕರ ಮೇಲ್ಮನವಿಗೆ ಯಾವುದೇ ಅವಕಾಶವನ್ನೂ ಕೊಡದೆ ಹೆಚ್ಚೂ ಕಡಿಮೆ ೨೩೦೦ ಕಾರ್ಮಿಕರನ್ನು ಕಿತ್ತೊಗೆದು ಬದಲೀ ಕಾರ್ಮಿಕರನ್ನು ನೇಮಿಸಿಕೊಂಡಿತ್ತು. ಅಷ್ಟು ಮಾತ್ರವಲ್ಲದೆ ಉಳಿದ ೧೧೭ ಕಾರ್ಮಿಕರನ್ನು ನಿರಪರಾಧಿಗಳೆಂದು ಖುಲಾಸೆ ಮಾಡಿದ ತೀರ್ಪಿನ ವಿರುದ್ಧವೂ ಹರ್ಯಾಣ ಸರ್ಕಾರ ಮೇಲ್ಮನವಿ ಸಲ್ಲಿಸುತ್ತಿದೆ.

ಆದರೆ ಇನ್ನೂ ಎಲ್ಲವೂ ಮುಗಿದುಹೋಗಿಲ್ಲ. ಸರ್ಕಾರವು ಶತಾಯ ಗತಾಯ ಗಲ್ಲು ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತಿರುವ ೧೩ ಕಾರ್ಮಿಕರ ಪರವಾಗಿ ಹಿರಿಯ ವಕೀಲರಾದ ವೃಂದಾ ಗ್ರೋವರ್, ರೆಬೆಕ್ಕಾ ಜಾನ್ ಮತ್ತು ಆರ್‌ಎಸ್ ಚೀಮಾ ಅವರುಗಳು ವಾದಿಸಲಿದ್ದಾರೆ. ಈ ಕಾರ್ಮಿಕರು ದೇವ್ ಅವರನ್ನು ಗಾಯಗೊಳಿಸಿ, ಬೆಂಕಿ ಹಚ್ಚಿದ್ದರಿಂದಲೇ ನಿಷ್ಯೇಷ್ಟಿತರಾದ ದೇವ್ ಅವರು ತಪ್ಪಿಸಿಕೊಳ್ಳಲಾಗದೆ ಉಸಿರುಗಟ್ಟಿ ಸತ್ತರೆಂಬ ಕಥನಕ್ಕೆ ಬೇಕಾದ ಪುರಾವೆಗಳನ್ನು ಸೃಷ್ಟಿಸುವುದು ಸರ್ಕಾರಿ ವಕೀಲರಿಗೆ ಖಂಡಿತಾ ತುಂಬಾ ಕಷ್ಟವಾಗಲಿದೆ.

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com