ಗೆದ್ದ ಹಿಮಾ ದಾಸ್, ಸೋತ ಜಾತಿವಾದಿಗಳ ಜಾತ್ಯತೀತ ಭಾರತ……

ಭತ್ತದ ಗದ್ದೆಯ ತೆವರಿಗಳ ಮೇಲೆ ಬರಿಗಾಲಲ್ಲಿ ಓಡುತ್ತಿದ್ದ ಕುವರಿ ಈಗ ವಿಶ್ವ ಅಥ್ಲೆಟಿಕ್ ಜೂನಿಯರ್ ಚಾಂಪಿಯನ್‍ಶಿಪ್‍ನ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಓಟದ ಜಿಂಕೆ ಹಿಮಾದಾಸ್. ಅಸ್ಸಾಂನ ನಾಗಾಂವ ಜಿಲ್ಲೆಯ ಧಿಂಗ್ ಹಳ್ಳಿಯ ಬಡರೈತ ಕುಟುಂಬದ ಈ ಕೂಸಿಗೆ ಕ್ರೀಡಾ ಹಿನ್ನೆಲೆ ಇಲ್ಲ. ಹುಟ್ಟಿದೂರಿನಲ್ಲಿ ಕ್ರೀಡೆಯ ಮೂಲ ಸೌಕರ್ಯದ ಯಾವ ಸವಲತ್ತೂ ಇರಲಿಲ್ಲ. ಇಂಥಾ ಹುಡುಗಿ ಇಡೀ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡಿದ್ದಾಳೆ. ಭಾರತದ ಕ್ರೀಡಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಿನ್ನ ಪಡೆದವಳು ಹಿಮಾ ದಾಸ್.


ದೇಶಕ್ಕೆ ವಿಶ್ವ ಚಾಂಪಿಯನ್ ಪಟ್ಟ ತಂದುಕೊಟ್ಟ ಹಿಮಾಳ ಬಗ್ಗೆ ದೇಶಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದು ಬಂತು. ಆಡಳಿತ ಪಕ್ಷ ವಿರೋಧ ಪಕ್ಷಗಳೆಲ್ಲವೂ ಹಿಮಾಳಿಗೆ ಅಭಿನಂದನೆ ಹೇಳಲು ಪೈಪೋಟಿ ನಡೆಸಿದರು. ಕ್ರೀಡಾ ಲೋಕದ ದಿಗ್ಗಜರು, ಸಿನಿಮಾ ತಾರೆಯರು, ಸಾಹಿತ್ಯವೇತ್ತರು – ಹೀಗೆ ಎಲ್ಲರೂ ಅಭಿನಂದನೆಯ ಹೊಳೆಯನ್ನೇ ಹರಿಸಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಹಿಮಾ ದಾಸ್‍ಳ ವಿಷಯ ಅಭಿನಂದನೆಯ ಪ್ರವಾಹವೇ ಹರಿಯಿತು. ಪ್ರಪ್ರಥಮ ಬಾರಿಗೆ ಭಾರತದ ಹುಡುಗಿ ವಿಶ್ವ ಚಾಂಪಿಯನ್ ಆಗಿ ಚಿನ್ನದ ಪದಕ ಗಳಿಸಿದ್ದರಿಂದ ಈ ಅಭಿಮಾನದ ಹೊಳೆ ಸಹಜವೇ ಆಗಿತ್ತು.

