USA vs North Korea : ಟ್ರಂಪ್ ಮತ್ತು ಕಿಮ್ ಅವರ ಐತಿಹಾಸಿಕ ಮುಖಾಮುಖಿ…

ಟ್ರಂಪ್ ಮತ್ತು ಕಿಮ್ ಅವರ ಐತಿಹಾಸಿಕ ಮುಖಾಮುಖಿ

ಮಿಕ್ಕೆಲ್ಲ ವಿದ್ಯಮಾನಗಳ ಜೊತೆಗೆ ಪರಸ್ಪರರ ಬಗ್ಗೆ ಇರುವ ಭೀತಿಯೇ ಅಮೆರಿಕವನ್ನು ಪೋಗ್ಯಾಂಗ್ನಲ್ಲಿ ನಡೆದ ಶಾಂತಿ ಮಾತುಕತೆಗೆ ಕರೆತಂದಿತು.

ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್-ಉನ್ ರ ನಡುವೆ ೨೦೧೮ರ ಜೂನ್ ೧೨ರಂದು ಸಿಂಗಪುರದಲ್ಲಿ ನಡೆದ ಶೃಂಗ ಸಭೆಯ ನಂತರದಲ್ಲಿ ಬಿಡುಗಡೆಯಾದ ಜಂಟಿ ಹೇಳಿಕೆಯು ಈ ಸಭೆಯನ್ನು ಐತಿಹಾಸಿಕ ಎಂದು ಬಣ್ಣಿಸಿದೆ. ಇನ್ನು ಮಾಧ್ಯಮಗಳಂತೂ ಇದೇ ರಾಗವನ್ನು ಹಾಡುತ್ತಲೇ ಬಂದಿವೆ.  ಅಮೆರಿಕದ ಅಧ್ಯಕ್ಷ ಮತ್ತು ಉತ್ತರ ಕೊರಿಯಾದ ಅತ್ಯುನ್ನತ ರಾಜಕೀಯ ನಾಯಕರ ನಡುವೆ ನಡೆದ ಮೊದಲ ಶೃಂಗ ಸಭೆ ಇದಾಗಿದ್ದರಿಂದ ಆ ಸಂಕ್ಷಿಪ್ತ ಜಂಟಿ ಹೇಳಿಕೆಯು ಹಲವು ಪ್ರಶ್ನೆಗಳನ್ನು ಹಾಗೆ ಉಳಿಸಿಬಿಟ್ಟಿತು. ಆ ಜಂಟಿ ಹೇಳಿಕೆಯ ತಾತ್ಪರ್ಯವೇನೆಂದರೆ ಅಮೆರಿಕವು ಉತ್ತರ ಕೊರಿಯಾಗೆ ಬೇಕಾದ ಭದ್ರತಾ ಖಾತರಿಗಳನ್ನು ನೀಡುವುದಕ್ಕೆ ಬದ್ಧವಾಗಿದೆ ಮತ್ತು ಕಿಮ್ ಅವರು  ಕೊರಿಯಾ ಪ್ರದೇಶವನ್ನು ಸಂಪೂರ್ಣವಾಗಿ ಅಣ್ವಸ್ತ್ರ ಮುಕ್ತಗೊಳಿಸುವ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಹೌದು. ಪುನರುಚ್ಚರಿಸಿದರು. ಏಕೆಂದರೆ ೨೦೧೮ರ ಏಪ್ರಿಲ್‌ನಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಅವರ ಜೊತೆ ನಡೆದ ಶೃಂಗ ಸಭೆಯಲ್ಲೂ ಕಿಮ್ ಇದೇ ಬದ್ಧತೆಯನ್ನು ಘೋಷಿಸಿದ್ದರು. ೨೦೧೮ರ ಏಪ್ರಿಲ್ ೨೭ರಂದು ಎರಡೂ ಕೊರಿಯಾಗಳ ಅಧ್ಯಕ್ಷರು ಬಿಡುಗಡೆ ಮಾಡಿದ ಪಾನುಂಜೋಮ್ ಶೃಂಗ ಸಭೆಯ ಜಂಟಿ ಹೇಳಿಕೆಯ ಮೂರನೇ ಪರಿಚ್ಚೇಧವು ಎರಡೂ ಕೊರಿಯಾಗಳ ಅಧ್ಯಕ್ಷರು  ಕೊರಿಯಾ ಪ್ರದೇಶವನ್ನು ಸಂಪೂರ್ಣ ಅಣ್ವಸ್ತ್ರ ಮುಕ್ತ ಪ್ರದೇಶವನ್ನಾಗಿಸುವ ಸಮಾನ ಧ್ಯೇಯಕ್ಕೆ ಬದ್ಧತೆಯನ್ನು ಖಾತರಿಗೊಳಿಸಿತ್ತಾರೆಂದು ಸಾರಿ ಹೇಳಿತ್ತು. ಇದನ್ನು ಸಾಧಿಸಲು ಎರಡೂ ಕೊರಿಯಾಗಳು ಅಂತರರಾಷ್ಟ್ರೀಯ ಸಮುದಾಯದ ಸಹಕಾರ ಮತ್ತು ಬೆಂಬಲವನ್ನು ಪಡೆಯಲು ಸಕ್ರಿಯವಾಗಿ ಶ್ರಮಿಸಲು ಸಮ್ಮತಿಸಿದ್ದವು.  ಕಿಮ್ ಅವರು ಸಿಂಗಪುರದಲ್ಲಿ ಮಾಡಿದ್ದು ಇದನ್ನೇ. ಮತ್ತು ಅವರು ಸಿಂಗಪುರ ಶೃಂಗದಲ್ಲಿ ಒಂದು ಪರಿಹಾರದ ಭರವಸೆಯನ್ನೂ ನೀಡಿರುವಂತಿದೆ.

