A Political trick : ಪ್ರಧಾನಿ ನರೇಂದ್ರ ಮೋದಿ ಹತ್ಯೆಯ ಸಂಚೆಂಬ ರಾಜಕಿಯ ತಂತ್ರ …

ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯವಾಗಿ ಅನುಕೂಲಕರವಾಗಿರುವ ಸಂದರ್ಭಗಳಲ್ಲಿ ಮಾತ್ರ ಮೋದಿ ಕೊಲೆಗೆ ಸಂಚು ಎಂಬ ನಾಟಕವು ಅನಾವರಣಗೊಳ್ಳುತ್ತದೆ.

ಸುಮಾರು ಆರು ತಿಂಗಳ ಕಾಲ ಅಳೆದು ಸುರಿದೂ ನೋಡಿದ ನಂತರ ಪುಣೆಯ ಪೊಲೀಸರು ಭೀಮ್-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ, ನಾಗ್‌ಪುರ ಮತ್ತು ದೆಹಲಿಗಳಲ್ಲಿ ಹಲವರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಸುಧೀರ್ ಧವಾಲೆ, ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್, ಮಹೇಶ್ ರಾವತ್ ಮತ್ತು ರೋನಾ ವಿಲ್ಸನ್- ಇವರೆಲ್ಲರೂ ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. ಪೊಲೀಸರ್ ಪ್ರಕಾರ ಭೀಮಾ-ಕೊರೆಗಾಂವ್‌ನ ದ್ವಿಶತಮಾನೋತ್ಸವ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಏಲ್ಗಾರ್ ಪರಿಷತ್ತೇ ಕಾರಣವಾಗಿದ್ದು ಬಂಧನಕ್ಕೊಳಗಾದ ಮೇಲಿನ ಐವರಿಗೂ ಅದರೊಡನೆ ಸಂಬಂಧವಿದ್ದ ಕಾರಣಕ್ಕೇ ಬಂಧಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಈ ಐವರು ನಗರ ಮಾವೋವಾದಿಗಳು ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲಲು ರೂಪಿಸಲಾದ ಸಂಚಿನ ಪಾಲುದಾರರೆಂದೂ ಪೊಲೀಸರು ಆರೋಪ ಹೊರಿಸಿದ್ದಾರೆ. ಈ ಬಂಧನಗಳು ನಡೆದ ಸಮಯ, ಬಂಧನಕ್ಕೆ ಗುರಿಯಾದವರು ಮತ್ತು ಅದರ ಮೂಲಕ ಸೃಷ್ಟಿಸಲಾಗಿರುವ ಕಥನಗಳನ್ನು ಗಮನಿಸಿದರೆ ಬೆಜೆಪಿಯು ಒಂದೇ ಕಲ್ಲಿನಿಂದ ಹಲವು ಹಕ್ಕಿಗಳನ್ನು ಹೊಡೆದುರುಳಿಸಲು ಮುಂದಾಗಿದೆಯೆಂದು ತೋರುತ್ತದೆ.

