SHOCKING : ಭೀಮಾತೀರದಲ್ಲಿ ನಡೆದಿದೆ ಬೆಚ್ಚಿ ಬೀಳಿಸೋ ಮತ್ತೊಂದು ಕೃತ್ಯ….

ವಿಜಯಪುರ: ಭೀಮಾತೀರದ ಹಂತಕರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಭೀಮಾತೀರ ಅಂದ್ರೇನೆ ಹಾಗೆ. ಅಲ್ಲಿನ ರಕ್ತ ಚರಿತ್ರೆ ಕಣ್ಣಮುಂದೆ ಬರುತ್ತದೆ. ಆದರೆ ಈ ಬಾರಿ ಭೀಮಾತೀರದಲ್ಲಿ ಕಂಡು ಕೇಳರಿಯದ ಭಯಾನಕ ಕೃತ್ಯ ಒಂದು ನಡೆದುಹೋಗಿದೆ. ಇಡೀ ದೇಶವೇ ಬೆಚ್ಚಿ ಬಿಳಿಸುವ ಪ್ರಕರಣ ಸದ್ಯ ಭೀಮಾತೀರದಲ್ಲಿ ಸದ್ದು ಮಾಡುತ್ತಿದೆ.

ವಿಜಯಪುರ್ ಜಿಲ್ಲೆಯಲ್ಲಿ ಅಕ್ಟೊಬರ್ 30ರಂದು ಹಂತಕ ಧರ್ಮರಾಜ್ ಚಡಚಣ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗುತ್ತಾನೆ. ಈತನ ಜೊತೆಗಿದ್ದ ಮಗ ಗಂಗಾಧರ ಚಡಚಣ ಎನ್ ಕೌಂಟರ್ ಸಂದರ್ಭದಲ್ಲಿ ಪರಾರಿಯಾಗುತ್ತಾನೆ. ಆದರೆ ಅಲ್ಲಿಂದ ಇಲ್ಲಿವರೆಗೂ ಗಂಗಾಧರ ಚಡಚಣನ ಸುಳಿವು ಪತ್ತೆಯಾಗಿಲ್ಲ. ಇನ್ನೂ ಭೀಮಾತೀರದಲ್ಲಿ ಗಂಗಾಧರ ಕೊಲೆಯಾಗಿದ್ದಾನೆ ಎಂಬ ಗುಸುಗುಸು ಮಾತುಗಳು ಆರಂಭವಾಗುತ್ತಿದ್ದರೆ ಇತ್ತ ಜೀವ ಉಳಿಸಿಕೊಳ್ಳಲು ಬೇರೆಲ್ಲಿಗೋ ಪರಾರಿಯಾಗಿರಬೇಕು ಎಂದು ಕೆಲವರು ಸುಮ್ಮನಾಗಿದ್ದಾರೆ.

ಆದರೆ ಇದೆಲ್ಲವನ್ನೂ ಮೀರಿ ಅಕ್ಟೋಬರ್ 30ರಂದು ಭಯಾನಕ ಘಟನೆಯೊಂದು ನಡೆದಿದ್ದು, ಇಲ್ಲಿವರೆಗೂ ಪೊಲೀಸರು ಮಹದೇವಪ್ಪ ಸಾಹುಕಾರ್ ಮಾತು ಕೇಳಿಕೊಂಡು ಧರ್ಮರಾಜ್ ಚಡಚಣ ಎನ್ ಕೌಂಟರ್ ಮಾಡಿದ್ದರು ಎನ್ನುವ ಮಾತಿಗೆ ಪುಷ್ಟಿ ಸಿಕ್ಕಿದೆ. ಜೊತೆಗೆ ಪೊಲೀಸರೊಂದಿಗೆ ಇದ್ದ ಗಂಗಾಧರಡಚಣ ಕಾಣೆಯಾಗಿದ್ದು ಯಾಕೆ ಎಂಬುದಕ್ಕೂ ಉತ್ತರ ಸಿಕ್ಕಿದೆ.

ಅಕ್ಟೋಬರ್‌ 30ರಂದು ನಡೆದಿದ್ದೇನು ?

ಅಕ್ಟೋಬರ್ 30ರಂದು ಚಡಚಣ ಪಿಎಸ್ಐ ನೇತೃತ್ವದಲ್ಲಿ ಧರ್ಮರಾಜ್ ಚಡಚಣನ್ನ ತಾವಂದುಕೊಂಡಂತೆ ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಮತ್ತೊಂದೆಡೆ ತಮ್ಮ ಗಂಗಾಧರನನ್ನು ಎನ್ ಕೌಂಟರ್ ಮಾಡದೇ ತಾವು ಭಾಷೆ ಕೊಟ್ಟಂತೆ ಅಜ್ಞಾತ ಸ್ಥಳವೊಂದಕ್ಕೆ ಅಂದರೆ ಮಹದೇವಪ್ಪ ಸಾಹುಕಾರ್ ಇರುವ ಸ್ಥಳಕ್ಕೆ ಕರೆದೊಯ್ದಿದ್ದರು. ಬಳಿಕ ಮಹದೇವಪ್ಪ ತಮ್ಮ ವಾಹನದಲ್ಲಿ ಆತನನ್ನ ಕೂರಿಸಿಕೊಂಡು ಪೊಲೀಸರನ್ನ ವಾಪಾಸ್ ಕಳುಹಿಸಿ ಅಲ್ಲಿಂದ ಬೇರೊಂದು ಸ್ಥಳಕ್ಕೆ ಗಂಗಾಧರ್‌ನನ್ನು ಕರೆದೊಯ್ದಿದ್ದು, ಅಲ್ಲಿ, ಗಂಗಾಧರನ ದೇಹವನ್ನು ಛಿದ್ರ ಛಿದ್ರ ಮಾಡಿ ಭೀಮಾ ತೀರದಲ್ಲಿ ಎಸೆದಿದ್ದಾನೆ.

