ಕನ್ನಡ ಶಾಲೆಯನ್ನು ನಡೆಸಲು ಆಗದಿದದಲ್ಲಿ ಸರಕಾರ ನಮಗೆ ಕೊಡಲಿ – ಕೃಷ್ಣ ಮಠದ ಸ್ವಾಮೀಜಿ

ರಾಜ್ಯ ಸರಕಾರಕ್ಕೆ ಕನ್ನಡ ಶಾಲೆಗಳನ್ನು ಮುನ್ನಡೆಸಲು ಸಾಧ್ಯವಿಲ್ಲದಿದ್ದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಚಿಣ್ಣರ ಸಂತರ್ಪಣೆ ಶಾಲೆಗಳ ಒಕ್ಕೂಟಕ್ಕೆ ಬಿಟ್ಟುಕೊಡಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ ಜಿಲ್ಲೆಯ 100 ಕ್ಕೂ ಹೆಚ್ಚು ಶಾಲೆಗಳ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಸಮವಸ್ತ್ರ ನೀಡಿ ಆಶೀರ್ವಚನ ನೀಡಿರುವ ಶ್ರೀ ವಿದ್ಯಾಧೀಶ ತೀರ್ಥರು  ಯಾವುದೇ ದೇವಸ್ಥಾನಕ್ಕೆ ಒಂದು ವೇಳೆ ಅರ್ಚಕರಿಲ್ಲದಿದ್ದಲ್ಲಿ ಆ ದೇವಾಲಯಕ್ಕೆ ಬೀಗ ಹಾಕುವುದಿಲ್ಲ, ಬದಲಿಗೆ ಭಕ್ತರ ಸಹಾಯದಿಂದ ಪರ್ಯಾಯ ಅರ್ಚಕರ ವ್ಯವಸ್ಥೆ ಮಾಡಲಾಗುತ್ತದೆ. ಹೀಗಿರುವಾಗ ಶಿಕ್ಷಕರಿಲ್ಲ, ವಿದ್ಯಾರ್ಥಿಗಳಿಲ್ಲ ಎಂಬ ಪಿಳ್ಳೆ ನೆವ ಹೇಳಿ ಕನ್ನಡ ಶಾಲೆಗಳನ್ನು ಮುಚ್ಚುವ ಸರಕಾರದ ನಿರ್ಧಾರ ಸರಿಯಲ್ಲ ಎಂದು ಪರ್ಯಾಯ ಸ್ವಾಮೀಜಿ ಕನ್ನಡ ಶಾಲೆಗಳ ಉಳಿವಿಗಾಗಿ ಧ್ವನಿಯೆತ್ತಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಇತ್ತೀಚಿಗೆ ಮಂಡಿಸಿರುವ ಮೈತ್ರಿ ಸರಕಾರದ ಮೊದಲ ಬಜೆಟ್ ನಲ್ಲಿ ರಾಜ್ಯದಲ್ಲಿರುವ 28,847 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಹತ್ತಿರದ 8530 ಶಾಲೆಗಳೊಂದಿಗೆ ವಿಲೀನ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಮೂಲಕ ಸಾವಿರಾರು ಶಾಲೆಗಳು ಮುಚ್ಚುವ ಭೀತಿ ಎದುರಾಗಿದ್ದು, ಸರಕಾರೀ ಶಾಲೆಗಳಿಗೆ ಹೆಚ್ಚಿನ ಸೌಲಭ್ಯ ಘೋಷಣೆ ಮಾಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವಂತೆ ಮಾಡದೇ ಸಾವಿರಾರು ಶಾಲೆಗಳನ್ನು ವಿಲೀನ ಮಾಡುವ ನಿರ್ಧಾರ ಕೈಗೊಂಡ ಸರಕಾರದ ವಿರುದ್ಧ ವ್ಯಾಪಕ ಟೀಕೆಗಳು ಎದುರಾಗಿದ್ದವು.

Leave a Reply

Your email address will not be published.

Social Media Auto Publish Powered By : XYZScripts.com