ಇಂಥಾ ಸಂಭ್ರಮದ ಗಳಿಗೆಯಲ್ಲೇ ಜಗತ್ತಿನೆದುರು ಭಾರತ ತಲೆತಗ್ಗಿಸಬೇಕಾದ ಅತ್ಯಂತ ವಿಶಿಷ್ಟ ವಿದ್ಯಮಾನವೂ ಸಂಭವಿಸಿದೆ.
ಕ್ರೀಡಾ ಆಗಸದಲ್ಲಿ ದಿಡೀರ್ ಮಿಂಚಿನಂತೆ ಬಂದೆರಗಿದ ಹಿಮಾ ದಾಸ್ ಯಾರು, ಏನು ಬಗ್ಗೆ ಹೊರಜಗತ್ತಿಗಿರಲಿ, ಭಾರತೀಯರಿಗೇ ಗೊತ್ತಿರಲಿಲ್ಲ. ಹೀಗಾಗಿ ಕುತೂಹಲಭರಿತ ಭಾರತೀಯರು ಈ ಹೊಸ ತಾರೆಯ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಸರ್ಚ್ ಇಂಜಿನ್‍ನ ಮೊರೆಹೋದರು. ಹಿಮಾ ದಾಸ್ ಯಾರು? ಯಾವ ಊರು? ಹಿಂದಿನ ಕ್ರೀಡಾ ಸಾಧನೆ ಏನು? ಆಕೆಯ ಶಿಕ್ಷಣ ಎಲ್ಲಿ ನಡೆದಿದೆ? ತರಬೇತು ನೀಡಿದವರು ಯಾರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಬಹುದೆಂದು ನೀವು ಸಹಜವಾಗಿ ಊಹಿಸುತ್ತೀರಿ. ಆದರೆ ಗೂಗಲ್‍ನಲ್ಲಿ ಹೆಚ್ಚಿನ ಮಂದಿ ಆಕೆಯ ಜಾತಿ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಿದ್ದರು. ಭಾರತೀಯರಿಗೆ ಯಾಕೆ ಅಷ್ಟೊಂದು ಕುತೂಹಲ ಗೊತ್ತೆ? ಆಕೆಯ ಜಾತಿ ಯಾವುದೆಂದು ಪತ್ತೆಯಾದರೆ ಅದಕ್ಕೆ ತಕ್ಕಂತೆ ಅವಳಿಗೆ ಬಿರುದು ಸನ್ಮಾನಗಳನ್ನು ಕೊಡಬಹುದು. ಆಕೆಯನ್ನು ತಮ್ಮ ಜಾತಿಯ ‘ಹಿರಿಮೆ’ಗೆ ಗರಿಯನ್ನಾಗಿಯೂ, ಐಕಾನ್ ಆಗಿಯೂ ಬಳಸಿಕೊಳ್ಳಬಹುದು. ಇದು ವಿಚಿತ್ರ ಅನಿಸಬಹುದು. ಆದರೆ ಇದುವೇ ಭಾರತದ ಅತ್ಯಂತ ಸಹಜ ಸ್ಥಿತಿ. ಭಾರತೀಯರ ಇಂಥಾ ಜಾತಿ ಬುದ್ದಿಯ ಬಗ್ಗೆ ಜಗತ್ತಿನ ಸಾವಿರಾರು ಮಂದಿ ಛೀಮಾರಿ ಹಾಕಿದ್ದಾರೆ.


