Bollywood news : ಕ್ಯಾನ್ಸರ್ ಪೀಡಿತ ಇರ್ಫಾನ್ ಖಾನ್ ಮನದ ಮಾತು…

ಬಾಲಿವುಡ್ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ, ಹಾಲಿವುಡ್ ನಲ್ಲೂ ತಮ್ಮ ಚಾಪು ಒತ್ತಿರುವ ಇರ್ಫಾನ್ ಖಾನ್ ಕಳೆದ ಕೆಲ ದಿನಗಳಿಂದ  “ಮುಂದುವರೆದ ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್” ದಿಂದ ಬಳಲುತ್ತಿದ್ದಾರೆ, ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಬಾಲಿವಡ್ ಮತ್ತು ಅಭಿಮಾನಿಗಳ ಹಾರೈಕೆಯ ಮಹಾಪುರವೆ ಹರಿದು ಬಂದಿದೆ. ಆದರೆ ಇರ್ಫಾನ್ ಖಾನ್ ಮಾತ್ರ ಈ ವರೆಗು ಮಾತನಾಡಿರಲಿಲ್ಲ, ಇಗ ಪ್ರಥಮ ಬಾರಗೆ ಅವರು  ಮನಬಿಚ್ಚಿ ಮಾತನಾಡಿದ್ದಾರೆ.

ನನಗೆ “ಮುಂದುವರೆದ ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್” ಇದೆ ಎಂದು ಪತ್ತೆಯಾಗಿ ಬಹಳ ಕಾಲವೇ ಕಳೆದಿದೆ. ಈ ಹೆಸರು ನನ್ನ ಶಬ್ಧ ಕೋಶದಲ್ಲೇ ಇಲ್ಲ. ಇದರ ಬಗ್ಗೆ ತೀರಾ ಕಡಿಮೆ ಅಧ್ಯಯನ ನಡೆದಿರುವುದರಿಂದ ‘ಅಪರೂಪ’ದ್ದು ಎನಿಸಿಕೊಂಡಿದೆ. ನನಗೆ ನೀಡುತ್ತಿರುವ ಚಿಕಿತ್ಸೆಯಿಂದ ಹೆಚ್ಚಿನ ನಿರೀಕ್ಷೆಯನ್ನೇನೂ ಇಟ್ಟುಕೊಳ್ಳುವಂತಿಲ್ಲ; ನಾನು ಸಾವು-ಬದುಕಿನ ನಡುವೆ ‘ತ್ರಿಶಂಕು’ ಸ್ಥಿತಿ ಎದುರಿಸುತ್ತಿದ್ದೇನೆ.

ನಾನು ಸಾವಿನೊಂದಿಗೆ ಸರಸವಾಡುತ್ತಿದ್ದೇನೆ ಎನಿಸುತ್ತಿದೆ. ವೇಗವಾಗಿ ಸಾಗುತ್ತಿರುವ ರೈಲಿನಲ್ಲಿ ನಾನು ನನ್ನದೇ ಆದ ಕನಸುಗಳು, ಯೋಜನೆಗಳು, ಆಕಾಂಕ್ಷೆಗಳು, ಗುರಿಗಳನ್ನು ಜತೆಯಲ್ಲೇ ಇಟ್ಟುಕೊಂಡು ಸಾಗುತ್ತಿದ್ದೇನೆ. ಹಠಾತ್ತನೆ ಯಾರೋ ನನ್ನ ಭುಜ ತಟ್ಟಿತಂದಾಯಿತು; ನಾನು ತಿರುಗಿ ನೋಡಿದಾಗ “ಟಿಕೆಟ್ ಕಲೆಕ್ಟರ್” ನಿಂತಿದ್ದ!

“ನಿನ್ನ ಇಳಿಯುವ ನಿಲ್ದಾಣ ಸಮೀಪಿಸುತ್ತಿದೆ; ದಯವಿಟ್ಟು ಇಳಿಯಲು ಸಿದ್ಧನಾಗು”ನನಗಂತೂ ಅಯೋಮಯವಾಯಿತು!!

