ಕುಮಾರಸ್ವಾಮಿ ಅವರಿಗೆ ‘ಕೈ’ ಕೊಟ್ಟಿದ್ದು ಅಮೃತ, ವಿಷ ವೆಂದರೆ ಹೇಗೆ – ಕಾಂಗ್ರೆಸ್ ಶಾಸಕ ಡಾ.ಸುಧಾಕರ್…

ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ‘ಕೈ’ ಅಮೃತವನ್ನೇ ಕೊಟ್ಟಿದೆ,ವಿಷವನ್ನೇನು ಕೊಟ್ಟಿಲ್ಲ, ಅಮೃತವನ್ನು ಕುಡಿಉಲು ತಿಳಿದಿಲ್ಲವೆಂದರೆ ನಾವೇನು ಮಾಡುವುದು  ಎಂದು  ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಕಟುಕಿದ್ದಾರೆ..…


ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ನಾನು ವಿಷವನ್ನೇ ಉಣ್ಣುತ್ತಿರುವ ವಿಷಕಂಠ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ, ಅವರಿಗೆ ಕಾಂಗ್ರೆಸ್ ಪಕ್ಷ ಅಮೃತವನ್ನೇ ಕೊಟ್ಟಿದೆ. ಕುಮಾರಸ್ವಾಮಿಯವರಿಗೆ ವಿಷವನ್ನೇನು ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜೆಡಿಎಸ್ ಸನ್ಮಾನ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರು ಹಾಕಿ ವಿಷಕಂಠನೆಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಇಂದು ಮಾತನಾಡಿದ ಶಾಸಕ ಡಾ.ಸುಧಾಕರ್, ಯಾರೂ ಕೂಡ ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ೩೭ ಶಾಸಕರಿರುವ ಪಕ್ಷಕ್ಕೆ ನಾವು ಸಹಕಾರ ನೀಡಿದ್ದೇವೆ. ನಮ್ಮ ಕಾರ್ಯಕ್ರಮ ಇಲ್ಲದಿದ್ದರೂ ನಾವು ಒಪ್ಪಿದ್ದೇವೆ. ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ ಎಂದರು.

ನಾವು 80, ಅವರು 37 ಶಾಸಕರಿದ್ದೇವೆ. ಸಿಎಂ ಆರೂವರೆ ಕೋಟಿ ಜನರ ಕಣ್ಣೀರು ಒರೆಸಬೇಕು. ಅದು ಬಿಟ್ಟು ನೀವೇ ಅಳುವುದು ಬೇಡ. ನೀವೇ ಅತ್ತರೆ ನಿಮ್ಮ ಕಣ್ಣೀರು ಒರೆಸುವವರು ಯಾರು. ನಾವು ನಿಮ್ಮ‌ ಹಿಂದೆ ಇದ್ದೇವೆ. ಕಷ್ಟ ಸುಖ ಇಬ್ಬರೂ ಹಂಚಿಕೊಳ್ಳೋಣ. ನಮ್ಮ ಕಾರ್ಯಕ್ರಮ ನಿಮಗೂ ಕೀರ್ತಿ ತರುತ್ತೆ. ಸಾಲಮನ್ನಾ ನಿಮಗೂ, ನಮಗೂ ಕೀರ್ತಿ ತರಲಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಲಹೆ ನೀಡಿದರು.

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಸುಧಾಕರ್, ನಾನು ಅಧಿಕಾರ ಕೊಡಿ ಅಂತ ಕೇಳುವುದಕ್ಕೆ ಹೋಗಿಲ್ಲ. ಅದಾಗೆ ಬಂದರೆ ನಾನೇನು ಸನ್ಯಾಸಿಯಲ್ಲವಲ್ಲ. ಕೊಟ್ಟ ಕೆಲಸ ಸಮರ್ಥವಾಗಿ ನಿಭಾಯಿಸುತ್ತೇನೆ. ಕೊಡದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com