ಸಿಎಂ ವಿರುದ್ಧ ಘೋಷಣೆ ಕೂಗಿದ್ದಕ್ಕೆ ಮಹಿಳೆಯರಿಗೆ ಜೈಲಿನಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌…..?!

ಭೋಪಾಲ್‌ : ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್ ವಿರುದ್ದ ಘೋಷಣೆ ಕೂಗಿ ಜೈಲುಪಾಲಾಗಿದ್ದ ಒಂಬತ್ತು ಮಂದಿ ಮಹಿಳೆಯರು ಜೈಲಿನಲ್ಲಿ ಅನುಭವಿಸಿದ ಯಾತನೆ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಮಹಿಳಾ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಯಲ್ಲಿ 158 ಸೆಂ.ಮೀ. ಇರುವ ಕನಿಷ್ಠ ಎತ್ತರದ ಮಾನದಂಡವನ್ನು ಇಳಿಸುವುದಾಗಿ ಸಿಎಂ ಚೌಹಾಣ್ ಕಳೆದ ವರ್ಷ ಭರವಸೆ ನೀಡಿದ್ದರು. ಆದರೆ, ಸಿಎಂ ಕೊಟ್ಟ ಮಾತಿನಂತೆ, ಈಗ ಪೇದೆ ನೇಮಕಾತಿಯಲ್ಲಿ ಯಾವ ನಿಯಮದಲ್ಲೂ ಬದಲಾವಣೆಯಾಗಿಲ್ಲ. ಪೇದೆ ಹುದ್ದೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಲ್ಲಿ ಬಹಳಷ್ಟು ಮಂದಿ ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಾದರೂ ದೈಹಿಕ ಎತ್ತರದ ವಿಚಾರದಲ್ಲಿ ತಿರಸ್ಕೃತಗೊಂಡಿದ್ದರು. ಎತ್ತರದ ನಿಯಮವನ್ನು ಸಡಿಲಿಸುತ್ತೇನೆಂದು ಸಿಎಂ ಕೊಟ್ಟ ಭರವಸೆ ನಂಬಿ ಈ ಮಹಿಳೆಯರು ಪೇದೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ನೇಮಕಾತಿಗೆ ಅವಕಾಶವಿಲ್ಲದೆ ಈ ಪೇದೆ ಆಕಾಂಕ್ಷಿಗಳು ಹತಾಶಗೊಂಡು ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.

ಆದರೆ ಯಾರೂ ಇವರನ್ನು ಪರಿಗಣನೆಗೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸಿಎಂ ಭಾಷಣ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಘೋಷಣೆ ಕೂಗಿದ್ದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಹಾಕಿದ್ದರು.  ಜಾಮೀನಿನ ಮೇಲೆ ಹೊರಬಂದಿರುವ ಮಹಿಳೆಯರು ಜೈಲಿನಲ್ಲಾದ ನರಕಯಾತನೆ ಬಗ್ಗೆ  ಬಾಯ್ಬಿಟ್ಟಿದ್ದಾರೆ.

ಜಾಮೀನು ಪಡೆದು ಜೈಲಿನಿಂದ ಹೊರಕಳುಹಿಸುವ ಮುನ್ನ ನಮಗೆಲ್ಲ ಪ್ರಗ್ನೆನ್ಸಿ ಪರೀಕ್ಷೆಗೆ ಒಳಪಡಿಸಿದರು ಎಂದು ಈ ಯುವತಿಯರು ಹೇಳಿದ್ದಾರೆ. ಅಲ್ಲದೆ, ಜೈಲಿನಲ್ಲಿರುವ ಚೇಂಜಿಂಗ್ ರೂಮಿಗೆ ಯಾವುದೇ ಸುರಕ್ಷತೆ ಇರಲಿಲ್ಲ. ಪುರುಷ ಕೈದಿಗಳು ಅಲ್ಲಿಗೆ ಬಂದು ಒಳಗೆ ಇಣುಕಿ ನೋಡುತ್ತಿದ್ದರು ಎಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಇನ್ನು, ಮಹಿಳೆಯರ ಮಾಡಿರುವ ಆರೋಪಗಳ ಬಗ್ಗೆ ಮಾತನಾಡಿದ ಮಧ್ಯಪ್ರದೇಶದ ಪೊಲೀಸರು, ಜೈಲಿಗೆ ಬರುವ ಎಲ್ಲಾ ಮಹಿಳೆಯರನ್ನೂ ಗರ್ಭ ಪರೀಕ್ಷೆಗೆ ಒಳಪಡಿಸುವ ನಿಯಮವಿದೆ. ತಾವೂ ಕೂಡ ಅದನ್ನೇ ಪಾಲಿಸಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com