ಗೂಗಲ್‍ನಲ್ಲಿ ಹಿಮಾ ದಾಸ್ ಎಂದು ಸರ್ಚ್ ಕೊಟ್ಟರೆ ನಮಗೆ ಮೊದಲು ಅದರ ನ್ಯೂಸ್ ಫೀಡ್‍ನ ಆಯ್ಕೆಗಳು ಕಾಣಸಿಗುತ್ತವೆ. ಇದೇ ವಿಷಯದ ವಿಭಿನ್ನ ಆಯಾಮಗಳ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿರುವ ವಿಷಯ ಪಟ್ಟಿಯನ್ನು ಅನುಕ್ರಮವಾಗಿ ಗೂಗಲ್ ನಿಮಗೆ ಒದಗಿಸುತ್ತದೆ. ಹೀಗೆ ಭಾರತೀಯರ ಜಾತಿವಾದಿ ಮನಸ್ಥಿತಿ ಸರ್ಚ್ ಲಿಸ್ಟ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹಿಮಾ ದಾಸ್‍ಳ ಪ್ರತಿಭೆ ವಿಶ್ವಮಟ್ಟದಲ್ಲಿ ಸಾಬೀತಾಗಿದೆಯಲ್ಲಾ? ಆಕೆಯ ಪ್ರತಿಭೆಯನ್ನು ಗುರುತಿಸಿದರಷ್ಟೇ ಸಾಲದೆ? ಇಲ್ಲ. ಆಕೆಯ ಜಾತಿ ಯಾವುದೆಂದು ತಿಳಿದುಕೊಂಡ ನಂತರವೇ ಆಕೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸಲು ಬಹುಶಃ ಈ ಮಂದಿ ನಿರ್ಣಯಿಸಿದ್ದಿರಬಹುದು. ಇದು ಭಾರತೀಯ ಮನಸ್ಥಿತಿ.
ಭಾರತದಲ್ಲಿ ಜಾತಿ ವ್ಯವಸ್ಥೆ ಮುಂದುವರೆದಿರುವುದಕ್ಕೆ ಶಿಕ್ಷಣದ ಕೊರತೆ ಪ್ರಮುಖ ಕಾರಣ ಎಂದೂ, ಎಲ್ಲೋ ಮೂಲೆಯ ಕುಗ್ರಾಮಗಳಲ್ಲಿ ಮಾತ್ರ ಜಾತಿ ವ್ಯವಸ್ಥೆ ಉಳಿದುಕೊಂಡಿದೆ, ನಗರಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ ನಾಮಾವಶೇಷವಾಗಿದೆಯೆಂತಲೂ ಎಂದು ಅನೇಕ ಆಸ್ಥಾನ ಪಂಡಿತರು ಸದಾ ತೌಡು ಕುಟ್ಟುತ್ತಾರೆ. ಹಾಗಾದರೆ ಜಾಲತಾಣದಲ್ಲಿ ಹಿಮಾಳ ಜಾತಿ ಕಂಡುಕೊಳ್ಳಲು ಪ್ರಯಾಸಪಟ್ಟವರು ಅವಿದ್ಯಾವಂತರೆ? ಅಥವ ಕುಗ್ರಾಮದ ಗಮಾರರೆ? ಹೀಗೆ ಕ್ಯಾಸ್ಟ್ ಸರ್ಚ್ ಮಾಡಿದ ಬಹುತೇಕರು ತಮ್ಮ ಕೈಗಳಲ್ಲಿ ಸ್ಮಾರ್ಟ್ ಫೋನ್ ಹಿಡಿದಿರುವ ಸುಶಿಕ್ಷಿತ ನಗರವಾಸಿಗಳೇ.
ಮತ್ತೊಂದು ಸಂಗತಿಯನ್ನೂ ಇಲ್ಲಿ ನಾವು ಗಮನಿಸಬೇಕು. ಇದೇ ಮಂದಿ ಸಾರ್ವಜನಿಕ ಚರ್ಚೆಗಳಲ್ಲಿ ‘ಜಾತಿ ಎಲ್ಲಿದೆ ಹೇಳಿ?’ ಎಂಬ ವಿತಂಡ ವಾದ ಹೂಡುವವರೂ ಆಗಿದ್ದಾರೆ. ನಮ್ಮ ಸಮಾಜದಲ್ಲಿ ಇಂಥಾ ಆಷಾಡಭೂತಿತನ ರಕ್ತಗತವಾಗಿಬಿಟ್ಟಂತಿದೆ.


ಹಾಗೇ ಕುತೂಹಲದಿಂದ ನೀವು ಪಿಟಿ ಉಷಾ ಬಗ್ಗೆ ಸರ್ಚ್ ಮಾಡಿದರೂ ನಿಮಗೆ ಆಶ್ಚರ್ಯ ಕಾದಿರುತ್ತದೆ. ಉಷಾ ಅಥ್ಲೀಟ್‍ನಿಂದ ನಿವೃತ್ತಿಯಾಗಿ ದಶಕ ಕಳೆದಿದ್ದರೂ ಇಂದಿಗೂ ಆಕೆಯ ಜಾತಿ ತಿಳಿದುಕೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. 2016ರ ರಿಯೋ ಒಲಂಪಿಕ್ಸ್‍ನ ಬ್ಯಾಡ್ಮಿಂಟನ್‍ನಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗಳಿಸಿದ್ದಳು. ಆಗಲೂ ನಮ್ಮ ಹೆಮ್ಮೆಯ ಭಾರತೀಯರು ತಮ್ಮ ಚಿಲ್ಲರೆ ಜಾತಿ ಬುದ್ದಿ ತೋರಿಸಿದ್ದರು. ಈ ಮೇಲಿನ ಉದಾಹರಣೆಗಳು ಏನನ್ನು ತೋರಿಸುತ್ತವೆ?
ಜಾತಿಯ ಬೇರುಗಳು ಎಷ್ಟು ಆಳದಲ್ಲಿವೆ ಎಂಬುದನ್ನು ನಿರ್ವಿವಾದಿತವಾಗಿ ಎತ್ತಿ ತೋರಿಸುತ್ತಿವೆ. ಮೋದಿ ಭಕ್ತಪಡೆ ಭಾರತ ‘ವಿಶ್ವ ಗುರು’ ಎಂದು ಬೊಬ್ಬಿಡುತ್ತಿದ್ದಾರೆ. ಆದರೆ ಭಾರತ ಸಾಗಬೇಕಾದ ದೂರ ಇನ್ನೂ ಬಹಳವಿದೆ ಎಂಬುದನ್ನು ಹಿಮಾ ದಾಸ್ ಎಪಿಸೋಡ್ ಅನುಮಾನಕ್ಕೆಡೆಯಿಲ್ಲದಂತೆ ತೋರಿಸಿಕೊಟ್ಟಿದೆ.