ಕಿಮ್ ಅವರ ಭೇಟಿಯ ನಂತರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಅಮೆರಿಕವು ದಕ್ಷಿಣ ಕೊರಿಯಾದ ಜೊತೆಗೂಡಿ ನಡೆಸುತ್ತಿದ್ದ ಜಂಟಿ ಸೈನಿಕ ಕವಾಯತುಗಳನ್ನು ನಿಲ್ಲಿಸುವುದಾಗಿ ಘೋಷಿಸಿದರು. ಈ ಕವಾಯತುಗಳು ಉತ್ತರ ಕೊರಿಯಾವನ್ನು ಸದಾ ಯುದ್ಧ ಭೀತಿಯಲ್ಲಿರಿಸಿತ್ತು. ಅಷ್ಟು ಮಾತ್ರವಲ್ಲದೆ ಮುಂದಿನ ಕೆಲ ಸಮಯದಲ್ಲಿ ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕದ ೩೨,೦೦೦ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಾಗಿಯೂ ಹೇಳಿದರು. ಅಲ್ಲದೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ಪದೇ ಪದೇ ಒತ್ತು ಕೊಟ್ಟು ಹೇಳುತ್ತಿದ್ದ ಸಂಪೂರ್ಣ, ಪರಿಶೀಲಿಸಬಲ್ಲ, ಮತ್ತು ಮುಂದೆಂದೂ ಮತ್ತೆ ಅಣ್ವಸ್ತ್ರಗಳಿಗೆ ಮರಳಲಾಗದ ರೀತಿಯ ಪರಿಪೂರ್ಣ ಅಣು ನಿಶಸ್ತ್ರೀಕರಣದ ಮಾತುಗಳು ಅಲ್ಲಿ ಹೆಚ್ಚಾಗಿ ಕಂಡು ಬರಲಿಲ್ಲ. ಏಕೆಂದರೆ ಎಲ್ಲ್ಲವನ್ನೂ ಒಂದೇ ಶೃಂಗಸಭೆಯಲ್ಲಿ ಸಾಧಿಸಲಾಗದೆಂಬ ಅರಿವೂ ಅಲ್ಲಿ ಇಣುಕುತ್ತಿತ್ತು. ಎಲ್ಲಕ್ಕಿಂತ ಸಮಾಧಾನ ಹುಟ್ಟಿಸಿದ ಸಂಗತಿಯೇನೆಂದರೆ ಉತ್ತರ ಕೊರಿಯಾದ ಭದ್ರತಾ ಕಾಳಜಿಗಳು ನೈಜವಾದದ್ದೆಂದು ಜಗತ್ತಿನ ಸಾಮ್ರಾಜ್ಯಶಾಹಿ ದೊಡ್ಡಣ್ಣನಾದ ಅಮೆರಿಕ ಒಪ್ಪಿಕೊಂಡಿದ್ದು. ಆದರೂ ವಿಶ್ವಸಂಸ್ಥೆಯ ಮೂಲಕ ತಾನು ಉತ್ತರ ಕೊರಿಯಾದ ಮೇಲೆ ವಿಧಿಸಿರುವ ನಿಷೇಧದಿಂದ ಆ ದೇಶದ ಜನತೆಯ ಮೇಲಾಗಿರುವ ಪರಿಣಾಮಗಳನ್ನು ಸರಿಪಡಿಸಲು ಅದೇನು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

