ಪ್ರಜಾಪ್ರಭುತ್ವದಿಂದ ದೊಂಬಿಕೋರರ ಪ್ರಭುತ್ವವಾಗುತ್ತಿರುವ ಭಾರತ…

ಇಂದು ಭಾರತದಲ್ಲಿ ಕಾನೂನಿನ ಆಡಳಿತದ ಜಾಗವನ್ನು ಅರಾಜಕತೆ ಮತ್ತು ದೊಂಬಿಕೊಲೆಗಳು ಆವರಿಸಿಕೊಳ್ಳುತ್ತಿವೆ.

ಗುಂಪುಗೂಡಿ ದೊಂಬಿಕೊಲೆಮಾಡುವ ವಿದ್ಯಮಾನಗಳು ಭಾರತದಲ್ಲಿ ಈಗ ಸರ್ವೇ ಸಾಮಾನ್ಯವಾದ ವಿದ್ಯಮಾನವಾಗಿಬಿಡುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಂಥಾ ವಿದ್ಯಮಾನಗಳನ್ನು ಸಮಾಜದ ಬಹುಸಂಖ್ಯಾತ ಜನ ಖಂಡಿಸುತ್ತಲೂ ಇಲ್ಲ. ಅದರ ಬದಲಿಗೆ ಅಂಥಾ ದೊಂಬಿ ಮತ್ತು ಹಿಂಸಾಚಾರಗಳು ಬಹುಸಂಖ್ಯಾತರ ಸಮ್ಮತಿಯನ್ನು ಪಡೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಮತ್ತೊಂದು ಕಡೆ ಇಂಥಾ ವಿದ್ಯಮಾನಗಳ ಮೂಲಭೂತ ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರಗಳದ್ದು ಮತ್ತು ಆಯಾ ಸರ್ಕಾರಗಳ ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿ ಮಾಡುವ ಹೊಣೆ ಹೊತ್ತಿರುವ ಸಂಸ್ಥೆಗಳದ್ದು ಎಂದು ನ್ಯಾಯಾಂಗವು ಸರಿಯಾಗಿಯೇ ಸ್ಪಷ್ಟಪಡಿಸಿ ಹೊಣೆನಿಗದಿ ಮಾಡಿದೆ.

ಈ ದೊಂಬಿಕೊಲೆಗಳು ನಡೆಯುವ ರೀತಿಯಲ್ಲೂ ಒಂದು ಸ್ಪಷ್ಟ ತಾರತಮ್ಯವಿದೆ. ಉದಾಹರಣೆಗೆ ಅತ್ಯಾಚಾರದಂಥ ಪ್ರಕರಣಗಳಲ್ಲಿ ಬಲಿಯಾದವರು ಸಮಾಜದ ಬಹುಸಂಖ್ಯಾತ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಗೆ ಸೇರಿದವರಾಗಿದ್ದರೆ ಆರೋಪಿತರ ಮೇಲೆ ಕೂಡಲೇ ಕಾನೂನು ಚೌಕಟ್ಟಿನಾಚೆ ಗುಂಪುದಾಳಿಗಳು ನಡೆಯುತ್ತವೆ. ಇಂಥಾ ಒಂದು ಪ್ರಕರಣ ಇತ್ತೀಚೆಗೆ ಮಧ್ಯಪ್ರದೇಶದ ಮಂಡಸೂರಿನಲ್ಲಿ ಸಂಭವಿಸಿತು. ಅಲ್ಲಿ ೮ ವರ್ಷದ ಹುಡುಗಿಯ ಮೇಲೆ ನಡೆದ ಅತ್ಯಾಚಾರದ ವಿರುದ್ಧ ತತ್‌ಕ್ಷಣ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಬಹುಸಂಖ್ಯಾತ ಹಿಂದೂ ಸಮುದಾಯದವರು ಮೆರವಣಿಗೆ ಮತ್ತು ಪ್ರದರ್ಶನಗಳನ್ನು ನಡೆಸಿದರು. ಈ ಘಟನೆಗೆ ಕಾರಣಕರ್ತರಾದವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೆಂಬ ಊಹಾಪೋಹಗಳೂ ಸಹ ಬಹುಸಂಖ್ಯಾತ ಸಮುದಾಯದವರ ಆಕ್ರೋಶವನ್ನು ಇಮ್ಮಡಿಗೊಳಿಸಿತ್ತು.

