ರೈತರ ಸಾಲಮನ್ನಾ ಮಾಡಲು ಶೇ.50ರಷ್ಟು ನೆರವು ನೀಡಿ : ಮೋದಿಗೆ ಎಚ್‌ಡಿಕೆ ಮನವಿ

ದೆಹಲಿ : ನೀತಿ ಆಯೋಗದ ನಾಲ್ಕನೇ ಸಭೆಯಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ಕುರಿತಂತೆ ಕೇಂದ್ರದ ಗಮನಸೆಳೆದಿದ್ದಾರೆ.

ರಾಜ್ಯದಲ್ಲಿ ಪ್ರತಿವರ್ಷ ವಿಪತ್ತು ಮರುಕಳಿಸುತ್ತಿದ್ದು, ಇದು ರಾಜ್ಯಕ್ಕೆ ದೊಡ್ಡ ಹೊರೆಯಾಗಿದೆ. ಐದು ವರ್ಷದ ಅವಧಿಗೆ ಕೇಂದ್ರದಿಂದ ವಿಪತ್ತು ಪರಿಹಾರದ ಹಣ (ಎಸ್​ಡಿಆರ್​ಎಫ್) ಕೇವಲ 1375 ಕೋಟಿ ನೀಡಲಾಗುತ್ತಿದೆ. ಇದು ಉಳಿದ ರಾಜ್ಯಗಳಿಗೆ ಹೋಲಿಸಿಕೊಂಡರೆ ತೀರ ಕಡಿಮೆಯಾಗಿದೆ.ಅಲ್ಲದೇ ನಗರ ಅಭಿವೃದ್ಧಿ ತಂತ್ರವನ್ನು ನೀತಿ ಆಯೋಗದಲ್ಲಿ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.

ನೀತಿ ಆಯೋಗ ಭಾರತ ಸರ್ಕಾರದಲ್ಲಿ ಒಕ್ಕೂಟಗಳ ಪಾಲ್ಗೊಳ್ಳುವಿಕೆ, ಮಧ್ಯಮ ಅವಧಿಯ ಯೋಜನೆಯ ಗುರಿ ಮತ್ತು ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತದೆ ಎಂದು ನಂಬಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜ್ಯದ ಕೆಲವು ವಿಷಯಗಳ ಕುರಿತು ವಿಷಯ ಮಂಡನೆ ಮಾಡಿದ ಅವರು ಸಾಲಮನ್ನಾಕ್ಕೆ ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಅವರು ಸಾಲಮನ್ನಾ ಕುರಿತು ಪ್ರಸ್ತಾಪಿಸಿದ್ದಾರೆ. ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೃಷಿ ಬಿಕ್ಕಟ್ಟು ಕೂಡ ಒಂದಾಗಿದ್ದು, ರೈತರ ಸಾಲ ಮನ್ನಾದ ಕುರಿತು ರಾಜ್ಯ ಎದುರು ನೋಡುತ್ತಿರುವುದಾಗಿ ಪ್ರಧಾನಿ ಮೋದಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ರಾಜಕೀಯವಾಗಿ ಬೇರೆ ಬೇರೆ ಸಿದ್ಧಾಂತಗಳನ್ನು ಪ್ರತಿನಿಧಿಸುತ್ತಿದ್ದರೂ ದೇಶದ ಅಭಿವೃದ್ಧಿಯ ವಿಷಯಕ್ಕೆ ಕೈಜೋಡಿಸಬೇಕಿದೆ ಎಂದರು. ರೈತರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಬರ, ಬೆಳೆಹಾನಿಯಂತಹ ಅನೇಕ ಸಮಸ್ಯೆಯಿಂದಾಗಿ ಕರ್ನಾಟಕದ 85 ಲಕ್ಷ ರೈತರು ಬ್ಯಾಂಕ್​ಗಳಲ್ಲಿ ಸಾಲ ಹೊಂದಿದ್ದಾರೆ. ಈ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದ್ದು ಇದಕ್ಕೆ ಶೇ 50ರಷ್ಟು ಬೆಂಬಲವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕ ಕೃಷಿಯಲ್ಲಿ ಮಾರುಕಟ್ಟೆ ನಿಯಮದಲ್ಲಿ 2013ರಿಂದ ಹಲವಾರು ರೂಪಾಂತರವನ್ನು ಪಡೆದಿದೆ. ಇದರ ಬಗ್ಗೆ ಭಾರತ ಸರ್ಕಾರ ಹಾಗೂ ಇ-ನಾಮ್ ಕೂಡ ಅಧ್ಯಯನ ನಡೆಸಿದೆ. ಏಕೀಕೃತ ಮಾರುಕಟ್ಟೆ ವೇದಿಕೆ (ಯುಪಿಎಂ) ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆಯನ್ನು ಆವಿಷ್ಕಾರ ವಿಧಾನದ ಮೂಲಕ ನಿರ್ಧರಿಸುತ್ತಿದೆ.

ಕರ್ನಾಟಕ ಮಣ್ಣಿನ ಪರೀಕ್ಷೆಯಲ್ಲಿ ಜಿಐಎಸ್-ಜಿಪಿಎಸ್ ಹಾಗೂ ‘ಮಣ್ಣು ಮಾದರಿ ಸಂಗ್ರಹ’ದಂತಹ ಆ್ಯಂಡ್ರಾಯ್ಡ್ ಆಪ್ ನ್ನು ಅಳವಡಿಸಿಕೊಂಡಿದೆ.ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ ದತ್ತಾಂಶವನ್ನು ಎನ್ಐಸಿ ನವದೆಹಲಿಯ ಮಣ್ಣಿನ ಸಂರಕ್ಷಣಾ ಕಾರ್ಡ್ ಪೋರ್ಟಲ್ ಜೊತೆ ಸಂಯೋಜಿಸಲಾಗಿದೆ. ಈ ಯೋಜನೆಯನ್ನು ಅಧಿಕಮಟ್ಟದ ರೈತರಿಗೆ ಉಪಯೋಗವಾಗುವಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.

ಹಿಂದುಳಿದ ಯಾದಗಿರಿ, ರಾಯಚೂರು ಜಿಲ್ಲೆಗಳ ಅಭಿವೃದ್ಧಿಗೆ ನಾವು ಕ್ರಮ ಕೈಗೊಳ್ಳಬೇಕಾಗಿದ್ದು, ಇದಕ್ಕಾಗಿ ಭಾರತ ಸರ್ಕಾರ ವರ್ಷಕ್ಕೆ 100 ಕೋಟಿ ರೂ.ನಂತೆ ಐದು ವರ್ಷ ಹಣ ನೀಡಬೇಕು ಎಂದರು.ಇನ್ನು ಯುವಜನತೆಗೆ ಉದ್ಯೋಗ ಕಲ್ಪಿಸಲು ಕೌಶಲ್ಯ ರೂಪಿಸಿದರೆ ಸಾಲದು ಅದಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿ ಕೂಡ ಮಾಡಬೇಕು ಎಂದು ಸಲಹೆ ನೀಡಿದರು.

Leave a Reply

Your email address will not be published.