ಎಂ.ಬಿ ಪಾಟೀಲ್ ಗೆ ಸಿಗದ ಸಚಿವ ಸ್ಥಾನ : ವಿಜಯಪುರ ಕಾಂಗ್ರೆಸ್ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

ಬೆಂಗಳೂರು : ಮಾಜಿ ಸಚಿವ ಎಂ.ಬಿ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿರುವ ಪಕ್ಷದ ನಿಲುವನ್ನು ಖಂಡಿಸಿ ವಿಜಯಪುರ ಜಿಲ್ಲೆಯ 50 ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಎಂಬಿ ಪಾಟೀಲ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ್ ಹೇಳಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐದು ಬಾರಿ ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ಅವರ ತಂದೆಯೂ ಐದು ಬಾರಿ ಶಾಸಕರಾಗಿ ಸಚಿವರಾಗಿ ಪಕ್ಷ ಕಟ್ಟಿದ್ದಾರೆ. ಪಾಟೀಲ್ ಅವರನ್ನು ಬಿಟ್ಟು ಜಿಲ್ಲಾ ಕಾಂಗ್ರೆಸ್ ಅನ್ನು ಕಲ್ಪಿಸಿಕೊಳ್ಳಲಾಗದು. ಆದರೆ ಇಂತಹ ನಾಯಕ ಎಂ.ಬಿ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿಲ್ಲ. ಪಕ್ಷ ಕಟ್ಟಲು ಬಳಸಿಕೊಂಡು ಅವರನ್ನು ಈಗ ಕೈ ಬಿಡಲಾಗಿದೆ. ಅವರು ಪಕ್ಷ ಕಟ್ಟಿದ್ದರಿಂದಲೇ 16 ಲಿಂಗಾಯತ ಶಾಸಕರು ಗೆದ್ದಿದ್ದಾರೆ. ಇದರಲ್ಲಿ ಪಾಟೀಲ್ ಕೊಡುಗೆಯೂ ಇದೆ, ಆದರೆ ಅವರನ್ನು ಕಡೆಗಣಿಸಿರುವುದು ಅಕ್ಷಮ್ಯ. ಈಗಲೂ ಕಾಲ ಮಿಂಚಿಲ್ಲ. ಪಕ್ಷದ ಹೈಕಮಾಂಡ್ ಕೂಡಲೇ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯದಲ್ಲಿ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಎಂಬಿ ಪಾಟೀಲ್ ಶ್ರಮಿಸಿದ್ದಾರೆ.‌ ಸ್ವಂತ ಖರ್ಚಿನಲ್ಲಿ ಸಮಿತಿ ರಚಿಸಿ ನೀರಾವರಿ ಕ್ಷೇತ್ರದ ಕುರಿತು ಅಧ್ಯಯನ ಮಾಡಿಸಿದ್ದಾರೆ. ಕೆರೆ ತುಂಬುವ ಯೋಜನೆಯಿಂದ ಅಂತರ್ಜಲ ವೃದ್ಧಿಯಾಗಲಿದೆ ಎಂದು ವರದಿ ಬಂದ ನಂತರ ಕೆರೆಗಳಿಗೆ ನೀರು ತುಂಬುವ ಯೋಜನೆ ಜಾರಿಗೆ ತಂದು ನೀರಾವರಿಗೆ ಹೆಚ್ಚಿನ ಒತ್ತು ನೀಡಿದರು. ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದ ಅವರಿಗೆ ಸಂಪುಟದಲ್ಲಿ ಸ್ಥಾನ ಕೊಟ್ಟಿಲ್ಲ.ಇದನ್ನು ಖಂಡಿಸಿ ನಾವು ಜಿಲ್ಲೆಯ ಪದಾಧಿಕಾರಿಗಳು ಇಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಸಲ್ಲಿಕೆ ಮಾಡಿದ್ದೇವೆ ಎಂದರು.

ಎರಡು ದಿನದಲ್ಲಿ‌ ಎಂ.ಬಿ ಪಾಟೀಲ್ ತವರಿಗೆ ಬರಲಿದ್ದಾರೆ. ಜನರ ಅಭಿಪ್ರಾಯ ಪಡೆಯಲಿದ್ದಾರೆ. ನಂತರ ಅವರು ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ನಾವು ಬದ್ದರಿದ್ದೇವೆ. ಅವರ ನಡೆಯನ್ನು ಅನುಸರಿಸುತ್ತೇವೆ ಎನ್ನುವ ಮೂಲಕ ಎಂ.ಬಿ.ಪಿಯನ್ನು ಹಿಂಬಾಲಿಸುವುದಾಗಿ ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com