ಯಾವುದೋ ಒಂದು ನಿರ್ದಿಷ್ಟ ಅಪರಾಧ ಎಸಗಿರಬಹುದೆಂಬ ಅನುಮಾನದ ಮೇಲೆ ನಡೆಯುವ ದೊಂಬಿಕೊಲೆಗಳೆಲ್ಲಾ ಪೂರ್ವಯೋಜಿತವಾದದ್ದೇ ಆಗಿರಬೇಕಿಲ್ಲ. ಉದಾಹರಣೆಗೆ ಜುಲೈ ೧ ರಂದು ಮಹಾರಾಷ್ರದ ಧುಲೆಯಲ್ಲಿ ಜನರು ದೊಂಬಿ ಮಾಡಿ ಐದು ಜನರನ್ನು ಕೊಂದುಹಾಕಿದ ಘಟನೆಯೂ ಈ ಸಾಲಿಗೇ ಸೇರಿಕೊಳ್ಳುತ್ತದೆ. ಅಥವಾ ದೊಂಬಿಕೋರರಾಗಿ ಮಾರ್ಪಡುವ ಸಾರ್ವಜನಿಕರು ಅನುಮಾನಾಸ್ಪದ ಆರೊಪಿಗಳನ್ನು ವಾಸ್ತವಿಕ ನೆಲಗಟ್ಟಿನಲ್ಲೋ ಅಥವಾ ನ್ಯಾಯಾನ್ಯಾಯ ವಿವೇಚನೆಯಿಂದಲೂ ಪರಿಗಣಿಸಿ ತೀರ್ಮಾನಕ್ಕೆ ಬರುವುದಿಲ್ಲ. ವಾಸ್ತವವಾಗಿ ಇಂಥಾ ಬಹುಪಾಲು ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟುಗಳಿಂದ ಪ್ರಚೋದಿತಗೊಳ್ಳುತ್ತವೆ. ಮತ್ತು ಅಲ್ಲಿ ಯಾರು ಯಾರಿಗೂ ಸಮಜಾಯಿಶಿ ಕೊಡುವಂತಿರುವುದಿಲ್ಲ. ಉದಾಹರಣೆಗೆ ಧುಲೆ ಪ್ರಕರಣದಲ್ಲಿ ಆರೋಪಿಗಳು ಎಸಗಿದಂಥ ಅಪರಾಧಗಳನ್ನು ಮಾಡದಂತೆ ತಡೆಗಟ್ಟುವಲ್ಲಿ ಕಾನೂನು ಯಂತ್ರಾಂಗವು ವಿಫಲವಾಗಿರುವುದರಿಂದ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿರುವುದಾಗಿ ಸಮರ್ಥಿಸಿಕೊಳ್ಳಲಾಯಿತು.  ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅನುಶಾಸನದ ಮತ್ತು ವೈಚಾರಿಕ ಚಿಂತನೆಯನ್ನು ಮೊಟಕುಗೊಳಿಸಿ ಹಿಂಸಾತ್ಮಕ ಘಟನೆಗಳಿಗೆ ಪ್ರಚೋದನೆಯನ್ನು ನೀಡುತ್ತದೆ. ಆದರೆ ಕೆಲವು ಅಪರೂಪದ ಅಪವಾದಗಳೂ ಇಂಥಾ ಸಂದರ್ಭಗಳಲ್ಲಿ ವ್ಯಕ್ತವಾಗಿವೆ. ಉದಾಹರಣೆಗೆ ೨೦೧೮ರ ಮೇ ತಿಂಗಳಲ್ಲಿ ಉತ್ತರಖಂಡ್‌ನಲ್ಲಿ ಪೋಲಿಸ್ ಒಬ್ಬರು ಅಮಾಯಕನನ್ನು ದೊಂಬಿಕೋರರಿಂದ ಬಚಾವು ಮಾಡಿದರು. ಅದೇ ರೀತಿ ಇತ್ತೀಚೆಗೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ದೊಂಬಿಕೋರರಿಂದ ಸ್ಥಳೀಯರು ಒಬ್ಬ ಮಹಿಳೆಯನ್ನೂ ಒಳಗೊಂಡಂತೆ ಐವರನ್ನು ಬಚಾವು ಮಾಡಿದರು.

