ಲೋಕಸಭಾ ಚುನಾವಣೆಗೆ ದೇವೇಗೌಡ್ರ ಎಂಟ್ರಿ:ಮೋದಿ ಮಣಿಸಲು ಮಾಜಿ ಪ್ರಧಾನಿ ಮಾಸ್ಟರ್‌ ಪ್ಲಾನ್‌

ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್ ಮೈತ್ರಿ ಸರ್ಕಾರದವನ್ನು ಅಧಿಕಾರಕ್ಕೆ ತಂದು ಬಿಜೆಪಿಯನ್ನು ಬದಿಗಿಟ್ಟ ಬಳಿಕ ಈಗ ಮಾಜಿ ಪ್ರಧಾನಿ ದೇವೇಗೌಡರು ಲೋಕಸಭೆಯಲ್ಲೂ ಬಿಜೆಪಿಯನ್ನೂ ಹೊರಗಿಡಲು ಪ್ರಯತ್ನ ನಡೆಸುತ್ತಿದ್ದು, ಇದಕ್ಕಾಗಿ ರಣತಂತ್ರ ರೂಪಿಸಲು ಸಿದ್ದತೆ ನಡೆಸುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದ ಪಕ್ಷಗಳೆಲ್ಲವೂ ಒಗ್ಗಟ್ಟಾಗಿ ಮೋದಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಸರ್ಕಸ್‌ ನಡೆಸುತ್ತಿವೆ. ಈ ಮಧ್ಯೆ ಮಾಜಿ ಪ್ರಧಾನಿ  ದೇವೇಗೌಡರು ಸಹ ಇದಕ್ಕಾಗಿ ಕಾರ್ಯನಿರತರಾಗಿದ್ದು, ಪಕ್ಷದ ಕಾರ್ಯಕರ್ತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಈಗಾಗಲೆ ಬಿಜೆಪಿ ನಾಯಕರಾದ ಮೋದಿ ಹಾಗೂ ಅಮಿತ್ ಶಾ ಲೋಕಸಭಾ ಚುನಾವಣೆಯ ವರೆಗೂ ರಾಜ್ಯದಲ್ಲಿ ಮೈತ್ರಿ ಸರ್ಕಾರದ ದೋಸ್ತಿ ಹಾಗೇ ಇರಲು ಬಿಡಿ. ಸದ್ಯ ಲೋಕಸಭಾ ಚುನಾವಣೆ ಬಗ್ಗೆ ಗಮನ ಹರಿಸಿ, ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸೋಣ ಎಂದಿದ್ದು ಮೈತ್ರಿ ಸರ್ಕಾರಕ್ಕೆ ಆನೆಬಲ ಬಂದಂತಾಗಿದೆ. ಆದ್ದರಿಂದ  ಲೋಕಸಭಾ ಚುನಾವಣೆಯವರೆಗೂ  ಮೈತ್ರಿ ಸರ್ಕಾರ ಸ್ಥಿರವಾಗಿರಲಿದ್ದು, ಬಿಜೆಪಿ ಯಾವುದೇ ಕಾರ್ಯತಂತ್ರ ರೂಪಿಸುವುದಿಲ್ಲ ಎಂಬುದು ಖಚಿತವಾದಂತಾಗಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಗುರುವಾರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಅಭ್ಯರ್ಥಿಗಳ ಜೊತೆ ಪಕ್ಷದ ಕಚೇರಿಯಲ್ಲಿ ಆತ್ಮಾವಲೋಕನ ಸಭೆ ನಡೆಸಿದ್ದಾರೆ. ಈ ವೇಳೆ ಸೋಲಿಗೆ ಕಾರಣಗಳನ್ನು  ವಿಮರ್ಶಿಸಿದ್ದಲ್ಲದೆ ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜೊತೆಗೂಡಿ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಎಷ್ಟುಸ್ಥಾನ ಲಭಿಸಲಿದೆ ಎನ್ನುವುದಕ್ಕಿಂತ ಕಾಂಗ್ರೆಸ್‌ ಜತೆ ಕೈ ಜೋಡಿಸಿ ಬಿಜೆಪಿಗೆ ಯಾವ ರೀತಿಯಲ್ಲಿ ಹಿನ್ನಡೆ ಉಂಟು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಬೇಕಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು. ಬಿಜೆಪಿಯನ್ನು ಮಣಿಸುವ ಕುರಿತು ಕೆಲಸ ಮಾಡಬೇಕು. ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿಯಾಗಬೇಕು ಎಂದು ಎನ್ನುವ ಮೂಲಕ ಕಾರ್ಯಕರ್ತರನ್ನು ಸಜ್ಜಾಗಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಾದರೂ ಹೆಚ್ಚು ಸ್ಥಾನ ಪಡೆದುಕೊಳ್ಳಲು ಪಕ್ಷವನ್ನು ಸಂಘಟಿಸಬೇಕಾಗಿದೆ. ವಿಧಾನಸಭಾ ಚುನಾವಣೆ ಬಳಿಕ ಒಂದಷ್ಟುದಿನ ಆರೋಗ್ಯ ಸುಧಾರಿಸಿಕೊಳ್ಳಲು ನೈಸರ್ಗಿಕ ಚಿಕಿತ್ಸೆಗಾಗಿ ಹೋಗಲು ತೀರ್ಮಾನಿಸಿದ್ದೆ. ಆದರೆ ಚುನಾವಣೆಗೆ ಸಿದ್ದತೆ ನಡೆಸಬೇಕು ಎನ್ನುವುದರ ಮೂಲಕ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published.