ಮೈಸೂರು : ಅನುಮತಿಯಿಲ್ಲದೆ 80 ವರ್ಷ ಹಳೆಯ ಅನಾಥಾಲಯ ಕಟ್ಟಡ ಉರುಳಿಸಿದ ವಕ್ಫ್ ಸಮಿತಿ..!

ಸಾಂಸ್ಕೃತಿಕ ನಗರಿ ಮೈಸೂರಿನ ಸೌಂದರ್ಯಕ್ಕೆ ಮೆರಗು ನೀಡುವ ಪಾರಂಪರಿಕ ಕಟ್ಟಡಗಳಿಗೆ ಈಗ ಮತ್ತೆ ಸಂಚಕಾರ ಬಂದಿದೆ. ಸುಮಾರು 80 ವರ್ಷಗಳ ಹಳೆಯ ಮುಸ್ಲಿಂ ಮಕ್ಕಳ ಅನಾಥಾಲಯ ಕಟ್ಟಡವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ.

1955ಕ್ಕೂ ಹಿಂದೆ ನಿರ್ಮಿಸಿದ 200ಕ್ಕೂ ಹೆಚ್ಚು ಕಟ್ಟಡಗಳು ಪಾರಂಪರಿಕ ವ್ಯಾಪ್ತಿಯಲ್ಲಿದ್ದು, ಕಟ್ಟಡಗಳ ನೆಲಸಮಕ್ಕೆ ನಗರಪಾಲಿಕೆ ಅನುಮತಿ ಬೇಕೆ ಬೇಕು. ಆದರೆ ವಕ್ಫ್ ಸಮಿತಿಯ ಅಧೀನದಲ್ಲಿರುವ ಈ ಕಟ್ಟಡವನ್ನು ಸಮಿತಿಯ ಸ್ಥಳೀಯ ಪದಾಧಿಕಾರಿಗಳು ಕಟ್ಟಡ ಶಿಥಿಲಗೊಂಡಿದೆ ಎಂಬ ನೆಪವೊಡ್ಡಿ ರಾತ್ರೋರಾತ್ರಿ ನೆಲಸಮ ಮಾಡಿಸಿದ್ದಾರೆ. ಸುಮಾರು 30 ಸಾವಿರ ಚದರಡಿ ವಿಸ್ತೀರ್ಣದ ಕಟ್ಟಡವನ್ನು ಮುಸ್ಲಿಂ ಮಕ್ಕಳ ಅನಾಥಾಲಯವಾಗಿ ಬಳಸಲಾಗುತ್ತಿತ್ತು.

ಬಳಿಕ ಕಟ್ಟಡ ಹಲವು ಭಾಗಗಳಲ್ಲಿ ಮಳಿಗೆಗಳು ತಲೆಎತ್ತಿದ್ದವು. ಆದರೆ ಪಾಲಿಕೆಯಿಂದ ಅನುಮತಿ ಪಡೆಯದೆ ಕಟ್ಟಡವನ್ನು ಕೆಡವಿದ್ದೇಕೆಂದು ಪಾಲಿಕೆಯ ಯಾವೊಬ್ಬ ಅಧಿಕಾರಿಯೂ ಪ್ರಶ್ನೆ ಮಾಡಿಲ್ಲ. ಕನಿಷ್ಠ ನೊಟೀಸ್ ನೀಡುವ ಪ್ರಯತ್ನ ಕೂಡ ನಡೆದಿಲ್ಲ. ಇದೇ ಜಾಗದಲ್ಲಿ 5ರಿಂದ 7 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ನಡೆದಿದೆ.

ಮೂರು ವರ್ಷಗಳ ಹಿಂದೆ ದೇವರಾಜ ಮಾರುಕಟ್ಟೆಯ ಒಂದು ಭಾಗ ಉರುಳಿ ಬಿದ್ದ ಮೇಲೆ ಇಡೀ ಮಾರುಕಟ್ಟೆ ನೆಲಸಮಕ್ಕೆ ಪಾಲಿಕೆ ಸ್ಕೆಚ್ ಹಾಕಿದೆ. ಇದೇ ನೆಪದಲ್ಲಿ ಲ್ಯಾನ್ಸ್ಡೌನ್ ಬಿಲ್ಡಿಂಗ್ನ ನವೀಕರಣವನ್ನು ಸ್ಥಗಿತಗೊಳಿಸಿದ್ದು, ಪಾರಂಪರಿಕ ಕಟ್ಟಡಗಳಿಗೆ ಗಂಡಾಂತರ ಎದುರಾಗಿರುವುದಂತು ಸತ್ಯ.

Leave a Reply

Your email address will not be published.

Social Media Auto Publish Powered By : XYZScripts.com