ಗಂಗಾಧರ ಚಡಚಣ ಹತ್ಯಾಕಾಂಡ : ಭೀಮಾ ತಿರದಲ್ಲಿ ಪೊಲೀಸರೇ ಪಾತಕಿಗಳು….!

ಇದು ದುರಂತ, ಆದರೂ ಸತ್ಯ! ಪಾತಕ ಜಗತ್ತು ಮತ್ತು ಪೊಲೀಸರ ನಡುವಿನ ನಂಟು ಬಿಚ್ಚಿಡುವ ಈ ಕೃತ್ಯ ಮಾನವಂತರನ್ನಷ್ಟೇ ಅಲ್ಲ, ಭೂಗತ ಕ್ರಿಮಿಗಳನ್ನೂ ಗಾಬರಿಬೀಳಿಸಿದೆ. ಅಷ್ಟಕ್ಕೂ ಕರ್ನಾಟಕ ಮಹಾರಾಷ್ಟ್ರ ಗಡಿಗೆ ಅಂಟಿಕೊಂಡ ಕೊಂಕಣಗಾವ ಎಂಬ ಪುಟ್ಟ ಊರಿನಲ್ಲಿ ನಡೆದದ್ದೆಲ್ಲ ನಾಗರಿಕ ಸಮಾಜ ಊಹಿಸಿಕೊಳ್ಳಲಿಕ್ಕೂ ಸಾಧ್ಯವಾಗದ ಪೊಲೀಸ್ ಹುನ್ನಾರ. ತಮ್ಮ ಸುಪರ್ದಿನಲ್ಲಿರೋ ಕೈದಿಯನ್ನ ಹಂತಕರ ಕಸಾಯಿ ಖಾನೆಯೊಳಕ್ಕೆ ತಳ್ಳಿ, ಒಂದು ವಿಕೃತ ಹತ್ಯಾಕಾಂಡದ ಮುಂದೆ ಕೈಕಟ್ಟಿ ನಿಲ್ಲುವುದಿದೆಯಲ್ಲ ಅದು ಮನುಷ್ಯತ್ವದ ಕರ್ತವ್ಯಪ್ರಜ್ಞೆಯಿರುವ ಎಂತವರಿಗೂ ಸಾಧ್ಯವಿಲ್ಲ. ಆದರೆ ನಮ್ಮ ಕರ್ನಾಟಕದ ಪೊಲೀಸರಿಗೆ ಅದು ಸಾಧ್ಯವಾಗಿದೆ!!
ವಿಮಲಾಬಾಯಿ ಎಂಬ ಹೆಂಗಸು, ನಿಗೂಢವಾಗಿ ನಾಪತ್ತೆಯಾಗಿದ್ದ ತನ್ನ ಮಗನನ್ನು ಹುಡುಕಿಕೊಡುವಂತೆ ಕೋರ್ಟ್‍ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸದೇ ಇದ್ದಿದ್ದರೆ ಇಂತದ್ದೊಂದು ಭೀಭತ್ಸ ಕೃತ್ಯ ಬೆಳಕಿಗೆ ಬರುತ್ತಿರಲಿಲ್ಲವೇನೊ. ಯಾಕೆಂದರೆ ಆ ವ್ಯಕ್ತಿ ನಾಪತ್ತೆಯಾಗಿ ಇಲ್ಲಿಗೆ ಅಜಮಾಸು ಒಂದು ವರ್ಷವೇ ಗತಿಸಿಹೋಗಿತ್ತು. ಆತನ ಹೆತ್ತವ್ವನ ಹೊರತಾಗಿ ಎಲ್ಲರೂ ಅವನನ್ನು ಮರೆತೇಬಿಟ್ಟಿದ್ದರು. ಆದರೆ ಯಾವಾಗ ಸ್ವತಃ ನ್ಯಾಯಾಲಯವೇ ಹೆಬಿಯಸ್ ಕಾರ್ಪಸ್ ಕೈಗೆತ್ತಿಕೊಂಡು ಅವನ ಪತ್ತೆ ಮಾಡುವಂತೆ ಪೊಲೀಸ್ ಇಲಾಖೆಗೆ ಚುರುಕು ಮುಟ್ಟಿಸಿತೊ ಆಗಲೇ ನೋಡಿ ಪೊಲೀಸ್-ಪಾತಕಿಗಳ ಈ ಜಾಯಿಂಟ್ ಆಪರೇಷನ್ ಜಗಜ್ಜಾಹಿರಾದದ್ದು!
ಹತ್ಯೆಯಾಗಿರುವವನ ಹೆಸರು ಗಂಗಾಧರ ಚಡಚಣ. ಉಮಾರಾಣಿ ಗ್ರಾಮದವನು. ಬರಗಾಲ ಮತ್ತು ಬಡತನದಿಂದ ತತ್ತರಿಸಿಹೋದ ಬಿಜಾಪುರ ಜಿಲ್ಲೆಯ ಹಲವಾರು ಹಳ್ಳಿಗಳಂತೆ ಆ ಊರಿನಲ್ಲೂ ದ್ವೇಷ, ಸೇಡು, ಬಡಿದಾಟಗಳದ್ದೇ ಕಾರುಬಾರು. ಗ್ರಾಮದ ಭೈರಗೊಂಡ ಮತ್ತು ಚಡಚಣ ಫ್ಯಾಮಿಲಿಗಳ ಮಧ್ಯೆ ಎರಡು ಮೂರು ತಲೆಮಾರುಗಳಿಂದ ದುಷ್ಮನಿ ಕಾದಾಡಿಕೊಂಡೇ ಬಂದಿದೆ. ಅದ್ಯಾವುದೋ ಕಾಲದಲ್ಲಿ, ಅದೇನೊ ಕಾರಣಕ್ಕೆ ಭೈರಗೊಂಡ ಫ್ಯಾಮಿಲಿಯವರು ಶಾಂತಪ್ಪ ಚಡಚಣ ಎಂಬಾತನನ್ನು ಊರಿನ ಮಧ್ಯೆದಲ್ಲೇ ಬಡಿದು ಕೊಂದಿದ್ದರಿಂದ ಶುರುವಾದ ಸೇಡಿನ ಪಗಡೆಯಾಟ ಹೆಚ್ಚೂಕಮ್ಮಿ ಎರಡು ತಲೆಮಾರುಗಳನ್ನು ದಾಟಿ ಮುಂದಕ್ಕೆ ಸಾಗಿದೆ. ಈಗ ಪೊಲೀಸರ ಕುಮ್ಮಕ್ಕಿನಿಂದ, ತೊಗರಿ ಹೊಲದ ನಟ್ಟನಡುವೆ ವಿಕೃತವಾಗಿ ಕೊಂದುಹಾಕಲ್ಪಟ್ಟ ಗಂಗಾಧರ, ಅವತ್ತು ಊರ ಮಧ್ಯೆ ಕೊಲೆಯಾಗಿದ್ದ ಅದೇ ಶಾಂತಪ್ಪನ ಮೊಮ್ಮಗ.