“ಇಲ್ಲ ನನ್ನ ನಿಲ್ದಾಣ ಇನ್ನೂ ಬಂದಿಲ್ಲ”

“ಇಲ್ಲಪ್ಪಾ ಅದು ಬಂದಾಯಿತು; ಕೆಲವೊಮ್ಮೆ ಹಾಗೆ ಆಗುತ್ತದೆ ಏನ್ಮಾಡೋಣ… ಸಾಗರದಲ್ಲಿ ತೇಲುವ ಬೆಂಡಿನಂತೆ ಅಲೆಗಳ ಏರಿಳಿತದ ತೊಯ್ದಾಟಕ್ಕೆ ನೀನು ಸಿಲುಕಿದ್ದೀಯೆ; ನೀನು ಅದನ್ನು ನಿಯಂತ್ರಿಸಲು ಹೋಗಿ ಹತಾಶನಾಗಿದ್ದೀಯೆ…”!

ಈ ದಿಢೀರ್ ಬೆಳವಣಿಗೆಯಿಂದ ನಾನು ವಾಸ್ತವಕ್ಕೆ ಬಂದೆ.

ಭಯದಿಂದ ಆಘಾತಕ್ಕೊಳಗಾದ ನಾನು ಕೋಲಾಹಲದ ನಡುವೆ ಭೀತಿಯಿಂದ ‘ನರಕಸದೃಶ’ ಆಸ್ಪತ್ರೆಯೊಂದಕ್ಕೆ ಸಾಗಿಸಲ್ಪಟ್ಟಾಗ ನಾನು ನನ್ನ ಮಗನಿಗೆ ಯಾವುದೋ ಗುಟ್ಟನ್ನು ರಟ್ಟು ಮಾಡುವವನಂತೆ, ‘ಈಗಿನ ಪರಿಸ್ಥಿತಿಯಲ್ಲಿ ನಾನು ಈ ಬಿಕ್ಕಟ್ಟನ್ನು ಎದುರಿಸುವುದು ಬೇಡವೆನಿಸಿದೆ. ಹತಾಶನಾಗಿದ್ದರೂ ನನ್ನ ಕಾಲಮೇಲೆ ನಾನು ದೃಢವಾಗಿ ನಿಲ್ಲಬೇಕಿದೆ; ಭಯ ಮತ್ತು ಭೀತಿಗಳು ನನ್ನನ್ನು ಆವರಿಸಿ ನನ್ನ ಮೇಲೆ ಸವಾರಿ ಮಾಡಲು ಮತ್ತು ನನ್ನ ಸ್ಥಿತಿ ಶೋಚನೀಯವಾಗಲು ನಾನು ಬಿಡಲಾರೆ” ಎಂದೆ.

ಅದು ನನ್ನ ಉದ್ದೇಶವಾದ ನಂತರ ನೋವು ನನ್ನನ್ನು ಆವರಿಸಿತು. ಅದರ ಅನುಭವ, ಅದರ ಲಕ್ಷಣ ಹಾಗೂ ಅದರ ತೀವ್ರತೆಯನ್ನು ನೀವು ತಿಳಿದುಕೊಳ್ಳಬೇಕು. ಏನೂ ಮಾಡಲಾಗುತ್ತಿಲ್ಲ; ಯಾವುದೇ ರಿಯಾಯಿತಿ ಇಲ್ಲ; ಯಾವುದೇ ಪ್ರೇರಣೆಯೂ ಇಲ್ಲ. ಆ ಕ್ಷಣದಲ್ಲಿ ಇಡೀ ವಿಶ್ವವೇ ಏಕವಾಗುತ್ತದೆ; ಬರೀ ನೋವು-ನೋವು; ಅದು ದೇವರಿಗಿಂತಲೂ ಅಗಾಧವಾಗಿ ಗೋಚರಿಸುತ್ತಿದೆ!

