ಅಂತೂ-ಇಂತೂ ಸಿಕ್ಕ ಗೌರಿ ಹಂತಕ : ಬಂದೂಕಿನ ಟ್ರಿಗರ್ ಒತ್ತಿದ್ದು ಯಾರು ? full details…

ಅಂತೂ-ಇಂತೂ ಸಿಕ್ಕ ಗೌರಿ ಹಂತಕ : ಬಗೆದಷ್ಟೂ ಆಳ ಭೀಮಾ ತೀರ.. ಭೀಮಾ ತೀರದಿಂದಲೇ ಗುಂಡು ಸಿಡಿಯಿತು.. ಬಂದೂಕಿನ ಟ್ರಿಗರ್ ಒತ್ತಿದ್ದು ಯಾರು ?

ಈ ಭೀಮೆಗೆ ಅದ್ಯಾಕ ಇಷ್ಟು ರಕ್ತದ ದಾಹವೋ ಗೊತ್ತಿಲ್ಲ. ಸದಾ ಗುಂಡಿನಿಂದ ಸಿಡಿಯುತ್ತಲೇ ಸದ್ದು ಮಾಡುತ್ತದೆ. ತೀರ ಇತ್ತೀಚಿನ ದಿನಗಳಲ್ಲಿ ಈ ಭೀಮೆ ಶಾಂತವಾದ ಉದಾಹರಣೆಯೇ ಇಲ್ಲ. ಆದರೆ ಈ ಬಾರಿ ಭೀಮಾ ತೀರ ಸದ್ದು ಮಾಡಿದ್ದು ಇಡೀ ದೇಶ ಬೆಚ್ಚಿ ಬೀಳಿಸುವ ಸುದ್ದಿಗೆ. ಈ ಭೀಮಾ ತೀರದಲ್ಲಿರುವವರು ಇಂತವಕ್ಕೂ ಮಹೂರ್ತ ಫಿಕ್ಸ್ ಮಾಡ್ತಾರಾ ? ಅನ್ನುವಷ್ಟು ರಾಜ್ಯ ಹಾಗೂ ದೇಶ ಬೆಚ್ಚಿ ಬಿದ್ದಿದೆ. ಇಡೀ ದೇಶದ ಗಮನ ಸೆಳೆದ ಪ್ರಗತಿ ಪರ ಚಿಂತಕಿ, ಪ್ರಖರ ಸಮಾಜವಾದಿ, ಸಮಾನತವಾದಿ ಪತ್ರಕರ್ತೆ ಗೌರಿ ಲಂಕೇಶ ರ ಹತ್ಯೆ ಇಡೀ ನಾಡು ಹಾಗೂ ಪ್ರಜ್ಞಾವಂತರನ್ನು ಕಂಗೆಡುವಂತೆ ಮಾಡಿತ್ತು. ಗೌರಿಯನ್ನು ಗುಂಡಿಟ್ಟು ಕೊಂದಿದ್ದು ಹಿಂದೂತ್ವವಾದಿಗಳು, ಮತೀಯ ಅಫೀಮು ತಿಂದವರು ಎಂಬ ಕೂಗು ಕೇಳುತ್ತಲೇ ಇತ್ತು. ಆದರೆ ಗೌರಿಯನ್ನು ಹತ್ಯೆ ಮಾಡಿದ ಬಂದೂಕಿಗೆ ಗುಂಡು ವಿಜಯಪುರದ ಭೀಮಾ ತೀರದಿಂದ ಬಂದಿತ್ತು ಎನ್ನುವ ಸತ್ಯ ಈಗ ಎಲ್ಲರ ನಿದ್ದೆ ಕೆಡಿಸಿದೆ.