ಫ್ಯಾಮಿಲಿ ಸೇಡು
ಶಾಂತಪ್ಪ ಚಡಚಣನ ಮೂರು ಗಂಡು ಸಂತಾನಗಳು ಭೈರಗೊಂಡ ಫ್ಯಾಮಿಲಿಯ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗೇ ಪಾತಕ ಜಗತ್ತಿನ ಕ್ರಿಮಿಗಳಾಗಿ ರೂಪಾಂತರ ಗೊಂಡಿದ್ದರು. ಅದರಲ್ಲಿ ಶ್ರೀಶೈಲ ಮತ್ತು ಅಂಬಾಜಿ ಎಂಬಿಬ್ಬರನ್ನು ಪೊಲೀಸರು ಎನ್‍ಕೌಂಟರ್ ಹೆಸರಿನಲ್ಲಿ ಹೊಡೆದುರುಳಿಸಿದ್ದರೆ ಬಾಕಿ ಉಳಿದ ಮಲ್ಲಿಕಾರ್ಜುನ ಚಡಚಣನ ಮೇಲೆ ದುಷ್ಮನ್‍ಗಳು ಕೋರ್ಟ್ ಆವರಣದಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅದೇಗೊ ಪ್ರಾಣ ಉಳಿಸಿಕೊಂಡು, ಕುಟುಂಬ ಸಮೇತ ಊರುಬಿಟ್ಟಿದ್ದ ಮಲ್ಲಿಕಾರ್ಜುನ ಏನಾಗಿದ್ದಾನೆ ಅನ್ನೋ ನಿಖರ ವರ್ತಮಾನ ಇವತ್ತಿನವರೆಗೆ ಯಾರಿಗೂ ತಿಳಿದಿಲ್ಲ. ಪಾಶ್ರ್ವವಾಯುಗೆ ತುತ್ತಾದ ಆತ ಪುಣೆಯ ಅದ್ಯಾವುದೋ ಆಸ್ಪತ್ರೆಯ ಹಾಸಿಗೆ ಮೇಲೆ ನರಳಾಡುತ್ತಿದ್ದಾನಂತೆ ಎಂದು ಹರಿದಾಡಿದ ಗಾಳಿಸುದ್ದಿಯೂ ತಟಸ್ಥವಾಗಿ ಯಾವುದೊ ಕಾಲವೇ ಆಗಿಹೋಗಿದೆ.
ಆ ಮಲ್ಲಿಕಾರ್ಜುನನ ಮಕ್ಕಳೇ ಈಗ ಹತ್ಯೆಯಾಗಿರುವ ಗಂಗಾಧರ ಚಡಚಣ ಮತ್ತು ಈಗ್ಗೆ ಎಂಟತ್ತು ತಿಂಗಳ ಹಿಂದೆ ಇದೇ ಹಂತಕ ಪೊಲೀಸರು ಎನ್‍ಕೌಂಟರ್ ಮಾಡಿ ಮಲಗಿಸಿದ್ದ ಧರ್ಮರಾಜ ಚಡಚಣ! ಕುಟುಂಬ ಸಮೇತ ಮಲ್ಲಿಕಾರ್ಜುನ ಊರುಬಿಟ್ಟ ನಂತರ ಉಮಾರಾಣಿ ಗ್ರಾಮ ಕೊಂಚ ಮಟ್ಟಿಗೆ ಬಡಿದಾಟಗಳಿಂದ ಬಿಡುವು ಪಡೆದು ತಣ್ಣಗಿತ್ತು. ಇತ್ತ ಭೈರಗೊಂಡ ಫ್ಯಾಮಿಲಿಯೂ ದುಷ್ಮನಿಗಳ ಉಪಟಳ ತಪ್ಪಿದ ನೆಮ್ಮದಿಯಲ್ಲಿ ನಿಟ್ಟುಸಿರು ಬಿಟ್ಟಿತ್ತು. ಆದರೆ ಮಲ್ಲಿಕಾರ್ಜುನ ತನ್ನ ಸಣ್ಣ ವಯಸ್ಸಿನ ಮಕ್ಕಳ ಮನಸಿನಲ್ಲಿ ಸೇಡನ್ನು ಪೊರೆಯುತ್ತಲೇ ಬಂದಿದ್ದ. ಅಪ್ಪನ ಜೊತೆ ಊರು ಬಿಟ್ಟಾಗ ಅಣ್ಣ ಧರ್ಮರಾಜನಿಗೆ ಮೂರು ವರ್ಷ ವಯಸ್ಸಾಗಿದ್ದರೆ, ತಮ್ಮ ಗಂಗಾಧರ ಅವನಿಗಿಂತಲೂ ಒಂದು ವರ್ಷ ಚಿಕ್ಕವ. ಅತ್ತ ಮುಂಬೈನ ಭೂಗತ ಜಗತ್ತಿನ ಸಹವಾಸ ಮಾಡಿ ಶಾರ್ಪ್‍ಶೂಟರ್, ಸುಪಾರಿ ಹಂತಕರಾಗಿ ಬೆಳೆದ ಈ ಇಬ್ಬರು ಅಣ್ಣತಮ್ಮಂದಿರ ಮನದ ತುಂಬಾ ಭೈರಗೊಂಡ ಫ್ಯಾಮಿಲಿ ಮೇಲಿನ ದುಷ್ಮನಿಯೇ ತೊಯ್ದಾಡುತ್ತಿತ್ತು.
