ಹೈಕಮಾಂಡ್ ಯಾರ ತಲೆಗಾದ್ರೂ ಟೋಪಿ ಹಾಕಲಿ, ಅವರಿಗೆ ತಲೆಬಾಗಿ ಕೆಲಸ ಮಾಡ್ತೀವಿ : ಡಿಕೆಶಿ
ಬೆಂಗಳೂರು : ನಮಗೆ ರಾಜ್ಯದ ಇಮೇಜ್ ಬಹಳ ಮುಖ್ಯ. ನಾವು ನಾವೇ ಕಿತ್ತಾಡುತ್ತಿದ್ದರೆ ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯುವ ಯತ್ನ ಮಾಡದೇ ಇರುವುದಿಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ರಾಜ್ಯ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಇದೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಪಕ್ಷದಲ್ಲಿ ಅತೃಪ್ತರೂ ಇಲ್ಲ, ತೃಪ್ತರೂ ಇಲ್ಲ. ಎಲ್ಲವನ್ನೂ ಕ್ರಿಯೇಟ್ ಮಾಡ್ತಿರೋದು ಯಡಿಯೂರಪ್ಪನವರೇ. ಒಂದು ಮನೆ ಎಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಬಳಿಕ ಎಲ್ಲವನ್ನು ಬಿಟ್ಟು ಒಂದಾಗುತ್ತೇವೆ. ಹಾಗೇ ಇದು ಎಂದಿದ್ದಾರೆ.
ಇನ್ನು ಎಂ.ಬಿ ಪಾಟೀಲ್ ಅಸಮಾಧಾನ ವಿಚಾರ ಕುರಿತಂತೆ ಮಾತನಾಡಿದ ಅವರು, ಕೆಲವೊಂದು ಸಂದರ್ಭದಲ್ಲಿ ಹೀಗೆಲ್ಲ ಆಗುತ್ತದೆ. ಪಾಟೀಲ್ ಬುದ್ದಿವಂತರಿದ್ದಾರೆ. ಕೆಲ ದಿನಗಳ ಬಳಿಕ ಎಲ್ಲವೂ ಸರಿಹೋಗುತ್ತದೆ. ಆದರೆ ತಾಳ್ಮೆಯಿಂದಿರಬೇಕು ಎಂದಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಆಯ್ಕೆಯಾಗುತ್ತಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಹೈಕಮಾಂಡ್ ಯಾರ ತಲೆಗಾದರೂ ಟೋಪಿ ಹಾಕಲಿ, ನಾವು ಅವರಿಗೆ ತಲೆಬಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.