ವಿಡಿಯೋ ಮೂಲಕ ಸಮಸ್ಯೆಗಳನ್ನು ಹೇಳಿ ಗಮನ ಸೆಳೆದ ಬಾಲಕನನ್ನು ಭೇಟಿ ಮಾಡಿದ ಸಿಎಂ

ಕೊಡಗು :   ಕೊಡಗು  ಜಿಲ್ಲೆಯ ಪ್ರವಾಹ ಮತ್ತು ಸಮಸ್ಯೆಗಳನ್ನು ಸಾಮಾಜಿಕ ಮಾಧ್ಯಮ ಮೂಲಕ ಗಮನ ಸೆಳೆದಿದ್ದ ಮಡಿಕೇರಿ ಬಾಲಕ ಅಬ್ದುಲ್ ಫತಾಹ್ ನನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ.

ಅಲ್ಲದೆ ಕೊಡಗು ಜಿಲ್ಲೆಗೆ 100 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿಕೆ ಸಮಗ್ರ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಸರ್ಕಾರವಿದು. ಹಾಗಾಗಿ ಯಾವ ಜಿಲ್ಲೆಯನ್ನೂ ಕಡೆಗಣಿಸುವುದಿಲ್ಲ. ಅತಿವೃಷ್ಟಿಯಿಂದ ನಷ್ಟ ಪರಿಹಾರಕ್ಕೆ ಕೊಡಗು ಜಿಲ್ಲೆಗೆ ಮೊದಲ ಹಂತದಲ್ಲಿ 329 ಕೋಟಿ ರೂಪಾಯಿಗಳ ಪರಿಹಾರ ಕೇಳಿದ್ದಾರೆ, ಸರ್ಕಾರದಿಂದ 100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದರು.

ಬಾಲಕನ ಮಾತನ್ನು ಕೇಳಿದ ಸಿಎಂ ಕುಮಾರಸ್ವಾಮಿ, ನೀನು ಕೇಳದಿದ್ದರೂ ನಾನು ಕೊಡಗಿಗೆ ಬಂದು ಸಮಸ್ಯೆ ಆಲಿಸಿ ಪರಿಹಾರ ಕೊಡುತ್ತಿದ್ದೆ.  ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕ ಫತಾಹ್, ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಹೆಬ್ಬಾಗಿಲಿನಿಂದ ಇಂದು ಮುಖ್ಯಮಂತ್ರಿಗಳು ಕೊಡಗಿಗೆ ಬಂದು ನಮ್ಮನ್ನು ಭೇಟಿ ಮಾಡಿದ್ದು ಬಹಳ ಖುಷಿಯಾಯಿತು. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನಮ್ಮೂರಿನ ರಸ್ತೆ ಸರಿ ಮಾಡಿಕೊಡುವಂತೆ ಕೇಳಿಕೊಂಡೆ ಮತ್ತು ಶಾಲೆಯ ಕಂಪೌಂಡ್ ದುರಸ್ತಿ ಮಾಡುವಂತೆ ಕೇಳಿಕೊಂಡೆ ಅದಕ್ಕೆ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ ನನಗೆ ತುಂಬಾ ಖುಷಿಯಾಗಿದೆ ಎಂದ ಹೇಳಿಕೊಂಡಿದ್ದಾರೆ. 

Leave a Reply

Your email address will not be published.

Social Media Auto Publish Powered By : XYZScripts.com