ಲಕ್ಷ್ಮಿ ಹೆಬ್ಬಾಳ್ಕರ್‌ ನನ್ನನ್ನು ಬಾಯಿ ತುಂಬ ‘ಅಕ್ಕಾ’ ಎಂದು ಕರೆದಿದ್ದಾರೆ, ಅವರ ಜೊತೆ ಜಗಳವಾಡಲ್ಲ : ಜಯಮಾಲಾ

ಬೆಂಗಳೂರು :  ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ಅವರು ಬಾಯಿ ತುಂಬಾ ನನ್ನನ್ನು ಅಕ್ಕ ಎಂದು ಕರೆದಿದ್ದಾರೆ. ನನಗೂ ಕೂಡ ಅವರ ಮೇಲೆ ಅಪಾರ ಪ್ರೀತಿ ಇದೆ. ಪರಸ್ಪರ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಿದ್ದೇನೆ. ಇನ್ನು ಅವರೊಂದಿಗೆ ಮಾತಿನ ಸಂಘರ್ಷ ಬೆಳೆಸಲು ಇಷ್ಟ ಪಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯಸ್ಸಿನಲ್ಲಿ ನಾನು ಲಕ್ಷ್ಮೀಹೆಬ್ಬಾಳ್ಕರ್‌ ಅವರಿಗಿಂತ ದೊಡ್ಡವಳು. ಕಾಂಗ್ರೆಸ್‌ನಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ. ಸಚಿವ ಸ್ಥಾನ ಕೇಳುವುದು ಅವರ ಹಕ್ಕು, ಎಲ್ಲರಿಗೂ ಅವಕಾಶ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನದಲ್ಲಿ ಮಹೇಶ್ ಫೌಂಡೇಶನ್ ಸಂಸ್ಥೆ ಎಚ್‍ಐವಿ ಮಕ್ಕಳಿಗಾಗಿ ಪುನರ್‍ವಸತಿ ಕೇಂದ್ರ ನಡೆಸುತ್ತಿದೆ. ಆದರೆ, ಅಕ್ಕಪಕ್ಕದವರು ಕೇಂದ್ರವನ್ನು ತೆರವುಗೊಳಿಸುವಂತೆ ಒತ್ತಡ ಹೇರಿರುವುದು ಗಮನಕ್ಕೆ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಎಚ್‍ಐವಿ ಸೋಂಕಿತರನ್ನು ಮುಟ್ಟುವುದರಿಂದ ಯಾವುದೇ ಸೋಂಕು ಹರುಡುವುದಿಲ್ಲ. ಮಕ್ಕಳು ತಾವು ಮಾಡದ ತಪ್ಪಿಗೆ ಹುಟ್ಟಿನಿಂದಲೇ ಸೋಂಕನ್ನು ಅನುಭವಿಸುತ್ತಿದ್ದಾರೆ. ಆ ಮಕ್ಕಳ ಬಗ್ಗೆ ಪ್ರೀತಿ ಇರಲಿ ಎಂದಿದ್ದಾರೆ. ಜೊತೆಗೆ ನನ್ನ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಿದ್ದಗೊಂಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪಕ್ಷದ ನಾಯಕರ ಜತೆ ಚರ್ಚೆ ಮಾಡಿ ಅವುಗಳನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ.

Leave a Reply

Your email address will not be published.