ನಾನು ಆಸ್ಪತ್ರೆ ಪಾಲಾದ ಬಳಿಕ ಒಂದು ರೀತಿ ಬರಿದಾಗುತ್ತಾ, ದಣಿಯುತ್ತಾ ಸಾಗಿದಂತೆ ನನ್ನ ಆಸ್ಪತ್ರೆ “ದೇವರ ಕ್ರೀಡಾಂಗಣ”ದ ಎದುರೇ ಇದೆ ಎಂಬ ಕಟುಸತ್ಯ ನನ್ನ ಅರಿವಿಗೆ ಬಂತು. ನೋವಿನ ನಡುವೆ ಮೆಕ್ಕಾದಲ್ಲಿ ಕಳೆದ ನನ್ನ ಬಾಲ್ಯ ನೆನಪಾಗುತ್ತದೆ; ವಿವಿಯನ್ ರಿಚರ್‍ಸ್‌ನ ಮಂದಸ್ಮಿತ ನಗುಮೊಗದ ಭಿತ್ತಿ ಚಿತ್ರವನ್ನು ಅಲ್ಲಿ ಕಾಣುತ್ತೇನೆ. ಈ ಜಗತ್ತು ಎಂದಿಗೂ ನನ್ನದಲ್ಲ ಎಂದ ಮೇಲೆ ನನಗೆ ಏನೂ ಆಗುವುದಿಲ್ಲ ಎಂದುಕೊಳ್ಳುತ್ತೇನೆ.

ಈ ಆಸ್ಪತ್ರೆಯಲ್ಲೋ ನಾನು ಮಲಗುವ ಹಾಸಿಗೆ ಮೇಲ್ಭಾಗದಲ್ಲೇ ‘ಕೋಮಾ ವಾರ್ಡ್’ ಇದೆ. ಒಮ್ಮೊಮ್ಮೆ ನನ್ನ ಆಸ್ಪತ್ರೆ ಕೊಠಡಿಯ ಬಾಲ್ಕನಿ ಮೇಲೆ ಬಂದು ನಿಂತಾಗ ವಿಲಕ್ಷಣ ಸಂಗತಿಯೊಂದು ನನ್ನನ್ನು ತಬ್ಬಿಕೊಂಡಂತಾಗುತ್ತದೆ! ಸಾವು-ಬದುಕಿನನಡುವಣ ಪರಸ್ಪರ ಆಟದ ನಡುವೆಯೂ ಒಂದು ಮಾರ್ಗವಿದೆ. ಅದರ ಒಂದು ಬದಿ ಆಸ್ಪತ್ರೆಯಿದೆ; ಮತ್ತೊಂದು ಬದಿ ಕ್ರೀಡಾಂಗಣವಿದೆ. ಈ ಎರಡಕ್ಕೂ ಸೇರದ ವ್ಯಕ್ತಿ ಬಹುಷಃ ತನ್ನ ಸ್ಥಿತಿಯ ಬಗ್ಗೆ ನಿಶ್ಚಿತತೆ ಬಯಸುತ್ತಾನೆ. ಈ ಸಂದಿಗ್ಧತೆ ನನ್ನನ್ನು ಘಾಸಿಗೊಳಿಸಿದೆ. ವಿಶ್ವದ ಅಗಾಧ ಶಕ್ತಿ ಹಾಗೂ ಬುದ್ದಿವಂತಿಕೆಗೇ ನನ್ನ ಸ್ಥಿತಿಯನ್ನು ಇತ್ಯರ್ಥಗೊಳಿಸಲು ಬಿಟ್ಟಿದ್ದೇನೆ. ನನ್ನ ಆಸ್ಪತ್ರೆ ಇರುವ ಜಾಗದ ವೈಶಿಷ್ಟ್ಯವೇ ನನ್ನನ್ನು ಘಾಸಿಗೊಳಿಸಿದೆ. ಅನಿಶ್ಚಿತತೆಯೇ ಇಲ್ಲಿ ನಿಶ್ಚಿತವಾಗಿದೆ! ನನ್ನ ಶಕ್ತಿಯನ್ನು ಅರಿತು ಅದಕ್ಕೆ ತಕ್ಕಂತೆ ನಾನು ಆಟವಾಡಬಹುದಷ್ಟೇ ಎಂಬುದು ನನ್ನ ಅರಿವಿಗೆ ಬಂದಿದೆ.

