ನಾನು ಭಾವನಾತ್ಮಕ ವ್ಯಕ್ತಿ ಬೇರೆ ಅರ್ಥ ಕಲ್ಪಿಸುವುದು ಬೇಡ : ಸಿಎಂ ಹೆಚ್ ಡಿಕೆ ಸ್ಪಷ್ಟನೆ
ನವದೆಹಲಿ : ‘ಸರ್ಕಾರದ ಮಟ್ಟದಲ್ಲಿ ನಾನು ನಿರ್ಧಾರ ಕೈಗೊಳ್ಳುವಾಗ ಎಷ್ಟು ಕಠಿಣವಾಗಿರುತ್ತೇನೆಯೋ, ಅದೇ ರೀತಿ ನೋವಿನ ಸಂದರ್ಭದಲ್ಲಿ ನಾನು ಅಷ್ಟೇ ಭಾವನಾತ್ಮಕವಾಗಿರುತ್ತೇನೆ. ಇದು ನನ್ನ ಸಹಜ ನಡವಳಿಕೆ. ರಾಜ್ಯದ ಜನತೆಯ ನೋವಿಗಾಗಿ ನಾನು ಬಹಿರಂಗವಾಗಿ ಕಣ್ಣೀರಿಡುತ್ತೇನೆ. ಅದು ನನ್ನಲ್ಲಿ ಮೂಡಿಬರುವ ಸಹಜ ಪ್ರಕ್ರಿಯೆ. ಅದಕ್ಕೆ ಯಾವುದೇ ‘ಬಣ್ಣ’ವಿರುವುದಿಲ್ಲ. ನನ್ನ ನಡವಳಿಕೆ ಕೂಡ ಕಣ್ಣೀರಿನಷ್ಟೇ ಪಾರದರ್ಶಕವಾಗಿರುತ್ತೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಖಾಸಗಿ ಸಮಾರಂಭದಲ್ಲಿ ಭಾವನಾತ್ಮಕವಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ‘ನಾನು ನನ್ನ ಕುಟುಂಬದಂತಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಸದಸ್ಯರೊಂದಿಗೆ ಚರ್ಚಿಸುವಾಗ ಭಾವನಾತ್ಮಕವಾಗಿದ್ದು ನಿಜ. ನಾನು, ನನ್ನವರೊಂದಿಗೆ ನನ್ನ ನೋವನ್ನು ಹಂಚಿಕೊಂಡಿದ್ದೇನೆ. ಕಣ್ಣೀರು ಹಾಕಿದ್ದು ನಿಜ. ಇದಕ್ಕಾಗಿ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದರು.
‘ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತ ಮಿಗಿಲಾಗಿ ನಾನೂ ಒಬ್ಬ ಮನುಷ್ಯ. ನನ್ನಲ್ಲಿಯೂ ಕೆಲವು ಹುಟ್ಟುಗುಣಗಳಿವೆ. ಅವುಗಳನ್ನು ಹೊರಹಾಕುವ ಸಂದರ್ಭದಲ್ಲಿ ಭಾವನಾತ್ಮಕವಾಗಿದ್ದು ನಿಜ. ಆದರೆ, ನಾನು ಸರ್ಕಾರದ ಸಮಾರಂಭದಲ್ಲಿ ಇಲ್ಲವೆ ಸರ್ಕಾರಿ ಸಭೆಗಳಲ್ಲಿ ಕಣ್ಣೀರು ಹಾಕಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಂದಿನ ಸಭೆಯಲ್ಲಿ ಸುಮಾರು ಒಂದು ಗಂಟೆ ಮಾತನಾಡಿದ್ದೇನೆ. ಎಲ್ಲಿಯೂ ನಾನು, ಯಾವುದೇ ಪಕ್ಷ ನನಗೆ ತೊಂದರೆ ಇಲ್ಲವೆ ಕಿರುಕುಳ ನೀಡುತ್ತಿದೆ ಎಂದು ಹೇಳಿಕೊಂಡಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಸಾಲ ಮನ್ನಾ ಮಾಡಲು ಕಷ್ಟ ಪಟ್ಟಿದ್ದೇನೆ. ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದೇನೆ. ಆದರೂ ನನ್ನನ್ನು ಜನರು ಬೆಂಬಲಿಸುತ್ತಿಲ್ಲ. ಅವರಿಂದ ಪ್ರೋತ್ಸಾಹ ದೊರೆಯುತ್ತಿಲ್ಲ. ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ನೋವನ್ನು ವ್ಯಕ್ತ ಪಡಿಸುವಾಗ ಭಾವನಾತ್ಮಕವಾಗಿದ್ದು ನಿಜ ಆದರೆ, ಯಾವುದೇ ಪಕ್ಷದ ನೀಡುತ್ತಿರುವ ತೊಂದರೆಯನ್ನು ಸಹಿಸಿಕೊಳ್ಳದೇ, ನೋವನ್ನು ಈ ರೀತಿ ಹೊರಹಾಕಿದ್ದೇನೆ ಎಂದು ಹೇಳುವುದು ಅಸಮಂಜಸ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.