ದೊಂಬಿ ಮಾಡಿ ಕೊಲ್ಲಬೇಕೆಂಬ ಧೋರಣೆಯು ಎರಡು ಅಂಶಗಳಿಂದ ಪ್ರೇರೇಪಿತಗೊಳ್ಳುತ್ತದೆ. ಒಂದು ಬಹಳ ಕಾಲದಿದ ಬೆಳೆಸಿಕೊಂಡು ಬಂದಿರುವ ಪೂರ್ವಗ್ರಹಗಳು. ಮತ್ತೊಂದು ಪೊಲೀಸ್ ಮತ್ತು ನ್ಯಾಯಾಂಗಗಳ ಒಟ್ಟಾರೆ ಅಸಮರ್ಥತೆಗಳ ಪರಿಣಾಮವಾಗಿ ಹುಟ್ಟಿಕೊಂಡಿರುವ ಒಂದು ಬಗೆಯ ಸಾಮೂಹಿಕ ಅಭದ್ರತೆಯ ಭಾವ. ಉದಾಹರಣೆಗೆ ೨೦೧೭ರ ಏಪ್ರಿಲ್‌ನಲ್ಲಿ ತಥಾಕಥಿತ ಗೋರಕ್ಷಕರಿಂದ ಗುಂಪುಹತ್ಯೆಗೊಳಗಾದ ಪೆಹ್ಲೂಖಾನ್ ಮತ್ತು ಅಂಥ ಸರಣಿ ದೊಂಬಿಕೊಲೆಗಳು ಒಂದು ನಿರ್ದಿಷ್ಟ ಸಮುದಾಯದ ಸದಸ್ಯರ ಬಗ್ಗೆ ಬೆಳೆಸಿಕೊಂಡು ಬರಲಾಗಿರುವ ಪೂರ್ವಗ್ರಹಗಳಿಂದ ಪ್ರೇರಣೆಯನ್ನು ಪಡೆದುಕೊಂಡಿತ್ತು.

