ಕೆರೆಗಳ ಪುನರುಜ್ಜೀವನ ಈ ಶತಮಾನದ ಸಂಕಲ್ಪ ಆಗಬೇಕು : ಅನಂತಕುಮಾರ್ ಹೆಗಡೆ

ಬೆಂಗಳೂರು, ಜುಲೈ 01, 2018: ರಾಜಧಾನಿ ಬೆಂಗಳೂರಿನ ಕೆರೆಗಳನ್ನು ಶತಮಾನದ ಹಿಂದೆ ಇದ್ದ ರೀತಿಯಲ್ಲಿ ಪುನರುಜ್ಜೀವನಗೊಳಿಸುವ ಬಗ್ಗೆ ಈ ಶತಮಾನದ ಸಂಕಲ್ಪ ಮಾಡಬೇಕೆಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಅನಂತಕುಮಾರ್ ಕರೆ ನೀಡಿದ್ದಾರೆ.
ಭಾನುವಾರ ಅದಮ್ಯ ಚೇತನ ಸಂಸ್ಥೆ ಬಸವನಗುಡಿಯ ಕೆಂಪಾಂಬುಧಿ ಕೆರೆ ಆವರಣದಲ್ಲಿ ಏರ್ಪಡಿಸಿದ್ದ 131 ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ನಗರದ ಕೆರೆಗಳ ಗತವೈಭವವನ್ನು ವಿವರಿಸಿ, ಈಗಿನ ಸ್ಥಿತಿಯನ್ನು ಕಂಡು ವಿಷಾದ ವ್ಯಕ್ತಪಡಿಸಿದರು.
ಈ ಹಿಂದೆ ಕೆಂಪಾಂಬುಧಿ ಕೆರೆಯನ್ನು ನೋಡಿದಾಗ ಕಣ್ಣಲ್ಲಿ ನೀರು ಬರುತ್ತಿತ್ತು. ಈ ಕೆರೆ ನಾಶವಾಗುತ್ತದೆ ಎಂದು ಎಲ್ಲಾ ಪತ್ರಿಕೆಗಳು ಬರೆದಿದ್ದವು. ನಾಡಪ್ರಭು ಕೆಂಪೇಗೌಡರು ಕಟ್ಟಿಸಿದ ಈ ಕೆರೆಗೆ ಎಂತಹ ದುಸ್ಥಿತಿ ಬಂದಿತ್ತು. ಆದರೀಗ ಕೆಂಪಾಂಬುಧಿ ಸೇರಿದಂತೆ ನೂರಾರು ಕೆರೆಗಳನ್ನು ಪುನರುಜ್ಜೀವನ ಮಾಡಲು ಸಂಕಲ್ಪ ಮಾಡಿದ್ದೆವು. ಆ ಪುನರುಜ್ಜೀವನ ಕಾರ್ಯಕ್ಕರ ಈಗ ಭಾರೀ ವೇಗ ಸಿಕ್ಕಿದೆ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಖಾತೆ ಹೊತ್ತಿರುವ ಉಪಮುಖ್ಯಮಂತ್ರಿ ಅವರು ನಗರದ ಅಭಿವೃದ್ಧಿ ಬಗ್ಗೆ ಭರವಸೆ ನೀಡಿದ್ದಾರೆ. ಅದರಂತೆ ಕೆಂಪಾಂಬುಧಿ ಕೆರೆಗೆ ಸೇರಿದ ಒತ್ತುವರಿಯಾಗಿರು 5 ಎಕರೆ ಪ್ರದೇಶವನ್ನು ಪುನಃ ವಾಪಸ್ ಪಡೆದು ಅದನ್ನು ಅಭಿವೃದ್ಧಿಪಡಿಸಬೇಕು. ಶತಮಾನದ ಹಿಂದೆ ರೀತಿಯಲ್ಲಿ ಇಲ್ಲಿ
ಜೊಂಡು, ಮೀನು ಇತ್ಯಾದಿ ಜಲಚರಗಳು, ಪಕ್ಷಿಗಳು, ಸುಂದರವಾದ ಗಿಡ ಮರ, ಪರಿಸರ ವಲಯ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