ಅಥ್ಲೀಟ್ ಫೆಡರೇಷನ್ ಇಂಡಿಯ ಸಂಸ್ಥೆಯ ಧೋರಣೆ ಹೇಗೆ ವ್ಯಕ್ತವಾಗಿದೆ ನೋಡಿ. ಅಭಿನಂದನೆಗಳನ್ನು ಹೇಳಲಿಕ್ಕಾಗಿ ಟ್ವೀಟ್ ಮಾಡಿದ ಎಎಫ್‍ಐ “ಇಂಗ್ಲಿಷ್ ಮಾತಾಡಲು ಸರಿಯಾಗಿ ಬರದಿದ್ದರೂ ಕೂಡ ಹಿಮಾ ಉತ್ತಮ ಸಾಧನೆ ಮಾಡಿದ್ದಾಳೆ… ಹಿಮಾ ದಾಸ್‍ಗೆ ಅಭಿನಂದನೆಗಳು…”. ಎಎಫ್‍ಐ ನ ಧೋರಣೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು ‘ಹಿಮಾ ದಾಸ್ ಹೋಗಿದ್ದುದು ಓಟದ ಸ್ಪರ್ದೆಗೋ ? ಅಥವಾ ಇಂಗ್ಲಿಷ್ ಭಾಷಾ ಪಾಂಡಿತ್ಯ ಸ್ಪರ್ಧೆಗೋ?’ ಎಂದು ತಿರುಗೇಟಟು ನೀಡಿದ್ದಾರೆ. ಅದೆಲ್ಲಾ ಇರಲಿ, ತೀರಾ ಅನಗತ್ಯವಾದ ಸಂದರ್ಭದಲ್ಲೂ ಇಂಗ್ಲಿಷ್ ಭಾಷೆಯ ಹಂಗಿನಲ್ಲೇ ಉಳಿಯ ಬಯಸುವ, ಇಂಗ್ಲಿಷ್ ಭಾಷೆಯನ್ನು ಪ್ರತಿಷ್ಠೆಯ ಸಂಕೇತವಾಗಿಸಿಕೊಳ್ಳ ಬಯಸುವ ಗುಲಾಮಗಿರಿ ಮನಸ್ಥಿತಿ ಅಧಿಕೃತ ಸಂಸ್ಥೆಗಳಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂಬುದೇ ಒಂದು ಸೋಜಿಗ.
ಆದರೆ ಫಿನ್‍ಲೆಂಡ್‍ನ ವಿದೇಶಿ ನೆಲದಲ್ಲಿ ನೆಲೆಸಿರುವ ಕೆಲವು ಭಾರತೀಯರು ಈ ಚಿನ್ನದ ಹುಡುಗಿಗೆ ಏನಾದರೂ ಉಡುಗೊರೆ ಕೊಡಬೇಕೆಂದು ತಮ್ಮ ವಾಟ್ಸಪ್ ಗ್ರೂಪಿನಲ್ಲಿ ಚರ್ಚಿಸಿದರು. ಒಂದಷ್ಟು ಹಣವನ್ನು ಬಹುಮಾನವಾಗಿ ಕೊಡಲು ತೀರ್ಮಾನಿಸಿ ಅಂದೇ ಒಂದು ಲಕ್ಷ ರೂನಷ್ಟು ಹಣ ಸಂಗ್ರಹಿಸಿದರು. ಹಿಮಾ ದಾಸ್‍ಳನ್ನು ಭೇಟಿಯಾಗಿ ಅಭಿನಂದಿಸಿ, ಆತಿಥ್ಯ ನೀಡಿ ಸತ್ಕರಿಸಿದರು. ಆದರೆ ಹಣವನ್ನು ಸ್ಥಳದಲ್ಲೇ ಹಸ್ತಾಂತರಿಸಲಿಲ್ಲ. ಯಾಕೆಂದರೆ ಆ ಹಣ ಯಾರ ಕೈಗೆ ಸೇರುತ್ತದೋ ಎಂಬುದು ಅವರಿಗೆ ಖಾತ್ರಿಯಿರಲಿಲ್ಲ. ಹಾಗಾಗಿ ಆ ಹಣವನ್ನು ನೇರವಾಗಿ ಹಿಮಾಳ ಖಾತೆಗೆ ವರ್ಗಾಯಿಸಲು ತೀರ್ಮಾನಿಸಿದ್ದಾರೆ. ಅರ್ಹ ವ್ಯಕ್ತಿಗೆ ಸೇರಬೇಕಾದ ಹಣ ಮತ್ಯಾರೋ ಮಧ್ಯವರ್ತಿಗಳ ಪಾಲಾಗುತ್ತದೆಂಬುದು ಅವರ ಈ ತೀರ್ಮಾನಕ್ಕೆ ಕಾರಣ.

