ಕಾಂಗ್ರೆಸ್ಸಿಗರನ್ನು ಸೆಳೆದುಕೊಳ್ಳೋ ಭರದಲ್ಲಿ ತಮ್ಮವರನ್ನೇ ಕಳೆದುಕೊಂಡ ಬಿಜೆಪಿ : ರಾಜೀನಾಮೆ ನೀಡಿದ ಕಮಲ ನಾಯಕ

ಬೆಂಗಳೂರು : ವಿಧಾನ ಪರಿಷತ್‌ ಅಭ್ಯರ್ಥಿಯಾಗಿ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ನೊಂದು ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ನನ್ನ ಜೀವನದ ಕೊನೆಯ ಹಂತದಲ್ಲಿ ಸಕ್ರಿಯ ರಾಜಕಾರಣಕ್ಕೆ ತೆರೆ ಎಳೆದಿರುವುದು ಯಾವ ತಪ್ಪಿಗೆ ಎಂಬುದು ತಿಳಿಯುತ್ತಿಲ್ಲ  ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಳುಹಿಸಿದ ರಾಜೀನಾಮೆ ಪತ್ರದಲ್ಲಿ ಪುಟ್ಟಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದ ಹಿತದೃಷ್ಟಿಯಿಂದ ಯಾವುದೇ ಒಳ ಒಪ್ಪಂದವಿಲ್ಲದೆ ಹಲವು ಹಗರಣಗಳನ್ನು ಬಯಲಿಗೆಳೆದಿದ್ದೇನೆ. ಈಗ ನನ್ನ ರಕ್ಷಣೆಗೆ ಗತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ನನ್ನನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದ ತಾವು ಆ ಮಾತು ತಪ್ಪಿದ್ದಕ್ಕೆ ಕಾರಣ ತಿಳಿಯುತ್ತಿಲ್ಲ ಎಂದಿದ್ದಾರೆ.

ನಾನೆಂದೂ ಸ್ವಂತ ಲಾಭಕ್ಕೆ ಆಸೆ ಪಟ್ಟವನಲ್ಲ. ನಾನು ಒಂದು ಜಾತಿಯ ಪ್ರತಿನಿಧಿ, ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ನಾಯಕ. ಮಾಧ್ಯಮಗಳಲ್ಲಿ, ಕರ್ನಾಟಕ ಜನತೆಯಲ್ಲೂ ಕೂಡ ನಾನು ತಮ್ಮ ಆಪ್ತನೆಂದೇ ಬಿಂಬಿಸಲಾಗುತ್ತಿತ್ತು. ಮತ್ತು ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ. ನನ್ನ ಶ್ರಮ, ಬದ್ಧತೆ, ನಂಬಿಕೆ, ಪ್ರಾಣ ಲೆಕ್ಕಿಸದೆ ಮಾಡಿದ ಸಮರ್ಥನೆಗಳೆಲ್ಲವೂ ಇಂದು ಸೋಲು ಕಂಡಂತಾಗಿದೆ. ಇದರಿಂದ ನೋವಾಗಿದೆ ಎಂದು ಪುಟ್ಟಸ್ವಾಮಿ ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com