ಪತ್ರಕರ್ತೆ ಗೌರಿ ಲಂಕೇಶ ಗೆ  ಗುಂಡಿಟ್ಟಿ ಪ್ರಮುಖ ಆರೋಪಿಯನ್ನು sit ತಂಡ ಹೆಡೆ ಮುರಿ ಕಟ್ಟಿ ತಂದಿದೆ. ಯಾರಾತ ? ಅವನ ಹಿನ್ನೆಲೆ ಏನು ? ಅಂತ ಕೆದಕುತ್ತ ಹೋದರೆ ಸಿಗುವದು ರೋಚಕ ಭೀಮಾ ತೀರದ ಕಥೆ.  ರಾಜ್ಯದಲ್ಲಿ ಎಲ್ಲೆ ಕೊಲೆ ನಡೆದ್ರನೂ ಅಪರಾಧಿಗಳ ಹೆಡೆ ಮುರಿ ಕಟ್ಟಲು ಪೊಲೀಸರು ಬರುವದೇ ವಿಜಯಪುರಕ್ಕೆಹೇಳಿ ಕೇಳಿ ಭೀಮಾ ತೀರದ ಬೀಭತ್ಸಲೋಕ ಚಂಬಲ್ ಕಣಿವೆ ನಾಚಿಸುವಂತದ್ದು.

ಗೌರಿಯನ್ನು ಗುಂಡಿಟ್ಟುಇ ಹತ್ಯೆ ಮಾಡಿದ್ದು ಎಂದು ತುಂಬಿದ ಕೋರ್ಟ್ ನಲ್ಲಿ ತಪ್ಪೊಪ್ಪಿಕೊಂಡ  ಆರೋಪಿಯ ಹೆಸರು  ಪರಶುರಾಮ್  ಅಶೋಕ ವಾಗ್ಮೋರೆ. 26 ವರ್ಷದ ಚಿರ ಯುವಕ. ನೋಡೋಕೆ ಸುಂದರ, ಕುಳ್ಳನಾಗಿದ್ದರು ರಾತ್ರೋ ರಾತ್ರಿ ಕುಖ್ಯಾತನಾಗುವಷ್ಟು ಪಳಗಿದ ಪಾತಕಿ. ಮೊದಲಿನಿಂದಲೂ ಗೌರಿ ಹತ್ಯೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಆಗಾಗ ವಿಜಯಪುರಕ್ಕೆ ಬಂದು ಹೋಗುತ್ತಿತ್ತು. ಇಲ್ಲಿನ ಭೀಮಾ ತೀರದ   ಆಸು-ಪಾಸುಗಳಲ್ಲಿ ಒಂದು ಕಣ್ಣನ್ನಿಟ್ಟಿತ್ತು.   ವಿಜಯಪುರದಲ್ಲಿ ಹೆಚ್ಚುವರಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ಜಿನೇಂದ್ರ ಖಣಗಾವಿಯವರು ಈ ವಿಶೇಷ ತನಿಖಾ ತಂಡದಲ್ಲಿದ್ದದ್ದು ಈ ತನಿಖೆಗೆ ಮತ್ತಷ್ಟು ಸಹಕಾರಿಯಾಯಿತು.  ಈ ಅಧಿಕಾರಿ ನೇತೃತ್ವದ ತಂಡ  ವಿಜಯಪುರದ ಕೇಂದ್ರ ಕಾರಾಗೃಹ ದರ್ಗಾ ಜೈಲಿಗೂ ಭೇಟಿ ನೀಡಿ ಅಲ್ಲಿನ ಕುಖ್ಯಾತ ಹಂತಕರನ್ನು, ಅಕ್ರಮ ಬಂದೂಕು ಮಾರಾಟಗಾರರನ್ನು, ಸುಫಾರಿ ಹಂತಕರನ್ನು ಮಾತನಾಡಿಸಿ ತಮಗೆ ಬೇಕಾದಷ್ಟು ಮಾಹಿತಿ ಕಲೆ ಹಾಕಿಯೇ ಈ ಗೌರಿ ಹಂತಕನ್ನು ಅಂತಿಮವಾಗಿ ಭಾನುವಾರ ಆತನ ಮನೆಯಿಂದ ಎತ್ತಾಕಿಕೊಂಡು ಹೋಗಿ ವಿಚಾರಣೆ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿ ನಂತರ 14 ದಿನಗಳ ವಿಚಾರಣೆಗೆ ತೆಗೆದುಕೊಳ್ಳುವಲ್ಲಿಯೂ ಎಸ್ಐಟಿ ತಂಡ ಯಶಶ್ವಿಯಾಯಿತು.