ಉತ್ತರ ಕೊರಿಯಾದ ಜನತೆಗೆ ಆಹಾರವನ್ನು ನಿರಾಕರಿಸುವುದನ್ನು ಅಮೆರಿಕವು ಒಂದು ಯುದ್ಧತಂತ್ರವನ್ನಾಗಿ ಉಪಯೋಗಿಸಿತ್ತು, ಉತ್ತರ ಕೊರಿಯಾದ ಬಹುಪಾಲು ಭೂಭಾಗವು ಪರ್ವತಶ್ರೇಣಿಗಳಿಂದ ಕೂಡಿದ್ದು ಅಲ್ಪಭಾಗವು ಮಾತ್ರ ಕೃಷಿಯೋಗ್ಯವಾಗಿದೆ. ಹೀಗಾಗಿ ಅದು ತನ್ನ ಬಹುಪಾಲು ಆಹಾರ ಅಗತ್ಯಗಳನ್ನು ಆಮದುಗಳಿಂದಲೇ ಪೂರೈಸಿಕೊಳ್ಳಬೇಕಿದೆ. ಆದರೆ ಈ ಅಮದನ್ನು ಸರಿದೂಗಿಸುವ ಶೇ.೯೦ರಷ್ಟು ವಿನಿಮಯವನ್ನು ದೊರಕಿಸುತ್ತಿದ್ದ ಆ ದೇಶದ ರಫ್ತಿನಮೇಲೆ ನಿಷೇಧವನ್ನು ಹೇರಲಾಗಿದೆ. ಇವೆಲ್ಲವೂ ಆ ದೇಶದ ಅಣ್ವಸ್ತ್ರ ಯೋಜನೆಗಳೊಡನೆ ಯಾವ ಸಂಬಂಧವನ್ನು ಹೊಂದಿರಲು ಸಾಧ್ಯವೆಂದು ಯಾರಾದರೂ ಕೇಳಬಹುದು.  ಆದರೆ ಅಮೆರಿಕದ ಸಾಮ್ರಾಜ್ಯಶಾಹಿ ದುರಹಂಕಾರ ಮತ್ತು ದುಷ್ಟತನಗಳಿಗೆ ಕೊನೆಮೊದಲಿಲ್ಲ.

