ನಾನು, ಕುಮಾರಸ್ವಾಮಿ ಎಲ್ಲವನ್ನು ಮರೆತು ಈಗ ಸ್ನೇಹಿತರಾಗಿದ್ದೇವೆ : ಜಮೀರ್‌ ಅಹ್ಮದ್‌

ರಾಮನಗರ : ಬಿಜೆಪಿಯವರು ಈಗ ಹಜ್ ಭವನಕ್ಕೆ ಟಿಪ್ಪು ಹೆಸರನ್ನ ನಾಮಕರಣ ಮಾಡುವ ವಿಚಾರಕ್ಕೆ ವಿರೋಧ ಮಾಡುತ್ತಿದ್ದಾರೆ. ಆದರೆ ಕಳೆದ ಯಡಿಯೂರಪ್ಪನವರ ಸರ್ಕಾರದಲ್ಲಿ ಅವರೆಲ್ಲ ಟಿಪ್ಪು ಜಯಂತಿ ಆಚರಣೆ ಮಾಡಿಲ್ಲವ ಎಂದು ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಅನೇಕರು ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದಾರೆ. ನಾವು ಸರ್ಕಾರಕ್ಕೆ ಈ ಬಗ್ಗೆ ಪ್ರಪೋಜಲ್ ಕಳುಹಿಸಿದ್ದೇವೆ ಅಷ್ಟೇ, ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಕುರಿತು ಬಿಜೆಪಿಯವರ ಜೊತೆಗೂ ಚರ್ಚೆ ಮಾಡುತ್ತೇವೆ. ಅವರು ನಮಗೆ ಸಹಕಾರ ಕೊಡುತ್ತಾರೆಂದು ವಿಶ್ವಾಸವಿದೆ ಎಂದಿದ್ದಾರೆ.

ಇನ್ನು ನನಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಕಾಂಗ್ರೆಸ್ ನ ಹಿರಿಯ ಮುಸ್ಲಿಂ ನಾಯಕರಿಗೆ ಯಾವುದೇ ಅಸಮಾಧಾನವಿಲ್ಲ ಎಂದಿರುವ ಜಮೀರ್, ರೋಷನ್ ಬೇಗ್, ತನ್ವೀರ್ ಸೇಠ್ ಎಲ್ಲರು ಕಾಂಗ್ರೆಸ್ ನಲ್ಲಿ ಹಿರಿಯರು. ಹಲವು ಬಾರಿ ಸಚಿವರಾಗಿದ್ದಾರೆ, ನಾನು ಮೊದಲ ಬಾರಿ ಕಾಂಗ್ರೆಸ್ ನಿಂದ ಮಂತ್ರಿಯಾಗಿದ್ದೇನೆ. ಅವರಿಗೆ ಅವಕಾಶ ತಪ್ಪಿರುವುದಕ್ಕೆ ಬೇಸರವಿರಬಹುದು, ಆದರೆ ನನ್ನ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರ ಜೊತೆ ಕೆಲಸ ಮಾಡಬೇಕಿದೆ. ಹಾಗಾಗಿ ನಾವಿಬ್ಬರು ಎಲ್ಲವನ್ನು ಮರೆತು ಸ್ನೇಹಿತರಾಗಿದ್ದೇವೆ. ಬಾಲಕೃಷ್ಣ, ಚೆಲುವರಾಯಸ್ವಾಮಿ ಹಾಗೂ ನನ್ನೆಲ್ಲ ಸ್ನೇಹಿತರಿಗೂ ಒಳ್ಳೆಯದಾಗುತ್ತೆ, ಅದಕ್ಕೆ ಸಮಯ ಬರಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com