ಅವನು ಪರಶುರಾಮ ಅಶೋಕ ವಾಘ್ಮೋರೆ

ಮೂಲತ: ವಿಜಯಪುರ ಜಿಲ್ಲೆಯ ಸಿಂಧಗಿ  ಪಟ್ಟಣದ ಬಸವ ನಗರ ನಿವಾಸಿ ಈ ಪರಶುರಾಮ್  ವಾಘ್ಮೋರೆ. ಕಳೆದ ಹಲವು ದಿನಗಳ ಹಿಂದೆ sit ತಂಡ ಮಹಾರಾಷ್ಟ್ರದ ಅಮೋಲ್ ಕಾಳೆ ಹಾಗೂ ವಿಜಯಪುರ ತಾಲೂಕಿನ ರತ್ನಾಪುರ ಗ್ರಾಮದ ಮನೋಹರ ಯಡವೆಯನ್ನು ಬಂಧಿಸಿ ಅವರಿಂದ ಮತ್ತಷ್ಟು ಮಾಹಿತಿ ಕಲೆ ಹಾಕಿಯೇ ಈ ಪರಶುರಾಮ್ ನನ್ನ ತಡವಿತು sit ಅಧಿಕಾರಿಗಳ ತಂಡ. ಮೊದಲು ಬಂಧಿತನಾದ ನವೀನ್ ಅಲಿಯಾಸ್ ಹೊಟ್ಟೆ ಮಂಜ ನೀಡಿದ ಮಾಹಿತಿ ಆಧಾರಿಸಿ ಈ ಇಬ್ಬರನ್ನು ವಿಚಾರಣೆ ಮಾಡಲಾಗಿತ್ತು. ಅದರಂತೆ ಅಮೋಲ್ ಕಾಳೆ, ಮನೋಹರ ಯಡವೆ ಹಾಗೂ ಪರಶುರಾಮ್ ವಾಘ್ಮೋರೆ ಎಲ್ಲರೂ ಸೇರಿಕೊಂಡಿದ್ದು ಗೋವಾದ ಸನಾತನ ಸಂಸ್ಥೆಯ ಸಮಾವೇಶವೊಂದರಲ್ಲಿ. ಅಲ್ಲಿಂದಲೇ ಈ ಹತ್ಯೆಯ ಕುರಿತಾದ ತಯಾರಿ ನಡೆಯತೊಡಗಿತು. ಅಮೋಲ ಕಾಳೆ ಹಾಗೂ ಮನೋಹರ ಯಡವೆ ಸಿಂದಗಿಯಿಂದ ಪರಶುರಾಮ್ ನನ್ನ ಕರೆದುಕೊಂಡು ಬೆಳಗಾವಿ ಗೆ ಕರೆದುಕೊಂಡು ಬಂದು ಬಂದೂಕಿನ ತರಬೇತಿ ನೀಡಿದ್ದರು.  
ಪಾಕ್ ಧ್ವಜಕ್ಕೆ ಮುತ್ತಿಟ್ಟಿದ್ದ, ಪಾಕ್ ಧ್ವಜ ಹಾರಿಸಿದ್ದ, ಪಾಕ್ ಧ್ವಜ ಸುಟ್ಟಿದ್ದ

