ಅಧಿಕಾರ ಕೊಟ್ಟು ಆಮೇಲೆ ಮನೆಗೆ ಕಳಿಸುವುದು ಕಾಂಗ್ರೆಸ್‌ ಪರಂಪರೆ : ಲೇವಡಿ ಮಾಡಿದ ಶೆಟ್ಟರ್‌

ಹುಬ್ಬಳ್ಳಿ : ಅಧಿಕಾರ ಕೊಟ್ಟು ಮನೆಗೆ ಕಳಿಸುವುದು ಕಾಂಗ್ರೆಸ್ ಪರಂಪರೆ. ಈ ಹಿಂದೆ ಹಲವರನ್ನು ಸಿಎಂ, ಪಿಎಂ ಮಾಡಿ ವರ್ಷದಲ್ಲಿ ಮನೆಗೆ ಕಳಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಸಿಎಂ ಆಗಿ ತಮ್ಮದು ಒಂದು ವರ್ಷ ಅಧಿಕಾರ ಎಂದಿರುವುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಲೇವಡಿ ಮಾಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಅಧಿಕಾರಕ್ಕಾಗಿ ತಾವೇ ಕಚ್ಚಾಡಿಕೊಂಡು‌ ಮನೆಗೆ ಹೋಗುತ್ತಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ರಾಷ್ಟ್ರಪತಿ ಆಡಳಿತಕ್ಕಿಂತ ಕಡೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಬೇಕಾಬಿಟ್ಟಿ ಆಡಳಿತ ಮಾಡುತ್ತಿದ್ದಾರೆ.  ಇದು ಸಮ್ಮಿಶ್ರ ಸರ್ಕಾರವಲ್ಲ, ಗೊಂದಲಮಯ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಪ್ರತಿವರ್ಷ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ವಿತರಿಸುವ ಪದ್ಧತಿಯಿದೆ. ಎಸ್‌ಡಿಎಮ್ ವತಿಯಿಂದ ಬಟ್ಟೆ ತೆಗೆದುಕೊಂಡು ಸ್ಥಳೀಯವಾಗಿ ಹೊಲಿಸಿ ಕೊಡಲಾಗುತ್ತಿತ್ತು. 175 ತಾಲ್ಲೂಕಿನಲ್ಲಿ 8ಲಕ್ಷ ಜನರಿಗೆ ಉದ್ಯೋಗ ಸಿಗುತ್ತಿತ್ತು. ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿಯುವಾಗ ವ್ಯವಸ್ಥೆ ಬುಡಮೇಲು ಮಾಡಿದ್ದಾರೆ. ಯಾರದೋ ಜೊತೆ ಶಾಮೀಲಾಗಿ ವ್ಯತಿರಿಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ.
ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲ್ಬುರ್ಗಿ ಡಿವಿಜನ್‌ನಲ್ಲಿ 96 ಕೋಟಿ ರೂಪಾಯಿ ಡೀಲ್ ಮಾಡಿದ್ದಾರೆ‌. ಸಮ್ಮಿಶ್ರ ಸರ್ಕಾರ ಇದನ್ನು ಕಾರ್ಯರೂಪಕ್ಕೆ ತರಲು ಹೊರಟಿದೆ. ಎಸ್‌ಡಿಎಮ್ ಅಧಿಕಾರ ಮೊಟಕು ಮಾಡಲಾಗುತ್ತಿದೆ‌. ದೊಡ್ಡ ಫ್ಯಾಕ್ಟರಿಗಳಿಗೆ ಲಾಭ ಮಾಡಿಕೊಡಲು ಡೀಲ್ ನಡೆದಿದೆ. ಮುಂಬಯಿಯ ಮಫತ್ಲಾಲ್ ಕಂಪನಿ, ರಾಜಸ್ತಾನದ ಸಂಗಮ ಮತ್ತು ಬಾನ್ಸ್‌ವಾರ್ ಕಂಪನಿ‌ ಜೊತೆ ಡೀಲ್ ಆಗಿದೆ. ಡೀಲ್ ಮಾಡಿಕೊಂಡ ಕಂಪನಿಗಳಿಗೆ ಅನುಕೂಲ ಆಗುವಂತೆ ಬಿಡ್ ನಿಯಮಗಳನ್ನು ಮಾಡಿದ್ದಾರೆ. ಕಮಿಷನ್‌ಗಾಗಿ ರಾಜ್ಯ ಸರ್ಕಾರದಲ್ಲಿರುವ ಪ್ರಭಾವಿಗಳು ಈ ಡೀಲ್ ಮಾಡಿದ್ದಾರೆ‌. ಕುಮಾರಸ್ವಾಮಿ ಸಿಎಮ್ ಆದಮೇಲೆ ಮೊದಲ ಹಗರಣ ಹೊರಗೆ ಬಂದಿದೆ.
ಈ ಪ್ರಕ್ರಿಯೆ ಕೈಬಿಡುವಂತೆ ಸಿಎಂ ಕುಮಾರಸ್ವಾಮಿಯವರಿಗೆ ಒತ್ತಾಯ ಮಾಡುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com