ಮಂಗಳೂರು : ವಿಐಪಿ ಜೊತೆ ಫೋಟೊಗೆ ಪೋಸ್ ಕೊಟ್ಟು ಕೆಲಸ ಕಳೆದುಕೊಂಡ ಗನ್‍ಮ್ಯಾನ್..!

ಭದ್ರತೆಗೆ ನಿಯೋಜಿತರಾದ ಗನ್‍ಮ್ಯಾನ್ ಒಬ್ಬರು ವಿಐಪಿ ಜತೆ ಫೋಟೊಗೆ  ಫೋಸ್  ಕೊಟ್ಟು ಕೆಲಸ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ರಹೀಂ ಉಚ್ಚಿಲ್ ಜೊತೆ ಫೋಟೋಗೆ ಪೋಸ್ ಕೊಟ್ಟ ಗನ್ ಮ್ಯಾನ್ ಮಲ್ಲಿಕಾರ್ಜುನ ಅಮಾನತ್ತಾ ದವರು. ರಹೀಂ ಉಚ್ಚಿಲ್ ದುಬೈಗೆ ತೆರಳುವ ಸಂದರ್ಭ ಗನ್ ಮ್ಯಾನ್ ಜತೆ ಹಲವು ಫೋಟೊ ಮತ್ತು ಸೆಲ್ಫಿ ತೆಗೆಸಿಕೊಂಡಿದ್ದರು.

ಗನ್‍ಮ್ಯಾನ್ ಅವರು ಗನ್ ಮುಂದೆ ಮಾಡಿ ತಾನು ಫೋಸ್ ಕೊಟ್ಟಿದ್ದರು. ರಹೀಂ ಫೋಟೊವನ್ನು ಫೇಸ್ ಬುಕ್‍ನಲ್ಲಿ ಹಾಕಿಕೊಂಡಿದ್ದರು. ಭದ್ರತೆ ನಿಯಮಕ್ಕೆ ಅನುಗುಣವಾಗಿ ಅಂಗರಕ್ಷಕರು ಈ ರೀತಿ ವಿಐಪಿಗಳ ಜತೆ ಫೋಟೊ ತೆಗೆಸಿಕೊಳ್ಳು ವಂತಿಲ್ಲ ಮತ್ತು ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಈ ಕುರಿತು ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಅಮಾನತು ಆದೇಶ ಹೊರಡಿಸಿದ್ದಾರೆ.

ರಹೀಂ ಉಚ್ಚಿಲ್ ಅವರ ಮೇಲೆ ಹಿಂದೊಮ್ಮೆ ಕೊಲೆ ಯತ್ನ ನಡೆದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ರಕ್ಷಣೆಗೆ ಗನ್ ಮ್ಯಾನ್ ನೀಡಲಾಗಿತ್ತು. ಮಲ್ಲಿಕಾರ್ಜುನ ಅವರು ಅಂಗರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ರಹೀಂ ಉಚ್ಚಿಲ್ ಜೂ.23ರಂದು ದುಬೈಗೆ ತೆರಳುವ ಸಂದರ್ಭ ಗನ್ ಮ್ಯಾನ್ ಜತೆ ಫೋಟೊ ತೆಗೆಸಿಕೊಂಡಿದ್ದರು. ಮಾತ್ರವಲ್ಲದೆ ಅದಕ್ಕೆ ಒಕ್ಕಣೆ ಸೇರಿಸಿ, ತಾನು ದುಬೈಗೆ ಹೋಗುವುದಾಗಿ ಫೇಸ್ ಬುಕ್‍ನಲ್ಲಿ ಬರೆದು ಫೋಟೊಗಳನ್ನು ಅಪ್‍ಲೋಡ್ ಮಾಡಿದ್ದರು. ಇದಾದ ಬಳಿಕ ಗನ್‍ಮ್ಯಾನ್ ಸಶಸ್ತ್ರ ಮೀಸಲು ಪಡೆಗೆ ತನ್ನ ಗನ್ ಒಪ್ಪಿಸಿ, ಯಾರಲ್ಲೂ ಹೇಳದೆ ಕೇಳದೆ ನೇರವಾಗಿ ತನ್ನ ಊರಿಗೆ ಹೊರಟು ಹೋಗಿದ್ದರು. ರಜೆಗೆ ಅರ್ಜಿಯನ್ನು ಕೂಡಾ ಸಲ್ಲಿಸಿರಲಿಲ್ಲ ಎನ್ನಲಾಗಿದೆ.

Leave a Reply

Your email address will not be published.