ಕಿಮ್ಸ್ ಆಸ್ಪತ್ರೆಯನ್ನು ಸ್ವಲ್ಪ ರಿಪೇರಿ ಮಾಡಬೇಕಿದೆ : ಸಚಿವ ಡಿ.ಕೆ. ಶಿವಕುಮಾರ್

ಹುಬ್ಬಳ್ಳಿ : ಉತ್ತರ ಕರ್ನಾಟಕ ಆರು ಜಿಲ್ಲೆಗಳ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಕಿಮ್ಸ್ ಆಸ್ಪತ್ರೆಯನ್ನು ಸ್ವಲ್ಪ ರಿಪೇರಿ ಮಾಡುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಕಿಮ್ಸ್ ನಿರ್ದೇಶಕರ ಕಚೇರಿಯಲ್ಲಿ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಡಿ ಕೆ ಶಿವಕುಮಾರ್‌ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳನ್ನು ಮಾತನಾಡಿಸಿದರು. ಇಲ್ಲಿನ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ ಹಲವಾರು ಆರೋಪಗಳು ಸಹ ಇವೆ. ನಮ್ಮದೇ ಉಪಕರಣಗಳಿದ್ದರೂ ಅವುಗಳನ್ನು ಬಂದ್ ಮಾಡಿ, ಖಾಸಗಿ ಪ್ರಯೋಗಾಲಯ, ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಕಳುಹಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಇದೆ. ಅಲ್ಲದೆ ಉಪಕರಣ, ಪೀಠೋಪಕರಣಗಳನ್ನು ಇಲ್ಲಿನ ಸಿಬ್ಬಂದಿಯೇ ಕಳವು ಮಾಡುತ್ತಿದ್ದಾರೆ ಎಂಬ ದೂರುಗಳೂ ಇವೆ. ಇದೆಲ್ಲವನ್ನೂ ಸರಿಪಡಿಸುತ್ತೇನೆ ಎಂದರು.

‘ಸಂಸ್ಥೆಯಲ್ಲಿ ಈಗಾಗಲೇ ಇರುವ ಎಲ್ಲ ಉಪಕರಣಗಳ ಪಟ್ಟಿ ಹಾಗೂ ವಿಡಿಯೋಗ್ರಫಿ ಮಾಡುವಂತೆ ಸೂಚನೆ ನೀಡಿದ್ದೇನೆ. ಇಲ್ಲಿ ಚಿಕಿತ್ಸೆ ಇಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ಎಷ್ಟು ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಪ್ರತಿ ತಿಂಗಳೂ ನೀಡುವಂತೆ ತಾಕೀತು ಮಾಡಿದ್ದೇನೆ. ಉಪಕರಣವೊಂದು ಕೆಟ್ಟರೆ ಆ ಬಗ್ಗೆ ಸಹ ಸಮಗ್ರ ಮಾಹಿತಿ ಪಡೆಯಲಾಗುವುದು. ಇವುಗಳ ಮೇಲೆ ನಿಗಾ ಇಡಲು ವ್ಯವಸ್ಥೆಯೊಂದನ್ನು ಸಹ ಜಾರಿಗೆ ತರಲಾಗುವುದು’ ಎಂದು ಅವರು ಹೇಳಿದರು.

‘ಪ್ರತಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ಸರ್ಕಾರ ಸುಮಾರು ₹10 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದೆ. ಹಾಗಿದ್ದ ಮೇಲೆ ಅವರೂ ಸಹ ಈ ಸಮಾಜಕ್ಕೆ ಏನಾದರೂ ನೀಡಲೇಬೇಕು. ಗ್ರಾಮೀಣ ಸೇವೆ ಮಾಡುವುದರಿಂದ ರಾಜ್ಯದ ಜನರಿಗೆ ಅನುಕೂಲವಾಗಲಿದೆ. ದಂಡ ಕಟ್ಟುವ ಆಯ್ಕೆ ನೀಡಿದ್ದು ಸಹ ಸರಿಯಲ್ಲ. ಈ ಬಗ್ಗೆ ಏನು ಮಾಡಬಹುದು ಎಂಬುದರ ಬಗ್ಗೆ ವರದಿಯೊಂದನ್ನು ತಯಾರಿಸಿ ನೀಡಿ’ ಎಂದು ಸೂಚನೆ ನೀಡಿದರು.

 

Leave a Reply

Your email address will not be published.