Related image
ಕಳೆದ ಒಂದು ಶತಮಾನದಿಂದ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದೇ ಸಾಧನೆ ಎನಿಸಿದೆ. ಆದ್ದರಿಂದ ನಗರದಲ್ಲಿರುವ ಕೆರೆಗಳ ಒತ್ತುವರಿಯನ್ನು ತೆರವು ಮಾಡಿ, ಮತ್ತೆ ಅವುಗಳ ಗತವೈಭವವನ್ನು ಮರುಕಳಿಸುವಂತೆ ಮಾಡುವುದು ನಮ್ಮ ಈ ಶತಮಾನದ ಸಾಧನೆ ಮತ್ತು ಗುರಿಯಾಗಬೇಕೆಂದು ಕರೆ ನೀಡಿದ ಅವರು, ಈ ನಿಟ್ಟಿನಲ್ಲಿ ಆಡಳಿತಗಾರರು, ರಾಜಕಾರಣಿಗಳು ಮತ್ತು ಸಾರ್ವಜನಿಕರು ನಿರ್ಧಾರ ಮತ್ತು ಸಂಕಲ್ಪ ಮಾಡಬೇಕೆಂದು ಕಿವಿಮಾತು ಹೇಳಿದರು.
ನಗರದ ಕೆರೆಗಳನ್ನು ಶಾಸಕರಾದ ಉದಯ ಗರುಡಾಚಾರ್, ರವಿಸುಬ್ರಮಣ್ಯ ಸೇರಿದಂತೆ ಕಾರ್ಪೊರೇಟರ್‍ಗಳು, ಬಿಬಿಎಂಪಿ ಯುನೈಟೆಡ್ ವೇಸ್ ಮತ್ತು ಇಂಡಸ್ ಹಬ್ರ್ಸ್ ಅವರಿಗೆ ವಿನಂತಿ ಮಾಡಿಕೊಳ್ಳುವುದೇನೆಂದರೆ ಕೆರೆಗಳ ಬಗ್ಗೆ ಸಂಶೋಧನೆ ಮಾಡಿ ಅದರಂತೆ ಅಭಿವೃದ್ಧಿ ಮಾಡಬೇಕು ಎಂದರು.

ಗುತ್ತಿಗೆದಾರರಿಗೆ ಜವಾಬ್ದಾರಿ ಬೇಡ
ಇದೇ ವೇಳೆ, ಕೆರೆಗಳ ನಗರವೆನಿಸಿದ್ದ ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿಯನ್ನು ಮತ್ತೆ ಕೈಗೊಳ್ಳಬೇಕಾಗಿದೆ. ಆದರೆ, ಈ ಕೆಲಸವನ್ನು ಗುತ್ತಿಗೆದಾರರಿಗೆ ಬಿಟ್ಟುಕೊಡಬಾರದು. ಏಕೆಂದರೆ, ಕೆರೆಗಳ ಸುತ್ತ ಕಾಂಕ್ರೀಟ್, ಸಿಮೆಂಟ್ ಹಾಕಿ, ಜಲ್ಲಿ ಸುರಿಯುವುದೇ ಅಭಿವೃದ್ಧಿ ಎಂದುಕೊಂಡಿದ್ದಾರೆ. ಇವುಗಳ ಮಧ್ಯೆ, ಕೆರೆ ಅಭಿವೃದ್ಧಿಯನ್ನೇ ಮರೆತುಬಿಡುತ್ತಾರೆ ಎಂದರು.
ಕೆರೆ ಅಭಿವೃದ್ಧಿ ಎಂದರೆ, ಕೆರೆ ಸುತ್ತ ಕಾಂಕ್ರೀಟ್ ಪಾತ್ರೆ ನಿರ್ಮಿಸಿ, ಮಧ್ಯದಲ್ಲಿ ಮೂರ್ನಾಲ್ಕು ಫೌಂಟೇನ್‍ಗಳನ್ನು ನಿರ್ಮಿಸುವುದೇ ಕೆರೆಗಳ ಅಭಿವೃದ್ಧಿ ಎಂದು ಆಧುನಿಕ ನಗರ ವಿನ್ಯಾಸಕಾರರು ಯೋಚಿಸುತ್ತಿದ್ದಾರೆ. ಆದರೆ, ಕೆರೆಗಳ ಅಭಿವೃದ್ಧಿಯೆಂದರೆ, ನಮಗೆ ಜೀವಂತ ಕೆರೆಗಳು ಬೇಕಾಗಿದೆ. ಉಸಿರಾಡುವ ಕೆರೆಗಳು ಬೇಕಾಗಿವೆ. ಮಳೆ ನೀರಿರಲಿ ಅಥವಾ ಬೇರೆ ಯಾವುದೇ ನೀರಿರಲಿ. ಅದನ್ನು ಶುದ್ಧ ಮಾಡಿ ಕೆರೆಗೆ ಬಿಡುವಂತಹ ಜೊಂಡಿನ ಸಸ್ಯಪ್ರಬೇಧದಂತಹ ಸಸಿಗಳು ಇರಬೇಕು, ಜಲಚರಗಳು, ಪ್ರಾಣಿ ಪಕ್ಷಿಗಳ ಕಲರವ ಇರಬೇಕು. ಕೆರೆಯ ಸುತ್ತ ಉತ್ತಮ ಪರಿಸರ ಇರಬೇಕು. ಇದರ ಮೂಲಕ ಇಲ್ಲಿಗೆ ಬರುವ ಅಸಂಖ್ಯಾತ ಜನರಿಗೆ ಆಮ್ಲಜನಕ ಸಿಗುವಂತಾಗಬೇಕು ಎಂದು ಅವರು ಹೇಳಿದರು.
ಹೀಗೆ ಮಾಡುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ಬೆಳೆಸಿ ಉಳಿಸಿ ಹೋದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

Leave a Reply

Your email address will not be published.

Social Media Auto Publish Powered By : XYZScripts.com