ಬಿಜೆಪಿಗೆ ಸಿದ್ದರಾಮಯ್ಯ ಮೇಲೇಕೆ ಮಮಕಾರ : ಅಪ್ಪ-ಮಕ್ಕಳ ಮೇಲೇಕೆ ತಿರಸ್ಕಾರ…?

ರಾಜ್ಯದ ಎಲೆಕ್ಷನ್ ಸಮರ ಮುಗಿದು, ಒಂದರ ಮೇಲೊಂದರಂತೆ ಎರಡು ಸರ್ಕಾರಗಳು ರಚನೆಯಾದವು. ಉತ್ತರ ಸೀಮೆಯ ಮಜಬೂತು ಜೋಡಿ ಹೋರಿಗಳನ್ನು ನೆಚ್ಚಿಕೊಂಡು ನೊಗ ಕಟ್ಟಿದ್ದ ಯಡ್ಯೂರಪ್ಪನ ಚಕ್ಕಡಿಗೆ ಚಕ್ರಗಳೇ ಇರಲಿಲ್ಲ. ಹಾಗಾಗಿ ಅದು ಮೂರು ಗೇಣೂ ಮುಂದಕ್ಕೆ ಹೋಗದೆ ನಿಂತಲ್ಲೆ ಸುಸ್ತಾಗಿ ನೆಲಕಚ್ಚಿತು. ಈಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಹವಾ ಶುರುವಾಗಿದೆ. ಹೆಚ್ಚೂಕಮ್ಮಿ ಒಂದು ದಶಕದ ಕಾಲ ಅಧಿಕಾರವಿಲ್ಲದೆ ಇನ್ನೇನು ಬೂಸ್ಟು ಹಿಡಿಯುವ ಹಂತಕ್ಕೆ ಬಂದಿದ್ದ ಜೆಡಿಎಸ್‌ಗೆ ಕುಮಾರಣ್ಣ ಸಿಎಂ ಆಗುವ ಸುಯೋಗ ಬಂದಿರೋದು ದೇವೇಗೌಡರಿಗೆ ಯೌವ್ವನವನ್ನು ಮರಳಿ ತಂದುಕೊಟ್ಟಿರೋದು ಮಾತ್ರವಲ್ಲ, ಅವರ ತಲೆಯಲ್ಲಿ ಮಲಗಿದ್ದ ಫೀನಿಕ್ಸ್ ಹಕ್ಕಿಗಳೆಲ್ಲ ಒಂದೊಂದಾಗಿ ರೆಕ್ಕೆ ಬಿಚ್ಚುವಂತೆ ಮಾಡಿದೆ. ಕುಮಾರಣ್ಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮೊದಲೇ ಸಿಎಸ್, ಐಜಿಯಂತಹ ಎ.ಸಿ ಚೇಂಬರ್ ಅಧಿಕಾರಗಳನ್ನು ತನ್ನ ಮನೆಗೇ ಕರೆಸಿಕೊಂಡು ಪಿಚ್ ರಿಪೋರ್ಟ್ ಕಲೆಹಾಕಿದ್ದ ದೇವೇಗೌಡರ ಲಗುಬಗೆ ನೋಡಿದರೆ ಅವರ ಹಳೇ ಆಟಗಳು ಶುರುವಾಗುವುದರಲ್ಲಿ ಡೌಟೇ ಇಲ್ಲ. ಅಂದರೆ, ಫ್ಯಾಮಿಲಿ ಸೆಂಟ್ರಿಕ್ ಡ್ರಾಮಾ ಶುರು ಹಚ್ಚಿಕೊಂಡು ತಮ್ಮ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿ ತೆರೆಮರೆಗೆ ಸರಿಸುವ ಸೋಕಾಲ್ಡ್ ಚಾಣಾಕ್ಷ ತಂತ್ರ!

