ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಭಿಮಾನಿಗಳ ಆಕ್ರೋಶ : ಬೆಂಬಲಿಗರಿಂದ ಟೈರ್‌ ಸುಟ್ಟು ಪ್ರತಿಭಟನೆ

ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಪಟ್ಟಿಯಲ್ಲಿದ್ದವರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಆದರೆ ಹಿರಿಯ ತಲೆಗಳಿಗೆ ಕಾಂಗ್ರೆಸ್ ಮನ್ನಣೆ  ನೀಡದ ಹಿನ್ನೆಲೆಯಲ್ಲಿ ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹಲವೆಡೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಹಲವರು ನಾಯಕರು ಅವಕಾಶ ವಂಚಿತರಾಗಿದ್ದಾರೆ. ಆದರೆ, ಯಾರೊಬ್ಬರೂ ಬಹಿರಂಗವಾಗಿ ಅಸಮಾಧಾನವನ್ನು ಹೊರ ಹಾಕಿಲ್ಲ. ಈ ನಡುವಲ್ಲೇ ನಾಯಕರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಯಮಕನಮರಡಿ ಕಾಂಗ್ರೆಸ್ ಶಾಸಕರಾಗಿರುವ ಸತೀಶ್ ಜಾರಕೀಹೊಳಿ ಅವರ ನೂರಾರು ಬೆಂಬಲಿಗರು ಶಕ್ತಿಸೌಧ ವಿಧಾನಸೌಧದ ಹಿಂಭಾಗದಲ್ಲಿ ಧರಣಿ ಕುಳಿತಿದ್ದು, ಜಾರಕಿಹೊಳಿಯವರಿಗೆ ಸಚಿವ ಸ್ಥಾನ ನೀಡುವಂತೆ ಘೋಷಣೆ ಕೂಗುತ್ತಿದ್ದಾರೆ. ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ಸ್ಥಳದಿಂದ ಬಸ್ ನಲ್ಲಿ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ.
ಮತ್ತೊಂದೆಡೆ ಎಂ.ಬಿ ಪಾಟೀಲ್‌ ಅವರ ಅಭಿಮಾನಿಯೊಬ್ಬ ಸೀಮೇಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಟಯರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
 ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜೇವರ್ಗಿ ತಾಲ್ಲೂಕು ಸೊನ್ನಕ್ರಾಸ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಟೈರ್’ಗೆ ಬೆಂಕಿ ಹಚ್ಚಿದ ಬೆಂಬಲಿಗರು ಆಕ್ರೋಶವನ್ನು ಹೊರಹಾಕಿದ್ದು, ಪ್ರತಿಭಟನೆ ಹಿನ್ನಲೆಯಲ್ಲಿ ಜೇವರ್ಗಿ ಮತ್ತು ವಿಜಯಪುರ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯವಸ್ತಗೊಂಡಿದೆ. ಇದೇ ರೀತಿ ತಮ್ಮ ನೆಚ್ಚಿನ ನಾಯಕನಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ, ರಾಘವೇಂದ್ರ ಸೇರಿದಂತೆ ಅನೇಕ ನಾಯಕರ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com