ಪುನೀತ್ ಆಪ್ತ ಸಹಾಯಕ ಎಂದು ಹೇಳಿ ವಂಚನೆ : ಲಕ್ಷಾಂತರ ಹಣ ದೋಚಿ ಪರಾರಿಯಾದ ಖದೀಮ.!

ಪವರ್ ಸ್ಟಾರ್ ಜೊತೆ ಮಾತಾಡಿಸ್ತೀನಿ, ಅವರ ಜೊತೇನೇ ಇರೋ ಹಾಗೆ ಕೆಲಸ ಕೊಡಿಸ್ತೀನಿ,ಅವರ ಮನೆಗೆ ಕರೆದುಕೊಂಡು ಹೋಗ್ತೀನಿ ಅಂದ್ರೆ ಯಾರು ತಾನೆ ಬೇಡ ಅಂತಾರೆ. ಅಂತಹ ಬೆಣ್ಣೆ ಮಾತಾಡಿದ ವ್ಯಕ್ತಿಯೊಬ್ಬ ಪವರ್ ಸ್ಟಾರ್ ನ ಆಪ್ತ ಸಹಾಯಕ ಅಂತ ಸುಳ್ಳು ಹೇಳಿ ನಂಬಿಸಿ ಮೈಸೂರಿನ ನಾಲ್ಕಾರು ಮಂದಿಗೆ ಲಕ್ಷಾಂತರ ಹಣಕ್ಕೆ ಉಂಡೆನಾಮ ಇಟ್ಟು ಪರಾರಿಯಾಗಿದ್ದಾನೆ.

ತನ್ನ ತಂಗಿ ಮದುವೆಯ ಹಣಕ್ಕಾಗಿ ಅಮಾಯಕರನ್ನ ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಬಲೆಗೆ ಬೀಳಿಸಿಕೊಂಡ ಚಾಲಾಕಿ ಲಕ್ಷಾಂತರ ಹಣ ಪೀಕಿ ಮದುವೆ ನಂತರ ಎಸ್ಕೇಪ್ ಆಗಿದ್ದಾನೆ. ಪುನೀತ್ ರಾಜ್ ಕುಮಾರ್ ಸಹಾಯಕ ಎಂದು ನಂಬಿ ಹಣ ಕೊಟ್ಟವರು ಬೇಸ್ತುಬಿದ್ದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.ಅತಿ ಬುದ್ದಿವಂತಿಕೆಯಿಂದ ಹಣ ಲಪಟಾಯಿಸಿದ ವಂಚಕನ ಮೇಲೆ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬೆಂಗಳೂರಿನ ಶ್ರೀನಿವಾಸನಗರದ ರವಿ(೨೮)ಅಮಾಯಕರನ್ನ ವಂಚಿಸಿ ಪರಾರಿಯಾದ ಖದೀಮ. ಮೂಲತಃ ಬನ್ನೂರಿನ ಅಂಕನಹಳ್ಳಿಯ ರವಿ ಕಳೆದ ೨೦ವರ್ಷಗಳಿಂದ ಬೆಂಗಳೂರಿನಲ್ಲಿ ಸಂಭಂಧಿಕರ ಮನೆಯಲ್ಲಿ ವಾಸವಿದ್ದಾನೆ.ಕಳೆದ ವರ್ಷ ಮೈಸೂರು ತಾಲೂಕಿನ ಕುಪ್ಯಾ ಗ್ರಾಮಕ್ಕೆ ಬಂದ ರವಿ ಮೊದಲು ತಮ್ಮ ದೂರದ ಸಂಭಂಧಿಕರಾದ ರಮೇಶ್ ರವರನ್ನ ಪರಿಚಯಿಸಿಕೊಂಡ.ಗರಿಗರಿ ಬಟ್ಟೆ,ಕೊರಳು ಹಾಗೂ ಕೈಗಳಲ್ಲಿ ಚಿನ್ನದ ಆಭರಣಗಳನ್ನ ಧರಿಸಿ ಶೋಅಪ್ ಮಾಡಿದ ರವಿ ತಾನು ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತಿದ್ದೀನಿ ಅಂತ ನಂಬಿಸಿದ್ದಾನೆ.

