ಸುಳ್‌ ಸುದ್ದಿ ರಗಳೆ : ಪರಮಪಾಪಿ ಪೋಸ್ಟ್‌ ಕಾರ್ಡ್ ಪೋರ್ಟಲ್ : ಬರೆಯದೇ ಇರುವ ಪುಸ್ತಕದ ಭಾಗ ಪ್ರಕಟ!

ಸುಳ್ ಸುದ್ದಿಯ ರಗಳೆ -ಪಿ.ಕೆ. ಮಲ್ಲಮಗೌಡರ್
ಇನ್ನೂ ಪುಸ್ತಕವೇ ಪ್ರಕಟವಾಗಿಲ್ಲ. ಅದರ ಒಂದು ಸಣ್ಣ ಭಾಗವನ್ನು ಸುಳ್ಳನ್ನೇ ಉಸಿರಾಡುವ ಪೋಸ್ಟ್‍ಕಾರ್ಡ್ ಡಾಟ್ ನ್ಯೂಸ್ ಪ್ರಕಟಿಸಿದೆ.
ಮಿಥ್ಯ: ಪೋಸ್ಟ್‍ಕಾರ್ಡ್ ಪ್ರಕಾರ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುಸ್ತಕದಿಂದ ಆಯ್ದ ಭಾಗ ಹೀಗಿದೆ: ನರೆಂದ್ರ ಮೋದಿಯವರ ಒಂದನೇ ವರ್ಷದ ಆಡಳಿತ ಮುಗಿದಾಗ, ಅವರು ಅಲ್ಲಿವರೆಗೆ ಮಾಡಿದ್ದ ಕೆಲಸಗಳನ್ನು ಮೆಚ್ಚಿ ನಾನು ಅವರನ್ನು ಹೊಗಳಿದ್ದೆ. ಸೋನಿಯಾ ಗಾಂಧಿಯವರಿಗೆ ಇದು ಸಿಟ್ಟು ಬರಿಸಿತು.
ಒಮ್ಮೆ ಸಂಸತ್ತಿನಲ್ಲಿ ಭಾಷಣ ಮುಗಿಸಿ ಹೊರಬರುವಾಗ ಸೋನಿಯಾ ನನಗೆ ಎದುರಾದರು. ಅವರ ಜೊತೆಗಿದ್ದ ಗುಲಾಮ್ ನಬಿ ಅಜಾದ್ ಮತ್ತು ಮಣಶಂಕರ್ ಅಯ್ಯರ್ ನನಗೆ ಗೌರವದಿಂದ ಹಾರೈಸಿದರು. ಆದರೆ ಸೋನಿಯಾ ಸುಮ್ಮನೆ ನಿಂತಿದ್ದರು. ನಾನೇ ಮೊದಲು ಅವರಿಗೆ ಹಾರೈಸಬೇಕೆಂದು ಅವರು ಬಯಸಿದ್ದರು. ಅವರ ಎದುರು ಈ ದೇಶದ ಪ್ರಥಮ ಪ್ರಜೆ ನಿಂತಿದ್ದಾರೆ ಎಂಬುದನ್ನೇ ಅವರು ಮರೆತಿದ್ದರು.


