ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ : ಕಮಿಷನರೇಟ್ನಲ್ಲಿ ಸಂಪೂರ್ಣ ಬದಲಾವಣೆ ಸಾಧ್ಯತೆ
ಬೆಂಗಳೂರು : ರಾಜ್ಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಗೆ ನಿರ್ಧರಿಸಿದೆ. ಬೆಂಗಳೂರು ನಗರ ಕಮಿಷನರೇಟ್ನಲ್ಲಿ ಸಂಪೂರ್ಣ ಬದಲಾವಣೆ ಮಾಡುವ ನಿಟ್ಟಿನಲ್ಲಿ ತಯಾರಿ ನಡೆದಿದ್ದು, ಒಂದು ವಾರದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಹೊರ ಬೀಳಲಿದೆ ಎಂದು ತಿಳಿದಿಬಂದಿದೆ.
ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ ಅವರನ್ನೂ ಅವಧಿಗೆ ಮೊದಲೇ ಎತ್ತಂಗಡಿ ಮಾಡುವ ಸಾಧ್ಯತೆಗಳಿವೆ. ಈ ಜಾಗಕ್ಕೆ ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ್ರಾವ್ ಸೇರಿದಂತೆ ಅಲೋಕ್ಮೋಹನ್, ಪ್ರತಾಪ್ರೆಡ್ಡಿ, ಸುನಿಲ್ ಅಗರವಾಲ್ ಹೆಸರುಗಳು ಕೇಳಿ ಬರುತ್ತಿದ್ದು, ಇನ್ನು, ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ವೈಯಕ್ತಿಕವಾಗಿ ಒಡನಾಟ ಇಟ್ಟುಕೊಂಡಿರುವ ಆರ್.ಪಿ.ಶರ್ಮಾ ಅವರ ಹೆಸರೂ ಕೂಡ ಕೇಳಿಬಂದಿದೆ.
ಈ ನಡುವೆ ಹಾಲಿ ಕಮಿಷನರ್ ಟಿ.ಸುನಿಲ್ಕುಮಾರ್ ಅವರು ಮತ್ತೊಂದು ಅವಧಿಗೆ ಮುಂದುವರಿಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದು, ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲ ಅವರಿಗಿರುವುದು ವರದಾನವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಉಳಿದಂತೆ, ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಬದಲಾಗಿ ಇವರ ಜಾಗಕ್ಕೆ ಎಂ.ಚಂದ್ರಶೇಖರ್, ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಹಿತೇಂದ್ರ ಅವರ ಜಾಗಕ್ಕೆ ಅಲೋಕ್ಕುಮಾರ್ ವರ್ಗಾವಣೆ ಆಗಲಿದ್ದಾರೆ ಎನ್ನಲಾಗಿದೆ.
ರಾಜಧಾನಿಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಶೂಟೌಟ್ ಪ್ರಕರಣಗಳೂ ಸೇರಿ ಇನ್ನಿತರೆ ಅಪರಾಧಗಳ ಕಾರಣದಿಂದಾಗಿ ಬೆಂಗಳೂರು ಕಮಿಷನರೇಟ್ಗೆ ಮೇಜರ್ ಸರ್ಜರಿ ಮಾಡುವ ದಿಕ್ಕಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಗೃಹ ಸಚಿವ ಪರಮೇಶ್ವರ್ ಅವರ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.