ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತದರ “ಉದಾರವಾದ” …

ಪ್ರಣಬ್ ಮುಖರ್ಜಿಯವರನ್ನು ಆಹ್ವಾನಿಸುವ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘವು ಏನನ್ನು ಸಾಬೀತುಪಡಿಸಲು ಯತ್ನಿಸುತ್ತಿದೆ?

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಅರೆಸ್ಸೆಸ್) ಅಹ್ವಾನವನ್ನು ನೀಡಿದ್ದು ಮತ್ತು ಪ್ರಣಬ್ ಮುಖರ್ಜಿಯವರು ಆ ಆಹ್ವಾನವನ್ನು ಮನ್ನಿಸಿ ಸ್ವಯಂಸೇವಕರನ್ನು ಉದ್ದೇಶಿಸಿ ಭಾಷಣಮಾಡಲು ಒಪ್ಪ್ಪಿಕೊಂಡಿದ್ದು ಮಾಧ್ಯಮಗಳಲ್ಲಿ ಮತ್ತು ರಾಜಕೀಯ ಪರಿಣಿತ ವಲಯಗಳಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ವಿದ್ಯಮಾನದಿಂದ ಲಾಭ ಪಡೆಯುವವರು ಅರೆಸ್ಸೆಸ್ಸೋ ಅಥವಾ ಮುಖರ್ಜಿಯವರೋ  ಎಂಬ ಬಗ್ಗೆಯೂ ಸಾಕಷ್ಟು ಊಹಾಪೋಹಗಳು ನಡೆದಿವೆ. ಆದರೆ ಇದರಿಂದ ಯಾರಿಗೆ ಲಾಭವಾಗುತ್ತದೆ ಎಂಬುದಕ್ಕಿಂತ ತಮ್ಮ ಈ ಆಹ್ವಾನವನ್ನು ಸಮರ್ಥಿಸಿಕೊಳ್ಳುತ್ತಾ ಆರೆಸ್ಸೆಸ್ ನಾಯಕರು ನೀಡುತ್ತಿರುವ ಉದಾರವಾದಿ ನೆಲೆಯ ಪ್ರತಿಪಾದನೆಗಳು ಮುಖ್ಯವಾಗಿ ಚರ್ಚೆಗೊಳಪಡಬೇಕಿದೆ.

ತಾವೂ ಕೂಡಾ ಉದಾರವಾದಿ ನೆಲಗಟ್ಟಿನ ಚಿಂತನೆಯುಳ್ಳವರು ಎಂಬ ಆರೆಸ್ಸೆಸ್‌ನ ಪ್ರತಿಪಾದನೆಯನ್ನು ಉದಾರವಾದದ ವಿಶಾಲ ಚೌಕಟ್ಟಿನಲ್ಲಿಟ್ಟೇ ಅರ್ಥಮಾಡಿಕೊಳ್ಳಬೇಕಿದೆ. ಆಗ ಈ ಆಹ್ವಾನವನ್ನು ಸಮರ್ಥಿಸಿಕೊಂಡು ಆರೆಸ್ಸೆಸ್ ಮುಂದಿಡುತ್ತಿರುವ ಉದಾರವಾದಿ ಪ್ರತಿಪಾದನೆಗಳನ್ನು ಪರಿಶೀಲಿಸಲು ಪರಸ್ಪರ ಅಂತರ್ಗತವಾಗಿರುವ ಎರಡು ಬಗೆಯ ಅಂಶಗಳನ್ನು ಪರಿಗಣಿಸುವುದು ಮುಖ್ಯವಾಗುತ್ತದೆ. ಉದಾರವಾದಿ ಚೌಕಟ್ಟಿನ ಮೊದಲ ಅಂಶವೇನೆಂದರೆ ಒಂದು ಸಂವಾದಕ್ಕೆ ಪೂರಕವಾದ ಶಿಷ್ಟಾಚಾರಗಳನ್ನು ಮತ್ತು ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಅನುಸರಿಸುವುದು ಮತ್ತು ಅಂಥಾ ಪ್ರಕ್ರಿಯೆಗಳ ಮೂಲಕ ಸಕಾರಾತ್ಮಕ ತೀರ್ಮಾನಗಳಿಗೆ ತಲುಪುವುದು. ಎರಡನೇ ಬಗೆಯ ಅಂಶಗಳು ಸಾರ್ವಜನಿಕ ವ್ಯಕ್ತಿತ್ವ ಮತ್ತು ಉದಾರವಾದಿ ತತ್ವಗಳ ನಡುವೆ ಇರುವ ಅವಿನಾಭಾವ ಸಂಬಂಧಗಳನ್ನು ಉಳಿಸಿಕೊಳ್ಳುವುದಕ್ಕೆ ಸಂಬಂಧಪಟ್ಟವು.

