ಜುಲೈ 22ರಂದು ಕಲಬುರಗಿಯಲ್ಲಿ ‘ಪ್ರೇಮ, ಸೂಫಿ, ಬಂದೇ ನವಾಜ್’ ಕೃತಿ ಲೋಕಾರ್ಪಣೆ

ಬೆಂಗಳೂರಿನ ನ್ಯೂಸ್ ಪ್ಲಸ್ ಕಮ್ಯುನಿಕೇಷನ್ಸ್ ಸಂಸ್ಥೆಯು ಪುಸ್ತಕ ಪ್ರಕಟಣೆಯನ್ನು ಆರಂಭಿಸಿದೆ. ಸಂಸ್ಥೆಯ ಮೊದಲ ಪುಸ್ತಕ ‘ಪ್ರೇಮ, ಸೂಫಿ ಬಂದೇ ನವಾಜ್’ ಕೃತಿಯು ಜುಲೈ 22ರಂದು ಗುಲ್ಬರ್ಗದಲ್ಲಿ ಲೋಪಾರ್ಪಣೆಗೊಳ್ಳಲಿದೆ. ತಿಮ್ಮಾಪುರದ ಬೋಡೆ ರಿಯಾಜ್ ಅಹ್ಮದ್ ಅವರು ರಚಿಸಿರುವ ಹದಿನೈದನೆಯ ಶತಮಾನದ ಮಹಾನ್ ಸೂಫಿ ಸಂತ, ತತ್ವಜ್ಞಾನಿ, ಕವಿ-ಲೇಖಕ ಬಂದೇ ನವಾಜ್ ಅವರ ಬದುಕು- ಸಾಹಿತ್ಯ ಕುರಿತ ಗ್ರಂಥ. ತಾತ್ವಿಕತೆಯ ಕಾರಣಕ್ಕಾಗಿ
ಜಾಗತಿಕ ನಕಾಶೆಯಲ್ಲಿ ತನ್ನದೇ ಛಾಪು ಮೂಡಿಸಿದ ಬಂದೇ ನವಾಜ್ ರು ಕವಿ-ಲೇಖಕರಾಗಿ ಅದೇ ತಾತ್ವಿಕತೆಯನ್ನು ಬರಹದಲ್ಲಿ ತಂದವರು.

ಅದೆಲ್ಲಕ್ಕಿಂತ ಹೆಚ್ಚಾಗಿ ಜೀವಪರ=ಜನಪರ ನಿಲುವು ಹೊಂದಿದ್ದ ‘ಸೈಯದ್ ಮಹ್ಮದ್ ಹುಸೇನಿ ಗೇಸುದರಾಜ್’ ಅವರು ದೀನರ- ಸಂಕಷ್ಟಕ್ಕೆಒಳಗಾದವರ ನೋವಿಗೆ ಮಿಡಿದವರು. ಅದೇ ಕಾರಣಕ್ಕಾಗಿ ‘ಬಂದೇ ನವಾಜ್’ (ಸಾಮಾನ್ಯರ ದೊರೆ) ಎಂದು ಹೆಸರಾದವರು. ದೆಹಲಿಯಲ್ಲಿ ಹುಟ್ಟಿ ಮಹಮದ್ ಬಿನ್ ತುಘಲಕ್ ನ ರಾಜಧಾನಿ ಸ್ಥಳಾಂತರದ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ದಖನ್ನಿಗೆ ಬಂದಿದ್ದ ಸೈಯದ್ ಹುಸೇನಿ ಅವರು ಖುಲ್ದಾಬಾದ್ ನಲ್ಲಿ ಇದ್ದ ಬಾಲ್ಯದ ದಿನಗಳಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು. ರಾಜಧಾನಿಯ ಮರುಸ್ಥಳಾಂತರದ ಸಂದರ್ಭದಲ್ಲಿ ದೆಹಲಿಗೆ ಮರಳಿದ್ದ ಅವರು ಚಿಸ್ತಿಯಾ ಪರಂಪರೆಯ ನಾಸಿರುದ್ದೀನ್ ಚಿರಾಗ್ ದೆಹಲ್ವಿ ಅವರಿಂದ ದೀಕ್ಷೆ (ಬಯಾತ್) ಪಡೆದಿದ್ದರು.