ಮಹಾರಾಷ್ಟ್ರದಲ್ಲೂ ಮತ್ತು ಕೇಂದ್ರದಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಜನಪ್ರಿಯತೆಗಳು ಹಿಂದೆಂದೂ ಇಲ್ಲದಷ್ಟು  ಕುಸಿತವನ್ನು ಕಾಣುತ್ತಿರುವ ಸಂದರ್ಭದಲ್ಲಿ ಈ ದೊಡ್ಡ ನಾಟಕವು ಅನಾವರಣಗೊಂಡಿದೆ. ಸಾರ್ವತ್ರಿಕ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವ ಈ ವರ್ಷಾರಂಭದಲ್ಲೇ ಭೀಮಾ-ಕೊರೆಗಾಂವ್‌ನಲ್ಲಿ ಹಿಂಸಾಚಾರಗಳು ನಡೆದು ಮಹಾರಾಷ್ಟ್ರದಾದ್ಯಂತ ಆಕ್ರೊಶವನ್ನು ಹಾಗೂ ದಲಿತ ಪ್ರತಿರೋಧವನ್ನು ಹುಟ್ಟುಹಾಕಿ ಆಡಳಿತರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತು. ಇದರೊಡನೆ ೨೦೦೫ರ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆಯ ದುರ್ಬಳಕೆಯನ್ನು ನಿಷೇಧಿಸುವ ಉದ್ದೇಶದಿಂದ ಆ ಕಾಯಿದೆಯಲ್ಲಿ ಹಲವು ವಿಧಿ ವಿಧಾನಗಳನ್ನು ತಿದ್ದುಪಡಿ ಮಾಡಬೇಕೆಂದು ಸುಪ್ರೀಂ ಕೋರ್ಟು ಮಾರ್ಚ್ ತಿಂಗಳಲ್ಲಿ ಆದೇಶವೊಂದನ್ನು ಹೊರಡಿಸಿತು. ಇದರ ವಿರುದ್ಧ ದೇಶಾದ್ಯಂತ ದೊಡ್ಡ ಪ್ರತಿಭಟನೆಗಳು ನಡೆದು ಬಿಜೆಪಿಯಿಂದ ದಲಿತರು ಸಂಪೂರ್ಣವಾಗಿ ದೂರವಾಗುತ್ತಿರುವಂತೆ ಕಾಣತೊಡಗಿತು.

ಹೀಗಾಗಿ ಬೆಜೆಪಿಯ ಇತ್ತೀಚಿನ ದಾಳಿಗೆ ಒಳಗಾದವರೆಲ್ಲಾ ನಾಗರಿಕ ಹಕ್ಕು ಕಾರ್ಯಕರ್ತರು, ವಿರೋಧ ಪಕ್ಷಗಳು ಮತ್ತು ದಲಿತ ಪ್ರತಿರೋಧವನ್ನು ಸಂಘಟಿಸುತ್ತಿರುವವರೇ ಆಗಿದ್ದಾರೆ. ಎಡಧೋರಣೆಯುಳ್ಳ ವಿದ್ಯಾರ್ಥಿ ಸಂಘಟನೆಗಳನ್ನು ಅಮಾನ್ಯಗೊಳಿಸಲು ನಿರಂತರ ಪ್ರಯತ್ನ ನಡೆಸಿದ ನಂತರ ಬಿಜೆಪಿಯು ತನ್ನನ್ನು  ತೀವ್ರವಾಗಿ ವಿಮರ್ಶಿಸುವ ಗುಂಪುಗಳಲ್ಲಿ ಪ್ರಮುಖವಾದ ಎಡ ಒಲವುಳ್ಳ ನಾಗರಿಕ ಹಕ್ಕು ಸಂಘಟನೆಗಳನ್ನು