ಅನ್ನಭಾಗ್ಯ ಅಕ್ಕಿ ಕಡಿತ :HDK ಸರಕಾರದಲ್ಲಿ ಸಿದ್ದರಾಮಯ್ಯ ನಿಲುವಿಗೆ ಬೆಲೆ ಇಲ್ಲ

ಮಾಜಿ ಸಿಎಂ ಸಿದ್ದರಾಮಯ್ಯ ಪತ್ರಕ್ಕೂ ಸ್ಪಂದನೆ ಇಲ್ವಾ..? ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಅಂಟಿಕೊಂಡ ಸಿಎಂ ಹೆಚ್.ಡಿ ಕುಮಾರಸ್ವಾಮಿ….
ಮಾಜಿ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿದ್ದ ಅಕ್ಕಿಯ ಪ್ರಮಾಣ ಏಳು ಕೆ.ಜಿ.ಯಿಂದ ಐದು ಕೆ.ಜಿ.ಗೆ ಕಡಿತಗೊಳಿಸುವ ನಿರ್ಧಾರಕ್ಕೇ ಎಚ್.ಡಿ. ಕುಮಾರಸ್ವಾಮಿ ಅಂಟಿಕೊಂಡಿದ್ದಾರೆ.


ಬಜೆಟ್ ಮಂಡನೆ ವೇಳೆ ಅನ್ನಭಾಗ್ಯ ಅಕ್ಕಿ ವಿತರಣೆಯನ್ನ 7 ಕೆಜಿಯಿಂದ 5ಕೆಜಿಗೆ ಇಳಿಕೆ ಮಾಡಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಆದರೆ ಇದಕ್ಕೆ ಮೈತ್ರಿ ಸರ್ಕಾರದಿಂದಲೇ ಅಸಮಾಧಾನ ವ್ಯಕ್ತವಾಗಿತ್ತು. ಹೀಗಾಗಿ ಅಕ್ಕಿ ಕಡಿತ ರದ್ದು ಮಾಡುವುದಾಗಿ ಬಜೆಟ್ ಚರ್ಚೆ ಮೇಲಿನ ಉತ್ತರ ನೀಡುವ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದರು.
ಆದರೆ ಯಾಕೋ ಅಕ್ಕಿ ಕಡಿತಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಂಟಿಕೊಂಡಂತೆ ಕಾಣುತ್ತಿದೆ. ಈ ಬಗ್ಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಿತ್ರಪಕ್ಷ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಕಿ ಕಡಿತ ನಿರ್ಧಾರ ವಾಪಸ್ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನೇ ಬರೆದಿದ್ದರು. ಆದರೆ ಸಿದ್ದರಾಮಯ್ಯ ಪತ್ರಕ್ಕೂ ಕ್ಯಾರೆ ಅನ್ನದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅನ್ನಭಾಗ್ಯ ಅಕ್ಕಿಯನ್ನ 5 ಕೆಜಿಗೆ ಇಳಿಸಲು ನಿರ್ಧರಿಸಿದ್ದಾರೆ.

ಈ 2 ಕೆ.ಜಿ. ಅಕ್ಕಿ ಕಡಿತ ಮಾಡುವುದರಿಂದ ಹೆಚ್ಚೂ ಕಡಮೆ 4,500 ಕೋಟಿ ರು. ಗಳಷ್ಟು ದೊಡ್ಡ ಮೊತ್ತ ಉಳಿತಾಯವಾಗುವ ಬಗ್ಗೆ ಹಣಕಾಸು ಇಲಾಖೆ ಕೂಲಂಕಷವಾಗಿ ಲೆಕ್ಕ ಹಾಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಡಿತಗೊ ಳಿಸುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೀಗಾಗಿಯೇ ಗುರುವಾರ ವಿಧಾನಮಂಡಲದ ಅಧಿ ವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಕುಮಾರಸ್ವಾಮಿ ಅವರು ಅಕ್ಕಿ ಕಡಿತ ನಿರ್ಧಾರ ವಾಪಸ್ ಪಡೆಯುವ ಬೇಡಿಕೆಗೆ ಸ್ಪಷ್ಟವಾಗಿ ಹೇಳದೆ ತೇಲಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com