ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ : ವಿವಿಧ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಭಾರೀ ಮಳೆಗೆ ಜನ ತತ್ತರಿಸಿಹೋಗಿದ್ದಾರೆ. ಹಾಸನ, ಕೊಡಗು, ಬೆಂಗಳೂರು , ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಆರಂಭದಲ್ಲೇ ಮಳೆಯ ಆರ್ಭಟ ದಿನೇ ದಿನೇ ಹೆಚ್ಚಾಗುತ್ತಿದೆ.

ಕೆ.ಆರ್.ಎಸ್‍ನಲ್ಲಿ ಒಂದೇ ರಾತ್ರಿಗೆ 8478 ಕ್ಯೂಸೆಕ್ಸ್  ಒಳ ಹರಿವು ಪ್ರಮಾಣ ಹೆಚ್ಚಾಗಿದ್ದು, ಹೊರ ಹರಿವಿನ ಪ್ರಮಾಣ 323 ಕ್ಯೂಸೆಕ್ಸ್ ತಲುಪಿದೆ.

ಇನ್ನ ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೇ  ಮಳೆ ಸುರಿಯುತ್ತಿದೆ. ಮಳೆ ಹಿನ್ನಲೆ  ಕರಡಗೋಡು ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ಸ್ಥಾಪನೆ ಮಾಡಿದ್ದು, ನದಿಪಾತ್ರದ ಮನೆಗಳ ಜನರಿಗೆ  ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸ್‍ ನೀಡಿದ್ದಾರೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಿರಾಜಪೇಟೆಯಲ್ಲಿ  ಇಂದು ಜಿಲ್ಲೆಯ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಒಂದೇ ದಿನದಲ್ಲಿ ಹೇಮಾವತಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಿದ್ದು, ನಿನ್ನೆ 3000 ಇದ್ದ ಒಳಹರಿವಿನ ಪ್ರಮಾಣ ಇಂದು ಮೂರು ಪಟ್ಟು ಹೆಚ್ಚಾಗಿದೆ. ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಲ್ಲತ್ತಿಗಿರಿ ಜಲಪಾತ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಮಲೆನಾಡು ಭಾಗದಲ್ಲಿ ವರುಣನ ಆರ್ಭಟಕ್ಕೆ ಸಕಲೇಶಪುರ ಮತ್ತು ಆಲೂರು ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಶಿಕ್ಷಣ ಇಲಾಖೆಯೊಂದಿಗೆ ಹಾಸನ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಚರ್ಚೆ ನಡೆಸಿ ರಜೆ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com