ರವಿಯ ಶ್ರೀಮಂತಿಕೆಯ ಮಾತುಗಳನ್ನ ನಂಬಿದ ರಮೇಶ್ ಮನೆಗೆ ಕರೆತಂದು ಕ್ಲೋಸ್ ಆಗಿ ಮಾತನಾಡಿಸಿದ್ದಾರೆ.ಇದೇ ವೇಳೆ ರವಿ ತಂಗಿ ಶೃತಿ ಮದುವೆ ಫಿಕ್ಸ್ ಆಗಿದೆ.ಮದುವೆ ಖರ್ಚಿಗೆ ಹಣ ಹೊಂದಿಸಲು ಹಾಕಿದ ಸ್ಕೆಚ್ ಗೆ ಮೊದಲು ರಮೇಶ್ ಬಲಿಯಾಗಿದ್ದಾರೆ.ರಮೇಶ್ ರವರ ಪುತ್ರಗಿರೀಶ್ ಗೆ ತನ್ನ ಪ್ರಭಾವ ಬೀರಿ ಕೆಲಸ ಕೊಡಿಸುವ ಆಮಿಷವೊಡ್ಡಿದ ರವಿ ಮದುವೆಗಾಗಿ ಲಕ್ಷ ಲಕ್ಷಗಟ್ಟಲೆ ಹಣ ಜೊತೆಗೆ ಪತ್ನಿ ಉಮಾರಿಂದ ಚಿನ್ನ ಪಡೆದುಕೊಂಡಿದ್ದಾನೆ.

ಇದೇ ಅವಧಿಯಲ್ಲಿ ರಮೇಶ್ ಮೂಲಕ ಗುರುಮೂರ್ತಿ ಎಂಬುವರನ್ನ ಪರಿಚಯಿಸಿಕೊಂಡು ಪುನೀತ್ ರಾಜ್ ಕುಮಾರ್ ಕಾರಿಗೆ ಡ್ರೈವರ್ ಮಾಡುವುದಾಗಿ ಆಮಿಷ ತೋರಿಸಿ ಸುಮಾರು ೫೦ ಗ್ರಾಂ ಚಿನ್ನದ ಸರ ಪೀಕಿದ್ದಾನೆ. ಈತನ ಐಶಾರಾಮಿ ಗೆಟಪ್ ಗೆ ಹಾಗೂ ಆಗಾಗ ಪುನೀತ್ ರಾಜ್ ಕುಮಾರ್ ಹೆಸರು ಹೇಳುತ್ತಾ ಅವರೊಂದಿಗೆ ಚಿತ್ರರಂಗದ ಕೆಲವು ವ್ಯವಹಾರದ ಆಸೆ ತೋರಿಸಿದ ರವಿ ಟ್ರಾವಲ್ಸ್ ಮಾಲೀಕರಾದ ಜೆರ್ರಿ ಎಂಬುವರ ಬಳಿ ಒಂದು ಲಕ್ಷ ಪಡೆದಿದ್ದಾನೆ.ತಂಗಿ ಮದುವೆಗಾಗಿ ಕಲ್ಯಾಣಮಂಟಪಕ್ಕೆ ಹಣ ನೀಡಲು ರಮೇಶ್ ಪುತ್ರ ಗಿರೀಶ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಸಿ ಆತನ ಚೆಕ್ ಗಳನ್ನ ನೀಡಿ ಟೋಪಿ ಹಾಕಿದ್ದಾನೆ.ಇಷ್ಟಕ್ಕೇ ನಿಲ್ಲದ ರವಿಯ ಕುತಂತ್ರ ವಿಡಿಯೋ ಗ್ರಾಫರ್ ಕಿರಣ್ ಎಂಬುವರಿಗೂ ಸಹ ಪುನೀತ್ ರಾಜ್ ಕುಮಾರ್ ಬಳಿ ಆರ್ಡರ್ ಗಳನ್ನ ಕೊಡಿಸುವ ಆಮಿಷ ತೋರಿಸಿ ಮದುವೆ ಕವರೇಜ್ ಮಾಡಿಸಿಕೊಂಡು ಕೈ ಕೊಟ್ಟಿದ್ದಾನೆ.