ಹೀಗಾಗಿ ಆರೆಸ್ಸೆಸ್‌ಗೆ ನಾವು ಎರಡು ಬಗೆಯ ಪ್ರಶ್ನೆಗಳನ್ನು ಮುಂದಿಡಬೇಕಿದೆ. ಮೊದಲನೆಯದಾಗಿ ತನ್ನ ಅಹ್ವಾನವನ್ನು ಸಮರ್ಥಿಸಿಕೊಳ್ಳಲು ಅದು ಉದಾರವಾದಿ ಚೌಕಟ್ಟಿನ ಮೊದಲ ಅಂಶವನ್ನು ಪ್ರತಿಪಾದಿಸಿದರೂ, ಅಂಥಾ ಚರ್ಚೆಯಿಂದ ಹೊರಹೊಮ್ಮಬಹುದಾದ  ಜನತೆಯ ಒಟ್ಟಾರೆ ಒಳಿತಿನ ದೃಷ್ಟಿಯುಳ್ಳ ತೀರ್ಮಾನಗಳನ್ನು ಅದು ಒಪ್ಪಿಕೊಳ್ಳುವುದೇ?ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಪ್ರಜಾತಂತ್ರಿಕ ಪ್ರಕ್ರಿಯೆಗಳ ಬಗ್ಗೆ ಆರೆಸ್ಸೆಸ್ ತೋರುತ್ತಿರುವ ಆಸ್ಥೆಗಳು ಹಾಗೆಯೇ ಮುಂದುವರೆದು ಎಲ್ಲಾ ಮನುಷ್ಯರಲ್ಲೂ ಸಮಾನ ನೈತಿಕ ಘನತೆಯನ್ನು ಕಾಣುವಂಥಾ ಸಾರ್ವತ್ರಿಕ ತತ್ವಗಳನು ಹುಡುಕುವತ್ತ ಸಾಗುವ ತಾರ್ಕಿಕ ಅಂತ್ಯ ಕಾಣಬಹುದೇ? ಎರಡನೆಯದಾಗಿ, ಸಾರ್ವಜನಿಕ ವ್ಯಕ್ತಿತ್ವವುಳ್ಳವರನ್ನು ಒಂದು ಸಂವಾದಕ್ಕೆ ಆಹ್ವಾನಿಸುವುದರಲ್ಲಿ ಏನೂ ತಪ್ಪಿಲ್ಲ ಎಂದು ಅದು ಮರ್ಥಿಸಿಕೊಳ್ಳುವುದಾದರೆ ಮಾಜಿ ರಾಷ್ಟ್ರಪತಿಗಳೊಡನೆ ನಡೆಸುವ ಸಂವಾದಕ್ಕೆ ಅಗತ್ಯವಿರುವ ತಾತ್ವಿಕ ಚೌಕಟ್ಟಿನ ಪ್ರಣಾಳಿಯನ್ನು ರೂಪಿಸಿಕೊಳ್ಳುವ ಜವಾಬ್ದಾರಿಯನ್ನೂ ಸಹ ಅದು ಹೊರಲು ಸಿದ್ಧವಿದೆಯೇ? ಈ ಪ್ರಶ್ನೆಗಳ ಹಿಂದೆ ಒಂದು ಅನುಮಾನವಿದೆ. ಆದರೆ ಅಂಥಾ ಅನುಮಾನದ ಬುನಾದಿ ಇರುವುದು ಉದಾರವಾದಿ ಪ್ರಕ್ರಿಯೆಗಳ ಬಗ್ಗೆ  ಮತ್ತು ತತ್ವಗಳ ಬಗ್ಗೆ ಆರೆಸ್ಸೆಸ್ಸ್ ತೋರುತ್ತಾ ಬಂದಿರುವ ತೋರುಗಾಣಿಕೆಯ ಬದ್ಧತೆಯಲ್ಲೇ ಅಡಗಿದೆ.

