ಶಿರೂರು ಸ್ವಾಮಿಯ Business ಭಾನ್ಗಡಿಗಳ ಸಂಪೂರ್ಣ details ಇಲ್ಲಿದೆ….

ಶಿರೂರು ಸ್ವಾಮಿ ದೊಡ್ಡ ಮಟ್ಟದ ಕಾವಿ ವಾಣಿಜ್ಯೋದ್ಯಮಿ, ಕಲಾಪೋಷಕ, ಸಮಾಜಮುಖಿ ಸಂತ ಎನಿಸಿಕೊಳ್ಳುವ ಹಪಾಹಪಿಗೆ ಬಿದ್ದಿದ್ದರು. ಬಿಲ್ಡರ್‍ಗಳು, ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಅವರಿಗೆ ವ್ಯಾವಹಾರಿಕ ಸಂಬಂಧವಿತ್ತು. ಶಿರೂರು ಮಠದ ಬಳಿಯಲ್ಲಿದ್ದ ನೂರಾರು ಎಕರೆ ಜಾಗದಲ್ಲಿ ವಿದ್ಯಾಸಂಸ್ಥೆ, ಸಂಗೀತ ಅಕ್ಯಾಡೆಮಿ, ಈಜುಕೊಳ ಮತ್ತಿತರ ಆಧುನಿಕ ಮೋಜು ಮಸ್ತಿ ತಾಣ ನಿರ್ಮಿಸುವ ಪ್ಲ್ಯಾನ್ ಅವರ ತಲೆಯಲ್ಲಿತ್ತು ಎನ್ನಲಾಗಿದೆ. ಆದರೆ ಇತರರು ಕೊಟ್ಟ ಕೋಟಲೆಗಳಿಂದ ಅವರು ಆರ್ಥಿಕವಾಗಿ ದಿವಾಳಿಯೆದ್ದಿದ್ದರು ಎಂಬುದು ಭಕ್ತರ ಅಭಿಮತ. ನನಗೆ ಹಲವರಿಂದ ಹಣ ಬರಲಿಕ್ಕಿದೆ; ಆ ಹಣವೆಲ್ಲ ಬಂದರೆ ಶಿರೂರಲ್ಲಿ 200 ಕೋಟಿ ಪ್ರಾಜೆಕ್ಟ್ ಮಾಡುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಳ್ಳುತ್ತಲೇ ಬಂದಿದ್ದರು.


ಜಯಕೃಷ್ಣ ತೋನ್ಸೆ ಎಂಬ ಉದ್ಯಮಿಯೊಂದಿಗೆ ಶಿರೂರು ಸ್ವಾಮಿಗೆ ವ್ಯಾವಹಾರಿಕ ನಂಟಿತ್ತು ಎಂಬುದು ಲೇಟೆಸ್ಟ್ ಸುದ್ದಿ. ಪರಿಸರವಾದಿ ಎಂದು ಫೋಜು ಕೊಡುತ್ತಲೇ ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದ ಕುಳಗಳ ಜತೆ ಚಕ್ಕಂದ ಆಡಿ ಕಾಸು ಮಾಡಿಕೊಂಡಿರುವ ಆರೋಪಕ್ಕೆ ಗುರಿಯಾಗಿರುವ ಈತನನ್ನು ಜನ ಮಹಾವಂಚಕ ದಂಧೆಕೋರ ಎಂತಲೇ ಗುರುತಿಸುತ್ತಾರೆ. ನಂದಿಕೂರ ಭಾಗದಲ್ಲಿ ಈತನ ಕಂಡರೆ ಹೆಂಗಸರು ಮಕ್ಕಳೆಲ್ಲ ಅಟ್ಟಾಡಿಸಿಕೊಂಡು ಓಡಿಸುತ್ತಿದ್ದರೆಂಬ ಸುದ್ದಿಯೂ ಇದೆ. ಅಂಥಾ ಭಾನ್ಗಡಿ ಭೂಪನೊಂದಿಗೆ ಸೇರಿ ಉಡುಪಿಯ ಕಲ್ಲಂಕದ ಬಳಿ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಲು ಶಿರೂರು ಸ್ವಾಮಿ ಶುರು ಮಾಡಿದ್ದರು ಎನ್ನಲಾಗುತ್ತಿದೆ. ಆದರೆ ಜಯಕೃಷ್ಣ ಕೋಟಿಗಟ್ಟಲೆ ಹಣ ಟೊಪ್ಪಿಹಾಕಿ ಓಡಿಹೋಗಿದ್ದರಿಂದ ನಮ್ಮ ಸ್ವಾಮಿಗಳು ಬ್ಯಾಂಕಿಗೆ ಬಡ್ಡಿ ತುಂಬಿಯೇ ಸುಸ್ತಾಗಿ ಹೋಗಿದ್ದರು ಎಂದು ಅವರ ಪರಮಾಪ್ತ ಭಕ್ತರೇ ಮಾತಾಡಿಕೊಳ್ಳುತ್ತಿರುವುದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಇತ್ತ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡವೂ ಪೂರ್ಣವಾಗದೇ ಹಾಗೇ ಪಾಳು ಬಿದ್ದಿದೆ. ಈ ಕೊರಗೂ ಅವರಲ್ಲಿತ್ತು.
ಬೇರೆ ಕಡೆಯಿಂದಲೂ ಶಿರೂರು ಸ್ವಾಮಿಗೆ ಕೋಟಿಗಟ್ಟಲೆ ಲೆಕ್ಕದಲ್ಲಿ ಹಣ ಬರಬೇಕಿತ್ತು. ಇದೆಲ್ಲ ವಸೂಲಿಗೆ ಅವರು ಪ್ರಯತ್ನ ನಡೆಸಿದ್ದರು. ಆ ದಂಧೆಕೋರರೆಲ್ಲ ಸೇರಿ ಮಠದೊಳಗಿನ ವೈಮನಸ್ಸು ಭುಗಿಲೆದ್ದಿರುವ ಈ ಸಂದರ್ಭ ಬಳಸಿಕೊಂಡು ವಿಷವಿಕ್ಕಿದರಾ? ಸ್ವಾಮಿಯ ಪರಿಚಾರಕರನ್ನೇ ಬಳಸಿಕೊಂಡು ಕೊಂದು ಹಾಕಿದರಾ? ಎಂಬ ಅನುಮಾನಗಳೂ ಈ ಸಾವನ್ನು ಆವರಿಸಿವೆ. ಸರಿಯಾದ ಪೊಲೀಸ್ ತನಿಖೆಯೇ ಇದಕ್ಕೆಲ್ಲ ಉತ್ತರ ನೀಡಬೇಕಿದೆ.


ಅಂದಹಾಗೆ, ಉಡುಪಿ ಕೃಷ್ಣ ಮಠದ ಪರಂಪರೆಯಲ್ಲಿ ವಿಷಪ್ರಾಶನದ ಸದ್ದು ಇದೇ ಮೊದಲೇನಲ್ಲ. ಪೇಜಾವರರ ಗುರುಗಳಿಗೂ ಆತ ತೀರ್ಥಯಾತ್ರೆಗೆಂದು ಉತ್ತರ ಭಾರತದ ಕಡೆ ಹೋದಾಗ ವಿಷ ಹಾಕಲಾಗಿತ್ತೆಂಬ ಗುಸುಗುಸು ಈಗಲೂ ಮಠದ ಆವರಣದಲ್ಲಿ ಜೀವಂತವಿದೆ. ಶಿರೂರು ಸ್ವಾಮಿ ಕೂಡಾ ಆ ಕಾವಿ ಕೊಲೆಗಡುಕ ಪರಂಪರೆಗೆ ಬಲಿಯಾದರಾ?
ಬಾರ್ಕೂರು ಸ್ವಾಮೀಜಿ ಹೇಳಿದಂತೆ “ಕೃಷ್ಣನ ಸನ್ನಿಧಾನದಲ್ಲಿ ಯತಿಗಳೇ ವಿಷ ಪ್ರಾಶನದಿಂದ ಸಾಯುತ್ತಾರೆಂದರೆ, ಇನ್ನು ಜನಸಾಮಾನ್ಯರ ಪಾಡೇನು? ಈ ಘಟನೆಯಿಂದ ಇಡೀ ಕರ್ನಾಟಕ ತಲೆತಗ್ಗಿಸಬೇಕು”. ಪೊಲೀಸ್ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯಲಿ. ಆದಷ್ಟೂ ಬೇಗ ಸತ್ಯ ಹೊರಬೀಳಲಿ.

Leave a Reply

Your email address will not be published.

Social Media Auto Publish Powered By : XYZScripts.com