ಅತ್ಯಾಚಾರಗಳ ಪ್ರಕರಣಗಳಲ್ಲಿ ಅಪರಾಧಿಗಳನ್ನು ಬಹಿರಂಗವಾಗಿ ಅಟ್ಟಾಡಿಸಿ ಬಡಿದು ನಡುಬೀದಿಯಲ್ಲಿ ನೇಣಿಗೆ ಹಾಕಬೇಕೆಂಬ ರಾಕ್ಷಸೀ ಬಯಕೆಗಳು ವ್ಯಕ್ತಗೊಳ್ಳುತ್ತವೆ. ಅದರ ಹಿಂದೆ ಆಯಾ ಜಾತಿ ಮತ್ತು ಧರ್ಮಗ ಬಗ್ಗೆ ಇರುವ ಮೂಲಭೂತ ಬದ್ಧತೆಯೂ ಕೆಲಸ ಮಾಡುತ್ತಿರುತ್ತದೆ. ಒಮ್ಮೆ ಪ್ರಕರಣದ ಬಲಿಪಶು ಮತ್ತು ಬಲಿಗಾರರ ಸಾಮಾಜಿಕ ಹಿನ್ನೆಲೆಯು ಬಹಿರಂಗವಾಗುತ್ತಿದ್ದಂತೆ ಕಾನೂನು ಅನುಶಾಸನವನ್ನು ಪ್ರೇರೇಪಿಸುವ ಪ್ರಕ್ರಿಯೆಗೆ ಜಾತಿ ಮತ್ತು ಧರ್ಮದ ಅಂಶಗಳು ಅಡ್ಡಲಾಗುತ್ತವೆ. ಹೀಗಾಗಿ ಒಂದು ವೇಳೆ ದೌರ್ಜನ್ಯಕ್ಕೆ ತುತ್ತಾದವರು ಅಲ್ಪಸಂಖ್ಯಾತ ಅಥವಾ ದಲಿತರಾಗಿದ್ದು ದೌರ್ಜನ್ಯ ಎಸಗಿದವರು ಆ ಸಮುದಾಯಗಳಿಗೆ ಸೇರಿದವರಾಗಿರದಿದ್ದರೆ ಅದು ಒಂದೋ ಸಂಪೂರ್ಣ ನಿಲಕ್ಷ್ಯಕ್ಕೆ ತುತ್ತಾಗುತ್ತದೆ ಅಥವಾ ಕಾನೂನು ತನ್ನ ಕ್ರಮವನ್ನು ಜರುಗಿಸಲು ಅವಕಾಶ ಮಾಡಿಕೊಡಬೇಕೆಂಬ ವಾದವನ್ನು ಹುಟ್ಟುಹಾಕುತ್ತದೆ. ಇದು ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ೨೦೦೬ರಲ್ಲಿ ನಡೆದ ದಲಿತ ಹತ್ಯಾಕಾಂಡದ ಪ್ರಕರಣದಲ್ಲಿ ಸ್ಪಷ್ಟವಾಗಿ ಕಂಡುಬಂದಿತು. ಒಂದು ವೇಳೆ ಅತ್ಯಾಚಾರಕ್ಕೆ ಗುರಿಯಾದವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದರೆ ಮಾತ್ರ ಕಾನೂನು ತನ್ನ ಕ್ರಮ ಜರುಗಿಸುವ ಬಗ್ಗೆ ಸಮಾಜದ ಬಹುಸಂಖ್ಯಾತ ಸಮುದಾಯದಿಂದ ಮಾತ್ರವಲ್ಲದೆ ಕಾನೂನು ರಕ್ಷಕರಿಂದಲೂ ಅಪಾರ ಪ್ರತಿರೋಧ ವ್ಯಕ್ತವಾಗುತ್ತದೆ. ಈ ವರ್ಷದ ಪ್ರಾರಂಭದಲ್ಲಿ ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ನಡೆದದ್ದು ಇದೆ. ಆದರೆ ಅದೇ ಸಮಯದಲ್ಲಿ ದೌರ್ಜನ್ಯಕ್ಕೆ ಗುರಿಯಾದವರು ದಲಿತೇತರ ಜಾತಿ ಅಥವಾ ಬಹುಸಂಖ್ಯಾತ ಧಾರ್ಮಿಕ ಸಮುದಾಯಕ್ಕೆ ಸೇರಿದವರಾಗಿದ್ದರೆ ದಲಿತೇತರ ಮತ್ತು ಬಹುಸಂಖ್ಯಾತ ಸಮಾಜ ಕಾನೂನಿನ ಕ್ರಮಗಳಿಗೆ ಯಾವ ಮಾನ್ಯತೆಯನ್ನೂ ನೀಡದೆ ದಿಢೀರ್ ನ್ಯಾಯ ಬೇಕೆಂದೂ ಮತ್ತು ಅನುಮಾನಿತ ಅಪರಾಧಿಯನ್ನು ಹಾದಿಬೀದಿಯಲ್ಲಿ ಅಟ್ಟಾಡಿಸಿ ಕೊಲ್ಲಬೇಕೆಂದೂ ಆಗ್ರಹಿಸುತ್ತಾರೆ. ಸಾಮಾಜಿಕ ದುರಂತಗಳಾಗಿರುವ ಇಂಥಾ ಘಟನೆಗಳ ಬಗ್ಗೆ ಈ ಬಗೆಯ ತಾರತಮ್ಯಪೂರಿತ ಧೋರಣೆಗಳು ೨೦೧೬ರಲ್ಲಿ ಮಹಾರಾಷ್ಟ್ರದ ಕೋರ್ಪಾಡಿ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲೂ ಮತ್ತು ಕಳೆದ ತಿಂಗಳು ಮಧ್ಯಪ್ರದೇಶದ ಮಂಡಸೂರಿನಲ್ಲಿ ನಡೆದ ಘಟನೆಗಳಲ್ಲೂ ಸ್ಪಷ್ಟವಾಗಿ ವ್ಯಕ್ತವಾಗಿದೆ. ಕೋರ್ಪಾಡಿ ಪ್ರಕರಣದಲ್ಲಿ ದೌರ್ಜನ್ಯಕ್ಕೆ ಗುರಿಯಾದ ಸಮುದಾಯಕ್ಕೆ ಸೇರಿದ ಮಹಿಳೆಯರ ಆಕ್ರೋಶ ಎದ್ದುಕಾಣುತ್ತಿತ್ತು. ಈ ಮಹಿಳೆಯರು ಖಾಸಗಿ ವಾರ್ತಾ ವಾಹಿನಿಗಳಲ್ಲಿ ಅತ್ಯಾಚಾರ ಮಾಡಿದವರ ಮರ್ಮಾಂಗವನ್ನು ಕತ್ತರಿಸಬೇಕೆಂದು ಆಗ್ರಹಿಸುತ್ತಿದ್ದರು. ಮಂಡಸೂರಿನಲ್ಲೂ ಇದೇ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾದವು. ಮಂಡಸೂರಿನ ಪ್ರಕರಣದಲ್ಲಂತೂ ಬಹುಸಂಖ್ಯಾತ ಸಮುದಾಯವು ರಾಜ ಬಿದ್ದರೆ ನಾನು ಗೆದ್ದಂತೆ, ರಾಣಿ ಬಿದ್ದರೆ ನೀನು ಸೋತಂತೆ ಎಂಬ ರೀತಿಯಲ್ಲಿ ಏನೇ ಸಂಭವಿಸಿದರೂ ತನಗೇ ಗೆಲುವಾಗುವಂಥ ನ್ಯಾಯಸಂದರ್ಭವನ್ನು ಸೃಷ್ಟಿಮಾಡಿತ್ತು.