ಮುಗಿದ ಅಧ್ಯಾಯಕ್ಕೆ ಹೊಸ ಮುನ್ನುಡಿ
ಅವರ ಆ ಸೇಡಿಗೆ ಮುಹೂರ್ತ ಕೂಡಿ ಬಂದದ್ದು 2008ರ ಅಸೆಂಬ್ಲಿ ಎಲೆಕ್ಷನ್ ವೇಳೆಯಲ್ಲಿ. ನಾಗಠಾಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಜು ಅಲಗೂರಿಗೆ ಭೈರಗೊಂಡ ಫ್ಯಾಮಿಲಿ ಬೆಂಬಲ ಘೋಷಿಸಿದ್ದಲ್ಲದೆ ಆ ಕುಟುಂಬದ ಹಿರಿಕನಾದ ಪುತ್ರಪ್ಪ ಸಾಹುಕಾರ ಉತ್ಸಾಹದಲ್ಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ. ಎದುರಾಳಿಗಳು ಮೈಮರೆತು ಬೀದಿಗೆ ಬರುವುದನ್ನೇ ಕಾದಿದ್ದ ಧರ್ಮರಾಜ ಚಡಚಣ, ಲೋಣಿ ಬಿ.ಕೆ. ಹಳ್ಳಿ ಎಂಬಲ್ಲಿ ಹಾಡುಹಗಲೇ ಎಲೆಕ್ಷನ್ ಪ್ರಚಾರದಲ್ಲಿದ್ದ ಪುತ್ರಪ್ಪನ ಮೇಲೆ ಗುಂಡಿನ ಮಳೆಗರೆದು, ಮುಗಿದುಹೋಗಿದ್ದ ದುಷ್ಮನಿಗೆ ಹೊಸ ಮುನ್ನುಡಿ ಬರೆದಿದ್ದ. ಅವತ್ತು ದಾಳಿಗೆ ಒಳಗಾಗಿದ್ದ ಪುತ್ರಪ್ಪ ಸಾಹುಕಾರ ಪ್ರಾಣ ಉಳಿಸಿಕೊಂಡನಾದರು ಬಹುಕಾಲ ಬದುಕುಳಿಯಲಿಲ್ಲ. ಆತ ಸತ್ತ ನಂತರ ಭೈರಗೊಂಡ ಫ್ಯಾಮಿಲಿಗೆ ಪುತ್ರಪ್ಪನ ತಮ್ಮ ಮಹಾದೇವ ಸಾಹುಕಾರನ ಯಜಮಾನಿಕೆ ಲಭಿಸಿದೆ. ಕಣ್ಣಮುಂದೆ ಕಂಡ ಸಾಲುಸಾಲು ಹತ್ಯೆಗಳು, ಬಡಿದಾಟಗಳಿಂದ ಕೊಂಚ ಎಚ್ಚೆತ್ತುಕೊಂಡಂತೆ ಕಾಣುವ ಈ ಮಹಾದೇವ ಸಾಹುಕಾರ, ಹಿಂದಿನವರಿಗಿಂತ ಕೊಂಚ ಭಿನ್ನ ಶೈಲಿಯ ದುಷ್ಮನಿಯವನು. ರಾಜಕಾರಣ, ಸಮಾಜ ಸೇವೆ, ಕಂಟ್ರ್ಯಾಕ್ಟು, ಮರಳು ಮಾಫಿಯಾ ಹೀಗೆ ನಾನಾ ಅವತಾರದಲ್ಲಿ ಕಾಣಿಸಿಕೊಳ್ಳುವ ಮಹಾದೇವ ಸಾಹುಕಾರ ಮಕ್ಕಳಿಗೆ ಶಾಲೆಗಳನ್ನು ಕಟ್ಟಿಸಿ, ಕಂಪ್ಯೂಟರ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿ ತುಸು ಒಳ್ಳೇ ಇಮೇಜನ್ನೂ ಸೃಷ್ಟಿಸಿಕೊಂಡಿದ್ದಾನೆ. ಇದು ರಾಜಕೀಯ ವಲಯದಲ್ಲಿ ಅವನ ವರ್ಚಸ್ಸು ಹೆಚ್ಚಿಸಿದೆ. ಆದರೆ ಆಂತರ್ಯದಲ್ಲಿ ಚಡಚಣ ಫ್ಯಾಮಿಲಿ ಮೇಲಿನ ದುಷ್ಮನಿ, ಅದರಲ್ಲೂ ತನ್ನ ಅಣ್ಣನ ಮೇಲೆ ಗುಂಡು ಹಾರಿಸಿದ್ದ ಧರ್ಮರಾಜ, ಗಂಗಾಧರನ ಮೇಲೆ ಸೇಡಿನ ಜ್ವಾಲೆ ಉರಿಯುತ್ತಲೇ ಇತ್ತು.