ಅಂತಿಮ ಫಲಿತಾಂಶ ಏನೇ ಆಗಿರಲಿ; ನಾನು ಎಲ್ಲಿಗೇ ಸೆಳೆದೊಯ್ಯಲ್ಪಡಲಿ; ಅದು ಬರಲು ಇಲ್ಲಿಂದಾಚೆಗೆ ೮ ತಿಂಗಳಿರಬಹುದು; ನಾಲ್ಕೇ ತಿಂಗಳಿರಬಹುದು ಅಥವಾ ೨ ವರ್ಷಗಳೇ ಆಗಬಹುದು; ಒಟ್ಟಾರೆ ಈ ಅರಿವು ನನ್ನನ್ನು ನಾನು ಆ ನಿಗೂಢ ಶಕ್ತಿಗೆ ಅರ್ಪಿಸಿಕೊಳ್ಳಲು, ಅದಕ್ಕೆ ಶರಣಾಗಲು, ನಂಬಿಕೆ ಇಡಲು ಪ್ರೇರೇಪಿಸಿದೆ. ನನ್ನ ಮನೋಲೋಕದಲ್ಲಿ ಶೂನ್ಯದತ್ತ ದೃಷ್ಟಿನೆಟ್ಟು ಹಿಂದಿನ ಸೀಟಿನಲ್ಲಿ ಕುಳಿತು ಕಾಯುವುದಷ್ಟೇ ನನ್ನ ಕರ್ತವ್ಯ ಎನಿಸಿದೆ.

“ನಿಜವಾದ ಸ್ವಾತಂತ್ರ್ಯ” ಏನೆಂಬುದನ್ನು ನಾನು ಇದೇ ಮೊದಲ ಬಾರಿಗೆ ಅನುಭವಿಸುತ್ತಿದ್ದೇನೆ. ಏನನ್ನೋ ಸಾಧಿಸಿದ ಖುಷಿ ಆವರಿಸುತ್ತಿದೆ; ಜೀವನದ ಮತ್ತೊಂದು ಬದಿಯ ಮಾಂತ್ರಿಕತೆಯ ಸವಿಯನ್ನು ಇದೇ ಪ್ರಥಮ ಬಾರಿಗೆ ಸವಿದಿದ್ದೇನೆ ಎನಿಸುತ್ತಿದೆ. ಅಗಾಧ ವಿಶ್ವದ ಬುದ್ದಿವಂತಿಕೆಯ ಮೇಲಿನ ನನ್ನ ನಂಬಿಕೆ ಇನ್ನಷ್ಟು ಖಚಿತವಾಗಿದೆ. ಅದು ನನ್ನ ನರ ನಾಡಿಗಳು ಹಾಗೂ ಪ್ರತಿ ಜೀವ ಕೋಶಗಳಲ್ಲೆಲ್ಲಾ ಪ್ರವೇಶಿಸಿದೆಯೇನೋ ಎಂಬ ಅನುಭೂತಿ ನನಗಾಗುತ್ತಿದೆ. ಇದು ಹೀಗಿಯೇ ಇರುತ್ತದೆಯೇ? ಗೊತ್ತಿಲ್ಲ; ಅದನ್ನು ಕಾಲವೇ ನಿರ್ಧರಿಸಬೇಕು; ಹಾಗೆ ನಿರ್ಧಾರವಾದಾಗ ಅದನ್ನು ಅನುಭವಿಸಲು ನನಗೆ ಹೇಗೆ ತಾನೇ ಸಾಧ್ಯ?

Leave a Reply

Your email address will not be published.

Social Media Auto Publish Powered By : XYZScripts.com