ಮಾನನಷ್ಟ ಮೊಕದ್ದಮೆ : ಮಹಾರಾಷ್ಟ್ರ ಕೋರ್ಟ್ ನಲ್ಲಿ ರಾಹುಲ್ ವಿರುದ್ಧ ಆರೋಪ ನಿಗದಿ
ಮಹಾರಾಷ್ಟ್ರದ ಭಿವಂಡಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ಆರ್ ಎಸ್ಎಸ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆರೋಪಗಳನ್ನು ಮಂಗಳವಾರ ನಿಗದಿ ಪಡಿಸಿದೆ. ಆರ್ ಎಸ್ಎಸ್ ಕಾರ್ಯಕರ್ತನೋರ್ವ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಭಿವಂಡಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಹುಲ್ ಗಾಂಧಿ ವಿರುದ್ಧ ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದೆ.
2014 ಚುನಾವಣಾ ರ್ಯಾಲಿಯ ಸಂದರ್ಭದಲ್ಲಿ ಮಾತನಾಡುವ ವೇಳೆ ರಾಹುಲ್ ಗಾಂಧಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹತ್ಯೆಯ ವಿಚಾರವಾಗಿ ಆರ್ ಎಸ್ಎಸ್ ಮೇಲೆ ಉದ್ದೇಶ ಪೂರ್ವಕವಾಗಿ ದೂಷಿಸಿದ್ದರು ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ‘ ಬಿಜೆಪಿ ಹಾಗೂ ಆರ್ ಎಸ್ಎಸ್ ನವರು ಎಷ್ಟು ಬೇಕಾದರೂ ಕೇಸ್ ದಾಖಲಿಸಲಿ, ನಮ್ಮದು ಸೈದ್ಧಾಂತಿಕ ಹೋರಾಟ, ಹೋರಾಡಿ ಗೆಲ್ಲುತ್ತೇನೆ ‘ ಎಂದು ಹೇಳಿದ್ದಾರೆ.