ಗುರಿಯಾಗಿರಿಸಿಕೊಂಡಿರುವಂತಿದೆ. ಭೀಮಾ- ಕೊರೆಗಾಂವ ಪ್ರಕರಣವು ಕೇವಲ ಒಂದು ನೆಪವಷ್ಟೆ. ಏಕೆಂದರೆ ಬಂಧಿತರಾದ ಐವರಲ್ಲಿ ನಾಲ್ವರಿಗೆ ಈ ಘಟನೆಯೊಂದಿಗೆ ಯಾವ ರೀತಿಯ ಸಂಬಂಧವೂ ಇರಲಿಲ್ಲ. ಪ್ರಧಾನಿ ಕೊಲೆಯ ಸಂಚೆಂಬ ನಾಟಕಕ್ಕೆ ಪೂರಕವಾದ ಸಾಕ್ಷ್ಯ ಗಳನ್ನು ಹುಟ್ಟುಹಾಕಲು ನಿರ್ಲಜ್ಜವಾಗಿ ಪತ್ರವೊಂದನ್ನು ಸೃಷ್ಟಿಸಿರುವ ರೀತಿ ಅತ್ಯಂತ ಖಂಡನಾರ್ಹವಾಗಿದೆ. (ಆ ಪತ್ರದಲ್ಲೇ ಹಲವು ವೈರುಧ್ಯಗಳಿವೆ ಎಂಬುದು ಮತ್ತೊಂದು ವಿಷಯ). ಅಷ್ಟು ಮಾತ್ರ ಸಾಲದೆಂಬಂತೆ ತನ್ನ ಇಂದಿನ ಕಷ್ಟಕರ ಪರಿಸ್ಥಿತಿಗೆ ಕಾರಣವಾದ ವಿರೋಧ ಪಕ್ಷಗಳ ಐಕ್ಯರಂಗವನ್ನು ಗುರಿಯಾಗಿರಿಸಿಕೊಂಡಿರುವ ಬಿಜೆಪಿ, ತನ್ನ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಾವೋವಾದಿಗಳನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪವನ್ನೂ ಹೊರಿಸಿದೆ. ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ವಿದ್ಯಮಾನಕ್ಕೆ ಪರಿಕಲ್ಪನಾತ್ಮಕ ಸ್ಪರ್ಶವನ್ನು ನೀಡಿಬಿಟ್ಟರು. ಅವರ ಪ್ರಕಾರ ಸಾಮಾಜಿಕ ಕಾರ್ಯಕರ್ತರ ಮುಖವಾಡ ಹಾಕಿಕೊಂಡಿರುವ ಭೂಗತ ಚಳವಳಿಗಳ ಮುಖವಾಣಿಗಳು ಪ್ರಜಾತಂತ್ರದ ಮಾತುಗಳನಾಡುತ್ತಲೇ ಅದನ್ನು ಮೂಲೆಗುಂಪು ಮಾಡುತ್ತಿರುತ್ತಾರೆ. ಅಂಥವರನ್ನು ಜೈಟ್ಲಿಯವರು ಅರೆ ಮಾವೋವಾದಿಗಳೆಂದು ವರ್ಗೀಕರಿಸಿದ್ದಾರೆ. ಆ ಐವರು ಕಾರ್ಯಕರ್ತರನ್ನು ಕರಾಳವಾದ ಯುಎಪಿಎ ಕಾಯಿದೆಯಡಿ ಬಂಧಿಸಿರುವುದರ ಹಿಂದೆಯೂ ಸರ್ಕಾರದ ವಿರುದ್ಧ ಯಾವುದೇ ಪ್ರಚಾರಾಂದೋಲನಗಳನ್ನು ನಡೆಸದಂತೆ ದಲಿತ/ಅಂಬೇಡ್ಕರ್‌ವಾದಿ ಬುದ್ಧಿಜೀವಿಗಳನ್ನು ಬೆದರಿಸುವ ಹುನ್ನಾರವಿದೆ.