 ಪರಶುರಾಮ್ನ ಹಿನ್ನೆಲೆಯನ್ನೊಮ್ಮೆ ಕೆದಕಿದಾಗ ನಾವು 2012 ಇಸ್ವಿಯ ಕ್ಯಾಲೆಂಡರ್ ನತ್ತ ತಿರುಗಿಸಬೇಕು. ಸಿಂದಗಿ ಪಟ್ಟಣದ ಬಸವನಗರದ ಅಶೋಕ ವಾಘ್ಮೋಡೆ ಎಂಬ ಮರಾಠಾ ಸಮುದಾಯಕ್ಕೆ ಸೇರಿದವರ ಮಗ ಈ ಪರಶುರಾಮ್ . ತಂದೆ-ತಾಯಿಗೆ ಒಬ್ಬನೇ ಮಗ. ಹೇಳಿಕೊಳ್ಳುವದಕ್ಕೆ ಅಂತ ಡಿಪ್ಲೋಮಾ ಅಡ್ಮೀಶನ್ ಮಾಡಿದ್ದ ಆದರೆ  ಕಾಲೇಜಿಗೆ ಹೋಗಲೇ ಇಲ್ಲ. ಮರಾಠಾ ಸಮುದಾಯದ ಗೋಂಧಳಿ ಉಪ ಜಾತಿಗೆ ಸೇರಿದ ಈತನ ತಲೆಯಲ್ಲಿ ಮರಾಠಾ ಹೃದಯ ಸಾಮ್ರಾಟ್ ಶಿವಾಜಿ ಮಹಾರಾಜ್ ಬಗ್ಗೆ ಅತೀವ  ಅಭಿಮಾನ ಇತ್ತು. ಒಬ್ಬನೇ ಮಗ ಉಂಡಾಡಿ ಗುಂಡನಂತೆ ಬೆಳೆದರೂ ಹೆತ್ತವರು ತಲೆ ಕೆಡಿಸಿಕೊಳ್ಳಲಿಲ್ಲ. ತಾಯಿ ಜಾನಕಿದೇವಿ ಟೇಲರಿಂಗ್ ಮಾಡುತ್ತ ಕುಟುಂಬವನ್ನು ಸಾಕುತ್ತಿದ್ದರು. ಆದರೆ ಈ ಪರಶುರಾಮ್ ನ ತಲೆಯಲ್ಲಿ ಆಗಲೇ ಹಿಂದೂತ್ವದ ಪಿತ್ತ ನೆತ್ತಿಗೇರಿ ಬಿಟ್ಟಿತ್ತು. ಅನ್ಯ ಕೋಮಿನವರನ್ನು ಕಂಡರೆ ಉರಿದು ಬೀಳುತ್ತಿದ್ದ. ಅದರಲ್ಲೂ ಹಿಂದೂ ಯುವತಿಯರ ಸುತ್ತ ಯಾರಾದರೂ ಮುಸ್ಲಿಂ ಹುಡುಗರು ಸುತ್ತಾಡಿದರೆ ಹೋಗಿ ಗಲಾಟೆ ಮಾಡುತ್ತಿದ್ದ. ಆಗಲೇ ರಾಜ್ಯದಲ್ಲಿ ಪ್ರಮೋದ್ ಮುತಾಲಿಕ್ ಭಜರಂಗ ದಳ ಬಿಟ್ಟು ಶ್ರೀ ರಾಮ ಸೇನೆ ಸಂಘಟನೆ ಹುಟ್ಟು ಹಾಕಿದ್ದರು.ಅವರಿಗೆ ತಾಲೂಕು ಘಟಕಗಳಿಗೆ ಹೊಸ ಹುರುಪಿನ ಹುಡುಗರು ಬೇಕಾಗಿತ್ತು. ಪರಶುರಾಮ್ ನಿಗೂ ರಾತ್ರೋ ರಾತ್ರಿ ಫೇಮಸ್ಸ್ ಆಗಬೇಕು ಎಂಬ ಹುಚ್ಚಿತ್ತು.