ಆರೆಸ್ಸೆಸ್ಸಿನ ವಕ್ತಾರರು ಎಲ್ಲರೂ ಅನುಸರಿಸುವ ಉದಾರವಾದಿ ಪ್ರಕ್ರಿಯೆಗಳು ಮತ್ತು ಶಿಷ್ಟಾಚಾರಗಳನ್ನು ತಾವು ಅನುಸರಿಸುತ್ತೇವೆ ಎಂಬ ವಾದವನ್ನು ಮುಂದಿಡುತ್ತಾ ಮಾಜಿ ರಾಷ್ಟ್ರಪತಿಗಳು ಆರೆಸ್ಸೆಸ್ಸಿನ ಆಹ್ವ್ವಾನವನ್ನು ಒಪ್ಪಿಕೊಳ್ಳಬಾರದಿತ್ತು ಎನ್ನುವವರ ವಾದವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ತನ್ನ ವಿರೋಧಿಗಳು ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸುವಲ್ಲಿ ಆರೆಸ್ಸೆಸ್ ಉದಾರವಾದಿಯಂತೆ ಕಾಣಬಹುದು. ಆದರೆ ಕೇವಲ ಪ್ರಕ್ರಿಯೆಗಳೇ ಅಂತಿಮವಾದುದಲ್ಲ. ಎಲ್ಲಾ ಮನುಷ್ಯರ ಬಗ್ಗೆಯೂ ಸಮಾನ ಕಾಳಜಿಯನ್ನು ತೋರುವಂಥಾ ಸಾರ್ವತ್ರಿಕ ಮೌಲ್ಯಗಳ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಬಲ್ಲಂಥಾ ವಿಷಯಗಳ ಬಗ್ಗೆ ಸಮ್ಮತಿಯಿಂದ ಒಂದು ತೀರ್ಮಾನಕ್ಕೆ ಬರುವಂತೆ ಮಾಡುವಂತಿದ್ದಾಗ ಮಾತ್ರ ಅರ್ಥಪೂರ್ಣವಾಗುತ್ತದೆ. ಮಾನವ ಘನತೆ, ಮೈತ್ರಿ, ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯಗಳೇ ಆ ಸಾರ್ವತ್ರಿಕ ಮೌಲ್ಯಗಳು. ಒಬ್ಬ ಮನುಷ್ಯಜೀವಿಯ ಬೆಲೆಯು ಒಂದು ಪವಿತ್ರ ಪ್ರಾಣಿಗಿಂತ ಕಡಿಮೆಯಲ್ಲ ಎಂದು ಸಹಜವಾಗಿ ಪರಿಗಣಿಸಲು ಸಾಧ್ಯವಾಗುವ ಸಂದರ್ಭವನ್ನು ನಾವು ಸೃಷ್ಟಿಸಬೇಕಿದೆ. ಇಲ್ಲಿ  ಒಂದು ಸಂವಾದವು ಒಂದು ತೀರ್ಮಾನಕ್ಕೆ ಬರುವಂತಾಗಬೇಕು ಎಂದು ಆಗ್ರಹಿಸುವುದಕ್ಕೆ ಕಾರಣವಿದೆ. ಏಕೆಂದರೆ ಇಲ್ಲಿ ಸಂವಾದ ಬಯಸುತ್ತಿರುವ ಆರೆಸ್ಸೆಸ್ ಈಗಾಗಲೇ ಒಂದು ತೀರ್ಮಾನಕ್ಕೆ ಬಂದಾಗಿದೆ. ಉದಾಹರಣೆಗೆ “ತಮ್ಮನ್ನು ತಾವು ಜಾತ್ಯತೀತವಾದಿಗಳು ಎಂದು ಕರೆದುಕೊಳ್ಳುವ ಕ್ರಾಂತಿಕಾರಿಗಳು ವಾಸ್ತವದಲ್ಲಿ ಪೊಳ್ಳು ಜಾತ್ಯತೀತವಾದಿಗಳು” ಎಂಬ ತೀರ್ಮಾನಕ್ಕೆ ಆರೆಸ್ಸೆಸ್ ಬಂದಾಗಿದೆ.