ಗೇಸು ದರಾಜ್ (ಉದ್ದ ಕೂದಲಿನವನು) ಅವರು ‘ಬಂದೇ ನವಾಜ್’ ಆಗುವ ದಾರಿಯಲ್ಲಿ ಕ್ರಮಿಸಿದರ ರೀತಿ. ಅವರ ತಾತ್ವಿಕತೆ – ಬರವಣಿಗೆಯ ಮಹತ್ವವನ್ನು ವಿವರಿಸುವ ಕನ್ನಡದ ಮೊದಲ ಪ್ರಮುಖ ಗ್ರಂಥ ಇದಾಗಿದೆ. ಅದೇ ಕಾರಣಕ್ಕಾಗಿ ಇದಕ್ಕೊಂದು ಸಾಹಿತ್ಯಕ-ಸಾಂಸ್ಕೃತಿಕ ಮಹತ್ವದ ಜೊತೆಗೆ ಐತಿಹಾಸಿಕ ಪ್ರಾಮುಖ್ಯತೆಯು ಇದೆ. ಗೋಡೆಗಳನ್ನು ಕಟ್ಟುವ ಮತ್ತು ಕಂದಕಗಳನ್ನು ನಿರ್ಮಿಸುವ ಕಾಲಘಟ್ಟದಲ್ಲಿ ಗೋಡೆಗಳನ್ನು ಬಯಲಾಗಿಸಿ, ಸೇತುವೆಗಳನ್ನು ಕಟ್ಟಿದ ಮಹಾನ್ ಚೇತನವನ್ನು ಕನ್ನಡ ವಾಙ್ಮಯಲೋಕಕ್ಕೆ ಪರಿಚಯಿಸುವ ಪ್ರಯತ್ನವನ್ನು ನ್ಯೂಸ್ ಪ್ಲಸ್ ಕಮ್ಯುನಿಕೇಷನ್ಸ್ ಮಾಡುತ್ತಿದೆ.

ಜುಲೈ 22ರಂದು ಬೆಳಿಗ್ಗೆ 10.30ಕ್ಕೆ ಗುಲ್ಬರ್ಗ/ಕಲಬುರಗಿಯ ಕೆಬಿಎನ್ ಆಸ್ಪತ್ರೆಯ ಎದುರಿಗೆ ಇರುವ ಅಂಜುಮನ್ ತರಕ್ಕಿ ಉರ್ದು ಹಾಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಸಿರಾಜ್ ಅಹ್ಮದ್ ಅವರು ಬಿಡುಗಡೆ ಮಾಡಲಿದ್ದಾರೆ. ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯ ಕಾಜಿ ಅರ್ಷದ್ ಅಲಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಶಿವಗಂಗಾ ರುಮ್ಮಾ ಮತ್ತು ವಿಕ್ರಮ್ ವಿಸಾಜಿ, ಗುಲ್ಬರ್ಗ ವಿಶ್ವವಿದ್ಯಾಲಯದ ಉರ್ದು- ಪರ್ಷಿಯನ್ ಪ್ರಾಧ್ಯಾಪಕ ಅಬ್ದುಲ್ ರಬ್ ಉಸ್ತಾದ್, ಪತ್ರಕರ್ತ ದೇವು ಪತ್ತಾರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ನ್ಯೂಸ್ ಪ್ಲಸ್ ಕಮ್ಯುನಿಕೇಷನ್ಸ್ ಮತ್ತು ಕಲಬುರಗಿಯ ಸಗರನಾಡು ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com