ಅದು 31/12/2011 ಮಧ್ಯರಾತ್ರಿ ಹೊಸ ವರ್ಷಾಚರಣೆ ಮುಗಿಸಿ ಬರುತ್ತಿದ್ದ ಕೆಲವರಿಗೆ ಸಿಂದಗಿ ತಹಶೀಲ್ದಾರ ಕಛೇರಿ ಮುಂದೆ ಇರುವ ಧ್ವಜ ಸ್ತಂಭದಲ್ಲಿ ಪಾಕಿಸ್ತಾನ ಧ್ವಜ ಹಾರಾಡುತ್ತಿತ್ತು. ನಸುಕಿನ ಜಾವದ ಹೊತ್ತಿಗೆ ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಆಗಷ್ಟೇ ಚಿಗಿತುಕೊಂಡಿದ್ದ ಶ್ರೀ ರಾಮಸೇನೆಯ ವಿದ್ಯಾರ್ಥಿ ಘಟಕ ಹಾಗೂ ಹಿಂದೂ ಪರ ಸಂಘಟನೆಗಳು ಘಟನೆಯನ್ನು ಖಂಡಿಸಿ ಬೀದಿಗಿಳಿದಿದ್ದವು. ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಪ್ರಖರ ಹಿಂದೂತ್ವದ ಸ್ವರೂಪ ತೋರಿಸಿ ಮಾಧ್ಯಮಗಳಲ್ಲಿ ಹಿಂದೂತ್ವದ ರಕ್ಷಕರೆಂಬ ಲೆಬಲ್ ಅಂಟಿಸಿಕೊಂಡು ದೇಶ ಭಕ್ತರಂತೆ ಓಡಾಡಿದ್ದರು ಈ ಶ್ರೀರಾಮ ಸೇನೆಯ ವಿದ್ಯಾರ್ಥಿ ಘಟಕದ ಪುಂಡರು.  ಇದನ್ನು ಮುಸ್ಲಿಂ ಯುವಕರೇ ಹಾರಿಸಿದ್ದಾರೆ ಕೂಡಲೇ ಅವರನ್ನು ಬಂಧಿಸಬೇಕು ಎಂದು ಸಾಕಷ್ಟು ಕೂಗಾಟ, ಚೀರಾಟ ನಡೆಸಿದ್ದರು.ಆಗಿನ  ಎಸ್ಪಿ ಡಿ.ಸಿ. ರಾಜಪ್ಪ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ ದಿಎಸ್ಪಿ ನೇತೃತ್ವದಲ್ಲಿ ತನಿಖೆಗಾಗಿ ಒಂದು ತಂಡ ರಚಿಸಿದ್ದರು. ಅಂದಿನ ಡಿಎಸ್ಪಿ  ಮುತ್ತುರಾಜ್, ಸಿಪಿಐ ಗಳಾದ ಸಿದ್ದೇಶ್ವರ ಕೃಷ್ಣಾಪುರ, ಚೀದಂಬರ ಮಡಿವಾಳರ ಎಂಬ ದಷ್ಟು ಪುಷ್ಟ ದಕ್ಷ ಪೊಲೀಸ ಅಧಿಕಾರಿಗಳ ಟಿಂ ಇದಾಗಿತ್ತು. ಘಟನೆ ನಡೆದ 4 ದಿನಗಳಲ್ಲಿ ಅಸಲಿ ಆರೋಪಿಗಳನ್ನು ಪತ್ತೇ ಹಚ್ಚಿ ನಕಲಿ ದೇಶ ಭಕ್ತರ ಕರಾಳ ಮುಖವನ್ನು ತೋರಿಸಿಕೊಟ್ಟಿತು.