ದೇವೇಗೌಡರ ಈ ಪರಿ ಹುಮ್ಮಸ್ಸಿನ ಕಾರಣಕ್ಕೇ ಇದೀಗ ಎಲ್ಲರ ಗಮನ ಮಾಜಿ ಸಿಎಂ ಸಿದ್ರಾಮಯ್ಯನತ್ತ ನೆಟ್ಟಿದೆ. ಕಾಂಗ್ರೆಸ್ ಪಾರ್ಟಿಯ ಪ್ರಸ್ತುತ ಅನಾಟಮಿ ಮತ್ತು ದೇಶದ ಮುಂದಿರುವ ಪೊಲಿಟಿಕಲ್ ಕ್ರೈಸಿಸ್ ಬಗ್ಗೆ ಆಳವಾಗಿ ಅರಿವಿಲ್ಲದವರು, `ಇನ್ನು ಸಿದ್ದು ಕಥೆ ಮುಗೀತು. ಒಂದು ಕಡೆ ತಮ್ಮ ವಿರುದ್ಧ ತೊಡೆ ತಟ್ಟಿದ್ದ ದೇವೇಗೌಡ್ರು, ಮತ್ತೊಂದು ಕಡೆ ಕಾಂಗ್ರೆಸ್ ಪಾರ್ಟಿಯೊಳಗೇ ಇರುವ ಹಿತಶತ್ರುಗಳು ಸೇರಿಕೊಂಡು ಸಿದ್ರಾಮಯ್ಯರನ್ನು ಮೂಲೆಗುಂಪು ಮಾಡ್ತಾರೆ. ಹೈಕಮಾಂಡ್ ಕೂಡಾ ಸಿದ್ರಾಮಯ್ಯರನ್ನ ಕ್ಯಾರೇ ಅನ್ನಲ್ಲ’ ಎಂಬಂತಹ ವಾದಗಳನ್ನು ಹರಿಬಿಡುತ್ತಿದ್ದಾರೆ. ಇಂಥಾ ವಾದದ ಲಾಭವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ಬಿಜೆಪಿ ಕೂಡಾ ಸಿದ್ರಾಮಯ್ಯನ ಮೇಲೆ ದಿಡೀರ್ ಕಕ್ಕುಲಾತಿಯನ್ನು ಹುಟ್ಟಿಸಿಕೊಂಡು `ಅಯ್ಯೋ.., ಪಾಪಾ..’ ಎಂದು ಮರುಗಲು ಶುರು ಮಾಡಿದೆ. ಯಡ್ಯೂರಪ್ಪನವರು ಸಿದ್ರಾಮಯ್ಯನವರ ಕುರಿತು `ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರನ್ನು ಚೆನ್ನಾಗಿ ಬಳಸಿಕೊಂಡು, ಈಗ ಮೂಲೆಗೆ ಬಿಸಾಕಿದೆ’ ಎಂಬ ಹೇಳಿಕೆ ನೀಡಿದ್ದಲ್ಲದೆ ತಮ್ಮ ಪೌರಾಣಿಕ ಬುಟ್ಟಿಯೊಳಗಿರುವ ದುರಂತ ಪಾತ್ರಗಳನ್ನು ಹೆಕ್ಕಿತೆಗೆದು ಸಿದ್ದುವಿಗೆ ತಾಳೆ ಹಾಕುತ್ತಾ ಓಡಾಡುತ್ತಿದ್ದಾರೆ. ಇತ್ತ ಶೋಭಕ್ಕ, `ಸಿದ್ರಾಮಯ್ಯ ಇದ್ದಕ್ಕಿದ್ದಂತೆ ಕಾಂಗ್ರೆಸ್‌ಗೆ 78 ಸ್ಥಾನ ಬಂತು. ಆದ್ರೆ, ಕಾಂಗ್ರೆಸ್ ಅವರನ್ನು ಸರಿಯಾಗಿ ನಡೆಸಿಕೊಳ್ಳದೆ ಅವಮಾನ ಮಾಡುತ್ತಿದೆ’ ಅಂತ ಹೇಳಿಕೆ ಕೊಡುತ್ತಾರೆ.

