ಕೇರಳ ಗೆಜೆಟೆಡ್‌ ಅಧಿಕಾರಿಗಳ ಸಂಘದಿಂದ ಗೌರಿ ಲಂಕೇಶ್‌ಗೆ ಮರಣೋತ್ತರ ಪ್ರಶಸ್ತಿಯ ಗೌರವ

ಬೆಂಗಳೂರು : ಸಾಮಾಜಿಕ ಕಳಕಳಿ ಮತ್ತು ಕೋಮು ಸೌಹಾರ್ದತೆಗೆ ಬದ್ಧವಾಗಿ ಕ್ರಿಯಾಶೀಲವಾಗಿದ್ದ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳಿಂದ ಹತ್ಯೆಗೀಡಾದ ಗೌರಿ ಲಂಕೇಶ್ ರವರಿಗೆ ಮರಣೋತ್ತರ ಪ್ರಶಸ್ತಿಯನ್ನು ನೀಡಿ ಗೌರವ ಸಲ್ಲಿಸಲು ಕೇರಳ ಗೆಜೆಟೆಡ್ ಅಧಿಕಾರಿಗಳ ಸಂಘ (ಕೆ.ಜಿ.ಒ.ಅ) ನಿರ್ಧರಿಸಿದೆ.
ಈ ಪ್ರಶಸ್ತಿಯನ್ನು ಸಂಘವು ‘ಡಾ.ಎನ್.ಎಂ.ಮಹಮ್ಮದ್ ಅಲಿ ದತ್ತಿ ಪ್ರಶಸ್ತಿ’ ಹೆಸರಿನಲ್ಲಿ ನೀಡಲಿದೆ. ಡಾ.ಮಹಮದ್ ಅಲಿ ಯವರು ಕೇರಳದ ಸರ್ಕಾರಿ ನೌಕರರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅಲ್ಲದೆ, ಮುಖ್ಯವಾಗಿ ಅವರು ಗೆಜೆಟೆಡ್ ಅಧಿಕಾರಿಗಳ ಸಂಘದ ಅದ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ದೀರ್ಘ ಕಾಲ ನಾಯಕತ್ವವಹಿಸಿಕೊಂಡಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು ಸದಾ ಜನಪರವಾಗಿದ್ದವರು. ಹೀಗಾಗಿಯೇ ಅವರು ಅತ್ಯಂತ ಜನಪ್ರಿಯ ವೈದ್ಯರೂ ಆಗಿದ್ದರು. ಸಾಮಾಜಿಕ ಕಳಕಳಿಯುಳ್ಳ ಅವರು ಕೋಮು ಸೌಹಾರ್ದತೆಗಾಗಿ ಶ್ರಮಿಸಿದವರು.
ಅವರ ಮತ್ತೊಂದು ವಿಶೇಷತೆಯೆಂದರೆ ಹಲವಾರು ಮನೋ ವೈಜ್ಞಾನಿಕ, ವೈಚಾರಿಕ ವಿಶ್ಲೇಷಣೆಯುಳ್ಳ ಹಲವು ಪುಸ್ತಕಗಳನ್ನು ಹಾಗೂ ಕಾದಂಬರಿಯನ್ನೂ ಬರೆದಿದ್ದಾರೆ. ಹೀಗಾಗಿ ಅವರ ಹೆಸರಿನಲ್ಲಿ ಸಂಘವು 2016 ರಿಂದ ಪ್ರಶಸ್ತಿಯನ್ನು ನೀಡುತ್ತಿದೆ.
ಈ ಪ್ರಶಸ್ತಿಯು ರೂ. 50,000/-ಗಳು ಮತ್ತು ಒಂದು ಫಲಕವನ್ನು ಒಳಗೊಂಡಿದೆ. ಮೊದಲು ವೈದ್ಯಕೀಯ ಕ್ಷೇತ್ರ, ಕಳೆದ ವರುಷ ಕಾರ್ಮಿಕ ಸಂಘಟನೆ ಮುಖಂಡರಿಗೆ  ಪ್ರಶಸ್ತಿಯನ್ನು ನೀಡಿದೆ. ಈ ಬಾರಿ ಸಾಮಾಜಿಕ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಬೇಕೆಂದು ಎಂದು ಸಮಿತಿಯು ನಿರ್ಧರಿಸಿದ್ದು , ಗೌರಿ ಲಂಕೇಶ್‌ ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಇದೇ 2018 ರ ಜೂನ್ 22 ರಂದು ಮದ್ಯಾಹ್ನ 3 ಗಂಟೆಗೆ ತಿರುವನಂತಪುರದ ವಿ.ಜೆ.ಟಿ. ಹಾಲ್‌ನಲ್ಲಿ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com