ಪ್ರಕರಣ ದ ಗಂಭಿರತೆ ಅರಿತ  ಸಿಪಿಐ ಸಿದ್ದೇಶ್ವರ ಕೃಷ್ಣಾಪುರ ಆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ ಸಿಬ್ಬಂದಿ ಯ ಗಸ್ತಿನ ಬಗ್ಗೆ  ಹಾಗೂ ಅಂದಿನ ಘಟನಾವಳಿ ಬಗ್ಗೆ ಮಾಹಿತಿ ತರಿಸಿಕೊಂಡರು. ಅಂದು ರಾತ್ರಿ ತಹಶೀಲ್ದಾರ ಕಛೇರಿ ಹತ್ತಿರ ಒಂದು ಬೈಕ್ ನಿಂತಿತ್ತು. ಆ ಬೈಕ್ ಯಾರದ್ದೆಂದು ವಿಚಾರಿಸಲಾಗಿ  ಅಂದು ಅನೀಲಕುಮಾರ  ಸೋಲಂಕರ ಮತ್ತು ಅರುಣ ವಾಘ್ಮೋರೆ ಎಂಬುವವರು ಆ ಬೈಕ್ ಬಳಿಸಿದ್ದರು. ಕೇಳಿದರೇ, ಇದೀಗ ತಾನೇ ವಿಜಯಪುರದಿಂದ ಹೊಸ ವರುಷ ಆಚರಣೆ ಮಾಡಿ ನಿಂತಿದ್ದೇವೆ ಎಂದಿದ್ದರು. ಇದೀಷ್ಟೇ ಸಾಕಾಗಿತ್ತು ಸಿಪಿಐ ಸಿದ್ದೇಶ್ವರ ಕೃಷ್ಣಾಪುರ ಗೆ ಅವರನ್ನು ತಂದು ವಿಚಾರಣೆ ಮಾಡಲಾಗಿ ಅಸಲಿ ವಿಷಯ ಬಯಲಿಗೆ ಬಿತ್ತು. ಅಂದು ಪಾಕ್ ಧ್ವಜ ಹಾರಿಸಿದ್ದು  ಬೇರೆ ಯಾರೂ ಅಲ್ಲ ಅಂದಿನ ಶ್ರೀ ರಾಮಸೇನೆಯ ವಿದ್ಯಾರ್ಥಿ ಘಟಕದ ಸದಸ್ಯರು ಎಂಬ ಆಘಾತಕಾರಿ ವಿಷಯ ಹೊರಗೆ ಬಂತು.

ಶ್ರೀರಾಮ ಸೇನೆಯ ವಿದ್ಯಾರ್ಥಿ ಘಟಕದ ಅಧ್ಯಕ್ಷ   ರಾಕೇಶ ಸಿದ್ರಾಮಯ್ಯ ಮಠ  (19),  ಮಲ್ಲನಗೌಡ ವಿಜಯಕುಮಾರ ಪಾಟೀಲ್ (18), ಪರಶುರಾಮ  ಅಶೋಕ ವಾಘ್ಮೋರೆ( 20), ರೋಹಿತ ಈಶ್ವರ ನಾವಿ (18), ಅರುಣ ವಾಘ್ಮೋರೆ (20), ಸುನೀಲ ಮಡಿವಾಳಪ್ಪ ಅಗಸರ (18) ಒಟ್ಟು 6 ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ 3 ನೇ ಆರೋಪಿಯಾಗಿರುವ ಪರಶುರಾಮ್ ತನ್ನ ಮನೆಯಲ್ಲಿ ಪಾಕ್ ಧ್ವಜ ಹೊಲಿದಿದ್ದ ನಂತೆ. ಆನಂತರ ಈ ಪ್ರಕರಣದಲ್ಲಿ ಎಲ್ಲರಿಗೂ ಜಾಮೀನು ಸಿಕ್ಕು ಈಗ ಪ್ರಕರಣವೇ ಬಿದ್ದು ಹೋಗಿದೆ. ಪ್ರಕರಣದಿಂದ ಹೊರ ಬಂದ ಪರಶುರಾಮ್ ಅಂದಿನ ತನಿಖಾಧಿಕಾರಿಗಳನ್ನು ಭೇಟಿ ಮಾಡಿ ಸರ್, ನಾವ ತಿಳಿಲಾರದ ಮಾಡಿದೀವಿ ಸರ್ ನಮ್ಮ ತಪ್ಪ ನನಗ ಅರ್ಥ ಆಗೈತಿ ಅಂತ ಪಶ್ಚಾತಾಪ ಪಟ್ಟಿದ್ದನಂತೆ. ಅಂದು 20 ವರ್ಷದ  ಅಮಾಯಕ ಪರಶುರಾಮ್ ಇಂದು 26 ವರ್ಷದ ಅನಾಹುತಕಾರಿ ಹಂತಕನಾಗಿ ಬೆಳೆದಿದ್ದು ಬೆಚ್ಚಿ ಬೀಳಿಸುವ ಸಂಗತಿ.