ಬಿಜೆಪಿಯ ಈ ರಣತಂತ್ರಗಳಲ್ಲಿ ಹೊಸದೇನಿಲ್ಲ. ೨೦೦೬ರಲ್ಲಿ ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ದಲಿತ ಕುಟುಂಬದ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಭುಗಿಲೆದ್ದ ದಲಿತ ಪ್ರತಿರೋಧ ಮತ್ತು ನ್ಯಾಯಕ್ಕಾಗಿ ಮಾಡುತ್ತಿದ್ದ ಆಗ್ರಹಗಳನ್ನು ಮಾವೋವಾದಿ ಒಳಸಂಚೆಂದು ಬಣ್ಣಿಸಿದಾಗಿನಿಂದಲೂ ಈ ಬಗೆಯ ಪ್ರಯತ್ನವೊಂದು ಜಾರಿಯಲ್ಲಿದೆ. ಅತ್ಯಂತ ಕ್ರೂರ ಅನ್ಯಾಯ ಮತ್ತು ಅಪಮಾನಗಳಿಗೆ ಗುರಿಯಾಗುತ್ತಿದ್ದರೂ ದಲಿತರು ಪ್ರಜಾತಾಂತ್ರಿಕ ಮತ್ತು ಸಾಂವಿಧಾನಿಕ ಮಾರ್ಗಗಳ ಬಗ್ಗೆ ಪದೇಪದೇ ತೋರುತ್ತಿರುವ ವಿಶ್ವಾಸಗಳಿಗೆ ಈ ರೀತಿಯಲ್ಲಿ ದಲಿತ ಪ್ರತಿರೋಧ ಮತ್ತು ಅಸ್ಮಿತೆಯ ಪ್ರತಿಪಾದನೆಗಳನ್ನು ಅಮಾನ್ಯಗೊಳಿಸಲು ಮಾಡುತ್ತಿರುವ ತಂತ್ರಗಳು ದ್ರೋಹಬಗೆಯುತ್ತಿವೆ. ಇದರ ಜೊತೆಗೆ ಸುಪ್ರೀಂ ಕೋರ್ಟು ದಲಿತರ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆಗಳಿಗೆ ತಂದಿರುವ ತಿದ್ದುಪಡಿಗಳು ಒಟ್ಟು ಸೇರಿ, ದಲಿತರಿಗೆ ನ್ಯಾಯಾಲಯದ ಮೂಲಕವಾಗಲೀ, ಸಾರ್ವಜನಿಕ ಪ್ರತಿರೋಧಗಳ ಮೂಲಕವಾಗಲೀ ನ್ಯಾಯ ಸಿಗುವುದಿಲ್ಲ ಎಂಬ ಅಭಿಪ್ರಾಯವನ್ನು ಸಹಜವಾಗಿ ಮೂಡಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ದಲಿತರು ದೇಶವಿರೋಧಿಗಳಾಗುವುದಿರಲಿ, ದೇಶವೇ ದಲಿತ ವಿರೋಧಿಯಾಗಿರುವ ಕ್ರೂರ ಸಂದರ್ಭವನ್ನು ನಾವು ಎದುರಿಸುತ್ತಿದ್ದೇವೆ.

ಭೀಮಾ-ಕೊರೆಗಾಂವ ಪ್ರಕರಣವು ಬಿಜೆಪಿಗೆ ದುಸ್ವಪ್ನ ಹುಟ್ಟಿಸಿದ ಗಳಿಗೆಯಾಗಿತ್ತು. ಭೀಮಾ ಕೊರೆಗಾಂವ ದ್ವಿಶತಮಾನೋತ್ಸವದ ಮುನ್ನಾ ದಿನ ಪುಣೆಯಲ್ಲಿ ನಡೆದ ಏಲ್ಗಾರ್ ಪರಿಷತ್ತಿನ ಸಭೆಯಲ್ಲಿ ಎಡ ಮತ್ತು ಪ್ರಗತಿಪರ ಶಕ್ತಿಗಳು ಬಿಜೆಪಿಯ ಇಂದಿನ ಆಳ್ವಿಕೆಯನ್ನು