ದೌರ್ಜನ್ಯಗಳಿಗೆ ಗುರಿಯಾದವರ ಸಾಮಾಜಿಕ ಹಿನ್ನೆಲೆ ಅಥವಾ ಧಾರ್ಮಿಕ ನಂಬಿಕೆಗಳಿಗೆ  ಸಮೀಪವಿದ್ದಷ್ಟು ಆ ಸಮುದಾಯವು ಕಾನೂನು ಅನುಶಾಸನದ ನ್ಯಾಯಸೂತ್ರಗಳಿಂದ ದೂರವಿರುತ್ತದೆಂಬುದನ್ನು ಮೇಲಿನ ಪ್ರಕರಣಗಳ ಬಗ್ಗೆ ಅಸ್ಥಿತ್ವದಲ್ಲಿರುವ ತಾರತಮ್ಯ ಪೂರಿತ ಪ್ರತಿಕ್ರಿಯೆಗಳು ಸಾಬೀತುಪಡಿಸುತ್ತವೆ. ಆದರೆ ಅದೇ ದೌರ್ಜನ್ಯ ಎಸಗಿದವರ ಜಾತಿ ಮತ್ತು ಧರ್ಮಗಳಿಗೆ ಹತ್ತಿರವಿದ್ದಷ್ಟು ಅವರು ಕಾನೂನು ಕ್ರಮ ಜರುಗಬೇಕೆ ಹೊರತು ಕಾನೂನುಬಾಹಿರ ನ್ಯಾಯ ಪ್ರಕ್ರಿಯೆಗಳು ಜರುಗಬಾರದೆಂಬ ನಿಲುವಿಗೆ ಹತ್ತಿರವಾಗಿರುತ್ತಾರೆ. ಭಾರತದ ಸಂದರ್ಭದಲ್ಲಿ ಜಾತಿ ಮತ್ತು ಸಾಮುದಾಯಿಕ ಪ್ರಜ್ನೆಗಳ ಸಾರ ಇದೇ ಆಗಿದೆ. ಜಾತಿ ಮತ್ತು ಕೋಮುವಾರು ಪ್ರಜ್ನೆ ಗಟ್ಟಿಯಾಗಿದ್ದಷ್ಟೂ ಕಾನೂನಿನ ಪ್ರಜ್ನೆ ಮತ್ತು ಕಾನೂನಿನ ಮೇಲಿನ ನಂಬಿಕೆ ಅಷ್ಟರಮಟ್ಟಿಗೆ ದುರ್ಬಲವಾಗಿಯೇ ಇರುತ್ತದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಜಾತಿ ಪ್ರಜ್ನೆಯ ಪ್ರಭಾವ ಕಡಿಮೆಯಾಗಿದ್ದಾಗ ಮಾತ್ರ ಭಾರತದ ನಾಗರಿಕರಲ್ಲಿ ಕಾನೂನಿನ ಪ್ರಜ್ನೆ ಬಲವಾಗಿರಲು ಸಾಧ್ಯವಾಗುತ್ತದೆ.

ಗುಂಪುಕಟ್ಟಿ ಅಟ್ಟಾಡಿಸಿ ಕೊಲ್ಲಬೇಕೆಂಬ ಬಯಕೆಯಲ್ಲೂ ಮತ್ತು ಹಾಗೆ ವಾಸ್ತವದಲ್ಲಿ ಗುಂಪುಕಟ್ಟಿ ದೊಂಬಿ ಮಾಡಿ ಕೊಂದುಹಾಕುವ ಸಂದರ್ಭದಲ್ಲೂ ಎಲ್ಲರಿಗೂ ಒಂದೇ ಕಾನೂನೆಂಬ ಕಾನೂನಿನ ಅನುಶಾಸನ ಕಡೆಗಣಿಸಲ್ಪಡುತ್ತದೆ ಮತ್ತು ಪ್ರಜಾತಂತ್ರದ ಭವಿಷ್ಯವನ್ನೇ ಆತಂಕಕ್ಕೆ ದೂಡುತ್ತದೆ.

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com