ಅದಾದ ನಂತರ ವಿಜಯಪುರ ಜಿಲ್ಲೆಯಲ್ಲಿ ಪರಶುರಾಮ್ಸೈಬರ್ ಕೆಫೆ ನಡೆಸುತ್ತಿದ್ದ. ಹಿಂದೂ ಪರ ಸಂಘಟನೆಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿರಲಿಲ್ಲ. ಆದರೆ ಗುಪ್ತವಾಗಿ ತನ್ನ ಕಾರ್ಯಾಚರಣೆ ಮಾಡುತ್ತಿದ್ದ. ಕೇಂದ್ರ ಸರ್ಕಾರಿ ಯೋಜನೆಗಳಾದ ಪ್ರಧಾನ ಮಂತ್ರಿ
ಜನ್ದನ್​, ಆವಾಸ್ ಯೋಜನೆಗಳ ಆನ್ಲೈನ್ಅರ್ಜಿ ಭರ್ತಿ ಮಾಡ್ತಿದ್ದ ಎನ್ನುತ್ತಾರೆ ಪರಶುರಾಮ್ರನ್ನು ಹತ್ತಿರದಿಂದ ನೋಡಿದ ಜನ.  

ಇದಲ್ಲದೇ ಈತ ಹಾಗೂ ಇತನ ಕಟ್ಟರ್ ಹಿಂದೂತ್ವ ವಾದಿ ಗ್ಯಾಂಗ್  ಒಂದಿಷ್ಟು ಕೋಮು ಧಂಗೆ ಕೆರಳುವ ಕೆಲಸವನ್ನು ಮಾಡಿದ್ದು ಅದು ಯಾರ ಕಣ್ಣಿಗೂ ಬಿದ್ದಿರಲಿಲ್ಲ.ಒಮ್ಮೆ  ದೇವಾಲಯದ ಗೋಡೆಗೆ ಪಾಕಿಸ್ತಾನ ಧ್ವಜದಲ್ಲಿರುವಂತೆ ಚಂದ್ರ ಹಾಗೂ ನಕ್ಷತ್ರವನ್ನು ಬರೆದಿದ್ದ. ಮತ್ತೊಮ್ಮೆ ಮಸೀದಿಯೊಂದರ ಮೇಲೆ ಓಂ ಎಂದು ಬರೆದು ಹಿಂದೂ-ಮುಸ್ಲಿಂ ಕೋಮು ಸಂಘರ್ಷ ಮಾಡುವ ಪ್ಲಾನ್ ಮಾಡಿದ್ದ. ಆದರೆ ಸಿಂದಗಿಯ ಜನ ಇದಕ್ಕೆ ತಲೆ ಕೆಡಿಸಿಕೊಂಡಿರಲೇ ಇಲ್ಲ. ಹಾಗಾಗಿಯೇ ಸಿದ್ಧಗೊಂಡಿದ್ದು ಈ ಪಾಕಿಸ್ತಾನ ಧ್ವಜ ಹಾರಾಟ. ಅಚ್ಛರಿ ಅಂದ್ರೆ ತಾನೇ ಹೊಲೆದು ತಾನೇ ಪಾಕ್ ಧ್ವಜ ಸುಡ್ತಾನೆ. ಒಂದು ಫೋಟೋ ದಲ್ಲಿ ಪಾಕ್ ಧ್ವಜಕ್ಕೆ ಮುತ್ತಿಡ್ತಾನೆ. ಇಂತಹ ಮನಸ್ಥಿತಿಗೆ ಏನನ್ನಬೇಕೋ ತಿಳಿಯದು ಎನ್ನುತ್ತಾರೆ ಇತನನ್ನು ಬಲ್ಲವರು. ಪಾಕ್ ಧ್ವಜ ಹಾರಾಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ರಾಕೇಶ ಮಠ ಈಗಲೂ ಹಿಂದೂ ಪರ ಸಂಘನೆಯೊಂದರ ಪ್ರಮುಖ. ಗೌರಿ ಹತ್ಯೆಯ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಸುನೀಲ ಅಗಸರ ನನ್ನು ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ.