ಪ್ರಣಬ್ ಮುಖರ್ಜಿಯಾಗಿ ಅಲ್ಲ, ಈ ದೇಶದ ರಾಷ್ಟ್ರಪತಿ ನಾನು ಎಂಂಬುದನ್ನು ಅವರು ಒಪ್ಪಿಕೊಳ್ಳಬೇಕಿತ್ತು.
ಸೋನಿಯಾರ ಈ ವರ್ತನೆ ನನ್ನೊಳಗೆ ತೀವ್ರ ನೋವನ್ನು ಉಂಟು ಮಾಡಿತು
ಮೇಲಿನ ಘಟನೆ 2015ರ ಮೇನಲ್ಲಿ ನಡೆಯಿತು ಎಂದು ಉಲ್ಲೇಖಿಸಲಾಗಿದೆ. ಪೋಸ್ಟ್‍ಕಾರ್ಡ್ ಪ್ರಕಾರ ಇದು ಪ್ರಣಬ್ ಮುಖರ್ಜಿ ಅವರ ಪುಸ್ತಕದ ಒಂದು ಭಾಗ. ಇದನ್ನು ನಂಬಿದ ಅಮಾಯಕರು ಮತ್ತು ಸುಳ್ಳೆಂದು ಗೊತ್ತಿರುವ ಸಾವಿರಾರು ಕಿರಾತಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತ ಅನಗತ್ಯವಾಗಿ ಸೋನಿಯಾ ಗಾಂಧಿಯವರ ಮೇಲೆ ಆಕ್ರಮಣ ನಡೆಸುತ್ತಿದ್ದಾರೆ.
ಸತ್ಯ: ಪ್ರಣಬ್ ಅವರ ಉದ್ದೇಶಿತ ಪುಸ್ತಕ ಈ ವರ್ಷದ ಡಿಸೆಂಬರ್‍ನಲ್ಲಿ ಪ್ರಕಟನೆಯಾಗಲಿದೆ ಎಂದು ಅದರ ಪ್ರಕಟಣಾ ಹಕ್ಕು ಪಡೆದಿರುವ ರೂಪಾ ಪ್ರಕಾಶನ ಸಂಸ್ಥೆ ಹೇಳಿದೆ. ಅಂದರೆ ಪ್ರಣಬ್‍ರವರು ಈಗಾಗಲೇ ಕಾಗದದಲ್ಲಿ ಬರೆದಿರಬಹುದಾದ ಅಥವಾ ಕಂಪ್ಯೂಟರ್‍ನಲ್ಲಿ ಕೀ-ಇನ್ ಮಾಡಿರಬಹುದಾದ ಕಾಪಿಯನ್ನು ಪೋಸ್ಟ್‍ಕಾರ್ಡ್ ಕದ್ದಿರಬಹುದು ಅಂತಾ ಭಾವಿಸೋಕೂ ಆಸ್ಪದವಿಲ್ಲ. ಏಕೆಂದರೆ ಪ್ರಕಾಶಕರು ಮತ್ತು ಪ್ರಣಬ್ ಮುಖರ್ಜಿ ಕಚೇರಿ ಪ್ರಕಾರ ಅವರಿನ್ನೂ ಬರೆಯಲು ಶುರೂನೇ ಮಾಡಿಲ್ಲ!
ಈ ಮೊದಲು ಪ್ರಣಬ್ ಬರೆದ ದ ಡೆಮಾಕ್ರಟಿಕ್ ಡಿಕೇಡ್, ದ ಟರ್ಬುಲೆಂಟ್ ಇಯರ್ಸ್ ಮತ್ತು ದ ಕೊಅಲಾಯನ್ಸ್ ಇಯರ್ಸ್- ಪುಸ್ತಕಗಳಲ್ಲಿ ಪ್ರಣಬ್ ಮೇಲಿನ ವಿಷಯ ಬರೆದಿಲ್ಲ, ಬರೆಯಲು ಸಾಧ್ಯವೂ ಇಲ್ಲ. ಏಕೆಂದರೆ ಇವು ಯಾವುವು 2004ರ ನಂತರದ ವಿಷಯ ಒಳಗೊಂಡಿಲ್ಲ. ಹಾಗಾದರೆ ಬರಲಿರುವ ನಾಲ್ಕನೇ ಪುಸ್ತಕ ‘ದ ಪ್ರೆಸಿದೆನ್ಸಿಯಲ್ ಇಯರ್ಸ್’ ಪುಸ್ತಕದಲ್ಲಿ ಮೇಲಿನಂತೆ ಬರೆಯಬಹುದೇನೋ ಎಂದು ಗೆಸ್ ಮಾಡಲೂ ಆಗಲ್ಲ. ಏಕೆಂದರೆ ಪ್ರಣಬ್ ಎಂದೂ ಸಾರ್ವಜನಿಕವಾಗಿ ಸೋನಿಯಾರ ಬಗ್ಗೆ ಆಕ್ಷೇಪದ ಮಾತು ಆಡಿಲ್ಲ.
ಪ್ರಣಬ್ ಕಚೇರಿ ಪ್ರಕಾರ, ‘ಉದ್ದೇಶಿತ ಪುಸ್ತಕ ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿ ಎಂದು ಘೋಷಿಸುವಲ್ಲಿಗೆ ಮುಗಿಯುತ್ತದೆ. ರಾಷ್ಟ್ರಪತಿಯಾದ ನಂತರದ ಘಟನೆಗಳು ಇದರಲ್ಲಿ ಬರುವುದೇ ಇಲ್ಲ. ಈ ಪುಸ್ತಕವು 2004-2012ರವರೆಗಿನ ಅವಧಿಗೆ ಸಿಮೀತ. ಇನ್ನು ಮೇ, 2015ರ ವಿಷಯ ಎಲ್ಲಿಂ ಬಂತು?’ ಎಂದಿದೆ.
ಫೋಟೊ ಕ್ಯಾಪ್ಸನ್: ರಾಷ್ಟಪತಿಯವರ ಪುಸ್ತಕದಿಂದ ಆಯ್ದ ಭಾಗ ಎಂದು ಪುಟ್ಟಾಪೂರಾ ಸುಳ್ ಬರೆದ ಪೋಸ್ಟ್‍ಕಾರ್ಡ್

Leave a Reply

Your email address will not be published.

Social Media Auto Publish Powered By : XYZScripts.com