೧೯೪೫ರಲ್ಲಿ ಅಮೆರಿಕವು ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಹಾಕಿದ ಅಣುಬಾಂಬುಗಳು ಕಂಡುಕೇಳರಿಯದ ವಿನಾಶವನ್ನು ಸೃಷ್ಟಿಸಿದ ಐದು ವರ್ಷದ ನಂತರ ೧೯೫೦ರ ನವಂಬರ್ ೩೦ರಂದು ಅದೇ ಅಮೆರಿಕದ ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ಅವರು ಅಮೆರಿಕವು ಉತ್ತರ ಕೊರಿಯಾದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಸಿದ್ಧವೆಂದು ಹೇಳಿದ್ದರೆಂಬುದನ್ನು ಮರೆಯಬಾರದು. ಆಗಿನಿಂದಲೂ ಅಮೆರಿಕವು ಉತ್ತರ ಕೊರಿಯಾದ ವಿರುದ್ಧ ಅಣ್ವಸ್ತ್ರಗಳನ್ನು ಬಳಸುವ ಬೆದರಿಕೆಯನ್ನು  ಮುಂದುವರೆಸಿಕೊಂಡೇ ಬಂದಿದೆ. ೧೯೫೮ರಲ್ಲಿ ಅದು ಕೊರಿಯಾ ಪ್ರಾಂತ್ಯವನ್ನು ಅಣ್ವಸ್ತ್ರೀಕರಣಗೊಳಿಸಿತು. ಇಂಥಾ ಸಾಮ್ರಾಜ್ಯಶಾಹಿ ತಂತ್ರಗಳಿಂದಾಗಿಯೇ ಉತ್ತರ ಕೊರಿಯಾ ಸಹ ಅಣ್ವಸ್ತ್ರಗಳನ್ನು ಹೊಂದಬೇಕಾಯಿತು. ಮತ್ತು ಅದರ ಭಾಗವಾಗಿಯೇ ೨೦೦೬,೨೦೦೯, ಮತ್ತು ೨೦೧೩ರಲ್ಲಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಸರಿಸಾಟಿಯಾದ ಅಣ್ವಸ್ತ್ರ ಭೀತಿಯನ್ನು ಹುಟ್ಟಿಸಿ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಯಿತು. ೨೦೦೨ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್, ಮರುವರ್ಷ ತಾನು ಇರಾಕಿನ ಮೇಲೆ ನಡೆಸಲಿದ್ದ ಯುದ್ಧಕ್ಕೆ ಜಾಗತಿಕ ಸಮ್ಮತಿಯನ್ನು ರೂಢಿಸುತ್ತಿರುವಾಗ ಉತ್ತರ ಕೊರಿಯಾ ಮತ್ತು ಇರಾನನ್ನು ಸಹ ದುಷ್ಟಕೂಟದ ಸದಸ್ಯ ರಾಷ್ಟ್ರವೆಂದು ವರ್ಗೀಕರಿಸಿದ್ದರು. ಹೀಗಾಗಿ ಆ ಎರಡು ದೇಶಗಳು ಅಮೆರಿಕವು ತಮ್ಮಮೇಲೆ ಯಾವಾಗ ಸೈನಿಕ ಆಕ್ರಮಣ ಮಾಡಲಿದೆಯೆಂದು ಸದಾ ಆತಂಕದಿಂದ ನಿರೀಕ್ಷಿಸುವಂತಾಯಿತು. ಆದರೆ ಅಮೆರಿಕವು ತನ್ನೊಡನೆ ಸದುದ್ದೇಶದಿಂದ ಶಾಂತಿ ಮಾತುಕತೆಗೆ ಮುಂದಾಗುವುದಾದರೆ  ಮತ್ತು ತನ್ನ ಭದ್ರತಾ ಕಾಳಜಿಗಳಿಗೆ ಬೇಕಿರುವ ಖಾತರಿಗಳನ್ನು ಒದಗಿಸುವುದಾದರೆ ತಾನು ಶಾಂತಿಗಾಗಿ ಅಣ್ವಸ್ತ್ರಗಳ ಕಾರ್ಯಕ್ರಮವನ್ನು ತ್ಯಜಿಸಿ ಆರ್ಥಿಕ ಬೆಳವಣಿಗೆ ಮತ್ತು ಜನರ ಕಲ್ಯಾಣದ ಮೇಲೆ ಗಮನಹರಿಸುವುದಾಗಿ ಆಗಲೂ ಉತ್ತರ ಕೊರಿಯಾ ಸ್ಪಷ್ಟ ಮಾತುಗಳಲ್ಲಿ ಘೋಷಿಸಿತ್ತು.

