ಮೈಸೂರು : ವೇಶ್ಯಾಜಾಲದ ಮೇಲೆ ಪೋಲೀಸರ ದಾಳಿ : 7 ಯುವತಿಯರ ರಕ್ಷಣೆ..

ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲೇ ನಡೆಯುತ್ತಿದ್ದ ವೇಶ್ಯಾಜಾಲದ ಮೇಲೆ ಒಡನಾಡಿ ಸ್ವಯಂಸೇವಾ ಸಂಸ್ಥೆ ಹಾಗೂ ಪೊಲೀಸರು ದಾಳಿ ಮಾಡಿ 7 ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದರೆ, 3 ಮಂದಿ ಗಿರಾಕಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಮಾವಿಲಾಸ ರಸ್ತೆಯ ಯೋಗ ಕೇಂದ್ರದ ಮೇಲೆ ಪೊಲೀಸರು ದಾಳಿ ಮಾಡಿದಾಗ ವೇಶ್ಯಾ ದಂಧೆ ನಡೆಯುತ್ತಿದ್ದು ಬಯಲಿಗೆ ಬಂದಿದೆ.

ಈ ದಂಧೆಯ ಕಿಂಗ್ ಮಹೇಶ್ ಎಂಬಾತ ಪರಾರಿಯಾಗಿದ್ದಾನೆ. ಈತ ಇನ್ನೂ 16 ಹೆಣ್ಣು ಮಕ್ಕಳನ್ನು ಬೇರೊಂದು ಕಡೆ ಬಚ್ಚಿಟ್ಟಿರುವ ಮಾಹಿತಿಯನ್ನು ಒಡನಾಡಿ ಸಂಸ್ಥೆ ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಮಾಹಿತಿ ಆಧರಿಸಿ ಪೊಲೀಸರು ಆ ಹೆಣ್ಣು ಮಕ್ಕಳ ರಕ್ಷಣೆಗೂ ಮುಂದಾಗಿದ್ದಾರೆ. ಅಲ್ಲದೆ ಈ ವೇಶ್ಯಾ ಜಾಲದ ಕಿಂಗ್ ಪಿನ್ ಮಹೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಯೋಗ ಕೇಂದ್ರದಲ್ಲಿ ಹೆಣ್ಣು ಮಕ್ಕಳ ಮೊಬೈಲ್ ಫೋನ್‌ ಹಾಗೂ ಮಹಾರಾಷ್ಟ್ರ ನೋಂದಣಿಯಿದ್ದ ಆಲ್ಟೋ ಕಾರೊಂದನ್ನು ಪೊಲೀಸರು ವಶಕ್ಕೆ ಪಡೆದು ಕೇಂದ್ರಕ್ಕೆ ಬೀಗ ಹಾಕಿದ್ದಾರೆ. ಈ ದಂಧೆಯ ಹಿಂದಿರುವ ಕಿಂಗ್ ಮಹೇಶ್, ಕರ್ನಾಟಕ, ಮಹಾರಾಷ್ಟ್ರ ಕೇರಳ ಹಾಗೂ ಬಾಂಗ್ಲಾ ದೇಶದ ಯುವತಿಯರನ್ನು ಕರೆತಂದು ವೇಶ್ಯಾದಂಧೆಗೆ ತಳ್ಳುತ್ತಿದ್ದಾನೆ. ಆತ ಸಿಕ್ಕಿಬಿದ್ದರೆ ಇದರ ಹಿಂದಿರುವ ದೊಡ್ಡ ಕೈಗಳ ಪಾತ್ರ ಬಯಲಾಗುತ್ತದೆ ಅಂತಾ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೇಳಿದರು.

Leave a Reply

Your email address will not be published.