ಇನ್ನು ಹಿಮಾಳ ವೈಯುಕ್ತಿಕ ಹಿನ್ನೆಲೆಯನ್ನು ಗಮನಿಸಿದರೆ ಅವಳ ಸಾಧನೆಯ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ಶಾಲಾ ದಿನಗಳಲ್ಲಿ ಹುಡುಗರ ತಂಡದಲ್ಲಿ ಪುಟ್ಬಾಲ್ ಆಡುತ್ತಿದ್ದ ಹಿಮಾ ಫಿನ್ಲೆಂಡ್‍ನಲ್ಲಿ ನಡೆದ 20 ವರ್ಷದೊಳಗಿನ ವಿಶ್ವ ಅಥ್ಲೇಟಿಕ್ ಜೂನಿಯರ್ಸ್ ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಕೇವಲ 51.46 ಸೆಕೆಂಡುಗಳಲ್ಲಿ ಚಿನ್ನದ ಜಯ ಸಾಧಿಸಿ ದಾಖಲೆ ಬರೆದ ಭಾರತದ ಮೊದಲ ಅಥ್ಲೇಟ್.
ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಹಿಮಾಗೆ ಆತ್ಮ ಬಲ, ನಿರಂತರ ಪರಿಶ್ರಮಗಳೇ ಸಾಧನೆಯ ಹಾದಿಗೆ ಬೆಳಕು ಚೆಲ್ಲಿದ್ದು. 2017ರಲ್ಲಿ ಗುವಾಹಟಿಯ ಯುವಜನ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯಕ್ಕೆ ದಾಖಲಾದ ಮೇಲೆ ಅಥ್ಲೇಟಿಕ್ಸ್‍ನಲ್ಲಿ ಒಲವು ಮೂಡಿಸಿಕೊಂಡಳು. ಅತೀ ಕಡಿಮೆ ಸಮಯದಲ್ಲಿ ವೇಗದ ಕಲಿಕೆ ಕರಗತ ಮಾಡಿಕೊಂಡಳು. 2017ರ ಏಪ್ರಿಲ್‍ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್‍ನಲ್ಲಿ ಸ್ಪರ್ಧಿಸಿದ ತಂಡದಲ್ಲಿ ಸ್ಥಾನ ಪಡೆದಿದ್ದರು. ‘ಸಮಯದ ಸರಿ ಸಮನಾಗಿ ನನ್ನ ಓಟವೇ ವಿನಃ ಪದಕಕ್ಕಾಗಿ ಅಲ್ಲ ಎಂಬುದು ಹಿಮಾದಾಸ್ ಆತ್ಮ ವಿಶ್ವಾಸದ ಮಾತು.


