ದನಗಳ ಕಳುವು ಮಾಡುತ್ತಿದ್ದವನ ಸಾವನ್ನು ಬಿಜೆಪಿ ತಲೆಗೆ ಕಟ್ಟೋ ಕೆಲಸ ನಡೀತಿದೆ : ಶೋಭಾ ಆರೋಪ

ಬೆಂಗಳೂರು: ದನಗಳ ಕಳವು ಮಾಡುತ್ತಿದ್ದ ವೇಳೆ ಹಿಡಿದುಕೊಟ್ಟ ವ್ಯಕ್ತಿ ಪೊಲೀಸ್ ಜೀಪಿನಲ್ಲೇ ಸಾವನ್ನಪ್ಪಿದ್ದರೂ ಅದನ್ನು ಬಿಜೆಪಿ ಹಾಗು ಸಂಘ ಪರಿವಾರದ ತಕೆಗೆ ಕಟ್ಟುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉಡುಪಿ, ದಕ್ಷಿಣ ಕನ್ನಡದಲ್ಲಿ ನಿರಂತರವಾಗಿ ದನಗಳ ಕಳವು ನಡೆಯುತ್ತಿದ. ಸ್ಕಾರ್ಪಿಯೋ ಒಂದು ಪ್ರತಿ‌ದಿನ ರಾತ್ರಿ ಸಂಚರಿಸುತ್ತಿದ್ದು ದನ ಕಳವು ಮಾಡುತ್ತಿದೆ ಎನ್ನುವ ಮಾಹಿತಿಯನ್ನು ನಮ್ಮ ಕಾರ್ಯಕರ್ತರು ಪೊಲೀಸ್ ಗೆ ನೀಡಿದ್ದರು.ಅದರಂತೆ ಮಧ್ಯರಾತ್ರಿ ಪೊಲೀಸ್ ಜೀಪ್ ಬಂದಿದ್ದು ನೋಡಿ ಚಾಲಕ ಜೀಪನ್ನು ಹಿಂದಕ್ಕೆ‌ ತೆಗೆಯುವ ಯತ್ನದಲ್ಲಿ ಅಪಘಾತಕ್ಕೀಡಾಯಿತು. ಅದರಲ್ಲಿ 15 ದನಗಳು‌ ಇದ್ದವು, ಜೀಪಿನಲ್ಲಿದ್ದ ಮೂವರು ಪರಾರಿಯಾದರು. ಆದರೆ ಅಸನಬ್ಬ ಎನ್ನುವ ವ್ಯಕ್ತಿಯನ್ನು ಬಂಧಿಸಲಾಯಿತು, ಆತನನ್ನು ಪೊಲೀಸ್ ಜೀಪ್ ನಲ್ಲಿ ಠಾಣೆಗೆ ಕರೆತರುವ ವೇಳೆಗೆ ಹೃದಯಾಘಾತದಿಂದ ಸತ್ತಿದ್ದ. ಆದರೆ ಇದನ್ನ ಬಿಜೆಪಿ, ಸಂಘಪರಿವಾರದ ಮೇಲೆ ಕಟ್ಟುವ ಷಡ್ಯಂತ್ರ ಮಾಡುತ್ತಿದೆ, ಆದರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮುನ್ನವೇ ನಮ್ಮ ಏಳು ಕಾರ್ಯಕರ್ತರನ್ನು ಬಂಧಿಸಿದೆ, ಅಲ್ಲಿನ ಮೂವರು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ವೇಳೆ ಮಾಡುತ್ತಿದ್ದ ಕೆಲಸವನ್ನೇ ಈಗ ಸಮ್ಮಿಶ್ರ ಸರ್ಕಾರ ಮಾಡಿತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಬಸ್ ಪಾಸ್ ನಲ್ಲಿ ಈಗ ತಾರತಮ್ಯ ಮಾಡಲು ಶುರುಮಾಡಿದೆ. ಶಾಲೆಗೆ ಹೋಗುವ ಮಕ್ಕಳಲ್ಲೂ ಜಾತಿ ಹುಡುಕಾಟ ಮಾಡುತ್ತಿದೆ. ಜಾತಿ ಆಧಾರದಲ್ಲಿ‌ ಬಸ್ ಪಾಸ್ ವಿತರಣೆಯ ಅಗತ್ಯವೇನು. ನಾವು ಉಚಿತ ಸೈಕಲ್, ಉಚಿತ ಬಸ್ ಪಾಸ್ ಎಲ್ಲಾ ಮಕ್ಕಳಿಗೆ ಕೊಟ್ಟೆವು. ಆದರೆ ಇವರು ಜಾತಿ ತಾರತಮ್ಯ ಮಾಡುತ್ತಿದ್ದಾರೆ. ಕಳೆದ ಸರ್ಕಾರ ಜಾತಿ ಆಧಾರದಲ್ಲಿ ಪ್ರವಾಸ ಯೋಜನೆ ತಂದರೆ, ಈ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂತಾದ ಹೋಗಿ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುವಲ್ಲಿಯೂ ಜಾತಿಯತೆ ಮಾಡುತ್ತಿದ್ದಾರೆ.ತಕ್ಷಣ ಈ ಕಾನೂನು ವಾಪಸ್ ಒಡೆದು ಎಲ್ಲಾ ಮಕ್ಕಳಿಗೂ ಉಚಿತ ಪಾಸ್ ನೀಡುವಂತೆ ಆಗ್ರಹಿಸಿದರು.

ಕಳೆದ ಒಂದು ತಿಂಗಳು‌ ರೆಸಾರ್ಟ್ ರಾಜಕಾರಣ, ದೆಹಲಿ ರಾಜಕಾರಣ ನಡೆಯಿತು. ಅದರ ನಡುವೆ 15 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ನೀಡುವ, ಸಾಂತ್ವನ ಹೇಳುವ ಕೆಲಸವನ್ನು ಇವರು ಮಾಡಿಲ್ಲ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲು ಒಂದೇ ದಿನ ದಾಖಲೆ‌ ಮಳೆಯಾಗಿ ನೆರೆ, ಪ್ರವಾಹ ಬಂತು, ಜನ ಪ್ರಾಣ ಕಳೆದುಕೊಂಡರು. ಆದರೆ ಸರ್ಕಾರ ಬದುಕಿದೆ ಎಂದು ತೋರಿಸಲೇ ಇಲ್ಲ. ಸಾಂತ್ವನ ಹೇಳಲಿಲ್ಲ. ಅಧಿಕಾರಿಗಳೂ‌ ಕೂಡ ಅಲ್ಲಿಗೆ ಹೋಗಲಿಲ್ಲ. ಒಂದು ರೀತಿಯ ತಾರತಮ್ಯದ ಆಡಳಿತ ನಡೆಸುತ್ತಿದೆ. ಬಿಜೆಪಿ‌ ಹೆಚ್ಚು ಸ್ಥಾನ ಗೆದ್ದ ಜಿಲ್ಲೆಗಳನ್ನು ಕಡೆಗಣಿಸುವ ಕೆಲಸ‌ವನ್ನು ಈ ಸಮ್ಮಿಶ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.