ಮಹಾರಾಣಿ ಕಾಲೇಜಗೆ ಮತ್ತೆ ಭೇಟಿ ನೀಡಿದ ಶಿಕ್ಷಣ ಸಚಿವ : ಹಾಸ್ಟೆಲ್ ನಿರ್ಮಿಸುವುದಾಗಿ ಭರವಸೆ…!

ಮೈಸೂರು : ಶಿಥಿಲಾವಸ್ಥೆ ತಲುಪಿರುವ ಕಟ್ಟಡಕ್ಕೆ ಪುನರ್ ನಿರ್ಮಾಣ ಸಾಧ್ಯವಿಲ್ಲ. ಹೀಗಾಗಿ ಕಲಾ, ವಾಣಿಜ್ಯ, ವಿಜ್ಞಾನಕ್ಕೆ ಪ್ರತ್ಯೇಕ ಕಟ್ಟಡ ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಭರವಸೆ ನೀಡಿದರು.

ಮೂರು ದಿನಗಳ ಹಿಂದಷ್ಟೇ ಮೈಸೂರು ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಅಲಿಸಿದ್ದ ಸಚಿವ ಜಿಟಿ ದೇವೇಗೌಡ ಇಂದು ಅಧಿಕಾರಿಗಳ ಜತೆ ಮತ್ತೆ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಇಂದು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರ ಜೊತೆ ಕಾಲೇಜಿಗೆ ಭೇಟಿ ನೀಡಿದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಜೊತೆಯಲ್ಲು ಚರ್ಚೆ ನಡೆಸಿದ ಸಚಿವ ಜಿಟಿಡಿ, ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಕಾಲೇಜು ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು.

ಬಳಿಕ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ಶಿಥಿಲಾವಸ್ಥೆ ತಲುಪಿರೋ ಕಟ್ಟಡಕ್ಕೆ ಪುನರ್ ನಿರ್ಮಾಣ ಸಾಧ್ಯವಿಲ್ಲ. ಪ್ರತಿಯೊಂದು ವಿಭಾಗಕ್ಕೂ ಕಾಂಪ್ಲೆಕ್ಸ್ ಮಾದರಿಯಲ್ಲಿ ಪ್ರತ್ಯೇಕ ಕಟ್ಟಡ ಬೇಕಿದೆ. ಶಿಕ್ಷಣ ಇಲಾಖೆಗೆ ಸಿಎಂ ಹೆಚ್ಚಿನ ಅನುದಾನ ನೀಡಿದ್ದಾರೆ. ನಬಾರ್ಡ್, ವರ್ಲ್ಡ್ ಬ್ಯಾಂಕ್ ನಿಂದಲೂ ಅನುದಾನಕ್ಕೆ ಬೇಡಿಕೆ ಮಾಡಿದ್ದೇವೆ. ಕಲಾ, ವಾಣಿಜ್ಯ, ವಿಜ್ಞಾನಕ್ಕೆ ಪ್ರತ್ಯೇಕ ಕಟ್ಟಡ ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ. ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ ಕಟ್ಟಡ ನಿರ್ಮಾಣ ಮಾಡ್ತೀವಿ ಎಂದು ತಿಳಿಸಿದರು.

ಪುರಾತನ ಕಟ್ಟಡದಲ್ಲಿ ಮುಂದಿನ ವರ್ಷದವರೆಗೆ ಮಾತ್ರ ಹೊಂದಾಣಿಕೆ ಮೂಲಕ ತರಗತಿ ನಡೆಸಿ ಎಂದು ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿದ ಸಚಿವ ಜಿ.ಟಿಡಿ ಕಾಲೇಜು ನಿರ್ಮಾಣಕ್ಕೆ ಮುಂದಿನ ವರ್ಷದಲ್ಲಿ ನಗರದಲ್ಲಿ 5 ಎಕರೆ ಜಾಗ ಖರೀದಿಗೆ ಚಿಂತನೆ ನಡೆಸಲಾಗಿದೆ. ರಾಜ್ಯದ ಇತರೆ ಕಾಲೇಜುಗಳಿಗೂ ಮೂಲಭೂತ ಸೌಕರ್ಯ ಒದಗಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದರು.

Leave a Reply

Your email address will not be published.