ಬಿಜೆಪಿಗರ ಈ ಸಿದ್ದು ಮಮಕಾರದ ಹೇಳಿಕೆಗಳು ಕೇವಲ ಬಾಯಿಚಪಲಕ್ಕೆ ಹೊರಬೀಳುತ್ತಿರುವ ಡೈಲಾಗ್‌ಗಳಲ್ಲ. ಅಥವಾ ಸಿದ್ದುವನ್ನು ಗೇಲಿ ಮಾಡುವ ಸಿಂಪಲ್ ಕೊಂಕು ಮಾತುಗಳೂ ಅಲ್ಲ. ಅವುಗಳ ಹಿಂದೆ ಅಡಗಿರಬಹುದಾದ ತಂತ್ರವನ್ನು ಊಹಿಸುತ್ತಾ ಸಾಗಿದರೆ, ಬಿಜೆಪಿಯ ಸ್ಟ್ರಾಟಜಿಯ ಜೊತೆಜೊತೆಗೆ `ಸಿದ್ದು ಕಥೆ ಮುಗೀತಾ?’ ಎಂಬ ಪ್ರಶ್ನೆಗೆ ಒಂದು ಸಾಲಿಡ್ ಉತ್ತರವೂ ಅರ್ಥವಾಗುತ್ತದೆ. ಮೊನ್ನೆ ಮುಗಿದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಇಡಿಯಾಗಿ ಬಡಿದಾಡಿದ್ದು ಕಾಂಗ್ರೆಸ್ ಎಂಬ ಶತಮಾನದ ಪಾರ್ಟಿಯ ಜೊತೆಗಲ್ಲ, ದಿಲ್ಲಿಯ ರಾಹುಲ್ ಗಾಂಧಿ ಸಂಗಡವೂ ಅಲ್ಲ; ಸಿದ್ದರಾಮಯ್ಯನ ವಿರುದ್ಧ! ಯಾಕೆಂದರೆ ಹೇಳಿಕೊಳ್ಳುವಂತಹ ದೊಡ್ಡ ಹಗರಣವಿಲ್ಲದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾದಾಡಲು ಬಿಜೆಪಿಗೆ ಯಾವ ಘನಂದಾರಿ ನೆಪವೂ ಇರಲಿಲ್ಲ. ಇದ್ದರೂ ಅವು ಆಧಾರರಹಿತ ಆಪಾದನೆಗಳು ಮಾತ್ರ. ಅವುಗಳನ್ನು ನೆಚ್ಚಿಕೊಂಡು ಜಾಹೀರಾತು ಕೊಡಲು ಹೋಗಿ ಖುದ್ದು ಚುನಾವಣಾ ಆಯೋಗದಿಂದಲೇ ನೋಟಿಸ್ ಪಡೆದುಕೊಂಡಿದ್ದ ಬಿಜೆಪಿಗೆ ರಾಹುಲ್ ಕೂಡಾ ಪ್ರಬಲ ಎದುರಾಳಿಯಾಗಿರಲಿಲ್ಲ. ಆದರೆ ಮೋದಿ, ಅಮಿತ್ ಶಾರಂತಹ ಬಿಜೆಪಿ ದಿಗ್ಗಜರನ್ನೆ ಪಂಚಾಯ್ತಿ ಮಟ್ಟದ ಎದುರಾಳಿಗಳಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಿದ್ರಾಮಯ್ಯ ಬಿಜೆಪಿಗೆ ಬಲು ದೊಡ್ಡ ಸವಾಲಾಗಿ ಕಾಡಿದ್ದರು. ಹಾಗೆ ಕಾಡುವ ಸಾಮರ್ಥ್ಯವನ್ನು ಅವರ ಜನಪ್ರಿಯ ಯೋಜನೆಗಳು ಮತ್ತು ಕಪ್ಪುಚುಕ್ಕೆಯಿಲ್ಲದ ಆಡಳಿತ ಅವರಿಗೆ ನೀಡಿದ್ದವೆನ್ನುವುದರಲ್ಲಿ ಎರಡು ಮಾತಿಲ್ಲ.

