Archery : ವಿಶ್ವಕಪ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ದೀಪಿಕಾ ಕುಮಾರಿ
ಭಾರತದ ಖ್ಯಾತ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮಹಿಳೆಯರ ರಿಕರ್ವ್ ವಿಭಾಗದ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಅಮೇರಿಕದ ಸಾಲ್ಟ್ ಲೇಕ್ ನಗರದಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಪಂದ್ಯಾವಳಿಯಲ್ಲಿ 24 ವರ್ಷದ ದೀಪಿಕಾ ಕುಮಾರಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
ಸೋಮವಾರ ನಡೆದ ಮಹಿಳೆಯರ ರಿಕರ್ವ್ ವಿಭಾಗದ ಫೈನಲ್ ನಲ್ಲಿ ದೀಪಿಕಾ ಕುಮಾರಿ ಜರ್ಮನಿಯ ಮಿಶೆಲ್ ಕ್ರೊಪೆನ್ ಅವರ ವಿರುದ್ಧ 7-3 ಪಾಯಿಂಟ್ ಗಳಿಂದ ಜಯಿಸಿದರು. ಈ ಮೂಲಕ ಟರ್ಕಿಯ ಸ್ಯಾಮ್ಸನ್ ನಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್ ನಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ದೀಪಿಕಾ ಪಡೆದುಕೊಂಡಿದ್ದಾರೆ.
ದೀಪಿಕಾ ಕುಮಾರಿ ಇದಕ್ಕೂ ಮುಂಚೆ 2011, 2012, 2013 ಹಾಗೂ 2015ರಲ್ಲಿ ನಡೆದ ವಿಶ್ವಕಪ್ ಫೈನಲ್ ನಲ್ಲಿ ರಜತ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.