ಈ ನಡುವೆ ಕೊಂಕಣಗಾವದಲ್ಲಿ ನೆಲೆ ಕಂಡುಕೊಂಡಿದ್ದ ಧರ್ಮರಾಜ ಮುಂಬೈ ಪಾತಕ ಲೋಕದಲ್ಲಿ ಕಲಿತ ಗೂಂಡಾಗಿರಿ, ಹಫ್ತಾ ವಸೂಲಿಯಂತಹ ಸಣ್ಣಪುಟ್ಟ ಕಸುಬುಗಳಲ್ಲಿ ಬ್ಯುಸಿಯಾದರೆ, ತಮ್ಮ ಗಂಗಾಧರ ಕೂಡಾ ಅಣ್ಣನಿಗೆ ಬೆನ್ನೆಲುಬಾಗಿ ನಿಂತ. ಸುಪಾರಿ ಪಡೆದು, 2014ರ ನವೆಂಬರ್ 7ರಲ್ಲಿ ಲೋಕಲ್ ಕಾಂಗ್ರೆಸ್ ಲೀಡರ್ ಫಯಾಜ್ ಮುಶ್ರಿಫ್‍ನನ್ನು ಕೊಂದುಹಾಕಿ ಜೈಲನ್ನೂ ಸೇರಿದ್ದರು. ಜಾಮೀನಿನ ಮೇಲೆ ಹೊರಬಂದ ಅವರು ಭೈರಗೊಂಡ ಫ್ಯಾಮಿಲಿಯ ಮೇಲೆ ಕಾಲು ಕೆರೆಯುತ್ತಲೇ ಇದ್ದರು. ಇದಕ್ಕೆ ಇಂಬು ನೀಡುವಂತೆ, 2016ರಲ್ಲಿ ಉಮಾರಾಣಿ ಗ್ರಾಮದ ಪಂಚಾಯ್ತಿ ಆಫೀಸ್ ಎದುರಿನಲ್ಲೇ ಮಹಾದೇವ ಸಾಹುಕಾರನ ಬಲಗೈ ಭಂಟ ಹನುಮಂತ ಪೂಜಾರಿಯ ಮೇಲೆ ಗುಂಡಿನ ದಾಳಿ ನಡೆದ ನಂತರವಂತೂ ಫ್ಯಾಮಿಲಿ ದುಷ್ಮನಿ ಮತ್ತಷ್ಟು ಬಿಗಡಾಯಿಸಿತು. ಈ ದಾಳಿಯ ಹಿಂದೆ ಚಡಚಣ ಸೋದರರ ಕೈವಾಡವಿದೆ ಎಂಬ ಅಭಿಪ್ರಾಯ ಭೈರಗೊಂಡ ಕುಟುಂಬದ ಪಾಳೆಯದಲ್ಲಿ ಗಟ್ಟಿಗೊಳ್ಳುವುದಕ್ಕೂ, ಬಿಜಾಪುರ ಪೊಲೀಸರಿಗೆ ಚಡಚಣ ಸೋದರರ ಮೇಲೆ `ಕ್ರಮ ಕೈಗೊಳ್ಳುವ’ ತುರ್ತು ಹೆಚ್ಚಾದದ್ದಕ್ಕೂ ನಡುವೆ ಅದೇನು ನಂಟಿದೆಯೋ ಗೊತ್ತಿಲ್ಲ ಒಟ್ಟಿನಲ್ಲಿ ಅವತ್ತಿನಿಂದಲೇ ಚಡಚಣ ಕುಟುಂಬದ ಮೇಲೆ ಪೊಲೀಸ್ ಕರಿನೆರಳು ಕವಿಯಲಾರಂಭಿಸಿತ್ತು.
ಕರಾಳ ಖಾಕಿಗಳು?
ಕೋರ್ಟ್‍ನ ಹೆಬಿಯಸ್ ಕಾರ್ಪಸ್ ಚಾಟಿಗೆ ಬಿಸಿ ಹತ್ತಿಸಿಕೊಂಡ ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕ್ ಕುಮಾರ್, ನಾಪತ್ತೆ ಪ್ರಕರಣವನ್ನು ಕೈಗೆತ್ತಿಕೊಂಡು ಎಳೆಎಳೆಯಾಗಿ ಬಿಡಿಸುತ್ತಾ ಹೋದಂತೆ ಅದು ತಮ್ಮ ಇಲಾಖೆಯ ಬುಡಕ್ಕೇ ಬಂದು ನಿಂತದ್ದನ್ನು ಕಂಡು ಬೆಚ್ಚಿಬಿದ್ದಿದ್ದರು. ಗಂಗಾಧರ ಚಡಚಣನ ದುಷ್ಮನಿಗಳ ಬೆನ್ನುಬಿದ್ದು ತನಿಖೆಯಲ್ಲಿದ್ದ ಅವರಿಗೆ, ಗಂಗಾಧರನ ತಾಯಿ ವಿಮಲಾಬಾಯಿ ಕೊಟ್ಟ ದೂರು ವಿಶೇಷವಾಗಿ ಕಂಡಿತ್ತು. ಇದೇ ಜೂನ್ 4ರಂದು ಚಡಚಣ ಪೊಲೀಸ್ ಠಾಣೆಗೆ ದೂರು ನೀಡಿದ್ದ ಆಕೆ ಇಷ್ಟುದಿನ ನಾಪತ್ತೆಯಾಗಿದ್ದ ನನ್ನ ಮಗ ಗಂಗಾಧರನನ್ನು, ಮಹಾದೇವ ಸಾಹುಕಾರ ಕೊಲೆ ಮಾಡಿಸಿದ್ದಾನೆ, ಆ ಕೊಲೆಯಲ್ಲಿ ಪಿಎಸ್ಸೈ ಗೋಪಾಲ ಹಳ್ಳೂರ ಸೇರಿದಂತೆ ಹಲವಾರು ಪೊಲೀಸರೆ ಶಾಮೀಲಾಗಿದ್ದಾರೆ ಅಂತ ಆರೋಪಿಸಿದ್ದಳು. ಆ ದಿಕ್ಕಿಗೇ ತನಿಖೆ ತಿರುಗಿಸಿದ ಅಲೋಕ್‍ರಿಗೆ ತಮ್ಮ ಇಲಾಖೆಯ ಪಾತ್ರ ಆಕೆ ಆರೋಪಿಸಿದ್ದಕ್ಕಿಂತ ಆಳವಾಗಿರೋದು ಮನದಟ್ಟಾಗುತ್ತಾ ಬಂತು.
