ಮಳೆಗೆ ಚಾರ್ಮಾಡಿ ಘಾಟ್ ಗುಡ್ಡ ಕುಸಿತ : ಮಂಜುನಾಥನ ದರ್ಶನಕ್ಕಿಲ್ಲ ಅವಕಾಶ, ಭಕ್ತರಿಗೆ ನಿರಾಶೆ

ಮಂಗಳೂರು : ಶಿರಾಡಿ ಘಾಟ್​ನಲ್ಲಿ  ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ರಾಜ್ಯದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದ್ದ ಚಾರ್ಮಾಡಿ  ಘಾಟ್ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಳೆದ ರಾತ್ರಿ  ಗುಡ್ಡ ಕುಸಿತ ಸಂಭವಿಸಿತ್ತು.

ಚಾರ್ಮಾಡಿ ಘಾಟ್​ನಲ್ಲಿ ಬರುವ ತಿರುವು ರಸ್ತೆಗಳಲ್ಲಿ  ಗುಡ್ಡ ಕುಸಿದಿದ್ದು, ಕೆಲವೆಡೆ ಮರಗಳು ಧರೆಗುರುಳಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಇದ್ರಿಂದಾಗಿ ಕಳೆದ ರಾತ್ರಿ ಧರ್ಮಸ್ಥಳ ಮಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರು ಘಾಟಿಯಲ್ಲಿ ಸಿಲುಕಿದ್ದು ರಾತ್ರಿ ಇಡೀ ಮಳೆ ಹಾಗೂ‌ ಚಳಿಯಲ್ಲಿ ಘಾಟಿಯಲ್ಲಿಯೇ ಪರದಾಡುವಂತಾಗಿದೆ.‌ಈ ನಡುವೆ ಗುಡ್ಡ ಕುಸಿತ ಉಂಟಾದ ಸ್ಥಳಗಳಲ್ಲಿ ತೆರವು ಕಾರ್ಯಚರಣೆಯಲ್ಲಿ ಸ್ಥಳೀಯರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ‌ ತೊಡಗಿದ್ದಾರೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆಗೂ ಸಹ ಅಡಚಣೆ ಉಂಟಾಗಿದೆ. ಈಗಾಗಿ ಬೆಂಗಳೂರು ಮತ್ತು        ಚಿಕ್ಕಮಂಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳನ್ನು ಕೊಟ್ಟಿಗೆಹಾರದಿಂದ  ಕುದುರೆಮುಖ, ಎಸ್ ಕೆ ಬಾರ್ಡರ್ ಮೂಲಕ ಸಂಪರ್ಕ ‌ಕಲ್ಪಿಸಲಾಗಿದೆ.‌

ಈ‌ ನಡುವೆ ಚಿಕ್ಕಮಗಳೂರು ಜಿಲ್ಲೆಯ ‌ಮಲೆನಾಡು ಭಾಗದಲ್ಲಿ ಧಾರಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಇತರೆಡೆ ಸಹ ಮಳೆಯಿಂದಾಗಿ ಅವಘಡಗಳು ಸಂಭವಿಸಿದ್ದು ಕೊಪ್ಪ ತಾಲೂಕಿನ‌ ಸೂರ್ಯ ದೇವಸ್ಥಾನದ ಬಳಿ ಕಳೆದ ಒಂದು ತಿಂಗಳ ಹಿಂದೆ ನಿರ್ಮಾಣವಾಗಿದ್ದ ಸೇತುವೆ ಕುಸಿದಿದೆ. ಇನ್ನು  ಜಯಪುರ ಬಳಿಯ ವರ್ತೇಕಲ್ಲು ಗಣಪತಿ‌ ದೇವಾಲಯದ ಬಳಿಯೂ ಭೂ‌ ಕುಸಿತ ಉಂಟಾಗಿದೆ.‌

ತೆರವು ಕಾರ್ಯಚರಣೆಗೆ ಮಳೆ‌ ಒಂದೆಡೆಯಾದರೆ ಮತ್ತೆ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗುತ್ತಿರುವ ಹಿನ್ನಲೆಯಲ್ಲಿ  ಲೋಕಪಯೋಗಿ‌ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಚಾರ್ಮಾಡಿ ಘಾಟ್‌ ಗುಡ್ಡ ಕುಸಿತದ ಬಗ್ಗೆ ಪರಿಶೀಲನೆ  ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com