ಆದರೆ ಅಮೆರಿಕ ಸಾಮ್ರಾಜ್ಯಶಾಹಿಯು ಉತ್ತರ ಕೊರಿಯಾವನ್ನು ದುಷ್ಟೀಕರಿಸುವ ಅಪಪ್ರಚಾರವನ್ನು ಮುಂದುವರೆಸಿತು. ಇದರಿಂದಾಗಿಯೂ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಯೋಜನೆಯನ್ನು ಬದಲಿಸಲಾಗದ ಪರಿಸ್ಥಿತಿ ಸೃಷ್ಟಿಯಾಯಿತು. ಆದರೆ ಉತ್ತರ ಕೊರಿಯಾ ತಾನೂ ಒಂದು ಅಣ್ವಸ್ತ್ರ ರಾಷ್ಟ್ರವಾಗಿ ಆ ವಲಯದಲ್ಲಿ ಪರಸ್ಪರ ಅಣ್ವಸ್ತ್ರ ಭೀತಿಯ ಸಮತೋಲನವನ್ನು ಸೃಷ್ಟಿಸಿದ್ದರಿಂದಲೇ ಸಾಮ್ರಾಜ್ಯಶಾಹಿ ಅಮೆರಿಕವು ಅಥವಾ ಕನಿಷ್ಟ ಈಗ ಆಡಳಿತ ನಡೆಸುತ್ತಿರುವ ಸರ್ಕಾರವು ತನ್ನ ಕೊರಿಯಾ ನೀತಿಯನ್ನು ಬದಲಿಸುವಂತೆ ಮಾಡಿದೆ. ಅದೇ ಸಮಯದಲ್ಲಿ ಶಾಂತಿ ಪ್ರಕ್ರಿಯೆಯಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ  ಮೂನ್ ಅವರು ವಹಿಸಿದ ಅತ್ಯಪೂರ್ವ ಪಾತ್ರವನ್ನು ಸಹ ಮರೆಯುವಂತಿಲ್ಲ. ಇದೀಗ ಉತ್ತರ ಕೊರಿಯಾದೊಡನೆ ತನ್ನ ಸಂಬಂಧವನ್ನು ಶಾಂತಿಯುತವಾಗಿಸಿಕೊಂಡು ಇಡೀ ಕೊರಿಯಾ ಪ್ರಾಂತ್ಯವನ್ನು ಅಣ್ವಸ್ತ್ರ ಮುಕ್ತಗೊಳಿಸುವ ಜವಾಬ್ದಾರಿ ಅಮೆರಿಕದ ಮೇಲಿದೆ.

ಉತ್ತರ ಕೊರಿಯಾ ಬಗ್ಗೆ ಬದಲಾಗುತ್ತಿರುವ ಟ್ರಂಪ್ ಅವರ ನೀತಿಯ ಬಗ್ಗೆ  ಡೆಮಾಕ್ರಟಿಕ್ ಪಕ್ಷದೊಳಗಿನ ಬಲಪಂಥೀಯರು ಮತ್ತು ಅಮೆರಿಕದ ಆಡಳಿತ ವರ್ಗದ ಒಂದು ವಿಭಾಗ ವಿರೋಧ ವ್ಯಕ್ತಪಡಿಸಿದೆ. ನ್ಯೂಯಾರ್ಕ್ ಟೈಮ್ಸ್ ನ ಒಂದು ಪ್ರಭಾವಿ ಅಂಕಣದಲ್ಲಿ ಸಿಂಗಪೂರ್ ಶೃಂಗ ಸಭೆಯಲ್ಲಿ ಟ್ರಂಪ್ ಅವರನ್ನು ಮುಠಾಳರನ್ನಾಗಿಸಲಾಗಿದೆ ಎಂದು ಬರೆಯಲಾಗಿದೆ. ಅಮೆರಿಕದ ಸಂಸತ್ತಿನ ಅಲ್ಪಸಂಖ್ಯಾತರ ನಾಯಕಿ ನ್ಯಾನ್ಸಿ ಪೆಲೋಸಿ ಅವರು ಉತ್ತರ ಕೊರಿಯಾವನ್ನು ಅಮೆರಿಕಕ್ಕೆ ಸರಿಸಮನೆಂಬಂತೆ ಟ್ರಂಪ್ ಕಂಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿರುವುದು ಮಾತ್ರವಲ್ಲದೆ ಅಲ್ಲಿ ಯಥಾಸ್ಥಿತಿ ಕಾದುಕೊಂಡು ಬರಬೇಕೆಂದು ಆಗ್ರಹಿಸಿದ್ದಾರೆ.

೧೯೫೦ರಿಂದ ಅಮೆರಿಕ ಸಾಮ್ರಾಜ್ಯಶಾಹಿಯು ಉತ್ತರ ಕೊರಿಯಾದೊಡನೆ ನಡೆದುಕೊಂಡಿರುವ ರೀತಿಯನ್ನು ಗಮನಿಸಿದಾಗ ಸಿಂಗಪುರ ಶೃಂಗಸಭೆಯ ಫಲಶೃತಿ ಏನೇ ಇದ್ದರೂ ಈ ಬಗ್ಗೆ ಅಮೆರಿಕದೊಡನೆ ನಡೆಯಲಿರುವ ಮುಂದುವರೆದ ಮಾತುಕತೆಗಳಲ್ಲಿ ಉತ್ತರ ಕೊರಿಯಾ ಜಾಗರೂಕವಾಗಿಯೇ ಇರುವ ಅಗತ್ಯವಿದೆ.

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com