ಇಡೀ ಹುನ್ನಾರದಲ್ಲಿ ಪೊಲೀಸರ ಕರಾಳ ಕರಾಮತ್ತು ಶುರುವಾದದ್ದು ಕಳೆದ ವರ್ಷ ನಡೆದ ಧರ್ಮರಾಜ ಚಡಚಣನ ಎನ್‍ಕೌಂಟರ್ ಹುನ್ನಾರದ ಮೂಲಕ. 2017ರ ಅಕ್ಟೋಬರ್ 30ರಂದು ಕೊಂಕಣಗಾವದ ಧರ್ಮರಾಜ ಚಡಚಣನ ಮನೆ ಮೇಲೆ ದಾಳಿ ಮಾಡುವ ಪಿಎಸ್‍ಐ ಗೋಪಾಲ ಹಳ್ಳೂರರ ಟೀಮು, ಆತ ಅಡಗಿಸಿಟ್ಟುಕೊಂಡಿರುವ ಅಕ್ರಮ ಪಿಸ್ತೂಲನ್ನು ಒಪ್ಪಿಸುವಂತೆ ತಾಕೀತು ಮಾಡಿತ್ತು. ಆದರೆ ಅದಕ್ಕೆ ಒಪ್ಪದ ಆತ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದರಿಂದ `ಆತ್ಮರಕ್ಷಣೆ’ಗಾಗಿ ನಾವೂ ಫೈರ್ ಮಾಡಬೇಕಾಯ್ತು, ಆ ಕಾದಾಟದಲ್ಲಿ ಧರ್ಮರಾಜ ಚಡಚಣನ ಎದೆಗೆ ಗುಂಡುಬಿದ್ದು ಹತನಾದ ಎಂಬುದು ಪೊಲೀಸರು ಆ ಎನ್‍ಕೌಂಟರ್‍ಗೆ ಬರೆದಿರುವ ಷರಾ. ಇಷ್ಟುದಿನ ಜನ ಅದೇ ನಿಜವೆಂದು ನಂಬಿದ್ದರು. ಆದರೆ ಯಾವಾಗ ಗಂಗಾಧರ ಚಡಚಣನ ಹತ್ಯೆ ಬಯಲಾಗಿ, ಅದರಲ್ಲಿ ಪೊಲೀಸರ ಕೈವಾಡ ಇರೋದು ಬಯಲಾಗುತ್ತಿದೆಯೋ ಆಗಿನಿಂದ ಪೊಲೀಸರ ಅವತ್ತಿನ ಎನ್‍ಕೌಂಟರ್ ಮೇಲೂ ಗುಮಾನಿ ಶುರುವಾಗಿದೆ. ವಿಮಲಾಬಾಯಿ ಆರೋಪಿಸುತ್ತಿರುವಂತೆ ಮಹಾದೇವೆ ಸಾಹುಕಾರನೇ ಪೊಲೀಸರ ಮೂಲಕ ಈ ಎನ್‍ಕೌಂಟರ್ ಆಟ ಆಡಿಸಿದ್ದಾನಾ? ಎಂಬ ಸಂಶಯವೂ ಕಾಡುತ್ತಿದೆ.
ಆ ಎನ್‍ಕೌಂಟರ್‍ನ ಮತ್ತೊಂದು ದುರಂತವೆಂದರೆ, ಸದಾಕಾಲ ಅಣ್ಣನ ಜೊತೆಗೇ ಇರುತ್ತಿದ್ದ ಗಂಗಾಧರ ಚಡಚಣ ಅವತ್ತಿನಿಂದಲೇ ನಾಪತ್ತೆಯಾದದ್ದು. ಆತ ಎಲ್ಲಿಹೋದ, ಏನು ಮಾಡುತ್ತಿದ್ದಾನೆ ಅನ್ನೋದು ಯಾರಿಗೂ ಗೊತ್ತಾಗಲಿಲ್ಲ. ಸಿಐಡಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಹನುಮಂತ ಪೂಜಾರಿ ಮತ್ತವನ ಪಾತಕ ಪಡೆಯನ್ನು ಹೆಡೆಮುರಿ ಕಟ್ಟಿತಂದು ಬಾಯಿಬಿಡಿಸಿದಾಗಲೇ ಗಂಗಾಧರ ಚಡಚಣ ಏನಾದ ಮತ್ತು ಪೊಲೀಸರು ಹೇಗೆಲ್ಲಾ ಸಾಥ್ ನೀಡಿದರು ಎಂಬ ಅಂಶ ಬೆಳಕಿಗೆ ಬಂದದ್ದು. ಆರೋಪಿ ಹನುಮಂತ ಪೂಜಾರಿ ಹೇಳುವಂತೆ ಧರ್ಮರಾಜ್ ಚಡಚಣನ ಎನ್‍ಕೌಂಟರ್ ಆದ ನಂತರ ಗಂಗಾಧರ ಚಡಚಣ ಪೊಲೀಸರ ಸುಪರ್ದಿಯಲ್ಲೇ ಇದ್ದನಂತೆ. ತಮ್ಮ ಒಬ್ಬ ವೈರಿಯನ್ನು ಪೊಲೀಸರೆ ಕೊಂದು ಮುಗಿಸಿದ್ದರಿಂದ ದುಷ್ಮನ್ ಪಾಳೆಯಕ್ಕೆ ತಮ್ಮ ಸೇಡು ತೀರಿದ ವಿಕೃತ ತೃಪ್ತಿ ತಣಿದಿರಲಿಲ್ಲ. ತಾವೇ ತಮ್ಮ ಕೈಯಾರೆ ಅವರನ್ನು ಕೊಂಡು ಸೇಡು ತೀರಿಸಿಕೊಳ್ಳಬೇಕೆಂಬುದು ಅವರ ಇಂಗಿತವಾಗಿತ್ತು. ಅದರಲ್ಲು ಪಂಚಾಯ್ತಿ ಆಫೀಸ್ ಎದುರಲ್ಲೇ ಗುಂಡಿನ ದಾಳಿಗೆ ಗುರಿಯಾಗಿದ್ದ ಮಹಾದೇವ ಸಾಹುಕಾರನ ಬಲಗೈ ಭಂಟ ಹನುಮಂತ ಪೂಜಾರಿಗೆ ಕಡೇ ಪಕ್ಷ ಗಂಗಾಧರ ಚಡಚಣನನ್ನಾದರು ತಾವೇ ಕೊಂದು ಕೇಕೆ ಹಾಕಬೇಕೆನ್ನುವ ಉಮೇದಿ ಶುರುವಾಗಿತ್ತು.