ಇದಾದ ಬಳಿಕ ಇತ್ತ ಚಡಚಣ ಪೊಲೀಸರು ಗಂಗಾಧರ ಎನ್ ಕೌಂಟರ್ ಸಂದರ್ಭದಲ್ಲಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎಂದು ಕೇಸ್ ದಾಖಲಿಸಿಕೊಂಡು ಸುಮ್ಮನಾಗಿ ಬಿಟ್ಟಿದ್ದರು. ಅಂದೇ ಕೇಸ್ ಮುಚ್ಚಿ ಹಾಕಿ ಕೈತೊಳೆದುಕೊಳ್ಳಬೇಕೆಂದಿದ್ದ ಪೊಲೀಸರಿಗೆ ಶಾಕ್ ಆಗಿದ್ದು ಅಲೋಕ್ ಕುಮಾರ್ ಉತ್ತರ ವಲಯ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ.

ಹೌದು ಅಲೋಕ್ ಕುಮಾರ್ ಬಂದ ಕೂಡಲೇ ಮೊದಲು ಭೇಟಿ ಮಾಡಿದ್ದೆ ಈ ಭೀಮಾ ತೀರಕ್ಕೆ. ಆಗ ಹಿಂದಿನ ಕೇಸ್ ಗಳನ್ನೆಲ್ಲಾ ತೆಗೆದಾಗ ಈ ಗಂಗಾಧರ ಚಡಚಣ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಈ ವಿಚಾರಕ್ಕೆ ಅಲೋಕ್ ಕುಮಾರ್‌ ಗೆ ಅನುಮಾನ ಶುರುವಾಗಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದರು. ಬಳಿಕ ಗಂಗಾಧರನನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಆದೇಶ ಹೊರಡಿಸಿದ್ದರು. ಇದರಿಂದ ಬೆಚ್ಚಿ ಬಿದ್ದ ಪೊಲೀಸರು ಆಗ ಹೊಸ ಕಥೆ  ಕಟ್ಟಿ ಇಬ್ಬರು ಆರೋಪಿಗಳನ್ನ ಕರೆದುಕೊಂಡು ಬಂದು ನಾವೇ ಕೊಲೆ ಮಾಡಿದ್ದೇವೆ ಎಂದು ಒಪ್ಪಿಸಿ ಆ ನಿಟ್ಟಿನಲ್ಲಿ ಕೇಸ್ ಮುಚ್ಚಿ ಹಾಕಲು ಮುಂದಾಗಿದ್ದರು. ಗಂಗಾಧರನ ಕೊಲೆ ಆರೋಪಿಗಳು ಸಿಕ್ಕಿದ್ದಾರೆ ಎಂಬ ಮಾಹಿತಿ ಸಿಕ್ಕ ಕೂಡಲೆ ಅಲೋಕ್‌ ಕುಮಾರ್‌, ವಿಜಯಪುರಕ್ಕೆ ಭೇಟಿ ನೀಡಿ ಖುದ್ದು ವಿಚಾರಣೆ ನಡೆಸಿದ್ದರು.

ಧರ್ಮರಾಜ ಚಡಚಣನನ್ನು ಎನ್‌ಕೌಂಟರ್ ಮಾಡಿದ ದಿನವೇ ಗಂಗಾಧರ ಬರ್ಬರವಾಗಿ ಹತ್ಯೆಯಾಗಿದ್ದು, ಮೂವರು ಪೊಲೀಸರು ಗಂಗಾಧರನನ್ನು ನಮಗೆ ತಂದು ಒಪ್ಪಿಸಿದ್ದರು. ಆತನನ್ನು ಅಂದೇ ಹತ್ಯೆ ಮಾಡಿ ಭೀಮಾತೀರದಲ್ಲಿ ಎಸೆದಿದ್ದೇವೆ ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.  ಸದ್ಯ ಆರೋಪಿ ಹನುಮಂತ ಪೂಜಾರಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಇತ್ತ ಎರಡು ದಿನಗಳ ಹಿಂದಷ್ಟೇ ಈ  ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಗಂಗಾಧರ ತಾಯಿ,ಮಗ ಕೊಲೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.

ಇದರಲ್ಲಿ ಮಹದೇವಪ್ಪ ಸಾಹುಕಾರ್ ಎ1 ಆರೋಪಿಯಾಗಿದ್ದು,  ಉಳಿದಂತೆ ಮೂರು ಜನರ ಮೇಲೆ ಕೇಸ್ ದಾಖಲಾಗಿದೆ. ಈ ಕೇಸ್ ನಲ್ಲಿ ಮೂರು ಜನ ಪೊಲೀಸರು ಭಾಗಿಯಾಗಿರುವುದು ಸದ್ಯಕ್ಕೆ ಕಂಡು ಬಂದಿದ್ದು ಈ ಕುರಿತು ಸಿಐಡಿಗೆ ಐಜಿಪಿ ಅಲೋಕ್ ಕುಮಾರ್ ಪತ್ರ ಬರೆದಿದ್ದಾರೆ. ಮುಂದೆ ಅಲೋಕ್‌ ಕುಮಾರ್‌ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಮುಂದೆ ತಿಳಿಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com