ಆರಂಭದಲ್ಲಿ 100 ಮೀ, 200 ಮೀ ವಿಭಾಗದಲ್ಲಿ ಓಡುತ್ತಿದ್ದ ಹಿಮಾ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿ 200 ಮೀ, 400 ಮೀ ಮತ್ತು 4 x 400 ರೀಲೆಗಳಲ್ಲಿ ಸ್ಪರ್ಧಿಸಿದ್ದರು. ಫಿನ್ಲೆಂಡಿನ ಸ್ಪರ್ಧೆಯಲ್ಲಿ ಘಟಾನುಘಟಿ ಸ್ಪರ್ಧಿಗಳು ಅತ್ಯುತ್ತಮ ಶೂ ಎಲ್ಲ ಸೌಕರ್ಯಗಳನ್ನು ಹೊಂದಿದ್ದ ಸ್ಪರ್ಧಿಗಳ ಎದುರು ಸಾಮಾನ್ಯ ಸ್ಪೈಕ್ ಶೂ ಜೊತೆಗೆ ಆತ್ಮ ವಿಶ್ವಾಸವನ್ನೇ ಮೈತುಂಬಾ ಧರಿಸಿ ಅಭೂತ ಪೂರ್ವ ಸಾಧನೆ ಬರೆದರು.
16 ಜನರ ಅವಿಭಕ್ತ ಕುಟುಂಬದಲ್ಲಿ ಜೋನಿಲಾ ಮತ್ತು ರಂಜಿತ ದಾಸ್ ರೈತ ದಂಪತಿಗಳ ಕೂಸು ಹಿಮ. ಇಡೀ ಕುಟುಂಬ ಇರುವ ಭತ್ತದ ಗದ್ದೆಯಲ್ಲಿ ದುಡಿದರಷ್ಟೇ ಆದಾಯ. ಆದರೆ ಇದಾವುದು ಹಿಮಾ ಸಾಧನೆಗೆ ಅಡ್ಡಿಯಾಗಲೇ ಇಲ್ಲ. ಫುಟ್ಬಾಲ್ ಕನಸು ಕಂಡು, ವಾಸ್ತವದಲ್ಲಿ ಅಥ್ಳೇಟಿಕ್ಸ್‍ನಲ್ಲಿ ಹೆಜ್ಜೆಯಿರಿಸಿದ ಹಿಮಾಗೆ ಗುವಾಹಟಿಯ ಯುವಜನ ಕ್ರೀಡಾ ಇಲಾಖೆಯ ತರಬೇತುದಾರ ನಿಪೋ ದಾಸ್ ಬೆಂಬಲವಾಗಿ ನಿಂತರು. ರಾಷ್ಟ್ರೀಯ ತಂಡದ ಕೋಚ್ ಬಸಂತ ಸಿಂಗ್ ಹಿಮಾಳ ಹಾದಿಯನ್ನು ಮತ್ತಷ್ಟು ಸ್ಪಷ್ಟ ಮತ್ತು ನಿಚ್ಚಳವಾಗಿಸಿದರು. ಪಿ.ಟಿ.ಉಷಾ ಕೂಡ ಹಿಮಾಳ ಜೊತೆಯಲ್ಲೇ ಇದ್ದು ಆಕೆಯನ್ನು ಹುರಿದುಂಬಿಸಿದ್ದರು. ಈ ಎಲ್ಲರ ಶ್ರಮವನ್ನು ನಾವು ಗೌರವದಿಂದ ನೆನೆಯಬೇಕು.

ಹಿಮಾ ದಾಸ್ ಒಂದು ಅಂಶವನ್ನಂತೂ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿದ್ದಾಳೆ. ಭಾರತಕ್ಕೆ ಚಿನ್ನದ ಪದಕಗಳನ್ನು ಗಳಿಸಬಲ್ಲ ಪ್ರತಿಭೆಗಳು ಮಹಾನಗರಗಳ ಕಾನ್ವೆಂಟುಗಳಲ್ಲಿ, ಭವ್ಯವಾದ ಮಹಲುಗಳಲ್ಲಿ ಇರುವುದಿಲ್ಲ; ನಮ್ಮ ಹಳ್ಳಿಗಾಡುಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಆದಿವಾಸಿಗಳ ಹಾಡಿಗಳಲ್ಲಿಯೂ ಇದ್ದಾರೆ.
ಆದರೆ ಅಲ್ಲಿನ ಪ್ರತಿಭೆಗಳನ್ನು ಹುಡುಕುವ ಮನಸ್ಸಿದೆಯೆ?
• ರೂಪಾ ಕೆ. ಮತ್ತಿಕೆರೆ

Leave a Reply

Your email address will not be published.

Social Media Auto Publish Powered By : XYZScripts.com