ಹಾಸನ, ರಾಮನಗರಕ್ಕೆ ಸೀಮಿತವಾದ ಕುಲಬಾಂಧವರ ಬಜೆಟ್ – BJP ನಾಯಕರ ಆಕ್ರೋಶ…

ಮೈತ್ರಿ ಸರ್ಕಾರದ ಬಜೆಟ್ ಅನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದು, ಇದಕ್ಕೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ, ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್ , ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್ ಮಂಡನೆ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ, ಮಾತು ತಪ್ಪಿದ ಸಿಎಂ ರಿಂದ ರೈತ ಸಮುದಾಯಕ್ಕೆ ಅನ್ಯಾಯವಾಗಿದೆ. ಇದು ರಾಮನಗರ ಹಾಸನ, ಮಂಡ್ಯ ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಆಗಿದೆ. ಇದು ಅಣ್ಣತಮ್ಮಂದಿರ ಬಜೆಟ್.ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗ ಕಡೆಗಣಿಸಿದ್ದೀರಿ ಇದಕ್ಕಾಗಿ ನಿಮ್ಮನ್ನ ಸಿಎಂ ಮಾಡಿದ್ರಾ ಎಂದು ಕಿಡಿಕಾರಿದರು.

ರೈತರ ಸಾಲಮನ್ನಾ ಘೋಷಣೆ ಮಾಡಿದ್ದಾರೆ. ಆದರೆ 34 ಸಾವಿರ ಕೋಟಿ ಹಣ ಹೊಂದಾಣಿಕೆ ಬಗ್ಗೆ ಮಾಹಿತಿ ನೀಡಿಲ್ಲ. ನೇಕಾರರು ಮೀನುಗಾರರ ಸಾಲಮನ್ನಾ ಮಾಡಿಲ್ಲ. ಕೇವಲ ಸುಳ್ಳು ಭರವಸೆ ನೀಡಿದ್ದೀರಾ ಅನ್ನಭಾಗ್ಯ ಅಕ್ಕಿಯನ್ನು ಇಳಿಕೆ ಮಾಡಿದ್ದೀರಾ ಇದು ನಿಮ್ಮ ಸಾಧನೆಯಾ ಎಂದು ಪ್ರಶ್ನಿಸಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ನಂಜುಂಡಪ್ಪ ವರದಿ ಪ್ರಕಾರ ವಿಶೇಷ ಅನುದಾನ ಇಲ್ಲ. ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿದ್ದ ಸಿಎಂ. ರೈತರ ಸಾಲಮನ್ನಾ 2 ಲಕ್ಷದವರೆಗೆ ಮನ್ನಾ ಮಾಡಲಾಗಿದೆ, ಸಾಲಮನ್ನಾ ವಿಷಯದಲ್ಲಿ ಸಿಎಂ ಗೊಂದಲ ನಿರ್ಮಿಸಿದ್ದಾರೆ ಎಂದು ಹೇಳಿದರು.

ಗ್ರಾಮೀಣ ಅಭಿವೃದ್ಧಿ ಆಗದಂತೆ ಬಜೆಟ್​ ಮಾಡಿದ್ದೀರಿ. ಪೆಟ್ರೋಲ್, ಡೀಸೆಲ್ ದರ ಇಳಿಕೆ ಬಗ್ಗೆ ದೇಶದಲ್ಲೇ ಚರ್ಚೆಯಾಗ್ತಿದೆ. ಆದರೆ, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದ್ದೀರಿ. ಇದು ಬಹಳ ನಿರಾಶದಾಯಕ ಬಜೆಟ್​ ಆಗಿದೆ. ಅಲ್ಲದೆ ಈ ಬಜೆಟ್ ಕೇವಲ ರಾಮನಗರ ಹಾಸನ ಮೈಸೂರು ಭಾಗಕ್ಕೆ ಮಾತ್ರ ಸಿಮೀತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಶಾಸಕ ಆರ್. ಅಶೋಕ್ ಮಾತನಾಡಿ, ಇದು ಹಳೆ ಮೈಸೂರು ಭಾಗಕ್ಕೆ ಸೀಮಿತವಾದ ಬಜೆಟ್ ಕರಾವಳಿ, ಉತ್ತರ ಕರ್ನಾಟಕ ಕಡೆಗಣಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com