ಒಂದು ಸಂವಾದ ನಡೆಸುವಾಗ ನಾವು ಅಂಥ ತೀರ್ಮಾನಗಳಾಚೆ ಸಾಗಬೇಕಾಗುತ್ತದೆ. ಏಕೆಂದರೆ ಅಂಥಾ ತೀರ್ಮಾನಗಳನ್ನು ವ್ಯಕ್ತಿನಿಷ್ಟವಾಗಿ ಮಾಡಲಾಗುತ್ತದೆಯೇ ವಿನಃ ಅದರ ಹಿಂದೆ ಸಾರ್ವತ್ರಿಕ ಮಾನ್ಯತೆಯು ಒದಗಿಸುವಂಥಾ ನೈತಿಕ ಶಕ್ತಿ ಇರುವುದಿಲ್ಲ. ಇಂಥಾ ತೀರ್ಮಾನಗಳು ಏಕಪಕ್ಷೀಯ ಘೊಷಣೆಗಳಾಗಿರುವುದರಿಂದ ಒಂದು ಬಹಿರಂಗ ಮತ್ತು ಪಾರದರ್ಶಕ ಸಂವಾದದಲ್ಲಿ ತೊಡಗಬಯಸುವ ವ್ಯಕ್ತಿಗಳ ಪರಿವೀಕ್ಷಣೆಯಿಂದ ಹೊರಗುಳಿದುಬಿಡುತ್ತದೆ. ಹೀಗಾಗಿ ನಾವು ಉನ್ನತ ಮೌಲ್ಯಗಳತ್ತ ಸಾಗುವಂಥಾ ತೀಮಾನಗಳನ್ನು ತೆಗೆದುಕೊಳ್ಳಬಲ್ಲ ಮಾನವ ಸಾಮರ್ಥ್ಯದತ್ತ ನಮ್ಮ ಗಮನವನ್ನು ಕೇಂದ್ರೀಕರಿಸಬೇಕೇ ವಿನಃ ಒಬ್ಬ ವ್ಯಕ್ತಿಯತ್ತಲ್ಲ. ಅದೃಷ್ಟವಶಾತ್ ನಮ್ಮ ಸಂವಿಧಾನವು ಇಬ್ಬರು ವ್ಯಕ್ತಿಗಳು ತಮ್ಮ ನಡುವೆ ಸೌಹಾರ್ದಯುತ ಸಾಮಾಜಿಕ ಸಂಬಂಧವನ್ನು ಏರ್ಪಡಿಸಿಕೊಳ್ಳಬಲ್ಲಂಥ ತಾತ್ವಿಕ ಪ್ರೇರಣೆಯನ್ನು ಒದಗಿಸುತ್ತದೆ.

ಯಾವಾಗ ಒಂದು ತತ್ವವನ್ನು ಆಚರಣೆಗೆ ತರಲು ಕಷ್ಟವಾಗುತ್ತದೋ ಆಗ ವ್ಯಕ್ತಿಯನ್ನು ತತ್ವಗಳಿಂದ ಪ್ರತ್ಯೇಕಗೊಳಿಸಿ ವ್ಯಕ್ತಿಯನ್ನು ಮಾತ್ರ ತಮ್ಮ ಸಮರ್ಥನೆಗೆ ಬಳಸಿಕೊಳ್ಳುವುದು ಯಾವುದೇ ಸಂಘಟನೆಗೆ ವ್ಯೂಹಾತ್ಮಕವಾಗಿ ಅಗತ್ಯವಾಗುತ್ತದೆ. ಜಾತಿ ವಿನಾಶ, ಅಥವಾ ಪಿತೃಸ್ವಾಮ್ಯ ಮೌಲ್ಯಗಳ ನಿಯಂತ್ರಣ, ಅಥವಾ ಅಸಮಾನತೆಯನ್ನು ತೊಡೆದುಹಾಕಿ ಎಲ್ಲಾ ಮನುಷ್ಯರ ಘನತೆಯನ್ನು ಖಾತರಿಪಡಿಸುವಂಥ ಮೌಲ್ಯಗಳನ್ನು ಆಧರಿಸಿದ ಆದರ್ಶಗಳನ್ನು ಪಾಲಿಸುವುದು ಕಷ್ಟ. ಅಂಥಾ ಮೌಲ್ಯಗಳನ್ನು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಏಕೆಂದರೆ ಒಮ್ಮೆ ಅವನ್ನು ಒಪ್ಪಿಕೊಂಡರೆ ಶ್ರೇಣೀಕೃತ ಅಸಮಾನತೆಯನ್ನು ಹುದುಗಿಟ್ಟುಕೊಂಡಿರುವ ಈ ಸಮಾಜದ ಮೂಲಭೂತ ಬದಲಾವಣೆಗೆ ಆ ಸಂಘಟನೆಯು ನೈಜ ಬದ್ಧತೆಯನ್ನು ತೋರಬೇಕಾಗುತ್ತದೆ. ಇಂಥಾ ತತ್ವಾದರ್ಶಗಳ ಪ್ರತಿರೂಪವಾಗಿದ್ದ ಬಿ. ಆರ್ ಅಂಬೇಡ್ಕರ್ ಅವರು ಇಂಥಾ ಸಾಮಾಜಿಕ ಸಂಕೋಲೆಗಳು ಎಲ್ಲೆಲ್ಲಿ ಯಾವ್ಯಾವ ರೂಪದಲಿದ್ದವೋ ಅಲ್ಲೆಲ್ಲಾ ಅವನ್ನು ಸುಟ್ಟುಹಾಕಲು ಪ್ರಯತ್ನಿಸಿದರು. ರಬೀಂದ್ರನಾಥ್ ಠಾಗೋರ್, ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರುಗಳು ಅಂಥಾ ಸಾಮಾಜಿಕ ತೊಡಕುಗಳನ್ನು ಹುಟ್ಟುಹಾಕುವ ಸಾಮಾಜಿಕ ಪರಿಸ್ಥಿಯನ್ನೇ ಕಿತ್ತುಹಾಕಬಲ್ಲಂಥ ಪರಿಸ್ಥಿತಿಯನ್ನು ಸೃಷ್ಟಿಸುವ ಕನಸು ಕಂಡಿದ್ದರು. ಈ ಚಿಂತಕರು ಈ ಪರಿವರ್ತನಾಶೀಲ ಮೌಲ್ಯಗಳೇ ಮೂರ್ತಿವೆತ್ತಂತಿದ್ದರಿಂದ ಯಾವುದೇ ಸಂಘಟನೆಗಳಿಗೆ ಈ ವ್ಯಕ್ತಿಗಳನ್ನು ಅವರ ಕ್ರಾಂತಿಕಾರಕ ಚಿಂತನೆಗಳಿಂದ ಪ್ರತ್ಯೇಕಗೊಳಿಸಿ ನೋಡಲು ಸಾಧ್ಯವಾಗಲಿಲ್ಲ.

ಹಾಗಿದ್ದಲ್ಲಿ ಮೌಲ್ಯಗಳಿಂದ ಪ್ರತ್ಯೇಕಗೊಂಡ ವ್ಯಕ್ತಿಗಳನ್ನು ಅನುಸರಿಸುವ  ಬದಲಿಗೆ ಕೇವಲ ತತ್ವಗಳನ್ನು ಅನುಸರಿಸುವ ಸಂಘಟನೆಯಾಗಿ ಪರಿವರ್ತನೆಗೊಳ್ಳುವ ಅಗತ್ಯವಿದೆಯೇ? ಅಂಚಿನಲ್ಲಿರುವ ವ್ಯಕ್ತಿಗಳನ್ನು ಸಾಂಕೇತಿಕವಾಗಿ ಒಳಗೊಳ್ಳುವ ಮೂಲಕ ಇಂಥಾ ಪರಿವರ್ತನೆಯಿಂದ ಪಾರಾಗುವ ಅವಕಾಶವು ಇಂಥಾ ಸಂಘಟನೆಗಳಿಗಿರುತ್ತವೆ. ಆರೆಸ್ಸೆಸ್ ಸಂಘಟನೆಯು ನಮ್ಮ ಸಮಾಜದಲ್ಲಿರುವ ಜಾತಿ ಮತ್ತು ಪುರುಷಾಧಿಪತ್ಯವು ಸೃಷ್ಟಿಸುತ್ತಿರುವ ತೊಡಕುಗಳನ್ನು ನಿರಂತರವಾಗಿ ಪ್ರಶ್ನಿಸುತ್ತಾ ಅದನ್ನು ತೊಡೆದು ಹಾಕುವಂಥಾ ಸಾಮಾಜಿಕ ಪರಿವರ್ತನೆಯನ್ನು ಸಾಧಿಸುವ ಪಾತ್ರವನ್ನು ವಹಿಸುತ್ತದೆ ಎಂಬುದರ ಬಗ್ಗೆ ಯಾವುದೇ ಖಾತರಿಯಿಲ್ಲ. ಇವತ್ತಿನ ಮಟ್ಟಿಗೆ ಹೇಳುವುದಾದರೆ ಅದು ಎರಡನೆ ದಾರಿಯನ್ನು ಅನುಸರಿಸುತ್ತಾ ಆದಿವಾಸಿ, ಅಲ್ಪಸಂಖ್ಯಾತ ಮತ್ತು ದಲಿತ ಹಿನ್ನೆಲೆಯ ವ್ಯಕ್ತಿಗಳನ್ನು ಸಾಂಕೇತಿಕವಾಗಿಯಷ್ಟೇ ಒಳಗೊಳ್ಳುತ್ತಿದೆ. ತತ್ವಾದರ್ಶಗಳು ವ್ಯಕ್ತಿಗಳಲ್ಲಿ ಒಂದು ಬಗೆಯ ನೈತಿಕ ಮತ್ತು ಬೌದ್ಧಿಕ ಜ್ವಾಲೆಯನ್ನು ಹುಟ್ಟುಹಾಕುತ್ತದೆ. ಆದರಿಂದ ಸಂಘಟನೆಗಳು ಇಂಥಾ ನೈತಿಕ ಜ್ವಾಲೆಯು ತಣ್ಣಗಾಗಿರುವ ವ್ಯಕ್ತಿಗಳನ್ನು ಅರಸುತ್ತದೆ. ಅಷ್ಟು ಮಾತ್ರವಲ್ಲ. ಕೆಲವೊಮ್ಮೆ ಸರಿಯಾದ ತತ್ವಾದರ್ಶಗಳು ತಪ್ಪು ವ್ಯಕ್ತಿಯನ್ನು ಆಯ್ಕೆಮಾಡಿಕೊಳ್ಳುವ ಸಾಧ್ಯತೆಯನ್ನೂ ನಾವು ತಳ್ಳಿಹಾಕಲು ಆಗುವುದಿಲ್ಲ. ಉದಾಹರಣೆಗೆ, ಅಂಬೇಡ್ಕರ್‌ವಾದವು ಬಲಪಂಥೀಯ ತತ್ವಸಿದ್ದಾಂತಗಳಿಗೆ ಬಲಿಯಾಗಬಲ್ಲ ದಲಿತರನ್ನು ಆಯ್ಕೆಮಾಡಿಕೊಂಡಿದೆ. ನೈತಿಕವಾಗಿ ದಿವಾಳಿಯಾಗಿರುವ ವ್ಯಕ್ತಿಗಳನ್ನು ಅಥವಾ ಸಂಕುಚಿತ ತತ್ವಗಳನ್ನು ತಲೆಯೊಳಗೆ ತುಂಬಿಕೊಂಡಿರುವ ವ್ಯಕ್ತಿಗಳನ್ನು ಒಳಗೊಳ್ಳುವುದು ಸ್ವಾರ್ಥಪೂರಿತ ರಾಜಕಿಯವನ್ನೇ ಹುಟ್ಟುಹಾಕುತ್ತದೆ.

ಭಾರತದ ರಾಜಕಾರಣವನ್ನು ವ್ಯಕ್ತಿಗಳು ಮತ್ತು ಕಾಲಕಾಲಕ್ಕೆ ಇಂಥಾ ವ್ಯಕ್ತಿಗಳು ಮಾಡುವ ರಾಜಕೀಯ ನಡೆಗಳ ಬಗೆಗಿನ ಚರ್ಚೆಗಳು ನಿರ್ದೇಶಿಸುತ್ತಿವೆ. ಆರೆಸ್ಸೆಸ್ಸ್ ಇದಕ್ಕಿಂತ ಹೊರತಾದದ್ದೇ? ಕಾದು ನೋಡೋಣ.

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.