EVM controversy : “ ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡ ಅಲ್ಲಾಡಿಸದಿರಿ……”

ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸಾಮಾನ್ಯವಾದುದಲ್ಲ. ಪ್ರಪಂಚದಲ್ಲೇ ಇಂದಿಗೂ ತನ್ನ ಶ್ರೇಷ್ಠತೆಯನ್ನ ಉಳಿಸಿಕೊಂಡಿದೆ. ನಮ್ಮ ಸಂವಿಧಾನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆಯನ್ನ ಕುಂದುಂಟಾಗದಂತೆ ನೋಡಿಕೊಳ್ಳುತ್ತಿದೆ. ನಮ್ಮ ಸಂವಿಧಾನಿಕ ಪೀಠಗಳು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಸಣ್ಣ ಪುಟ್ಟ ಕೊರತೆಗಳ ನಡುವೆಯೂ ತನ್ನ ಹದ್ದುಮೀರಿ ನಡೆದುಕೊಂಡ ಉದಾಹರಣೆಗಳಿಲ್ಲ. ಆದರೆ ಇತ್ತೀಚೆಗೆ ಇಡೀ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡ ಅಲ್ಲಾಡುತ್ತಿದೆಯಾ…? ಅಥವಾ ಅಲ್ಲಾಡಿಸುವ ಪ್ರಯತ್ನವಾಗುತ್ತಿದೆಯಾ…? ಎಂಬ ಅರ್ಥವಾಗದ ಗೊಂದಲ ಎಲ್ಲರನ್ನೂ ಕಾಡುತ್ತಿದೆ. ಅದೇ…. ” ಇ.ವಿ.ಎಂ. ” ಮತದಾನ ಯಂತ್ರ. ಈ ಮತದಾನ ಯಂತ್ರದ ಮೇಲೆ ಜನ ಅನುಮಾನಗೊಳ್ಳುತ್ತಿದ್ದಾರೆ. ಈ ಅನುಮಾನಕ್ಕೆ ಬಲವಾದ ಕಾರಣವೂ ಇದೆ. ಮೊದಲನೆಯದಾಗಿಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಅನುಮಾನಾಸ್ಪದ ನಡೆಗಳು. ಅನುಮನಾಸ್ಪದ ಹೇಳಿಕೆಗಳು…. ಚುನಾವಣೆ ನಡೆಯುವ ಮೊದಲೇ ನಾವು ಈ ರಾಜ್ಯದಲ್ಲಿ ಗೆದ್ದರೆ, ವಿರೋಧ ಪಕ್ಷಗಳು ನಾವು ಇ.ವಿ.ಎಂ. ಬಳಸಿಕೊಂಡು ಗೆದ್ದಿದ್ದೇವೆ ಎಂದು ಆರೋಪಿಸುತ್ತಾರೆ ಎಂಬ ಪ್ರಧಾನಿಯವರ ಹೇಳಿಕೆ.

ಅದಕ್ಕೆ ಸರಿಯಾಗಿ….. ಕರ್ನಾಟಕದ ಚುನಾವಣೆಯಲ್ಲಿ ನಡೆದ ಹಲವಾರು ಅನುಮಾನಾಸ್ಪದ ಘಟನೆಗಳು :-

ಪಕರಣ 1 :- ಮೈಸೂರಿನಲ್ಲಿ ಕೆಲವೊಂದಷ್ಟು ಅಭ್ಯರ್ಥಿಗಳನ್ನ ಸಂಪರ್ಕಿಸಿದ ಒಂದು ತಂಡ ಚುನಾವಣೆಯಲ್ಲಿ ಇ.ವಿ.ಎಂ. ಮಿಷನ್ ಬಳಸಿಕೊಂಡು ನಿಮ್ಮನ್ನ ಗೆಲ್ಲಿಸುತ್ತೇವೆ ಅದಕ್ಕೆ ಇಷ್ಟು ಕೋಟಿ ನೀವು ಕೊಡಬೇಕಾಗುತ್ತದೆ ಎಂದು ವ್ಯಾಪಾರ ಕುದುರಿಸಲು ಹೊರಟ ತಂಡ ಆ ನಂತರ ಪ್ರಕರಣ ದಾಖಲಾದ ಕೂಡಲೆ ಮಾಧ್ಯಮಗಳಲ್ಲಿ ಸುದ್ದಿಯಾದ ತಕ್ಷಣ, ತಂಡ ಕಣ್ಮರೆಯಾಗುತ್ತದೆ. ಇಂದಿಗೂ ಆರೋಪಿಗಳ ಪತ್ತೆಯಾಗಿಲ್ಲ. ಆರೋಪಿಗಳ ಪತ್ತೆಯ ಪ್ರಯತ್ನವೂ ನಡೆದಿರುವಂತೆ ಕಂಡು ಬರುತ್ತಿಲ್ಲ.