ನವ ಪೇಶ್ವಾಯಿ ಆಳ್ವಿಕೆಯೆಂದು ಬಣ್ಣಿಸಿದ್ದು ಹಿಂದೂತ್ವದ ವಿರುದ್ಧ ಕೆಳಜಾತಿಗಳನ್ನು ಅಣಿನೆರೆಸುವಷ್ಟು ಪ್ರಬಲವಾದ ರಾಜಕೀಯ ರೂಪಕವಾಗಿತ್ತು. ಸುದೀರ್ಘವಾದ ಜಾತಿ ವಿರೋಧಿ ಚಳವಳಿಗಳ ಮತ್ತು ಪ್ರತಿಸಂಸ್ಕೃತಿಯ ಇತಿಹಾಸವುಳ್ಳ ಮಹಾರಾಷ್ಟ್ರzಂತ  ರಾಜ್ಯದಲ್ಲಿ ಇಂಥಾ ರಾಜಕೀಯ ರೂಪಕಕ್ಕೆ ಸಂಘಪರಿವಾರದ ಭವಿಷ್ಯದ ಮೇಲೆ ತೀವ್ರವಾದ ಹಾನಿಯುಂಟು ಮಾಡುವ ಶಕ್ತಿ ಇದೆ. ಮಾತ್ರವಲ್ಲದೆ ದೇಶದ ಇತರೆಡೆಗಳಿಗೂ ಹರಡಿಕೊಳ್ಳುವ ಅಪಾಯವನ್ನೂ ಹೊಂದಿದೆ. ಒಂದು ಕಡೆ ಮಹಾರಾಷ್ಟ್ರ ಸರ್ಕಾರವು ಭೀಮಾ ಕೊರೆಗಾಂವ್‌ನಲ್ಲಿ ಹತ್ತಿಕೊಂಡ ಬೆಂಕಿಯನ್ನು ತಣ್ಣಗಾಗಿಸುವ ಪ್ರಯತ್ನ ಮಾಡುತ್ತಿರುವಾಗಲೇ ಅದು ರಾಜ್ಯದ ಅಂಬೇಡ್ಕರ್‌ವಾದಿ ಸಂಘಟನೆ ಮತ್ತು ಪಕ್ಷಗಳನ್ನು ಪುನರುಜ್ಜೀವಗೊಳಿಸಿತಲ್ಲದೆ ಅವನ್ನು ಮಹಾರಾಷ್ಟ್ರ ರಾಜಕಾರಣದ ಕೇಂದ್ರಕ್ಕೆ ತಂದುನಿಲ್ಲಿಸಿತು. ಮೇಲಾಗಿ, ದಲಿತರ ಮೇಲೆ ನಡೆದ ಗುಂಪು ಹಿಂಸಾಚಾರಕ್ಕೆ  ದಲಿತರನ್ನೇ ಹೊಣೆಯಾಗಿಸುತ್ತಿರುವ ರಾಜ್ಯ ಸರ್ಕಾರವು ಈ ಹಿಂಸಾಚಾರಕ್ಕ್ಕೆ ಮೊದಲ ಕಾರಣಕರ್ತರಾದ ಹಿಂದುತ್ವವಾದಿ ಗುಂಪುಗಳನ್ನು ರಕ್ಷಿಸುತ್ತಿದೆ. ಭೀಮಾ ಕೊರೆಗಾಂವ್ ಹಿಂಸಾಚಾರದ ಹಿಂದಿನ ಸಂಚುಕೋರರೆಂದು ಆರೋಪಿಸಲಾಗಿರುವ ಸಾಂಭಾಜಿ ಭಿಡೆ ಮತ್ತು ಮಿಲಿಂದ್ ಏಕ್‌ಬೋಟೆ ಅವರ ಬಂಧನಗಳ ಪರವಾಗಿ ಮತ್ತು ವಿರುದ್ಧವಾಗಿ ಮುಂಬೈ ಮತ್ತು ಕೊಲ್ಲಾಪುರಗಳಲ್ಲಿ ಹಲವಾರು ಪ್ರತಿಭಟನಾ ಪ್ರದರ್ಶನಗಳು ನಡೆದಿವೆ. ಹೀಗಾಗಿ ಭೀಮಾ ಕೋರೆಗಾಂವ್ ಪ್ರಕರಣವನ್ನು ಉಗ್ರವಾದಿ ಮತ್ತು ಪ್ರಭುತ್ವ ವಿರೋಧಿ ಕೃತ್ಯವೆಂದು ಬಣ್ಣಿಸುವ ಈ ಪ್ರಯತ್ನವು ದಲಿತ ಪ್ರತಿರೋಧದ ಒಳಗೆ ಅಂತರಿಕ ಭಿನ್ನಮತವನ್ನು ಹುಟ್ಟಿಸಿ ದಲಿತ ಪ್ರತಿರೋಧವನ್ನು ಹತ್ತಿಕ್ಕುವ ಪ್ರಯತ್ನವೇ ಆಗಿದೆ.