ಪ್ಲವರ್ ಡೆಕೋರೇಷನ್ ಮಾಡುವ ಪವನ್ ಎಂಬುವರಿಗೂ ಇದೇ ಕಹಿ ಅನುಭವವಾಗಿದೆ. ಪುನೀತ್ ರಾಜ್ ಕುಮಾರ್ ಹೆಸರು ಬಳಸಿದ ರವಿ ನಾಲ್ಕಾರು ಮಂದಿಯಿಂದ ಲಕ್ಷಾಂತರ ರೂಪಾಯಿ ಪಡೆದು ತನ್ನ ತಂಗಿ ಮದುವೆ ಮುಗಿಯುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾನೆ. ತಂಗಿಯ ಮದುವೆ ಆಮಂತ್ರಣ ಪತ್ರದಲ್ಲಿಯೂ ಪುನೀತ್ ರಾಜ್ ಕುಮಾರ್ ರವರ ಚಿಕ್ಕಂದಿನಲ್ಲಿ ಕರೆಯುತ್ತಿದ್ದ ಲೋಹಿತ್ ಹೆಸರು ಹಾಕಿಸಿ ಮಂಕುಬೂದಿ ಎರಚಿದ್ದಾನೆ.ಮದುವೆ ನಂತರ ರವಿ ನಾಪತ್ತೆಯಾದಾಗಲೇ ತಾವು ಮೋಸ ಹೋಗಿರುವುದು ಖಚಿತವಾಗಿದೆ.

ಬೆಂಗಳೂರಿನ ಮನೆಯಲ್ಲೂ ರವಿ ಕೈಗೆ ಸಿಗುತ್ತಿಲ್ಲ. ಮೈಸೂರಿನತ್ತ ತಲೆಯೂ ಹಾಕುತ್ತಿಲ್ಲ.ರವಿಯ ಶೋಅಪ್ ಮಾತಿಗೆ ಬೆರಗಾಗಿ ಹಣ ಕೊಟ್ಟವರು ಆಕಾಶ ನೋಡುತ್ತಿದ್ದಾರೆ.ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೆ ಮತ್ತೊಬ್ಬರ ದುಡ್ಡಲ್ಲಿ ತಂಗಿ ಮದುವೆಯನ್ನ ಅದ್ದೂರಿಯಿಂದ ಮಾಡಿ ಎಸ್ಕೇಪ್ ಆದ ರವಿ ಎಲ್ಲರಿಗೂ ತಿರುಪತಿ ತಿಮ್ಮಪ್ಪನ ಚೊಂಬು ಹಿಡಿಸಿದ್ದಾನೆ…ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ ಅಜ್ಞಾತನಾಗಿರುವ ವಂಚಕ ರವಿ ಪವರ್ ಸ್ಟಾರ್ ಹೆಸರಿಗೆ ಮಸಿ ಬಳಿಯುತ್ತಿದ್ದಾನೆ…ಪುನೀತ್ ರಾಜ್ ಕುಮಾರ್ ಗೂ ಈತನಿಗೂ ಸಂಭಂದ ಇದೆಯೋ ಇಲ್ಲವೋ ಗೊತ್ತಿಲ್ಲ
ಆದ್ರೆ ರವಿ ಮಾತ್ರ ಪುನೀತ್ ಹೆಸರು ಬಳಸಿ ವಂಚಿಸಿರುವುದು ಮಾತ್ರ ನಿಜ…

Leave a Reply

Your email address will not be published.