ಪ್ರಕರಣ 2:- ಬಬುಲೇಶ್ವರ ಕ್ಷೇತ್ರದಲ್ಲಿ ಇ.ವಿ.ಎಂ. ಮಿಷನ್ ನನ್ನ ಸೋಲಿಗೆ ಕಾರಣ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಪ್ರತಿಭಟಿಸುತ್ತಾರೆ. ಅದಕ್ಕೆ ಸರಿಯಾಗಿ ಬಬುಲೇಶ್ವರ ಕ್ಷೇತ್ರದಲ್ಲಿ ನಿಗೂಢ ಪ್ರದೇಶದಲ್ಲಿ ಜೀವಂತ ಇ.ವಿ.ಎಂ. ಮಿಷನ್‍ಗಳು ಪತ್ತೆಯಾಗುತ್ತವೆ !. ಪ್ರಕರಣವೂ ದಾಖಲಾಗುತ್ತದೆ!. ಚುನಾವಣಾ ಆಯೋಗ ತನಿಖೆಯನ್ನು ಆರಂಭಿಸುತ್ತದೆ. ಈ ಮಿಷನ್‍ಗಳು ತಮಗೆ ಸೇರಿದಲ್ಲ ಎಂದು ಪ್ರಾಥಮಿಕ ಹೇಳಿಕೆಯನ್ನು ನೀಡುತ್ತದೆ. ಆದರೆ, ಆ ನಂತರ ಈ ಮಿಷನ್‍ಗಳ ಕಥೆ ಏನು…? ಈ ಮಿಷನ್‍ಗಳು ಎಲ್ಲಿಂದ ಬಂದವು….? ಇದರ ಹಿನ್ನೆಲೆ ಏನು…? ಇಂದಿಗೂ ಪತ್ತೆಯಾಗಿಲ್ಲ.


ಪ್ರಕರಣ 3:- ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಒಂದು ಬೂತ್‍ನಲ್ಲಿ ಚಲಾಯಿಸಿದ ಮತಗಳೆಲ್ಲವೂ ಬಿಜೆಪಿಗೆ ಹೋಗುತ್ತಿದೆ ಎಂಬುದನ್ನ ಮತದಾರರು ಪತ್ತೆಹಚ್ಚಿ ಚುನಾವಣಾಧಿಕಾರಿಯ ಗಮನಕ್ಕೆ ತಂದಾಗ ಆ ಬೂತ್‍ನ ಮತದಾನವನ್ನ ಸ್ಥಗಿತಗೊಳಿಸಿ ಮರು ಮತದಾನ ನಡೆಸಲಾಯಿತು.

ಪ್ರಕರಣ 4:- ದಾರವಾಡ ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ ಮತದಾನವಾಗಿರುವ ಮತಗಳಿಗಿಂತ ಅಭ್ಯರ್ಥಿಗಳು ಪಡೆದ ಮತ ಹೆಚ್ಚು. ಕೊನೆಗೆ ಚುನಾವಣಾಧಿಕಾರಿ ಫಲಿತಾಂಶವನ್ನ ತಡೆಯಿಡಿದು ರೀಕೌಂಟಿಂಗ್ ನಡೆಸಿದ ನಂತರ ಫಲಿತಾಂಶವನ್ನ ಪ್ರಕಟಿಸಿದರು.