ಇಲ್ಲಿಯವರೆಗೂ ಭೀಮಾ ತೀರದ ಹಂತಕರು ತಮ್ಮ ತಮ್ಮ ವಯಕ್ತಿಕ ದ್ವೇಷಕ್ಕಾಗಿ ಹತ್ಯೆ ಮಾಡುತ್ತಿದ್ದರು.ದಾಯಾದಿಗಳ ಕಲಹಕ್ಕಾಗಿ ಹೆಣ ಬೀಳುತ್ತಿದ್ದವು. ತಮಗೆ ಸಂಬಂಧವೇ ಇರದಿದ್ದ ವಿಷಯದಲ್ಲಿ ಈ ಭೀಮಾ ತೀರದ ಹಂತಕರು ತಲೆ ಹಾಕುತ್ತಿರಲಿಲ್ಲ. ಆದರೆ ತೀರಾ ಇತ್ತೀಚಿಗೆ ಹಣಕ್ಕಾಗಿ ಸುಫಾರಿ ಪಡೆದು ಕೊಲೆ ಮಾಡುತ್ತಿದ್ದರು. ಆದರೆ ಒಂದು ಸೈದ್ಧಾಂತಿಕ ಭಿನ್ನತೆಗಾಗಿ ಕೊಲೆ ಮಾಡುವ ಹಂತಕ್ಕೆ ಬಂದರಾ ಭೀಮೆಯ ತೀರದ ಹುಡುಗರು ? ಇದು ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದೆ.

  ಹೌದು ಈ ಭಾಗದಲ್ಲಿ 50 ರೂಪಾಯಿಗಳಿಗೂ ಹೆಣ ಬೀಳುತ್ತವೆ. ಸಾಕ್ಷಿ ಹೇಳಲೂ, ಹೇಳಿಸಲೂ ಹೆಣ ಬೀಳುತ್ತಿದ್ದವು. ಆದರೆ ಗೌರಿ ಲಂಕೇಶ್  ರನ್ನ ಹತ್ಯೆ ಮಾಡುವಷ್ಟು ಪರಶುರಾಮ್ ಹಿಂದೂತ್ವದ ಅಫೀಮ್ ನ ಅಮಲೇರಿಸಿಕೊಂಡಿದ್ದನಾ ? ಹಾಗಾದರೆ ಈ ಅಫೀಮ್ ನ್ನ ಆತನ ತಲೆಗೆ ತುಂಬಿದ್ದು ಯಾರು ? ಎಸ್ಐಟಿ ಅಧಿಕಾರಿಗಳು ಈ ಮೂಲಕ್ಕೆ ಕೈ ಹಾಕಬೇಕು. ಗೌರಿ ಹತ್ಯೆಗಾಗಿ ಪರಶುರಾಮ್ ವಾಗ್ಮೋಡೆ ಬಂದೂಕು ಹಿಡಿದಿದ್ದಾನೆ. ಆದರೆ ಬಂದೂಕಿನ ಟ್ರಿಗರ್ ಒತ್ತಿದ್ದ ಹಿಂದಿನ ಕಾಣದ ಕೈಗಳು ಯಾವುವು ? ಆ ಮೂಲ ಪತ್ತೇಯಾಗಲಿ.

 ಗುರು

Leave a Reply

Your email address will not be published.

Social Media Auto Publish Powered By : XYZScripts.com