ಹೀಗೆ ಕಾಡಿದ್ದ ಸಿದ್ದು ಬಗ್ಗೆ ಬಿಜೆಪಿಗೆ ಸುಖಾಸುಮ್ಮನೇ ಕಾಳಜಿ ಹುಟ್ಟಲು ಸಾಧ್ಯವೇ? ಅಧಿಕಾರಕ್ಕೆ ಹತ್ತಿರತ್ತಿರ ಬಂದು ಅವಕಾಶ ತಪ್ಪಿಸಿಕೊಂಡ ಹೊಟ್ಟೆಸಂಕಟದ ನಡುವೆಯೂ ಬಿಜೆಪಿ ಈಗ ಮೋದಿಗೋಸ್ಕರ ೨೦೧೯ರ ಚುನಾವಣೆಗೆ ಅಣಿಯಾಗಬೇಕಿದೆ. ಮೂರೇ ದಿನದ ಮುಖ್ಯಮಂತ್ರಿಗಿರಿಗೆ ರಾಜೀನಾಮೆ ಕೊಡುತ್ತಾ ಯಡ್ಯೂರಪ್ಪನವರು `ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ತೀವಿ’ ಎಂದು ಹೇಳಿದ ಮಾತನ್ನು ನಿಜ ಮಾಡಿಕೊಳ್ಳಲು ಹೆಣಗಾಡಬೇಕಿದೆ. ಅದರ ಭಾಗವಾಗಿಯೇ ಸಿದ್ದು ಮಮಕಾರದ ಮಾತುಗಳು ಬಿಜೆಪಿ ನಾಯಕರಿಂದ ಕೇಳಿ ಬರುತ್ತಿವೆ. ಬಿಜೆಪಿಗಿಂತ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಿದ್ದು ಸೋತಂತೆ ಕಾಣುತ್ತಾರಾದರು, ವೋಟ್ ಶೇರ್ ವಿಚಾರದಲ್ಲಿ ಬಿಜೆಪಿಗಿಂತಲೂ ಮುಂದಿದ್ದಾರೆ. ಬಿಜೆಪಿ ಶೇ.36.2 ಮತಗಳನ್ನಷ್ಟೆ ಗಳಿಸಿದ್ದರೆ, ಕಾಂಗ್ರೆಸ್ ಶೇ.3.8ರಷ್ಟು ಮತ ಗಳಿಸಿದೆ. ಅದರರ್ಥ, ಸಿದ್ರಾಮಯ್ಯ ನೇತೃತ್ವವನ್ನು ಒಪ್ಪುವವರ ಸಂಖ್ಯೆ ಜಾಸ್ತಿಯೇ ಇದೆ. ಅವುಗಳಲ್ಲಿ ಅಹಿಂದ ಮತಗಳ ಪ್ರಮಾಣ ಹೆಚ್ಚೆನ್ನುವುದನ್ನು ಅವರ ರಾಜಕೀಯ ಬದುಕನ್ನು ಕಂಡ ಎಂತವರಿಗೇ ಆದರು ಅರ್ಥವಾಗುತ್ತದೆ. ಅಂದರೆ, ಈಗಲೂ ಅಪಾರ ಸಂಖ್ಯೆಯಲ್ಲಿರುವ ಅಹಿಂದ ಮತಗಳಿಗೆ ಸಿದ್ರಾಮಯ್ಯನವರೇ ಫೇವರಿಟ್ಟು! ಈ ಅಂಶದ ಮೇಲೆ ಕಣ್ಣಿಟ್ಟೆ ಬಿಜೆಪಿ, ಸಿದ್ದು ಬಗ್ಗೆ ಮಮಕಾರದ ಮಾತಾಡುತ್ತಿದೆ.

ಕಾಂಗ್ರೆಸ್ ಪಕ್ಷದಿಂದ ಸಿದ್ರಾಮಯ್ಯನಿಗೆ ಅನ್ಯಾಯವಾಯ್ತು, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹೈಕಮಾಂಡ್ ಕೂಡಾ ದೇವೇಗೌಡರ ಶರತ್ತಿಗೆ ತಲೆಬಾಗಿ ಸಿದ್ರಾಮಯ್ಯನನ್ನು ದೂರ ಇಡುತ್ತಿದೆ ಎಂಬ ಗೊಂದಲವನ್ನು ಅಹಿಂದ ಮತಸಮೂಹದ ನಡುವೆ ಹುಟ್ಟುಹಾಕುವುದು ಈ ಮಮಕಾರದ ಇರಾದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೊ ಗೊತ್ತಿಲ್ಲ, ಆದರೆ ಇಂಡಿಯಾದ ಜನ ರಾಜಕೀಯ ವಿಚಾರದಲ್ಲಿ ವಸ್ತುಸ್ಥಿತಿ ವಿಸ್ಲೇಷಣೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಇಂತಹ ಭಾವನಾತ್ಮಕ ಮೆಲೊಡಿಗಳಿಗೆ ಈಡಾಗಿಬಿಡುತ್ತಾರೆ. ಇವತ್ತಿಗೂ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಜಾತಿ ಪ್ರಧಾನ ಪಾತ್ರ ವಹಿಸುತ್ತಿರುವುದು ಕೂಡಾ ಜನರ ಇಂತಹ ಭಾವನಾತ್ಮಕ ವೀಕ್ನೆಸ್ಸಿನಿಂದಾಗಿಯೇ. ಅದನ್ನೆ ಬಂಡವಾಳ ಮಾಡಿಕೊಂಡು ಒಂದು ಅಸ್ತç ಪ್ರಯೋಗಿಸಿ ನೋಡಲು ಬಿಜೆಪಿ ಮುಂದಾಗಿದೆ. ಆ ಮೂಲಕ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ಹರಿದುಹೋಗಿರುವ ಮತಗಳ ಪ್ರಮಾಣವನ್ನು ಕುಗ್ಗಿಸುವುದು ಅದರ ಹುನ್ನಾರ!

 

Leave a Reply

Your email address will not be published.