ಅನೈತಿಕ ಪೊಲೀಸ್ಗಿರಿ : ಮಹಿಳೆಯ ತಲೆ ಬೋಳಿಸಿ, ಯುವಕ-ಯುವತಿಗೆ ರಾತ್ರಿಯಿಡೀ ಥಳಿಸಿದ ಗ್ರಾಮಸ್ಥರು
ಗುವಾಹಟಿ : ಯುವಕ-ಯುವತಿಯರಿಬ್ಬರು ಅಕ್ರಮ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಪೊಲೀಸರು ರಾತ್ರಿಯಿಡೀ ಆ ಜೋಡಿಗೆ ಥಳಿಸಿದ್ದಾರೆ. ಅಸ್ಸಾಂನ ನಾಗಾನ್ ಜಿಲ್ಲೆಯ ಜುಮರ್ಮುರ್ ಪ್ರದೇಶದಲ್ಲಿ ಘಟನೆ ನಡೆದಿದೆ.
ಹಲ್ಲೆಗೊಳಗಾದ ಜೋಡಿ ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇರೊಬ್ಬರ ಜೊತೆ ಮದುವೆಯಾಗಿದ್ದ ಯುವಕ ಹಾಗೂ ಯುವತಿ ಇಬ್ಬರೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಯುವತಿ ತನ್ನ ಗಂಡನಿಗೆ ಹಾಗೂ ಯುವಕ ತನ್ನ ಹೆಂಡತಿಗೆ ಮೋಸ ಮಾಡಿದ್ದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಇಬ್ಬರನ್ನೂ ಥಳಿಸಿದ್ದಾರೆ. ಅಲ್ಲದೆ ಮಹಿಳೆಯ ತಲೆ ಬೋಳಿಸಲಾಗಿದ್ದು, ಬಟ್ಟೆ ಹರಿದು ರಂಪಾಟ ಮಾಡಿದ್ದಾರೆ. ರಾತ್ರಿಯಿಡೀ ಊರಿನವರು ಹಿಗ್ಗಾಮುಗ್ಗಾ ಥಳಿಸಿರುವ ಕಾರಣ ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪೊಲೀಸರು ಆಗಮಿಸಿದ ಕೂಡಲೆ ಗ್ರಾಮಸ್ಥರು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಸ್ಸಾಂ ತಿಂಗಳಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಈ ತಿಂಗಳು ನಡೆದ ಮೂರನೇ ಪ್ರಕರಣ ಇದಾಗಿದೆ.