ಪ್ರಧಾನಧಾರೆ ಮಾಧ್ಯಮಗಳು ಪ್ರಧಾನಿ ಕೊಲೆಯ ಸಂಚಿನ ಬಗ್ಗೆ ಒಂದು ಉನ್ಮಾದವನ್ನೇ ಸೃಷ್ಟಿಸಿದರೂ ಅದು ಬಿಜೆಪಿ ಬಯಸಿದಷ್ಟು ಅನುಕಂಪವನ್ನು ತಂದುಕೊಟ್ಟಿಲ್ಲ. ತಮಗೆ ಮಾವೋವಾದಿಗಳ ಜೊತೆ ಸಂಬಂಧವಿದೆಯೆಂದು ಬಿಜೆಪಿ ಹೊರಸಿರುವ ಆರೋಪದಿಂದ ಎದೆಗುಂದದ ವಿರೋಧಪಕ್ಷಗಳು, ಬಂಧನಗಳ ವಿರುದ್ಧ ಮತ್ತು ಬೆದರಿಕೆಗಳ ವಿರುದ್ಧ ಆಕ್ರಮಣಕಾರಿಯಾಗಿ ತಿರುಗೇಟು ನೀಡಲು ಪ್ರಾರಂಭಿಸಿವೆ. ಶರದ್ ಪವಾರರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯೂ ಬಿಜೆಪಿಯನ್ನು ಬಯಲು ಮಾಡುವಲ್ಲಿ ಮುಂದಿದೆ. ಹಾಗೆ ನೋಡಿದರೆ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಮೋದಿಯವರು ಕಷ್ತಕ್ಕೆ ಸಿಲುಕಿದಾಗಲೆಲ್ಲಾ ಕೊಲೆ ಪ್ರಯತ್ನದಂಥ ಅನುಕಂಪ ಗಿಟ್ಟಿಸುವ ಪ್ರಚಾರಗಳು ನಡೆಯುತ್ತಲೆ ಬಂದಿವೆ. ಬಿಜೆಪಿ ಪಕ್ಷವು ಈ ರೀತಿ ಕೊಲೆ ಸಂಚಿನ ನಾಟಕವಾಡುವ ಮಟ್ಟಿಗೆ ಕೆಳಜಾರಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಯ ವ್ಯಾಯಾಮದ ಭಂಗಿಗಳನ್ನು ಪ್ರಚಾರ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ? ಇವೆಲ್ಲವೂ ಬಿಜೆಪಿ ತನ್ನಮೇಲೆ ಎಡೆಬಿಡದೆ ನಡೆಯುತ್ತಿರುವ ವಿಮರ್ಶೆಗಳಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ಹತಾಶ ಪ್ರಯತ್ನಗಳೇ ಆಗಿವೆ. ಅಲ್ಲದೆ ಬಿಜೆಪಿಯು ಸಾರಾಂಶದಲ್ಲಿ ಏಕ-ವ್ಯಕ್ತಿ ಪಕ್ಷವಾಗುವ ಮಟ್ಟಿಗೆ ಕುಸಿದಿರುವುದನ್ನೂ ಸಹ ಈ ವಿದ್ಯಮಾನಗಳು ಬಯಲುಗೊಳಿಸಿವೆ. ಹೀಗಾಗಿ ಆ ವ್ಯಕ್ತಿಯ ದೈಹಿಕ ಆರೋಗ್ಯವು ಸುಸ್ಥಿತಿಯಲ್ಲಿದ್ದರೆ ಮಾತ್ರ ಪಕ್ಷದ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ ಎಂಬಂತಾಗಿಬಿಟ್ಟಿದೆ.

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com