ಮೋದಿ ಸೋಲಿಸಲು ವಿರೋಧಿಗಳು ಒಂದಾದರೂ ನಮಗೆ ಭಯವಿಲ್ಲ, ನಮಗೆ ದೈವ ಹಾಗೂ ಜನ ಬಲವಿದೆ : BSY

ಬೆಂಗಳೂರು : ಪ್ರಧಾನಿ ಮೋದಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.  ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಕುರಿತು ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಅಂದಿನ ಮಿತಿಮೀರಿದ ಭ್ರಷ್ಟಾಚಾರದ ಯುಪಿಎ ಆಡಳಿತ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಇಂದು ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಆಡಳಿತ ನಡೆದಿರುವ ಬಗ್ಗೆಯೂ ತಿಳಿದಿದೆ. ದೇಶದ ಆರ್ಥಿಕತೆಯೂ ಸುಭದ್ರವಾಗಿದೆ. ದೇಶದ ಬೆಳವಣಿಗೆಯಿಂದ ಇಂದು ವಿಶ್ವದಲ್ಲೇ ನಮ್ಮ ರಾಷ್ಟ್ರ ಗೌರವಕ್ಕೆ ಪಾತ್ರವಾಗಿದೆ ಎಂದಿದ್ದಾರೆ.

ನರೇಂದ್ರ ಮೋದಿ ಅವರ ಅಧಿಕಾರ ತಡೆಯಲು ವಿರೋಧ ಪಕ್ಷಗಳು ಒಗ್ಗೂಡುತ್ತಿವೆ. ಪರಸ್ಪರ ಗಂಭೀರ ಆರೋಪ ಮಾಡಿಕೊಳ್ಳುವ ಪಕ್ಷಗಳೂ ಸಹ ಇಂದು ಮೋದಿ ಅವರ ಭಯದಿಂದಾಗಿ ಒಂದಾಗುತ್ತಿವೆ. ಆದರೆ ನಾವು ಅದಕ್ಕೆಲ್ಲ ಚಿಂತಿಸುವುದಿಲ್ಲ. ನಮಗೆ ಜನಬಲವಿದೆ. ಜತೆಗೆ ದೈವಬಲವೂ ಇದೆ ಎಂದಿದ್ದಾರೆ.

2014ರಲ್ಲಿ ಅಧಿಕಾರಕ್ಕೆ ಬಂದಾಗ ಬಿಜೆಪಿ ದೇಶದ ಆರು ರಾಜ್ಯಗಳಲ್ಲಿ ಆಡಳಿತ ನಡೆಸಿತ್ತು. ಇಂದು 20 ರಾಜ್ಯಗಳಲ್ಲಿ ಬಿಜೆಪಿ ತನ್ನ ಚುಕ್ಕಾಣಿ ಹಿಡಿದಿದೆ, ಇದು ಬಿಜೆಪಿ ಪರ ಜನರ ಒಲವು ತೋರಿಸುತ್ತಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇರುವ ಸರಕಾರ ನೀವು ಕಾಣಲಿದ್ದೀರಿ ಮತ್ತು ತಮ್ಮ ಅಧಿಕಾರವಧಿಯ ಸಾಧನೆಯ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಜನರು ಮತ್ತೊಮ್ಮೆ ಆಶಿರ್ವದಿಸಿ ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com