ಅದ್ಯಾರ್ಯಾರು ಡೀಲ್ ಕುದುರಿಸಿದರೊ, ಅದೇನು ವ್ಯವಹಾರ ನಡೆಯಿತೊ ಗೊತ್ತಿಲ್ಲ, ಅದೊಮ್ಮೆ ಇದ್ದಕ್ಕಿದ್ದಂತೆ ಪಿಎಸೈ ಗೋಪಾಲ ಹಳ್ಳೂರ ತನ್ನ ಸ್ವಂತ ಡಸ್ಟರ್ ವಾಹನದಲ್ಲಿ ಸಿದ್ದಾರೂಢ ರೂಗಿ, ಚಂದ್ರಶೇಖರ ಜಾಧವ ಹಾಗೂ ಗೆದ್ದಪ್ಪ ನಾಯ್ಕೊಂಡಿ ಎಂಬ ಮೂವರು ಪೇದೆಗಳನ್ನು ಜೊತೆಮಾಡಿ ಗಂಗಾಧರನನ್ನು ಕಳುಹಿಸಿಕೊಟ್ಟಿದ್ದಾರೆ. ಕೊಂಕಣಗಾಂವ ಹತ್ತಿರದ ಅಂಬಾ ಭವಾನಿ ದೇವಸ್ಥಾನದ ಬಳಿ ಸ್ಕಾರ್ಪಿಯೋ ವಾಹನದಲ್ಲಿ ಮೊದಲೇ ಕಾದು ಕುಳಿತಿದ್ದ ಹಂತಕರಾದ ಹನುಮಂತ ಪೂಜಾರಿ, ಸಿದ್ದಗೊಂಡ ತಿಕ್ಕೊಂಡಿ ಮೊದಲಾದವರು ಅವರನ್ನು ಎದುರುಗೊಂಡಿದ್ದಾರೆ. ಮಾರಕಾಸ್ತ್ರಗಳಿಂದ ಸಜ್ಜಾಗಿದ್ದ ಅವರನ್ನು ಕಾಣುತ್ತಿದ್ದಂತೆಯೇ ಗಂಗಾಧರ ಚೀರಾಡಲು ಶುರುಮಾಡಿದ್ದಾನೆ. ಆಗ ಆ ಪೇದೆಗಳು ಅಂದಿನ ಸಿಪಿಐ ಎಂ.ಬಿ.ಅಸೋಡೆಗೆ ಕರೆ ಮಾಡಿದ್ದಾರೆ. ಅತ್ತಕಡೆಯಿಂದ ಬಂದ ಆದೇಶದಂತೆ ಗಂಗಾಧರನನ್ನು ಹನುಮಂತ ಪೂಜಾರಿ ಟೀಮಿನ ಕೈಗೆ ಒಪ್ಪಿಸಿದ ಪೇದೆಗಳು ಒಂದು ವಿಕೃತ ಹತ್ಯೆಗೆ ಮುನ್ನುಡಿ ಬರೆದಿದ್ದರು.
ಅಲ್ಲಿಂದಾಚೆಗೆ ನಡೆದಿರೋದೆಲ್ಲ ರಕ್ತಪಿಪಾಸು ಕಥನ. ಗಂಗಾಧರನನ್ನು ಪಕ್ಕದಲ್ಲೇ ಇದ್ದ ತೊಗರಿ ಹೊಲದ ನಟ್ಟನಡುವೆ ಕೆಡವಿಕೊಂಡ ಹಂತಕರು ಅವನ ಸುತ್ತ ರಣೋತ್ಸಾಹದ ಕೇಕೆ ಹಾಕಿ, ಚಿತ್ರವಿಚಿತ್ರವಾಗಿ ಹಿಂಸಿಸಿದ್ದರು. ಆತ ಜೀವಂತವಿರುವಂತೆಯೇ ಅವನ ಒಂದೊಂದೇ ಅಂಗವನ್ನು ಕತ್ತರಿಸಿ ತೂರಾಡಿದ್ದರು. ಕೊನೆಗೆ ಅವನ ರುಂಡವನ್ನು ಕತ್ತರಿಸಿ ಕೊಳವೆ ಬಾಯಿಯಲ್ಲಿ ಹೂತ ಹಂತಕರು ದೇಹವನ್ನು ಭೀಮಾ ನದಿಯ ಹಿಂಗಣಿ ಬ್ಯಾರೇಜ್‍ನಲ್ಲಿ ಎಸೆದು ಕಣ್ಮರೆಯಾಗಿದ್ದರು. ಇದಿಷ್ಟು ಸ್ವತಃ ಹಂತಕರೇ ಒಪ್ಪಿಕೊಂಡಿರುವ ಸತ್ಯ. ಪಾತಕಿಗಳ ಈ ಕೃತ್ಯಕ್ಕಿಂತ ಇದಕ್ಕೆ ಪೊಲೀಸರು ಸಹಕರಿಸಿದ ವಿಚಾರ ಆಳುವ ಸರ್ಕಾರವನ್ನು ಸೀರಿಯಸ್ ಆಲೋಚನೆಗೆ ದೂಡಬೇಕಿದೆ. ಯಾಕೆಂದರೆ, ಈಗಾಗಲೇ ಹಲವು ಅಪನಂಬಿಕೆಗಳಿಗೆ ತುತ್ತಾಗಿರುವ ಪೊಲೀಸ್ ಇಲಾಖೆ ಮುಂದೊಂದು ದಿನ ಜನರ ವಿಶ್ವಾಸವನ್ನೇ ಸಂಪೂರ್ಣವಾಗಿ ಹಾಳುಗೆಡೆವಿಕೊಳ್ಳುವ ಅಪಾಯವನ್ನು ಈ ಪ್ರಕರಣ ಇಣುಕಿಸುತ್ತಿದೆ. ಹಾಗಂತ ಪೊಲೀಸರನ್ನು ಈ ಹಳದಿಗಣ್ಣಿನಲ್ಲೇ ನೋಡುವುದು ಸಹಾ ತಪ್ಪಾಗಿಬಿಡುತ್ತೆ. ಗೌರಿ ಲಂಕೇಶರ ಹತ್ಯೆಯಿರಬಹುದು, ದನದ ವ್ಯಾಪಾರಿ ಹುಸೇನಬ್ಬ ಹತ್ಯೆಯಿರಬಹುದು, ಮಂಗಳೂರು ಕೋಮುಗಲಭೆ ನಿಯಂತ್ರಣಕ್ಕೆ ತಂದಿದ್ದಿರಬಹುದು ಇಂಥಾ ಹತ್ತಾರು ಸೂಕ್ಷ್ಮ ಮತ್ತು ಗಂಭೀರ ಪ್ರಕರಣಗಳನ್ನು ತುಂಬಾ ನಾಜೂಕಾಗಿ, ಅಷ್ಟೇ ಕರ್ತವ್ಯಪ್ರಜ್ಞೆಯ ಬದ್ಧತೆಯಿಂದ ನಿಭಾಯಿಸಿದ್ದು ಇದೇ ಕರ್ನಾಟಕದ ಪೊಲೀಸರು. ಅಷ್ಟೇ ಯಾಕೆ ಪೊಲೀಸರೆ ಭಾಗಿಯಾಗಿರುವ ಈ ಪ್ರಕರಣ ಬೆಳಕಿಗೆ ಬರಲು ಸಾಧ್ಯವಾಗಿದ್ದು ಕೂಡಾ ಒಂದಷ್ಟು ದಕ್ಷ ಪೊಲೀಸ್ ಅಧಿಕಾರಿಗಳಿಂದ. ಇಡೀ ಪೊಲೀಸ್ ಇಲಾಖೆಯೇ ಭ್ರಷ್ಟಗೊಂಡಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಹಾಗೆ ನೋಡಿದರೆ, ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಪೊಲೀಸರು ಹೆಚ್ಚು ಡ್ಯೂಟಿ ಕಾನ್ಷಿಯಸ್ಸಾಗಿದ್ದಾರೆ. ಆದಾಗ್ಯೂ ಚೆಂದದ ಕಲಾಕೃತಿಯನ್ನು ಚಿಕ್ಕ ಮಸಿಯೊಂದು ನುಂಗಿಹಾಕುವಂತೆ ಇಂಥಾ ಪ್ರಕರಣಗಳು ಅಪಖ್ಯಾತಿ ಅಂಟಿಸಿಬಿಡುತ್ತವೆ. ಈಗಾಗಲೇ ತನಿಖೆಯನ್ನು ಸಿಐಡಿಗೆ ಒಪ್ಪಿಸಿದ್ದರಿಂದ ಐಜಿಪಿ ಅಲೋಕ್ ಕುಮಾರ್ ಸಿಟ್ಟಾಗಿ ರಜೆ ಮೇಲೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಇಂತಹ ಆಂತರಿಕ ಭಿನ್ನತೆಗಳನ್ನು ಬದಿಗಿರಿಸಿ, ಸರ್ಕಾರ ಎಷ್ಟು ನಿಷ್ಠುರವಾಗಿ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸುತ್ತದೆ ಎನ್ನುವುದರ ಮೇಲೆ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯ ಭವಿಷ್ಯ ನಿಂತಿದೆ…..

ಬಡತನದ ಭೀಮೆಯ ಒಡಲಿಗೆ ಹಂತಕ ಹಣೆಪಟ್ಟಿ ಯಾಕೆ?

ಭೀಮಾ ತೀರದ ಹಂತಕರು, ಭೀಮಾ ತೀರದಲ್ಲಿ ಕೊಲೆ, ಭೀಮಾ ತೀರದಲ್ಲಿ ನೆತ್ತರು….. ಎಂಬ ಶೀರ್ಷಿಕೆಯಡಿ ಕಳೆದ ದಶಕದಿಂದ ಹಲವು ಪುಸ್ತಕ, ಬರಹಗಳು ಯಥೇಚ್ಛವಾಗಿ ಪ್ರಕಟವಾಗಿವೆ. `ಭೀಮಾ ತೀರದಲ್ಲಿ’ ಎಂಬ ರಕ್ತಸಿಕ್ತ ಚಲನಚಿತ್ರವೂ ಬಂದು ಹೋಯ್ತು. ಒಟ್ಟಿನಲ್ಲಿ ಭೀಮಾ ನದಿ ತೀರದಲ್ಲಿ ಕೊಲೆಗಳು ಸಾಮಾನ್ಯ ಎಂಬ ಭ್ರಮೆಯನ್ನು ಈ ಎಲ್ಲ ಕಥನಗಳು ಹುಟ್ಟುಹಾಕಿವೆ. ಆದರೆ ಭೀಮಾ ನದಿಗೆ ಬೇರೆಯದೇ ಚರಿತ್ರೆ ಇದೆ. ಮಹಾರಾಷ್ಟ್ರದ ಪುಣೆ ಜಿಲ್ಲೆ ಸಹ್ಯಾದ್ರಿಯ ತಪ್ಪಲಲ್ಲಿ ಹುಟ್ಟುವ ಭೀಮೆ ತಾನು ಹರಿದೆಡೆಯಲ್ಲ ಹಸಿರನ್ನು ಸಂಚಯಿಸಿದ್ದಾಳೆ. ಪುಣೆಯಿಂದ ಹರಿದು ಕರ್ನಾಟಕ ಪ್ರವೇಶಿಸುವ ಮೊದಲೇ ಭೀಮಾ ನದಿಗೆ ಒಟ್ಟು 22 ಆಣೆಕಟ್ಟುಗಳನ್ನು ಮಹಾರಾಷ್ಟ್ರದಲ್ಲಿ ಕಟ್ಟಲಾಗಿದೆ. ಒಟ್ಟು 70,614 ಚದುರ ಮೈಲಿ ನದಿ ಪಾತ್ರದಲ್ಲಿ 12.33 ಮಿಲಿಯನ್ ಜನ ಬದುಕುತ್ತಿದ್ದಾರೆ. ಮಹಾರಾಷ್ಟ್ರದ ಭೀಮಾಶಂಕರ, ಪಂಡರಾಪುರ, ಕರ್ನಾಟಕದ ಗಣಗಾಪುರ, ಘತ್ತರಗಿಯಂತಹ ಆಧ್ಯಾತ್ಮಿಕ ಕೇಂದ್ರಗಳನ್ನು ಭೀಮೆ ತನ್ನ ಒಡಲೊಳಗಿಟ್ಟುಕೊಂಡಿದ್ದಾಳೆ. ಪಶ್ಚಿಮ ಘಟ್ಟಗಳನ್ನು ದಾಟಿದ ನಂತರ ಭೀಮಾ ನದಿ ಹರಿಯುವುದು ಹೆಚ್ಚು ಒಣ ಬಯಲು ಪ್ರದೇಶಗಳಲ್ಲಿ. ಸದಾ ಅನಾವೃಷ್ಟಿ ಮತ್ತು ಬರಗಳಿಂದ ತತ್ತರಿಸುವ ಈ ಭಾಗದ ಜನರಿಗೆ ಭೀಮಾ ನಿಜ ಅರ್ಥದಲ್ಲಿ ಜೀವನದಿಯೇ ಆಗಿದೆ. ಮಹಾರಾಷ್ಟ್ರದ ಗಡಿದಾಟಿ ಕರ್ನಾಟಕಕ್ಕೆ ಬರುವ ಹೊತ್ತಿಗೆ ಭೀಮಾ ನದಿಯ ಪಾತ್ರವೇ ಚಿಕ್ಕದಾಗುತ್ತದೆ. ಮಳೆಗಾಲದಲ್ಲಿ ಉಕ್ಕಿ ಹರಿವ ಭೀಮೆ ಬಿಜಾಪುರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳ ಜನರ ಬದುಕನ್ನು ಹಸನಾಗಿಸಿದ್ದಾಳೆ. ಉತ್ತರ ಕರ್ನಾಟಕದ ಜನಬದುಕಿನ ಅಪಾರ ವೈರುಧ್ಯಗಳನ್ನು ಸಂಕೇತಿಸುವ ಭೀಮಾ ನದಿ ಬೇಸಿಗೆಯಲ್ಲಿ ಒಣಗಿಹೋಗುತ್ತದೆ.
ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದರೆ ಇಲ್ಲಿ ಸಾಮಾಜಿಕ ಏರುಪೇರುಗಳು ವಿಪರೀತ. ಶೋಷಣೆ ಇಲ್ಲಿ ಒಪ್ಪಿತ ಮೌಲ್ಯವೆಂಬಂತೆ ಆಚರಣೆಯಲ್ಲಿದೆ. ಇಲ್ಲಿನ ಊಳಿಗಮಾನ್ಯ ಶಕ್ತಿಗಳು ತಮ್ಮ ಅಸ್ತಿತ್ವಕ್ಕಾಗಿ ಕದನಕ್ಕಿಳಿಯುವುದು ಸಾಮಾನ್ಯ ಸಂಗತಿ. ಈ ಕದನ ಊಳಿಗಮಾನ್ಯ ದೊರೆಗಳ ನಡುವಿನ ಬಿಕ್ಕಟ್ಟಿನ ಕಾರಣಕ್ಕಾಗಿ ಅಸ್ತಿತ್ವದಲ್ಲಿದೆಯೇ ಹೊರತು ವರ್ಗಹೋರಾಟದ ಕಾರಣಕ್ಕಾಗಿ ಅಲ್ಲ. ಈ ಕದನದಲ್ಲಿ ಬಳಕೆಯಾಗುತ್ತಿರು ವವರು ಮತ್ತು ಕೊಲೆಗೀಡಾದವರು ಸ್ಥಳೀಯ ದುಡಿವ ವರ್ಗದ ಜನ. ದೇವಣಗಾಂವ್, ಇಂಡಿ ಮತ್ತು ಗಣಗಾಪುರ ಭಾಗದಲ್ಲಿ ಈ ರಕ್ತಸಿಕ್ತ ಪ್ರಕರಣಗಳು ನಡೆದಿವೆ. ಅಲ್ಲಿ ನಡೆದ ಈ ರಕ್ತಸಿಕ್ತ ಪ್ರಕರಣಗಳು ಭೀಮಾ ನದಿ ತೀರದುದ್ದಕ್ಕೂ ನಡೆದಿಲ್ಲ. ತಾನು ಹರಿದೆಡೆಯಲ್ಲ ಜೀವಜಲ ಚಿಮ್ಮಿಸಿ ಹಸಿರು ತೋರಣ ಕಟ್ಟುವ ಭೀಮೆ ಜನರ ಬದುಕನ್ನೂ ಹಸನಾಗಿಸಿದ್ದಾಳೆ. ನೂರಾರು ವರ್ಷಗಳಿಂದ ಇಲ್ಲಿ ಬದುಕಿ ಬಾಳಿದ ಈ ಮುಗ್ಧ ಜನ ಯಾರದೋ ಅಸ್ತಿತ್ವಕ್ಕೆ ಬಲಿಯಾದಾಗ ಅವರನ್ನು `ಹಂತಕರು’ ಎಂದು ಕರೆಯಲಾಗುತ್ತದೆ. ವೈಭವೋಪೇತ ಶ್ರೀಮಂತಿಕೆ ಮತ್ತು ಅಸಹನೀಯ ಬಡತನಗಳಿರುವ ಈ ಪ್ರದೇಶದಲ್ಲಿ ಬದುಕುವ ದುಡಿವ ಜನ ಮುಗ್ಧರು, ಬದುಕಿಗಾಗಿ ವರ್ಷದ ಹಲವು ತಿಂಗಳುಗಳ ಕಾಲ ವಲಸೆ ಹೋಗುವ ಇವರು ಕರ್ನಾಟಕದ ವೈವಿಧ್ಯಮಯ ಸಂಸ್ಕøತಿಯ ವಾರಸುದಾರರೂ ಹೌದು. ಹಾಗಾಗಿ ಶತಮಾನಗಳಿಂದ ಹರಿವ ಒಂದು ನದಿಯ ಪಾತ್ರವನ್ನು, ಆ ಪಾತ್ರದಲ್ಲಿ ಬದುಕುವ ಜನರನ್ನು ಹೀಗೆ ನಕಾರಾತ್ಮಕವಾಗಿ ನೋಡುವುದು ಅಮಾನವೀಯ.

– ಗುರು/ಸುನೀಲ್

3 thoughts on “ಗಂಗಾಧರ ಚಡಚಣ ಹತ್ಯಾಕಾಂಡ : ಭೀಮಾ ತಿರದಲ್ಲಿ ಪೊಲೀಸರೇ ಪಾತಕಿಗಳು….!

Leave a Reply

Your email address will not be published.

Social Media Auto Publish Powered By : XYZScripts.com