ಈ ಎಲ್ಲಾ ಪ್ರಕರಣಗಳು ಇ.ವಿ.ಎಂ. ಮಿಷನ್ ಬಗ್ಗೆ ಜನ ಅನುಮಾನ ವ್ಯಕ್ತಪಡಿಸುತ್ತಿರುವುದಕ್ಕೆ ಬಲವಾದ ಕಾರಣ. ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮದು ಅತ್ಯಂತ ಪ್ರಬಲ ವ್ಯವಸ್ಥೆ. ಇಂತಹ ವ್ಯವಸ್ಥೆಯನ್ನ ಹೊಂದಿರುವ ಭಾರತ, ಗೊಂದಲಗಳ ನಡುವೆಯೂ ಇ.ವಿ.ಎಂ. ಮಿಷನ್‍ಗೆ ಜೋತು ಬೀಳುವ ಅಗತ್ಯವೇನಾದರು ಏನಿದೆ….? ದಕ್ಷಿಣ ಆಫ್ರೀಕಾದಂತ ರಾಷ್ಟ್ರವೇ ಚುನಾವಣೆ ನಡೆಸುವುದಕ್ಕೆ ಭಾರತದ ಇ.ವಿ.ಎಂ. ಮಿಷನ್‍ಗಳನ್ನ ತಿರಸ್ಕರಿಸಿದೆ. ಇನ್ನೂ ಪ್ರಪಂಚದ ಮುಂದುವರೆದ ರಾಷ್ಟ್ರ್ರಗಳೆಲ್ಲಾ ಇ.ವಿ.ಎಂ. ಮಿಷನ್‍ಗಳನ್ನ ತಿರಸ್ಕರಿಸಿ, ಬ್ಯಾಲೆಟ್ ಪೇಪರ್‍ಗಳ ಮೂಲಕ ಚುನಾವಣೆ ನಡೆಸುತ್ತಿದೆ. ಆದರೂ ಭಾರತೀಯ ಚುನಾವಣಾ ವ್ಯವಸ್ಥೆ ಅನುಮಾನಾಸ್ಪದ ಇ.ವಿ.ಎಂ. ಮಿಷನ್‍ಗಳಿಂದ ಹೊರ ಬರಲು ತಿರಸ್ಕರಿಸುತ್ತಿರುವುದು ಪ್ರಜಾಪ್ರಭುತ್ವದ ಅಪಾಯಕಾರಿ ಬೆಳವಣಿಗೆ.

ಉತ್ತರ ಪ್ರದೇಶದಲ್ಲಿ ಇ.ವಿ.ಎಂ. ಮಿಷನ್‍ಗಳ ಮೇಲೆ ಅನುಮಾನ ಬರಲು ಅಲ್ಲಿ ಇತ್ತೀಚೆಗೆ ನಡೆದ ನಗರ ಸಭೆ ಮತ್ತು ಪಂಚಾಯಿತಿ ಚುನಾವಣೆಗಳ ಫಲಿತಾಂಶ ಅನುಮಾನಗಳಿಗೆ ಪುಷ್ಠಿ ನೀಡುವಂತೆಯೆ ಇದೆ….. ನಗರ ಸಭೆ ಚುನಾವಣೆಯಲ್ಲಿ ಇ.ವಿ.ಎಂ. ಮಿಷನ್‍ಗಳು ಬಳಕೆ ಮಾಡಲಾಗಿದ್ದು, ಪಂಚಾಯಿತಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್‍ಗಳನ್ನು ಬಳಸಲಾಗಿತ್ತು. ನಗರ ಸಭೆಯ ಚುನಾವಣೆಯ ಫಲಿತಾಂಶ ಸಂಪೂರ್ಣವಾಗಿ ಬಿಜೆಪಿಗೆ ಪೂರಕವಾಗಿದಲ್ಲಿ ಪಂಚಾಯಿತಿ ಚುನಾವಣೆಗಳು ಬಿಜೆಪಿಯನ್ನು ನೆಲಕಚ್ಚಿಸಿತು.

ಒಟ್ಟಾರೆಯಾಗಿ ಭಾರತದ ಪ್ರಜಾಪ್ರಭುತ್ವದ ಬುನಾದಿ ಚುನಾವಣೆ…. ಅಂತಹ ಚುನಾವಣೆ ನಮ್ಮಗಳ ಸ್ವಯಂಕೃತ ಬೇಜವಬ್ದಾರಿತನದಿಂದಾಗಿ ಸಾಕಷ್ಟು ಕಲುಷಿತಗೊಂಡಿದೆ..! ಅದರ ನಡುವೆ ಚುನಾವಣೆ ನಡೆಸುವ ಪದ್ದತಿಯು ಅನುಮಾನಾಸ್ಪಾದವಾಗದಿರಲಿ. ಚುನಾವಣಾ ಆಯೋಗ, ಪ್ರಪಂಚವೇ ತಿರಸ್ಕರಿಸಿರುವ ಇ.ವಿ.ಎಂ. ಮಿಷನ್ ಬಗ್ಗೆ ಗಂಭೀರವಾದ ತೀರ್ಮಾನವನ್ನ ಕೈಗೊಂಡು ಜನತೆಯ ಅನುಮಾನವನ್ನ ಪರಿಹರಿಸುವುದು ಆಯೋಗದ ಕರ್ತವ್ಯ ಮತ್ತು ಜವಬ್ದಾರಿ.

Leave a Reply

Your email address will not be published.